Monday, 31 August 2015

ಡಬ್ಬಿಂಗ್ ಬಿರುಗಾಳಿ ಬೀಸುವ ಮುನ್ನ...

ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾಗಳು, ಟಿವಿ ಕಾರ್ಯಕ್ರಮಗಳ ಪ್ರದರ್ಶನಕ್ಕೆ ಇನ್ನು ಯಾವ ತೊಡಕೂ ಇಲ್ಲ. ಕೆಲವು ಮಾಧ್ಯಮಗಳು ಸಿಸಿಐ (ಕಾಂಪಿಟೇಟಿವ್ ಕೌನ್ಸಿಲ್ ಆಫ್ ಇಂಡಿಯಾ) ಇತ್ತೀಚಿಗೆ ನೀಡಿದ ತೀರ್ಪನ್ನು ವರದಿ ಮಾಡುವಾಗ ‘ಡಬ್ಬಿಂಗ್ ನಿಷೇಧ ತೆರವು’ ಎಂದು ಪ್ರಸಾರಿಸಿವೆ. ಆದರೆ ಇದು ತಾಂತ್ರಿಕವಾಗಿ ತಪ್ಪಾದ ವರದಿ. ಯಾಕೆಂದರೆ ಕರ್ನಾಟಕದಲ್ಲಿ ಡಬ್ಬಿಂಗ್ ನಿಷೇಧ ಇಲ್ಲವೇ ಇಲ್ಲ. ಕನಾಟಕ ಮಾತ್ರವಲ್ಲ ಭಾರತದ ಯಾವ ಭಾಗದಲ್ಲೂ ‘ಡಬ್ಬಿಂಗ್ ನಿಷೇಧ’ವಿಲ್ಲ. ಕರ್ನಾಟಕದಲ್ಲಿ ಡಬ್ಬಿಂಗ್ ಕಾರ್ಯಕ್ರಮಗಳು, ಸಿನಿಮಾಗಳನ್ನು ಬಲವಂತವಾಗಿ ತಡೆಯಲಾಗಿತ್ತು ಅಷ್ಟೆ. ಯಾವುದೇ ನಿಷೇಧವನ್ನು ಹೇರುವ ಅಧಿಕಾರ ಸರ್ಕಾರಗಳು, ನ್ಯಾಯಾಲಯಗಳಿಗೆ ಮಾತ್ರ ಇರುತ್ತದೆ, ಯಾವುದೇ ಸಂಘ-ಸಂಸ್ಥೆಗಳಿಗೆ ಅಲ್ಲ. ಈಗ ಭಾರತೀಯ ಸ್ಪರ್ಧಾ ಆಯೋಗ ಡಬ್ಬಿಂಗ್‌ಗೆ ಅನಧಿಕೃತವಾಗಿ ತಡೆ ಹಾಕಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಮತ್ತು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘಗಳಿಗೆ ದಂಡ ವಿಧಿಸಿ, ಇನ್ನು ಮುಂದೆ ಈ ಬಗೆಯ ತಡೆಯನ್ನು ಮಾಡದಂತೆ ಎಚ್ಚರಿಸಿದೆ.

ಡಬ್ಬಿಂಗ್ ಬಗ್ಗೆ ಮಾತನಾಡುವುದಕ್ಕೆ ಮುನ್ನ ಡಬ್ಬಿಂಗ್ ಎಂದರೆ ಏನು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಯಾವುದೇ ಭಾಷೆಯ ಸಿನಿಮಾ-ಕಾರ್ಯಕ್ರಮಗಳನ್ನು ತುಟಿಚಲನೆಗೆ ಅನುಗುಣವಾಗಿ ಇನ್ನೊಂದು ಭಾಷೆಯ ಧ್ವನಿ ಮರುಲೇಪನ ಮಾಡುವುದನ್ನು ಡಬ್ಬಿಂಗ್ ಎನ್ನುತ್ತಾರೆ. ಅದರರ್ಥ ಡಬ್ಬಿಂಗ್ ಸಿನಿಮಾ, ಕಾರ್ಯಕ್ರಮಗಳು ಬಂದರೆ ರಜನೀಕಾಂತ್‌ರ ತಮಿಳು ಸಿನಿಮಾ, ಶಾರೂಖ್ ಖಾನ್‌ರ ಹಿಂದಿ ಸಿನಿಮಾ, ಮಹೇಶ್ ಬಾಬುರವರ ತೆಲುಗು ಸಿನಿಮಾಗಳನ್ನು ನಾವು ಕನ್ನಡದಲ್ಲೇ ನೋಡಬಹುದು.  ಡಿಸ್ಕವರಿ, ನ್ಯಾಟ್ ಜಿಯೋದಂಥ ಚಾನಲ್‌ಗಳನ್ನು ನಮ್ಮ ಮಕ್ಕಳು ಇನ್ನು ಕನ್ನಡದಲ್ಲೇ ನೋಡಬಹುದು.

ಡಬ್ಬಿಂಗ್ ಬಗ್ಗೆ ಚರ್ಚೆ ಆರಂಭವಾದಾಗೆಲ್ಲ ಸಾಕಷ್ಟು ಮಂದಿ ಡಬ್ಬಿಂಗ್ ಕುರಿತು ನಿಮ್ಮ ಅಭಿಪ್ರಾಯವೇನು ಗೌಡ್ರೇ ಎಂದು ನನ್ನನ್ನು ಕೇಳುವುದುಂಟು. ನಾನು ಬಹಳ ಹಿಂದೆಯೇ ಡಬ್ಬಿಂಗ್ ಕುರಿತಾದ ನನ್ನ ನಿಲುವುಗಳನ್ನು ಸ್ಪಷ್ಟಪಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿ ‘ಕರವೇ ನಲ್ನುಡಿ’ಯಲ್ಲಿ ಲೇಖನವೊಂದನ್ನು ಬರೆದಿದ್ದೆ. ಆ ಲೇಖನದ ಕೊನೆಯ ಕೆಲವು ಸಾಲುಗಳು ಹೀಗಿವೆ:

“ಡಬ್ಬಿಂಗ್ ಕುರಿತ ಆರೋಗ್ಯಕರ ಚರ್ಚೆಯನ್ನು ಮಾಡುವ ಬದಲು ‘ಎದೆ ಮೇಲೆ ಕಾಲಿಡುತ್ತೇನೆ’, ‘ತಲೆಹಿಡಿಯೋ ಕೆಲಸ ಮಾಡುತ್ತಿದ್ದೀರಿ’ ‘ಮೂರನೇ ಕಣ್ಣು, ನಾಲ್ಕನೇ ಕಣ್ಣು’ ಇತ್ಯಾದಿಯಾಗಿ ಮಾತನಾಡಿ ಚರ್ಚೆಯ ಹಾದಿಯನ್ನೇ ನಿರಾಕರಿಸುವುದು ಸರಿಯಲ್ಲ. ಕನ್ನಡ ಚಿತ್ರರಂಗದ ಗಣ್ಯರು ವಿವೇಕದಿಂದ ಮಾತನಾಡಬೇಕಿದೆ, ವ್ಯವಹರಿಸಬೇಕಿದೆ, ಕನ್ನಡ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಬೇಕಿದೆ. ಯಾಕೆಂದರೆ ಡಬ್ಬಿಂಗ್ ವಿಷಯ ಕೇವಲ ಕನ್ನಡ ಚಿತ್ರೋದ್ಯಮಕ್ಕೆ ಸೇರಿದ ವಿಷಯವೇನಲ್ಲ, ಈ ಬಗ್ಗೆ ಮಾತನಾಡುವ ಹಕ್ಕು ಪ್ರತಿಯೊಬ್ಬ ಕನ್ನಡಿಗನಿಗೂ ಇದೆ.”

ಈ ಲೇಖನವನ್ನು ಬರೆದಾಗಲೂ ಡಬ್ಬಿಂಗ್ ಕುರಿತು ವ್ಯಾಪಕವಾದ ಚರ್ಚೆ ಆಗಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದೆ. ಯಾವುದೇ ಸಮಸ್ಯೆ ಎದುರಾದರೂ ಚರ್ಚೆಯೊಂದೇ ಪರಿಹಾರದ ದಾರಿಯಾಗಬೇಕು. ಆದರೆ ದುರದೃಷ್ಟವೆಂದರೆ ಕನ್ನಡ ಸಿನಿಮಾ ರಂಗದ ಬಹುತೇಕರು ಚರ್ಚೆಗೆ ತೆರೆದುಕೊಳ್ಳಲೇ ಇಲ್ಲ. ಅಮೀರ್ ಖಾನ್ ನಿರ್ಮಿಸಿದ ಸತ್ಯಮೇವ ಜಯತೇ ಧಾರಾವಾಹಿ ಕನ್ನಡದಲ್ಲಿ ಡಬ್ ಆಗುತ್ತಿದ್ದಾಗ ಅದನ್ನು ಬಲವಂತವಾಗಿ ತಡೆಯಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಮಂದಿ ನೆಟಿಜನ್‌ಗಳು ಇದರ ವಿರುದ್ಧ ಪ್ರತಿಭಟಿಸಿದರು. ಹೀಗೆ ಪ್ರತಿಭಟಿಸಿದವರನ್ನು ಅಮೀರ್ ಖಾನ್ ಏಜೆಂಟ್‌ಗಳು ಎಂದು ಮೂದಲಿಸಲಾಯಿತು. ಸುದ್ದಿ ಟಿವಿ ಚಾನಲ್‌ಗಳು ಈ ಸಂಬಂಧ ಚರ್ಚೆಗಳನ್ನು ಏರ್ಪಡಿಸಿದಾಗ ಡಬ್ಬಿಂಗ್ ಅವಶ್ಯಕತೆಯ ಬಗ್ಗೆ ಮಾತನಾಡಿದವರನ್ನು ಹೀನಾಯವಾಗಿ, ಅಶ್ಲೀಲವಾಗಿ ನಿಂದಿಸಲಾಯಿತು, ಅಕ್ಷರಶಃ ಬೆದರಿಸಲಾಯಿತು.  ಆದರೆ ನಿಜವಾಗಿಯೂ ನಡೆಯಬೇಕಿದ್ದ ಚರ್ಚೆ ನಡೆಯಲೇ ಇಲ್ಲ. ನಡೆಯಲು ಡಬ್ಬಿಂಗ್ ವಿರೋಧಿಗಳು ಬಿಡಲೂ ಇಲ್ಲ.

ಇವತ್ತು ಡಬ್ಬಿಂಗ್ ಸಿನಿಮಾಗಳು ಬರದ ಕಾರಣಕ್ಕೆ ಆಗಿರುವ ಅನಾಹುತಗಳನ್ನು ಗಮನಿಸಬೇಕಿದೆ. ಅತ್ಯುತ್ತಮ ಇಂಗ್ಲಿಷ್ ಸಿನಿಮಾಗಳನ್ನು ತಮಿಳಿನವರು, ತೆಲುಗಿನವರು ತಮ್ಮ ಭಾಷೆಯಲ್ಲೇ ನೋಡುತ್ತಾರೆ. ಆದರೆ ನಾವು ಅನಿವಾರ್ಯವಾಗಿ ಇಂಗ್ಲಿಷಿನಲ್ಲೇ ನೋಡಬೇಕು. ಇಂಗ್ಲಿಷ್ ಬರದ ಬಹುಸಂಖ್ಯಾತ ಕನ್ನಡಿಗರ ಸಹಜ ಹಕ್ಕನ್ನೇ ನಾವು ಕಿತ್ತುಕೊಂಡಿದ್ದೇವೆ.  ಇನ್ನೊಂದೆಡೆ ಪರಭಾಷಾ ಚಿತ್ರಗಳು ಎಗ್ಗಿಲ್ಲದೆ ರಾಜ್ಯದಲ್ಲಿ ಬಿಡುಗಡೆಯಾಗುತ್ತಿವೆ.  ಬಾಹುಬಲಿಯಂಥ ಸಿನಿಮಾಗಳು ರಾಜ್ಯದ ೩೦೦ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಬಿಡುಗಡೆಯಾಗುತ್ತವೆ. ಅದೇ ಸಮಯದಲ್ಲಿ ಕನ್ನಡ ಸಿನಿಮಾಗಳಿಗೆ ಮೂವತ್ತು-ನಲವತ್ತು ಥಿಯೇಟರುಗಳೂ ಸಿಕ್ಕುವುದು ಕಷ್ಟವಾಗಿದೆ. ಡಬ್ಬಿಂಗ್ ಬೇಡ ಎಂದು ರಣಘೋಷ ಮಾಡುವ ಕನ್ನಡ ಸಿನಿಮಾದ ಕೆಲವರೇ ಪರಭಾಷಾ ಚಿತ್ರಗಳ ವಿತರಣೆಯ ಹಕ್ಕು ಪಡೆದು ಕರ್ನಾಟಕದ ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಾರೆ. ಅಷ್ಟಕ್ಕೂ ಈ ಪರಭಾಷೆಯ ಸಿನಿಮಾಗಳನ್ನು ನೋಡುತ್ತಿರುವವರು ಯಾರು? ಕೇವಲ ಪರಭಾಷಿಗರೇ? ಖಂಡಿತಾ ಇಲ್ಲ. ಕನ್ನಡಿಗರೇ ಹೆಚ್ಚು ಹೆಚ್ಚಾಗಿ ಈ ಪರಭಾಷಾ ಸಿನಿಮಾಗಳನ್ನು ನೋಡುತ್ತಿದ್ದಾರೆ. ಡಬ್ಬಿಂಗ್ ಸಿನಿಮಾಗಳು ಬಂದರೆ ಕನ್ನಡ ಪ್ರೇಕ್ಷಕರು ಸಹಜವಾಗಿಯೇ ಕನ್ನಡ ಭಾಷೆಗೆ ಡಬ್ ಆದ ಸಿನಿಮಾಗಳನ್ನೇ ನೋಡುತ್ತಾರೆ ಎಂಬುದು ಸರಳ ತರ್ಕ.

ಡಬ್ಬಿಂಗ್ ಬೇಡ ಎಂದು ಆರ್ಭಟಿಸುತ್ತಿರುವ ಕೆಲವು ನಾಯಕಮಣಿಗಳು ಸಾಲುಸಾಲಾಗಿ ರೀಮೇಕ್ ಚಿತ್ರಗಳನ್ನು ಮಾಡಿದವರು. ಹೀಗೆ ರೀಮೇಕ್ ಮಾಡಿದಾಗ ಕನ್ನಡ ಸಂಸ್ಕೃತಿಗೆ ಧಕ್ಕೆಯಾಗಲಿಲ್ಲವೇ ಎಂಬ ಪ್ರಶ್ನೆಗೆ ಅವರು ಉತ್ತರಿಸಬೇಕಾಗುತ್ತದೆ. ಡಬ್ಬಿಂಗ್‌ನಿಂದ ಕನ್ನಡ ಭಾಷೆ ನಾಶವಾಗುತ್ತದೆ ಎಂದು ಕೆಲವರು ಬಾಲಿಶವಾಗಿ ಮಾತನಾಡುತ್ತಾರೆ, ಕನ್ನಡ ಭಾಷೆಯ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವುದಾಗಿ ಅವರು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಆದರೆ  ರೈತರು ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಂಡಾಗ, ಕಾವೇರಿ-ಕೃಷ್ಣಾ ನದಿ ನೀರು ಹಂಚಿಕೆಯ ವಿಷಯದಲ್ಲಿ ಕರ್ನಾಟಕಕ್ಕೆ ಮರಣಶಾಸನವಾಗುವಂತಹ ತೀರ್ಪು ಬಂದಾಗ, ರೈಲ್ವೆಯಲ್ಲಿ ಕನ್ನಡಿಗರನ್ನು ಉದ್ಯೋಗಗಳನ್ನು ಕಿತ್ತುಕೊಂಡು ಬಿಹಾರಿಗಳಿಗೆ ಕೊಟ್ಟಾಗ, ಮಹದಾಯಿಯಿಂದ ಕುಡಿಯುವ ನೀರಿನ ನಮ್ಮ ಹಕ್ಕಿಗೂ ಸಂಚಕಾರ ಬಂದಾಗ ಹೀಗೆ ಇಂಥ ನೂರಾರು ಸಂದರ್ಭಗಳಲ್ಲಿ ಇವರ್‍ಯಾರೂ ತುಟಿಬಿಚ್ಚಿದವರಲ್ಲ.

ಬೇರೇನೂ ಬೇಡ, ಕನ್ನಡ ಚಲನಚಿತ್ರಗಳ ರಕ್ಷಣೆಗಾಗಿ ಡಾ. ರಾಜಕುಮಾರ್ ಅವರು ಬದುಕಿದ್ದಾಗ ದೊಡ್ಡದೊಂದು ಚಳವಳಿ ನಡೆಯಿತು. ಕೊನೆಯ ಬಾರಿಗೆ ಕೆಂಪೇಗೌಡ ರಸ್ತೆಯ ಜನತಾ ಬಜಾರ್ ಎದುರು ಡಾ.ರಾಜಕುಮಾರ್ ಭಾಗವಹಿಸಿ ಮಾತನಾಡಿದ್ದರು. ಆ ಪ್ರತಿಭಟನೆಯ ನಂತರ ಅದನ್ನು ಮುಂದುವರೆಸಿಕೊಂಡು ಹೋಗುವ ಎದೆಗಾರಿಕೆ ಸಿನಿಮಾಮಂದಿಗೇ ಇರಲಿಲ್ಲ. ಕರ್ನಾಟಕ ರಕ್ಷಣಾ ವೇದಿಕೆಯೇ ಆ ಚಳವಳಿಯನ್ನು ಮುಂದುವರೆಸಬೇಕಾಯಿತು. ವಾಣಿಜ್ಯ ಮಂಡಳಿ ರೂಪಿಸಿದ ನಿಯಮವನ್ನು ಉಲ್ಲಂಘಿಸಿ ಪರಭಾಷಾ ಚಿತ್ರಗಳನ್ನು ಪ್ರದರ್ಶನ ಮಾಡುತ್ತಿದ್ದ ಚಿತ್ರಮಂದಿರಗಳ ಮೇಲೆ ನಾವು ಚಳವಳಿ ನಡೆಸಿದೆವು. ನನ್ನ ಕಾರ್ಯಕರ್ತರನೇಕರು ಪೊಲೀಸರ ಲಾಠಿ ಏಟು ತಿಂದರು. ಸಾಕಷ್ಟು ಮಂದಿ ಜೈಲು ಪಾಲಾದರು. ಹೀಗೆ ಜೈಲು ಸೇರಿದ ಕಾರ್ಯಕರ್ತರನ್ನು ಕಂಡು ಮಾತನಾಡಿಸುವಷ್ಟೂ ಸೌಜನ್ಯವನ್ನು ಈಗ ‘ಕನ್ನಡಕ್ಕಾಗಿ ಪ್ರಾಣತ್ಯಾಗ’ ಮಾಡುವ ಮಾತನಾಡುತ್ತಿರುವ ಯಾರೂ ತೋರಲಿಲ್ಲ.

ಆದರೆ  ಹಿಂದೆಯೂ ನಾನು ಹೇಳಿದ್ದೇನೆ, ಈಗಲೂ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಡಬ್ಬಿಂಗ್ ಬೇಡ ಎನ್ನುತ್ತಿರುವವರ ಪೈಕಿ ಕೆಲವರು ಮಂಡಿಸುತ್ತಿರುವ ವಾದಗಳಲ್ಲಿ ಕೆಲವು ಅಂಶಗಳಿಗೆ ನನ್ನ ಸಮ್ಮತಿಯಿದೆ. ಡಬ್ಬಿಂಗ್ ಸಿನಿಮಾಗಳು ಆರಂಭಗೊಂಡ ನಂತರ ಕನ್ನಡ ಚಿತ್ರಗಳು ತಯಾರಾಗುವ ಸಂಖ್ಯೆಯೇನಾದರೂ ಕಡಿಮೆ ಆದರೆ ಚಿತ್ರರಂಗವನ್ನೇ ನೆಚ್ಚಿಕೊಂಡಿರುವ ಕಾರ್ಮಿಕರು-ತಂತ್ರಜ್ಞರು-ಕಲಾವಿದರು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕಿರುತೆರೆಯಲ್ಲಿ ಹಿಂದಿ, ತೆಲುಗು, ತಮಿಳು ಧಾರಾವಾಹಿಗಳೇ ಡಬ್ ಆಗಿ ಬರತೊಡಗಿದರೆ ಕನ್ನಡ ಕಿರುತೆರೆಯನ್ನೇ ನಂಬಿಕೊಂಡಿರುವ ಜನರು ಸಮಸ್ಯೆ ಎದುರಿಸಬೇಕಾಗುತ್ತದೆ. ಇದಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ.

ಡಬ್ಬಿಂಗ್ ಬೇಕು ಬೇಡಗಳ ಮಧ್ಯೆ ಇರಬಹುದಾದ ಮಧ್ಯಮ ಮಾರ್ಗವೊಂದೇ ಸಮಸ್ಯೆ ಪರಿಹಾರಕ್ಕೆ ಸೂಕ್ತ ಎಂಬುದು ನನ್ನ ಭಾವನೆ.  ಜಗತ್ತಿನ ಯಾವುದೇ ಭಾಷೆಯಲ್ಲಿ ಬರುವ ಜ್ಞಾನ, ಮನರಂಜನೆ ತಮಗೆ ಕನ್ನಡದಲ್ಲೇ ಬೇಕು. ಅದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ಡಬ್ಬಿಂಗ್ ನಿಷೇಧವೆಂಬುದೇ ಅಸಾಂವಿಧಾನಿಕ, ಅಪ್ರಜಾಸತ್ತಾತ್ಮಕ ಮತ್ತು ಅನೈತಿಕ ಎಂಬುದು ಡಬ್ಬಿಂಗ್ ಪರವಾದವರ ವಾದ. ಈ ವಾದದಲ್ಲಿ ಅರ್ಥವಿದೆ. ಜತೆಜತೆಗೆ ಡಬ್ಬಿಂಗ್ ಬಂದರೆ ಕನ್ನಡ ಸಿನಿಮಾ ಕ್ಷೇತ್ರ ಬಡವಾಗಬಾರದು, ಕಾರ್ಮಿಕರಿಗೆ ಕೆಲಸವಿಲ್ಲದಂತಾಗಬಾರದು. ಅದನ್ನೂ ಕೂಡ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಡಬ್ಬಿಂಗ್ ಬರದಂತೆ ತಡೆಯಲು ಸಾಧ್ಯವೇ ಇಲ್ಲ. ಆದರೆ ಅದು ಒಂದು ಬಗೆಯ ನಿಯಂತ್ರಣದಲ್ಲಿದ್ದು ಬರಬೇಕು ಎಂಬುದು ನನ್ನ ಅಭಿಮತ. ಡಿಸ್ಕವರಿ, ನ್ಯಾಟ್ ಜಿಯೋ, ಅನಿಮಲ್ ಪ್ಲಾನೆಟ್‌ನಂಥ ಚಾನಲ್‌ಗಳು ಕನ್ನಡಕ್ಕೆ ಬರಲೇಬೇಕು. ಡಬ್ಬಿಂಗ್ ಸಿನಿಮಾಗಳಿಗೆ ಶೇ.೧೦೦ರ ತೆರಿಗೆ ವಿಧಿಸಬೇಕು. ಸಂವಿಧಾನಬದ್ಧವಾಗಿಯೇ ಒಂದಷ್ಟು ನಿಯಂತ್ರಣಗಳನ್ನು ಇಟ್ಟುಕೊಂಡು ಈ ಕಾರ್ಯಕ್ರಮಗಳು ಬರುವಂತಾಗಬೇಕು. ಈ ನಿಯಂತ್ರಣಗಳನ್ನು ವಾಣಿಜ್ಯ ಮಂಡಳಿಯಂಥ ಸಂಸ್ಥೆಗಳು ಕಾನೂನುಬಾಹಿರವಾಗಿ ಹೇರುವ ಬದಲು, ಕರ್ನಾಟಕ ಸರ್ಕಾರವೇ ಅಧಿಕೃತವಾಗಿ ಜಾರಿಗೊಳಿಸಬೇಕು.

ಕೊನೆಯದಾಗಿ ಕನ್ನಡದ ಜನತೆ ತಮಗೆ ಒಪ್ಪುವುದನ್ನು ಮಾತ್ರ ಸ್ವೀಕರಿಸುತ್ತಾರೆ. ಒಳ್ಳೆಯ ಸಿನಿಮಾಗಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ, ಕೆಟ್ಟ ಸಿನಿಮಾಗಳನ್ನು ನಿರ್ದಯವಾಗಿ ಸೋಲಿಸಿದ್ದಾರೆ. ಡಬ್ಬಿಂಗ್ ಆಗಲೀ, ಮೂಲ ಕನ್ನಡ ಸಿನಿಮಾ ಆಗಲಿ ಒಳ್ಳೆಯದಿದ್ದರೆ ಬೆಂಬಲಿಸುತ್ತಾರೆ, ಬೇಡವೆಂದರೆ ತಿರಸ್ಕರಿಸುತ್ತಾರೆ. ಅವರಿಗೆ ಆಯ್ಕೆಯನ್ನು ಕೊಡುವುದು ಅತ್ಯಂತ ವಿವೇಕದ ಮಾರ್ಗ.
-ಟಿ.ಎ.ನಾರಾಯಣಗೌಡ

Sunday, 23 August 2015

ಕಳಸಾ-ಬಂಡೂರಿ: ಪ್ರಭುತ್ವಕ್ಕೆ ರಕ್ತಕ್ರಾಂತಿಯೇ ಬೇಕಾಗಿದೆಯೇ?


ಮಲಪ್ರಭೆಯ ನೀರಿನ ಗುಣವೇ ಅಂಥದ್ದಿರಬೇಕು. ಬಂಡಾಯದ ಬಿಸಿ ಮಲಪ್ರಭೆಯ ಒಡಲಲ್ಲೇ ಮಿಳಿತವಾಗಿದೆ. ರೈತರು ಕೆರಳಿ ನಿಂತರೆ ಅವರನ್ನು ಹಿಡಿದು ನಿಲ್ಲಿಸಲು ಯಾವ ಸರ್ಕಾರಕ್ಕೂ ಸಾಧ್ಯವಿಲ್ಲ, ಯಾವ ಪೊಲೀಸು ಶಕ್ತಿಯೂ ಈ ಜನಶಕ್ತಿಯ ಎದುರು ನಿಲ್ಲಲಾರದು. ಇಲ್ಲಿನ ಜನರು ಸಹಿಷ್ಣುಗಳು ಎಂಬುದೇನೋ ನಿಜ, ಆದರೆ ಸಿಡಿದೆದ್ದು ನಿಂತರೆ ಎದುರಿಗೆ ಎಂಥ ಪ್ರಚಂಡ ಚಂಡಮಾರುತವೇ ಬಂದರೂ ಪುಡಿಗಟ್ಟಿ ನಿಲ್ಲುವಷ್ಟು ಧೀಶಕ್ತಿ ಹೊಂದಿದವರು.
ಅವತ್ತು ೧೯೮೦ರ ಜುಲೈ ೨೧. ನರಗುಂದದಲ್ಲಿ ಅಂದು ಈರಪ್ಪ ಕಡ್ಲಿಕೊಪ್ಪ ಎಂಬ ರೈತನ ಹೆಣ ರಸ್ತೆಯಲ್ಲಿ ಬಿದ್ದಿತ್ತು. ಏಳೆಂಟು ಸಾವಿರ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಒಂದಷ್ಟು ಹೆಚ್ಚು ಕಡಿಮೆ ಆಗುವುದು ಸಹಜ. ತಹಸೀಲ್ದಾರ್ ಕಚೇರಿ ಮುಚ್ಚಿ ಪ್ರತಿಭಟಿಸಲು ಯತ್ನಿಸುತ್ತಿದ್ದ ರೈತರ ಮೇಲೆ ಸಿಕಂದರ್ ಪಟೇಲ್ ಎಂಬ ಸಬ್ ಇನ್ಸ್‌ಪೆಕ್ಟರ್ ಗುಂಡು ಹಾರಿಸಿಬಿಟ್ಟಿದ್ದ. ಈರಪ್ಪನ ಹೆಣ ಬೀಳುತ್ತಿದ್ದಂತೆ ರೈತರ ಆವೇಶದ ಕಟ್ಟೆಯೊಡೆದುಹೋಗಿತ್ತು. ಅಷ್ಟಕ್ಕೂ ಅಲ್ಲಿ ಗೋಲಿಬಾರ್ ಮಾಡಲೇಬೇಕಾದ ಸನ್ನಿವೇಶವೇನೂ ಇರಲಿಲ್ಲ. ಆದರೆ ಪೊಲೀಸು ಬಂದೂಕು ಮೊಳಗತೊಡಗಿತ್ತು. ರೈತರು ಸಿಡಿದೆದ್ದು ನಿಂತರು. ಪೊಲೀಸರ ಮೇಲೆ ದಾಳಿಯಾಯಿತು. ಆಸ್ಪತ್ರೆಯೊಂದರಲ್ಲಿ ಅಡಗಿ ಕುಳಿತಿದ್ದ ಸಿಕಂದರ್ ಪಟೇಲ್‌ನನ್ನು ಹುಡುಕಿದ ಜನರು ಕೈಯಲ್ಲೇ ಜಜ್ಜಿ ಕೊಂದುಹಾಕಿಬಿಟ್ಟರು. ಇನ್ನೂ ಒಬ್ಬ ಪೊಲೀಸ್ ಅಧಿಕಾರಿ ಬಲಿಯಾದರು.
ಮಲಪ್ರಭೆ ಹುಟ್ಟುವುದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ. ಸವದತ್ತಿ, ರಾಮದುರ್ಗ, ನರಗುಂದ ತಾಲೂಕುಗಳಲ್ಲಿ ಹರಿದು ಬಿಜಾಪುರ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಕೃಷ್ಣಾ ನದಿಗೆ ಸೇರುತ್ತದೆ. ಮಲಪ್ರಭಾ ಜಲಾಶಯ ಯೋಜನೆಗೆ ಶಂಕುಸ್ಥಾಪನೆಯಾಗಿದ್ದು ೧೯೬೦ರಲ್ಲಿ. ಆದರೆ ಅದು ಮುಗಿಯುತ್ತಾ ಬಂದಿದ್ದು ೧೯೭೭ರ ಸುಮಾರಿಗೆ. ಅಣೆಕಟ್ಟು ನಿರ್ಮಾಣ ಮುಗಿದು, ರೈತರ ಜಮೀನಿಗೆ ಸರಿಯಾಗಿ ನೀರು ಹರಿಯುವುದಕ್ಕೆ ಮುನ್ನವೇ ಸರ್ಕಾರ ರೈತರ ಮೇಲೆ ಕರಭಾರವನ್ನು ಹೊರೆಸಿತ್ತು. ಈ ಕಪ್ಪು ಭೂಮಿಯು ನೀರು ಬಸಿಯುವ ಗುಣ ಹೊಂದಿರಲಿಲ್ಲವಾದ್ದರಿಂದ ಉಪಕಾಲುವೆಗಳಲ್ಲಿ ನೀರು ಹರಿದಿರಲಿಲ್ಲ. ಅಣೆಕಟ್ಟಿನಿಂದ ಹರಿಸಿದ ನೀರು ಅಲ್ಲಲ್ಲೇ ನಿಂತು ಫಲವತ್ತಾದದ ಮೈಲ್ಮೈ ಮಣ್ಣು ಕೊಚ್ಚಿ ಹೋಗಿತ್ತು. ಇದಲ್ಲದೆ, ನೀರಾವರಿ ಪದ್ಧತಿಯ ಅನುಭವವೇ ಇಲ್ಲದ ರೈತರು ತಮ್ಮ ಸಾಂಪ್ರದಾಯಿಕ ಬೆಳೆಗಳನ್ನು ಬಿಟ್ಟು ಅನಿವಾರ್ಯವಾಗಿ ಬೇರೆ ಬೆಳೆಯನ್ನು ಬೆಳೆಯಬೇಕಾದ ಸ್ಥಿತಿ ತಲುಪಿದ್ದರು. ಹೊಸ ಬಗೆಯ ಬೇಸಾಯದ ಮಾರ್ಗಗಳೂ ರೈತರಿಗೆ ಗೊತ್ತಿರಲಿಲ್ಲ. ಇದನ್ನೆಲ್ಲ ಮೊದಲೇ ಗ್ರಹಿಸಿಬೇಕಿದ್ದ ಸರ್ಕಾರಿ ಅಧಿಕಾರಿಗಳು ಮೈಮರೆತು ಕುಳಿತಿದ್ದರು. ರಸಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜಗಳ ಬೆಲೆ ಗಗನಕ್ಕೇರಿತ್ತು. ಬ್ಯಾಂಕುಗಳಲ್ಲಿ ಸಾಲ ಹೆಚ್ಚಿತು, ಸಾಲ ತೀರಿಸಲು ಮತ್ತಷ್ಟು ಸಾಲ ಮಾಡುವ ಅನಿವಾರ್ಯತೆಗೆ ರೈತರು ಬಂದಿದ್ದರು. ಅಲ್ಲಿಗೆ ಜನರ ಬದುಕಿನಲ್ಲಿ ಬಂಗಾರದ ಹೊಳೆ ಹರಿಸಬೇಕಿದ್ದ ನೀರಾವರಿ ಯೋಜನೆ, ಅವರ ಬದುಕನ್ನೇ ಹರಿದು ತಿನ್ನುವಂತಾಗಿತ್ತು. ಇದೆಲ್ಲ ಸಮಸ್ಯೆಗಳನ್ನಿಟ್ಟುಕೊಂಡು ರೈತರು ಹೋರಾಟ ಆರಂಭಿಸಿದರು. ಆದರೆ ಸರ್ಕಾರಿ ಅಧಿಕಾರಿಗಳು ಬಲವಂತವಾಗಿ ನೀರಾವರಿ ಜಮೀನಿನ ಹೆಸರಿನಲ್ಲಿ ಲೆವಿ ಸಂಗ್ರಹಿಸಲುತೊಡಗಿದಾಗ ರೈತರ ಸಿಟ್ಟು ರಟ್ಟೆಗೆ ಬಂದಿತ್ತು. ಸತ್ಯಾಗ್ರಹಗಳ ಮೇಲೆ ಸತ್ಯಾಗ್ರಹಗಳು ನಡೆದವು. ಅರೆಬೆತ್ತಲೆ ಮೆರವಣಿಗೆ, ಬಾರುಕೋಲು ಚಳವಳಿಗಳು ನಡೆದವು. ಸರ್ಕಾರ ಕಣ್ಣು ತೆರೆಯಲಿಲ್ಲ. ಕಡೆಗೆ ಕರ ನಿರಾಕರಣೆಗೆ ರೈತ ಮುಖಂಡರು ಕರೆ ನೀಡಿದರು. ೧೯೮೦ರ ಜೂನ್ ೩ರಂದು ಸುಮಾರು ಹತ್ತು ಸಾವಿರ ರೈತರು ನರಗುಂದಲ್ಲಿ ಸಮಾವೇಶಗೊಂಡರು. ರೋಣ, ಸವದತ್ತಿ, ನವಲಗುಂದ, ನರಗುಂದ, ರಾಮದುರ್ಗ ತಾಲ್ಲೂಕುಗಳ ರೈತರೆಲ್ಲ ಸಂಘಟಿತರಾದರು. ಹದಿಮೂರು ಹಕ್ಕೊತ್ತಾಯಗಳನ್ನು ಈ ಬೃಹತ್ ಸಮಾವೇಶ ಮಂಡಿಸಿತು. ಸರ್ಕಾರ ಆಗಲೂ ಕಣ್ಣು ತೆರೆಯಲಿಲ್ಲ.

ಇದಾದ ನಂತರ ಬಂದಿದ್ದೇ ಆ ಕರಾಳ ದಿನ.  ೧೯೮೦ರ ಜುಲೈ ೨೧ರಂದು ನರಗುಂದ, ನವಲುಗುಂದ, ಸವದತ್ತಿ ಬಂದ್ ಆಚರಣೆಗೆ ಕರೆ ನೀಡಲಾಗಿತ್ತು. ಮೂರೂ ತಾಲ್ಲೂಕು ಕೇಂದ್ರಗಳಲ್ಲಿ ಸಹಸ್ರಾರು ರೈತರು ಬಂದು ಸಮಾವೇಶಗೊಂಡಿದ್ದರು. ನವಲಗುಂದದಲ್ಲಿ ಕುಚೇಷ್ಠೆಗೆಂದು ಕೆಲವರು ಹಬ್ಬಿಸಿದ ಸುಳ್ಳು ಸುದ್ದಿಯಿಂದಾಗಿ ರೈತರು ನೀರಾವರಿ ಇಲಾಖೆ ಕಚೇರಿಯನ್ನು ಧ್ವಂಸ ಮಾಡಿದರು. ಪೊಲೀಸರ ಬಂದೂಕು ಆರ್ಭಟಿಸಿತು. ರೈತ ಬಸಪ್ಪ ಲಕ್ಕುಂಡಿ ಗುಂಡು ತಿಂದು ರಸ್ತೆಯಲ್ಲೇ ಶವವಾಗಿ ಮಲಗಿದ.

ರೈತ ಗುಂಡೇತು ತಿಂದು ಸತ್ತ ಸುದ್ದಿ ನರಗುಂದಕ್ಕೆ ತಲುಪಲು ಹೆಚ್ಚು ಸಮಯವೇನೂ ಬೇಕಾಗಿರಲಿಲ್ಲ. ನರಗುಂದ ತಹಸೀಲ್ದಾರ್ ಕಚೇರಿ ಮುಂಭಾಗ ರೈತರು ಅಡ್ಡ ಮಲಗಿ ಅಧಿಕಾರಿಗಳು ಕೆಲಸ ಮಾಡದಂತೆ ತಡೆದಿದ್ದರು. ಅಧಿಕಾರದ ಪಿತ್ಥ ನೆತ್ತಿಗೇರಿದ್ದ ಅಮಲ್ದಾರ ರೈತರ ಎದೆಗಳ ಮೇಲೇ ಕಾಲಿಟ್ಟುಕೊಂಡು ಅವರನ್ನು ತುಳಿದುಕೊಂಡೇ ಒಳಹೋಗಿಬಿಟ್ಟ. ಜನಾಕ್ರೋಶ ಮುಗಿಲು ಮುಟ್ಟಿತ್ತು. ರೈತರು ತಹಸೀಲ್ದಾರ್ ಕಚೇರಿ ಒಳಗೆ ನುಗ್ಗಲು ಯತ್ನಿಸಿದರು. ಆಮೇಲೆ ನಡೆದದ್ದು ದಾರುಣ ದುರಂತ. ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಟೇಲ್ ರೈತರ ಮೇಲೆ ಗುಂಡು ಹಾರಿಸಿ ಒಬ್ಬ ರೈತನನ್ನು ಕೊಂದು ಹಾಕಿದ. ರೈತನನ್ನು ಕೊಂದ ತಪ್ಪಿಗೆ ತಾನೂ ಬಲಿಯಾಗಿಹೋದ. ರೈತರ ಎದೆ ಮೇಲೆ ನಡೆದುಕೊಂಡು ಹೋದ ಅಮಲ್ದಾರನನ್ನು ಪ್ರಜ್ಞೆ ತಪ್ಪುವವರೆಗೆ ರೈತರು ಹೊಡೆದರು.

ಆಮೇಲೆ ನಡೆದಿದ್ದೆಲ್ಲ ಇತಿಹಾಸ. ಈ ಐತಿಹಾಸಿಕ ಘಟನೆಯನ್ನೇ ನಾವು ನರಗುಂದ-ನವಲಗುಂದ ಬಂಡಾಯ ಎಂದು ಕರೆಯುತ್ತೇವೆ. ಈ ಭಾಗದ ರೈತರ ಪ್ರತಿಭಟನೆಗೆ ಇಡೀ ರಾಜ್ಯವೇ ಧ್ವನಿಗೂಡಿಸಿತು. ರೈತ ಚಳವಳಿ ಹಳ್ಳಿ ಹಳ್ಳಿಯಲ್ಲೂ ಸ್ಥಾಪಿತವಾಯಿತು. ರೈತರ ಪ್ರತಿಭಟನೆಗಳು, ಗೋಲಿಬಾರ್‌ಗಳು ಎಲ್ಲೆಡೆ ಮಾಮೂಲಿಯಾದವು. ಇನ್ನೂರಕ್ಕೂ ಹೆಚ್ಚು ರೈತರು ಪೊಲೀಸ್ ದೌರ್ಜನ್ಯಗಳಿಂದಲೇ ಅಸುನೀಗಿದರು.

ನರಗುಂದ-ನವಲಗುಂದ ಬಂಡಾಯದ ನಂತರ ನರಗುಂದದಿಂದ ರೈತರ ಬೃಹತ್ ಕಾಲ್ನಡಿಗೆ ಜಾಥಾ ಏರ್ಪಾಡಾಯಿತು. ಜಾಥಾ ಬೆಂಗಳೂರು ತಲುಪುವ ಹೊತ್ತಿಗೆ ನಾಲ್ಕೈದು ಲಕ್ಷ ಮಂದಿ ರೈತರು ಒಗ್ಗೂಡಿದ್ದರು. ೧೯೮೧ ಜನವರಿ ೧೬ರಂದು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಉದ್ಘಾಟಿಸಿದ ಜಾಥಾ ಬೆಂಗಳೂರು ತಲುಪುತ್ತಿದ್ದಂತೆ ಆಳುವ ಸರ್ಕಾರ ಅದುರಿ ಹೋಯಿತು. ಕಬ್ಬನ್ ಪಾರ್ಕ್‌ನಲ್ಲಿ ಸುಮಾರು ನಾಲ್ಕು ಲಕ್ಷ ಮಂದಿ ರೈತರು ನೆರೆದು ವಿಧಾನಸೌಧದಲ್ಲಿ ಕುಳಿತ ಗುಂಡುರಾವ್ ಅವರ ಸರ್ಕಾರಕ್ಕೆ ಸವಾಲೊಡ್ಡಿದರು.  ಅದಾದ ನಂತರ ನಡೆದ ಚುನಾವಣೆಯಲ್ಲಿ ಗುಂಡುರಾವ್ ಅವರ ಪಕ್ಷ ಹೀನಾಯವಾಗಿ ಸೋತುಹೋಯಿತು. ರೈತರ ಎದೆಯ ಮೇಲೆ ಗುಂಡುಹೊಡೆದವರು ಎಷ್ಟು ಕಾಲ ಅಧಿಕಾರದಲ್ಲಿರಲು ಸಾಧ್ಯ?

ಈಗ ಇತಿಹಾಸ ಮರುಕಳಿಸುತ್ತಿದೆ. ಆಗಲೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು, ಈಗಲೂ ಕಾಂಗ್ರೆಸ್ ಸರ್ಕಾರವಿದೆ. ಈಗ ಸಿಡಿದೆದ್ದು ನಿಂತಿರುವವರು ನರಗುಂದ-ನಲವಗುಂದ ಭಾಗದ ಜನರು ಮಾತ್ರವಲ್ಲ. ಇಡೀ ಮಲಪ್ರಭೆಯ ಮಡಿಲಿನ ಜನರೆಲ್ಲ ಮುನಿಸಿಕೊಂಡಿದ್ದಾರೆ. ಅವರ ಮುನಿಸಿಗೊಂದು ಕಾರಣವಿದೆ. ಮಹದಾಯಿಯನ್ನು ಮಲಪ್ರಭೆಗೆ ಜೋಡಿಸಿ ಎಂಬುದು ಅವರ ದಶಕಗಳ ಹಿಂದಿನ ಮೂಲಭೂತ ಬೇಡಿಕೆ. ಆದರೆ ಅದು ಈಡೇರುವ ಹಾಗೆ ಕಾಣುತ್ತಿಲ್ಲ. ಮಹದಾಯಿಯನ್ನು ಮಲಪ್ರಭೆಗೆ ಜೋಡಿಸುವುದಿರಲಿ, ಒಮ್ಮೆ ಕೇಂದ್ರ ಸರ್ಕಾರದ ಒಪ್ಪಿಗೆಯನ್ನೂ ಪಡೆದು ನೂರಾರು ಕೋಟಿ ರುಪಾಯಿಗಳ ಕಾಮಗಾರಿಯೂ ನಡೆದು ಅರ್ಧಕ್ಕೆ ನಿಂತಿರು ಕನಿಷ್ಠ ಕಳಸಾ ಮತ್ತು ಬಂಡೂರಿ ನಾಲೆಗಳನ್ನಾದರೂ ಮಲಪ್ರಭೆಗೆ ಜೋಡಿಸುವ ಯೋಜನೆಯಾದರೂ ಮುಗಿಸಿಕೊಡಿ ಎಂಬುದು ಅವರ ಬೇಡಿಕೆ. ಈ ಭಾಗದ ಜನರು ಎದ್ದುನಿಂತಿದ್ದಾರೆ. ಮಲಪ್ರಭೆಯ ಮಡಿಲಿನ ಜನರು ಸಹಿಷ್ಣುಗಳು, ದಶಕಗಟ್ಟಲೆ ಕಾಲ ಕಾದು ಬೆಂಡಾಗಿದ್ದಾರೆ. ಈಗ ಅವರ ಸಿಟ್ಟು ರಟ್ಟೆಗೆ ಬರುವ ಸಮಯ. ಸರ್ಕಾರಗಳು ಈಗಲಾದರೂ ಕಣ್ತೆರೆಯುತ್ತವಾ?

ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಜಾಂಬೋಟಿ ಎಂಬಲ್ಲಿ ಹುಟ್ಟುವ ನದಿಯೇ ಮಹದಾಯಿ. ಇಲ್ಲಿಯೇ ಕಳಸಾ ಮತ್ತು ಬಂಡೂರಿ ಎಂಬ ಎರಡು ಹಳ್ಳಗಳನ್ನು ಮಲಪ್ರಭಾ ನದಿಗೆ ಸೇರಿಸಿದರೆ ಹುಬ್ಬಳ್ಳಿ ಧಾರವಾಡ, ಗದಗ, ಬೆಳಗಾವಿ ಜಿಲ್ಲೆಗಳಿಗೆ ಕುಡಿಯುವ ನೀರು ಕೊಡಬಹುದು. ಈ ಯೋಜನೆಯ ರೂಪುರೇಷೆಯನ್ನು ರೂಪಿಸಿದ್ದು ಹಾಲಿ ಸಚಿವ, ನೀರಾವರಿ ತಜ್ಞ ಎಚ್.ಕೆ.ಪಾಟೀಲ್ ಅವರು. ಕಳಸದಿಂದ ನಾಲ್ಕು ಟಿಎಂಸಿ, ಬಂಡೂರಿಯಿಂದ ೩.೫ ಟಿಎಂಸಿ ನೀರನ್ನು ಪಡೆಯಬಹುದು ಎಂಬುದು ಯೋಜನೆಯ ಉದ್ದೇಶ. ಇದು ಕುಡಿಯುವ ನೀರಿನ ಯೋಜನೆಯಾದ್ದರಿಂದ ಯಾವುದೇ ರಾಜ್ಯವೂ ವಿರೋಧ ಮಾಡುವಂತೆಯೂ ಇಲ್ಲ. ಇದನ್ನು ಕೇಂದ್ರ ಸರ್ಕಾರ, ಜಲ ಆಯೋಗ, ಸುಪ್ರೀಂ ಕೋರ್ಟ್‌ಗಳು ಪದೇ ಪದೇ ಹೇಳುತ್ತಲೇ ಬಂದಿವೆ. ೧೬೨ ಕಿ.ಮೀ ಉದ್ದ ಹರಿಯುವ ಮಹದಾಯಿ ನದಿಯ ಸುಮಾರು ೨೦೦ ಟಿ.ಎಂ.ಸಿ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತದೆ. ಹೀಗಿರುವಾಗ ೮ ಟಿಎಂಸಿಗೂ ಕಡಿಮೆ ನೀರನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳುವುದರಲ್ಲಿ ಯಾವ ಸಮಸ್ಯೆ ಕಾಣಿಸಿತೋ ಗೋವಾ ಸರ್ಕಾರಕ್ಕೆ? ಕಳಸಾ ಬಂಡೂರಿ ಯೋಜನೆ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾಪಕ್ಕೆ ಅಂದಿನ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರ ಅನುಮತಿ ನೀಡಿತ್ತು. ನಂತರ ವಾಜಪೇಯಿ ಸರ್ಕಾರವೇ ಗೋವಾ ಸರ್ಕಾರದ ಕಿತಾಪತಿಯಿಂದಾಗಿ ಯೋಜನೆಯನ್ನು ತಡೆಹಿಡಿದುಬಿಟ್ಟಿತು. ಅಂದು ಯೋಜನೆ ಸ್ಥಗಿತಗೊಂಡಿದ್ದು ಮತ್ತೆ ಆರಂಭವಾಗಲೇ ಇಲ್ಲ. ಗೋವಾ ಸರ್ಕಾರದ ಪಿತೂರಿಯಿಂದಾಗಿ ಈಗ ಮಹದಾಯಿ ನ್ಯಾಯಾಧಿಕರ ರಚನೆಯಾಗಿದೆ. ಅದು ಮೂರು ವರ್ಷಗಳಲ್ಲಿ ವರದಿಯೊಂದನ್ನು ನೀಡಬೇಕಿದೆ. ನ್ಯಾಯಾಧಿಕರಣ ಕಳಸಾ ಬಂಡೂರಿ ಯೋಜನೆಗೆ ಅಸ್ತು ಎನ್ನುತ್ತದೋ ಬಿಡುತ್ತದೋ ಎಂಬುದು ಕಾಲದ ಪ್ರಶ್ನೆ. ಹೀಗಾಗಿ ಉತ್ತರ ಕರ್ನಾಟಕದ ನಾಲ್ಕೈದು ಜಿಲ್ಲೆಗಳ ಜನರಿಗೆ ಕುಡಿಯುವ ನೀರಿಗೆ ಆಸರೆಯಾಗಬೇಕಿದ್ದ ಯೋಜನೆ ಶೈತ್ಯಾಗಾರ ಸೇರಿಹೋಗಿದೆ.

ಕಳಸಾ ಬಂಡೂರಿ ಪ್ರಶ್ನೆ ಈಗ ಮಹದಾಯಿ ನ್ಯಾಯಾಧಿಕರಣದ ಮುಂದಿದೆ. ಹಾಗೆಂದು ನಾವು ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳಲು ಸಾಧ್ಯವೇ? ಕಾವೇರಿ ನ್ಯಾಯಾಧಿಕರಣ, ಕೃಷ್ಣಾ ನ್ಯಾಯಾಧಿಕರಣಗಳಿಂದ ನಮಗೆ ಆದ ಅನ್ಯಾಯವನ್ನು ಅಷ್ಟು ಸುಲಭವಾಗಿ ಮರೆಯಲು ಸಾಧ್ಯವೇ? ಈ ನ್ಯಾಯಾಧಿಕರಣಗಳು ನಮ್ಮ ಎದೆಯ ಮೇಲೆ ಉಳಿಸಿರುವ ಗಾಯಗಳು ಎಂದೂ ವಾಸಿಯಾಗಲಾರವು. ಸಿಲಿಕಾನ್ ಸಿಟಿಯೆಂದೇ ಹೆಸರಾಗಿರುವ ಬೆಂಗಳೂರಿಗೆ ಕಾವೇರಿ ನೀರು ಕೊಡುವುದು ಬೇಡ, ಬೆಂಗಳೂರಿಗರ ಸಂಡಾಸಿನ ಒಳಚರಂಡಿ ನೀರನ್ನೇ ಶುದ್ಧೀಕರಿಸಿ ಕೊಡಿ ಎಂದು ನಿರ್ದಯವಾಗಿ ಹೇಳಿತು ಕಾವೇರಿ ನ್ಯಾಯಾಧಿಕರಣ. ಹೀಗಿರುವಾಗ ಮಹದಾಯಿ ನ್ಯಾಯಾಧಿಕರಣವೂ ಕಳಸಾ ಬಂಡೂರಿಗೆ ಅನುಮತಿ ನೀಡುತ್ತದೆ ಎಂದು ಹೇಗೆ ಹೇಳುವುದು? ಧಾರವಾಡ, ಗದಗಿನ ಜನರು ತಮ್ಮ ಮೂತ್ರವನ್ನೇ ಶುದ್ಧ ಮಾಡಿ ಕುಡಿಯಲಿ ಎಂದು ಈ ನ್ಯಾಯಾಧಿಕರಣ ಹೇಳುವುದಿಲ್ಲವೆಂದು ಹೇಗೆ ನಂಬುವುದು?

ಮಹದಾಯಿ ನದಿ ನೀರಿನಲ್ಲಿ ಕರ್ನಾಟಕವು ೪೪.೧೫ ಟಿಎಂಸಿ, ಗೋವಾ ೧೪೭ ಟಿಎಂಸಿ, ಮಹಾರಾಷ್ಟ್ರ ೭.೫೭ ಟಿಎಂಸಿ ನೀರಿನ ಹಕ್ಕು ಹೊಂದಿವೆ. ನಮ್ಮ ಹಕ್ಕನ್ನು ನಾವು ಬಳಸಿಕೊಳ್ಳಲು ದಶಕಗಟ್ಟಲೆ ಕಾಲ ನಾವು ಕಾಯಬೇಕೆ? ಈಗಾಗಲೇ ಕಳಸಾ ಬಂಡೂರಿ ಯೋಜನಾ ವಿಭಾಗ ಕಾಮಗಾರಿಗೆ ಕಣಕುಂಬಿ ಬಳಿ ಕೆಲಸ ಆರಂಭಗೊಂಡು ನಿಂತುಹೋಗಿದೆ. ಈಗಾಗಲೇ ೧೯೮ ಕೋಟಿ ರುಪಾಯಿಗಳ ಖರ್ಚು ಮಾಡಲಾಗಿದೆ. ಈಗ ನಮ್ಮ ನೆಲದಲ್ಲಿ ನಮ್ಮ ಯೋಜನೆ ಮಾಡಲು ದೆಹಲಿಯಲ್ಲಿ ಕುಳಿತ ದೊಣೆನಾಯಕರಿಗಾಗಿ ಕಾಯಬೇಕು. ಇದೆಂಥ ವಿಪರ್ಯಾಸ?

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳಸಾ-ಬಂಡೂರಿ ಹೆಸರು ಹೇಳಿಕೊಂಡೇ ರಾಜಕಾರಣ ಮಾಡಿದ ಹಲವರಿದ್ದಾರೆ. ಈ ಭಾಗದ ಶೇ.೮೦ ರಷ್ಟು ಜನಪ್ರತಿನಿಧಿಗಳು ಇದೇ ಯೋಜನೆ ಹೆಸರಲ್ಲಿ ಜನರಿಗೆ ಸುಳ್ಳು ಆಶ್ವಾಸನೆ ನೀಡಿ ಗೆದ್ದು ಬಂದವರು. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ತಾನೇ ನೀಡಿದ್ದ ಅನುಮತಿಯನ್ನು ತಾನೇ ರದ್ದುಗೊಳಿಸಿ ಕರ್ನಾಟಕಕ್ಕೆ ದ್ರೋಹವೆಸಗಿತು. ಈ ತಡೆಯಾಜ್ಞೆಯನ್ನು ತೆರವುಗೊಳಿಸಬಹುದಾಗಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಆ ಕೆಲಸ ಮಾಡಲೇ ಇಲ್ಲ. ಪುಟ್ಟ ರಾಜ್ಯ ಗೋವಾ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗಳನ್ನು ಪ್ರಭಾವಿಸಬಲ್ಲದಾದರೆ ಇಷ್ಟು ದೊಡ್ಡ ರಾಜ್ಯವಾದ ಕರ್ನಾಟಕಕ್ಕೆ ಯಾಕೆ ಆ ಶಕ್ತಿ ಇಲ್ಲ? ಈಗಲೂ ಅಷ್ಟೆ, ಪ್ರಧಾನಿ ನರೇಂದ್ರ ಮೋದಿಯವರ ಮನವೊಲಿಸಿ, ಈ ಸಮಸ್ಯೆಯನ್ನು ನ್ಯಾಯಾಧಿಕರಣದ ಹೊರಗೆ ಇತ್ಯರ್ಥ ಮಾಡುವಂತೆ ರಾಜ್ಯದ ಬಿಜೆಪಿ ನಾಯಕರು ಯಾಕೆ ಒತ್ತಾಯಿಸುವುದಿಲ್ಲ? ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬರಲು, ಆ ಪಕ್ಷದ ನೇತಾರರು ಗೆದ್ದು ಬರಲು ಕಳಸಾ ಬಂಡೂರಿಯ ಯೋಜನೆಯೇ ಕಾರಣವಲ್ಲವೇ?

ಇದೆಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡೇ ನಾವು ಹೋರಾಟವನ್ನು ಕಟ್ಟಬೇಕಿದೆ. ಕಳಸಾ ಬಂಡೂರಿ ಯೋಜನೆ ಜಾರಿಯಾಗಬೇಕು ಎಂಬ ಬೇಡಿಕೆಯಿಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆ ಈಗಾಗಲೇ ನೂರಾರು ಹೋರಾಟಗಳನ್ನು ಸಂಘಟಿಸಿದೆ. ಹಲವು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಹತ್ತು ಸಾವಿರ ಕಾರ್ಯಕರ್ತರ ಬೃಹತ್ ಜಾಥಾ ಒಂದನ್ನು ಆಯೋಜಿಸಿ, ಇಂದಿರಾ ಗಾಜಿನಲ್ಲಿ ಬೃಹತ್ ಸಮಾವೇಶ ಏರ್ಪಡಿಸಿದ್ದೆವು. ನಾಡೋಜ ಪಾಟೀಲ ಪುಟ್ಟಪ್ಪ ಅವರು ಆ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಉತ್ತರ ಕರ್ನಾಟಕ ಮಾತ್ರವಲ್ಲದೆ ರಾಜ್ಯದ ಎಲ್ಲ ಭಾಗಗಳಲ್ಲೂ ನಮ್ಮ ಕಾರ್ಯಕರ್ತರು ನೂರಾರು ಧರಣಿ, ಸತ್ಯಾಗ್ರಹಗಳನ್ನು ನಡೆಸಿ ಕಳಸಾ ಬಂಡೂರಿ ಯೋಜನೆ ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿದ್ದಾರೆ.

ಈಗಲೂ ಸಹ ಈ ಭಾಗದ ಜನರ ದಶಕಗಳ ಬೇಡಿಕೆಯ ಜತೆ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಗಳನ್ನು ಸಂಘಟಿಸುತ್ತಿದೆ. ಗದಗ ತೋಂಟಾದಾರ್ಯ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರೂ ಸೇರಿದಂತೆ ಆ ಭಾಗದ ಸ್ವಾಮೀಜಿಗಳೆಲ್ಲರೂ ಈಗ ಹೋರಾಟಕ್ಕೆ ಸ್ಫೂರ್ತಿಯನ್ನು ತುಂಬುತ್ತಿದ್ದಾರೆ. ಇದು ರಾಜಕೀಯ ರಹಿತವಾದ ಚಳವಳಿಯಾಗಿಯೇ ಮುಂದುವರೆದಿದೆ. ಮುಂದೆಯೂ ಹಾಗೆಯೇ ಮುಂದುವರೆಯಬೇಕಿದೆ. ರೈತರ ಸಿಟ್ಟು ನಿಧಾನವಾಗಿ ರಟ್ಟೆಗೆ ಬರುವುದಕ್ಕೆ ಮುನ್ನ ಸಿದ್ಧರಾಮಯ್ಯನವರ ಸರ್ಕಾರ ಮತ್ತು ಪ್ರತಿಪಕ್ಷಗಳೆಲ್ಲವೂ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದರೆ ಇತಿಹಾಸ ಮರುಕಳಿಸಿದರೆ ಅದಕ್ಕೆ ಯಾರೂ ಹೊಣೆಯಾಗುವುದಿಲ್ಲ.

ಕರವೇಯಂತೂ ಮಹದಾಯಿ ವಿಷಯದಲ್ಲಿ ಯಾವ ತ್ಯಾಗಕ್ಕೂ ಸಿದ್ಧವಿದೆ, ಕಾವೇರಿ ಚಳವಳಿ ವಿಷಯದಲ್ಲಿ ರಕ್ತವನ್ನಾದರೂ ಚೆಲ್ಲಿ ಕಾವೇರಿಯನ್ನು ಉಳಿಸಿಕೊಳ್ಳುತ್ತೇವೆ ಎಂಬ ನಮ್ಮ ಜನಪ್ರಿಯ ಘೋಷವಾಕ್ಯವೊಂದಿದೆ. ಮಹದಾಯಿ ವಿಷಯಕ್ಕೂ ಅದು ಅನ್ವಯಿಸುತ್ತದೆ. ಕಾದು ನೋಡಿದ್ದು ನಮಗೂ ಸಾಕಾಗಿದೆ, ರಕ್ತಕ್ರಾಂತಿಯೇ ಆಗಬೇಕು ಎಂಬುದು ಪ್ರಭುತ್ವದ ಬಯಕೆಯಾದರೆ ನಾವು ಅದಕ್ಕೂ ಸಿದ್ಧರಿದ್ದೇವೆ.

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

(ಸಂಯುಕ್ತ ಕರ್ನಾಟಕ, 23-8-2015)



Friday, 21 August 2015

ರೈತರ ಆತ್ಮಹತ್ಯೆ: ಸಾವಿಗೀಡಾದ ಸಮಾಜದ ಅಂತಃಸಾಕ್ಷಿ

ದಿನನಿತ್ಯ ಹತ್ತು ಹದಿನೈದು ಮಂದಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಘೋರ ದುರಂತ ಕಣ್ಮುಂದೆ ಇರುವಾಗ ಎಲ್ಲರೊಂದಿಗೆ ನನ್ನ ಒಂದಷ್ಟು ಮಾತುಗಳನ್ನು ಹಂಚಿಕೊಳ್ಳಬೇಕಿದೆ. ರೈತರು ಈ ಜಗತ್ತಿನ ಅನ್ನದಾತರು. ಇದಕ್ಕಾಗಿಯೇ ಜಗದ ಕವಿ, ಯುಗದ ಕವಿ ಶ್ರೀ ಕುವೆಂಪುರವರು ರೈತರನ್ನು ‘ನೇಗಿಲಯೋಗಿ’ಗಳೆಂದು ಕರೆದರು. ‘ರಾಜ್ಯಗಳುದಿಸಲಿ ರಾಜ್ಯಗಳಲಿಯಲಿ, ಹಾರಲಿ ಗದ್ದುಗೆ ಮುಕುಟಗಳು, ಮುತ್ತಿಗೆ ಹಾಕಲಿ ಸೈನಿಕರೆಲ್ಲ, ಬಿತ್ತುಳುವುದನವ ಬಿಡುವುದೇ ಇಲ್ಲ’ ಎಂದು ರೈತನ ಕರ್ತವ್ಯಪರತೆಯನ್ನು ಬಣ್ಣಿಸಿದರು. ‘ರೈತನೇ ದೇಶದ ಬೆನ್ನೆಲುಬು’ ಎಂಬ ಮಾತನ್ನು ಪದೇ ಪದೇ ನಾವೆಲ್ಲರೂ ಹೇಳಿಕೊಂಡೇ ಬರುತ್ತಿದ್ದೇವೆ.

ನಾನು ಸಹ ಒಬ್ಬ ರೈತನ ಮಗ, ನಾನೂ ಸಹ ಉಳುಮೆ ಮಾಡಿದವನೇ, ಈಗಲೂ ರೈತನೆಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ರೈತರು ಅನುಭವಿಸುತ್ತಿರುವ ಸಂಕಷ್ಟಗಳೆಲ್ಲ ನನಗೆ ಗೊತ್ತು. ‘ನೇಗಿಲಯೋಗಿ’ಗಳೆನಿಸಿಕೊಂಡ ನಾವು ಯಾಕಾಗಿ ಇಂಥ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ? ಯಾಕೆ ನಮ್ಮ ಒಡನಾಡಿಗಳು ಆತ್ಮಹತ್ಯೆಯಂಥ ದಾರುಣ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ? ಇದನ್ನು ತಡೆಗಟ್ಟುವುದಾದರೂ ಹೇಗೆ? ಇವೆಲ್ಲ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಕೊಳ್ಳಬೇಕಿದೆ.

ನಾನು ಪದೇಪದೇ ಒಂದು ಮಾತನ್ನು ಹೇಳುತ್ತಲೇ ಇರುತ್ತೇನೆ. ನಮ್ಮ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂಥ ಹೇಡಿಗಳೇನು ಅಲ್ಲ. ತೊಂಭತ್ತರ ದಶಕಕ್ಕೂ ಮುನ್ನ ರೈತರು ಸರಣಿ ಸರಣಿಯಾಗಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೂ ಇಲ್ಲ. ಆದರೆ ಕಳೆದ ಎರಡೂವರೆ ದಶಕಗಳಲ್ಲಿ ಪರಿಸ್ಥಿತಿ ಬದಲಾಗಿಹೋಗಿದೆ. ರೈತರ ಆತ್ಮಹತ್ಯೆ ಎಂಬುದು ಮಾಮೂಲಿ ವಿದ್ಯಮಾನವಾಗಿ ಹೋಗಿದೆ. ಇದನ್ನು ನಮ್ಮ ಸರ್ಕಾರಗಳು, ನಾಗರಿಕ ಸಮಾಜ ಸುಮ್ಮನೆ ನೋಡಿಕೊಂಡು ಕೂರುವಂಥ ಅಮಾನವೀಯ ಸ್ಥಿತಿಗೆ ತಲುಪಿಕೊಂಡಿವೆ.

ರೈತರ ಆತ್ಮಹತ್ಯೆ ಎಂಬುದು ನನ್ನ ದೃಷ್ಟಿಯಲ್ಲಿ ಆತ್ಮಹತ್ಯೆಗಳಲ್ಲ, ಇಡೀ ವ್ಯವಸ್ಥೆಯೇ ಒಂದಾಗಿ ಮಾಡುತ್ತಿರುವ ಸಾಮೂಹಿಕ ಕೊಲೆಗಳು. ಈ ವ್ಯವಸ್ಥೆಯಲ್ಲಿ ಸರ್ಕಾರ, ನಾಗರಿಕ ಸಮಾಜ, ಜನಪ್ರತಿನಿಧಿಗಳು, ರಾಜಕಾರಣ ಎಲ್ಲವೂ ಇವೆ. ರೈತರು ರಣಹೇಡಿಗಳಲ್ಲ, ಆದರೆ ನಮ್ಮ ವ್ಯವಸ್ಥೆಯೇ ಅವರನ್ನು ಸಾವಿನ ಕೂಪಕ್ಕೆ ತಳ್ಳುತ್ತಿದೆ.

ತೊಂಭತ್ತರ ದಶಕದ ಆದಿಯಲ್ಲಿ ಭಾರತ ದೇಶ ಆರ್ಥಿಕ ಉದಾರೀಕರಣಕ್ಕೆ ತೆರೆದುಕೊಂಡಿತು. ಡಂಕೆಲ್ ಪ್ರಸ್ತಾಪಕ್ಕೆ ಎಷ್ಟೇ ವಿರೋಧಗಳಿದ್ದರೂ ಗ್ಯಾಟ್ ಸದಸ್ಯ ರಾಷ್ಟ್ರಗಳು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಡಂಕೆಲ್ ಪ್ರಸ್ತಾವಗಳನ್ನು ಒಪ್ಪಿಕೊಂಡವು. ಅಂತಾರಾಷ್ಟ್ರೀಯ ವ್ಯಾಪಾರ ನಡೆಸಲು ಪರಸ್ಪರ ಸ್ವೀಕೃತವಾದ ನಿಯಮಗಳನ್ನೊಳಗೊಂಡ ಒಪ್ಪಂದವೇ ಗ್ಯಾಟ್ ಒಪ್ಪಂದ ಅರ್ಥಾತ್ ಬಹುರಾಷ್ಟ್ರೀಯ ವ್ಯಾಪಾರ ಪದ್ಧತಿಯಲ್ಲಿ ಆಮದು ರಫ್ತು ಸುಂಕಗಳ ಮತ್ತು ವ್ಯಾಪಾರದ ಬಗ್ಗೆ ಮಾಡಿಕೊಳ್ಳುವ ಸಾಮಾನ್ಯ ಒಪ್ಪಂದವೇ ಗ್ಯಾಟ್.  ಈ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಭಾರತ ರೈತರ ಅವನತಿಯ ಪರ್ವ ಆರಂಭವಾಯಿತು.  ಕರ್ನಾಟಕ ಮಾತ್ರವಲ್ಲ, ಇಡೀ ಜಗತ್ತಿನ ರೈತರಿಗೆ ಮಾರ್ಗದರ್ಶಕರಾಗಿದ್ದ ರೈತ ಚಳವಳಿಯ ಮೇರು ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ಗ್ಯಾಟ್ ಒಪ್ಪಂದದ ದುಷ್ಪರಿಣಾಮಗಳನ್ನು ಆಗಲೇ ಗುರುತಿಸಿದ್ದರು. ‘ರೈತರು ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುವ ದಿನಗಳು ದೂರವಿಲ್ಲ’ ಎಂದು ಅವರು ಅಂದೇ ಭವಿಷ್ಯ ನುಡಿದಿದ್ದರು. ರೈತರು ಆತ್ಮಹತ್ಯೆಗೆ ಶರಣಾಗುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲದಿದ್ದ ಆ ದಿನಗಳಲ್ಲಿ ನಂಜುಂಡಸ್ವಾಮಿಯವರ ಹೇಳಿಕೆ ಹಲವರಿಗೆ ಉತ್ಪ್ರೇಕ್ಷೆಯಂತೆ ಕಂಡಿತ್ತು. ಆದರೆ ನಂಜುಂಡಸ್ವಾಮಿಯವರಿಗೆ ಇದ್ದ ದೂರದರ್ಶಿತ್ವ ಅಸಾಧಾರಣವಾದದ್ದು. ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಈ ಅಂತಾರಾಷ್ಟ್ರೀಯ ವ್ಯಾಪಾರ ಒಪ್ಪಂದಗಳ ವಿರುದ್ಧವಾಗಿಯೇ ಹೋರಾಡಿದ, ಬಡಿದಾಡಿದ, ಜಗತ್ತಿನ ರೈತರನ್ನು ಸಂಘಟಿಸಲು ಪ್ರಯತ್ನಿಸಿದ ನಂಜುಂಡಸ್ವಾಮಿಯವರ ಮಾತುಗಳು ಕೊನೆಗೂ ನಿಜವಾಗಿಹೋದವು.

ಕುವೆಂಪು ಅವರೇನೋ ‘ನೇಗಿಲ ಕುಳದೊಳಡಗಿದೆ ಕರ್ಮ, ನೇಗಿಲ ಮೇಲೆಯೇ ನಿಂತಿದೆ ಧರ್ಮ’ ಎಂದು ಕೃಷಿ ಮತ್ತು ರೈತರ ಮಹತ್ವವನ್ನು ಸಾರಿದ್ದರು. ಆದರೆ ನಮ್ಮನ್ನು ಆಳುವ ಜನರಿಗೆ ಅದು ಅರ್ಥವಾಗಲಿಲ್ಲ. ಜಗತ್ತಿನ ಮುಂದುವರೆದ ದೇಶಗಳ ರೈತರ ಜತೆಗೆ ನಮ್ಮ ರೈತರನ್ನು ಸ್ಪರ್ಧೆಗೆ ಬಿಟ್ಟು ಅವರನ್ನು ಅತಂತ್ರರನ್ನಾಗಿಸಲಾಯಿತು. ಕೃಷಿ ಕ್ಷೇತ್ರದಲ್ಲಿ ಸುಧಾರಣೆಯ ಹೆಸರಿನಲ್ಲಿ ಬಂದ ಬದಲಾವಣೆಗಳು ರೈತರನ್ನು ಪರಾವಲಂಬಿಯನ್ನಾಗಿ ಮಾಡಿದವು. ಮೊದಲು ಗೊಬ್ಬರ, ಬೀಜ ಎಲ್ಲವನ್ನೂ ತಾನೇ ತಯಾರಿಸಿಕೊಳ್ಳುತ್ತಿದ್ದ ರೈತರು ಯಾರನ್ನೂ ಅವಲಂಬಿಸದೆ ವ್ಯವಸಾಯ ಮಾಡಿಕೊಂಡಿದ್ದರು. ಆದರೆ ನಂತರ ಬಂದ ಕುಲಾಂತರಿ ಬೀಜಗಳು, ರಾಸಾಯನಿಕ ಗೊಬ್ಬರಗಳು ರೈತರ ಬದುಕನ್ನೇ ಮೂರಾಬಟ್ಟೆಯಾಗಿ ಮಾಡಿದವು.
ಗ್ಯಾಟ್ ಒಪ್ಪಂದ ಪರಿಣಾಮ ಭೀಕರವಾಗಿತ್ತು. ಕೃಷಿಗೆ ಬಳಸುವ ವಸ್ತುಗಳು ಹಾಗು ಕೃಷಿ ಉತ್ಪನ್ನಗಳ ಹಕ್ಕುಗಳು ನಮ್ಮ ಕೈತಪ್ಪಿ ಹೋದವು. ಯಾರ ಕಣ್ಣಿಗೂ ಕಾಣದ ಬಹುರಾಷ್ಟ್ರೀಯ ಸಂಸ್ಥೆಗಳು ಇದೆಲ್ಲವನ್ನು ತಮ್ಮ ಹಿಡಿತಕ್ಕೆ ತಂದುಕೊಂಡು ರೈತರನ್ನು ಪರೋಕ್ಷವಾಗಿ ತಮ್ಮ ಜೀತದಾಳುಗಳನ್ನಾಗಿ ಮಾಡಿಕೊಂಡವು. ರೈತರಿಗೆ ಕಣ್ಣಿಗೆ ಕಾಣದ ಶತ್ರುಗಳು ಹುಟ್ಟಿಕೊಂಡರು ಮತ್ತು ಅವರು ಅಗೋಚರವಾಗಿಯೇ ತಮ್ಮ ಕರಾಮತ್ತುಗಳನ್ನು ನಡೆಸತೊಡಗಿದರು. ಊಳಿಗಮಾನ್ಯ ಪದ್ಧತಿಯ ಹೊಸ ರೂಪವಾಗಿ ಆರ್ಥಿಕ ಉದಾರೀಕರಣ ಬದಲಾಯಿತು ಮತ್ತು ರೈತರನ್ನು ಶೋಷಿಸತೊಡಗಿತು. ಗ್ಯಾಟ್ ಒಪ್ಪಂದದ ನಂತರ ೧೯೯೫ರಲ್ಲಿ ವಿಶ್ವ ವ್ಯಾಪಾ ಸಂಘಟನೆ (ಡಬ್ಲ್ಯುಟಿಒ) ಅಸ್ತಿತ್ವಕ್ಕೆ ಬಂದು ಎಗ್ಗಿಲ್ಲದಂತೆ ರೈತರ ಕುತ್ತಿಗೆಯ ಮೇಲೇ ಕುಳಿತುಕೊಂಡಿತು. ಈ ಅಂತಾರಾಷ್ಟ್ರೀಯ ಒಪ್ಪಂದಗಳು, ಸಂಘಟನೆಗಳು ರೈತರಿಗೆ ರಸಗೊಬ್ಬರ ಸಬ್ಸಿಡಿಯನ್ನು ನೀಡಲು ವಿರೋಧಿಸುತ್ತವೆ. ಬೀಜಗಳ ಸಬ್ಸಿಡಿ ನೀಡುವುದನ್ನೂ ಒಪ್ಪುವುದಿಲ್ಲ. ಇದರ ಪರಿಣಾಮವಾಗಿ ಭಾರತ ಸರ್ಕಾರ ಸಬ್ಸಿಡಿ ಕಡಿತ ಆರಂಭಿಸಿತು. ಜತೆಗೆ ವಿದ್ಯುತ್ ದರದ ರಿಯಾಯಿತಿಯನ್ನು ತೆರವುಗೊಳಿಸಲು ವಿಶ್ವಬ್ಯಾಂಕ್ ಮೇಲಿಂದ ಮೇಲೆ ಒತ್ತಡಗಳನ್ನು ತಂದಿತು. ಬೀಜಗಳಿಗೆ ಪೇಟೆಂಟ್ ಹಕ್ಕುಗಳನ್ನು ಬಹುರಾಷ್ಟ್ರೀಯ ಕಂಪೆನಿಗಳು ಪಡೆದ ಪರಿಣಾಮವಾಗಿ ರೈತರು ಸಂಪೂರ್ಣವಾಗಿ ಪರಾವಲಂಬಿಗಳಾದರು. ರೈತರು ಕಂಡು ಕೇಳರಿಯದ ರೋಗಬಾಧೆಗಳು ತಾವು ಬೆಳೆದ ಬೆಳೆಗೆ ಕಾಡಲಾರಂಭಿಸಿದರು. ಈ ರೋಗಗಳಿಗೆ ಕೀಟನಾಶಕಗಳನ್ನು ಸಿದ್ಧಪಡಿಸಿದ್ದೂ ಸಹ ಇದೇ ಬಹುರಾಷ್ಟ್ರೀಯ ಸಂಸ್ಥೆಗಳು. ಹೀಗಾಗಿ ರೈತ ಸಂಪೂರ್ಣವಾಗಿ ತಮ್ಮ ಕಣ್ಣಿಗೆ ಕಾಣದ ಬಹುರಾಷ್ಟ್ರೀಯ ಕಂಪೆನಿಗಳ ಗುಲಾಮನಾಗುವ ದಾರುಣ ಸ್ಥಿತಿಯನ್ನು ತಲುಪಿದ,
ಸಂಯುಕ್ತ ಕರ್ನಾಟಕ, ನಾಡು-ನುಡಿ ಅಂಕಣ, 16-8-2015

ಜಾಗತೀಕರಣದ ಸುಂಟರಗಾಳಿ ಇಷ್ಟನ್ನು ಮಾಡಿ ಸುಮ್ಮನಿರಲಿಲ್ಲ. ಜನರಲ್ಲಿ ‘ಕೊಳ್ಳುಬಾಕ ಸಂಸ್ಕೃತಿ’ಯನ್ನು ಅದು ಉದ್ದೀಪಿಸಿತು. ಭಾರತದಂಥ ಬೃಹತ್ ಜನಸಂಖ್ಯೆಯ ರಾಷ್ಟ್ರಗಳು ಬಹುರಾಷ್ಟ್ರೀಯ ಕಂಪೆನಿಗಳಿಗೆ ಬಹುದೊಡ್ಡ ಮಾರುಕಟ್ಟೆ. ಹೀಗಾಗಿ ಥರಾವರಿ ಉತ್ಪನ್ನಗಳು ಮಾರುಕಟ್ಟೆಗೆ ಬಂದವು. ನಗರಗಳ ಜನರ ಬದುಕುವ ಶೈಲಿ ಬದಲಾಯಿತು. ಅದರ ಪರಿಣಾಮ ಹಳ್ಳಿಗರ ಮೇಲೂ ಆದವು. ನಗರಗಳ ಮಾಲ್‌ಗಳು, ಬಿಗ್ ಬಜಾರುಗಳನ್ನು ರೈತರನ್ನು ಆಕರ್ಷಿಸಲಾರಂಭಿಸಿದವು. ಆಧುನಿಕ ಜಗತ್ತಿನ ಲೋಲುಪ ಬದುಕಿಗೆ ನಾವು ಒಗ್ಗಿಕೊಳ್ಳತೊಡಗಿದೆವು. ಅದರ ಪರಿಣಾಮವಾಗಿ ನಮ್ಮ ‘ಬದುಕುವ ವೆಚ್ಚ’ವೂ ಗಣನೀಯವಾಗಿ ಹೆಚ್ಚುತ್ತ ಬಂದಿತು. ಸಾಮಾಜಿಕ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಲು ಆಡಂಬರದ ಬದುಕಿನ ಕಡೆಗೆ ವಾಲುವಂಥ ಸನ್ನಿವೇಶಗಳು ಸೃಷ್ಟಿಯಾದವು.

ಇದೆಲ್ಲ ಒಂದೆಡೆಯಾದರೆ, ಅತಿವೃಷ್ಟಿ, ಅನಾವೃಷ್ಟಿಗಳು ರೈತರ ಮೇಲೆ ಎರಗಿ ಬಂದವು. ಅತಿವೃಷ್ಟಿಯಾದಾಗ ಬೆಳೆನಾಶ, ಅನಾವೃಷ್ಟಿಯಾದಾಗ ಬೆಳೆಯನ್ನೇ ಬೆಳೆಯಲಾಗದ ದುರಂತಮಯ ದಿನಗಳು ನಮ್ಮದಾದವು. ಬೆಳೆದ ಬೆಲೆಗೆ ನಿಶ್ಚಿತವಾದ ಬೆಲೆ ಸಿಗದೆ ಬದುಕು ದುರ್ಬರವಾಗುವ ಸನ್ನಿವೇಶಗಳು ನಿರ್ಮಾಣವಾದವು. ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲವನ್ನು ತೀರಿಸಲು ಆಗದೆ ರೈತರು ಕಂಗೆಟ್ಟುಹೋದರು. ಇದಲ್ಲದೆ ಅವೈಜ್ಞಾನಿಕ ಬೆಳೆ ಪದ್ಧತಿ, ಸಮಯಕ್ಕೆ ಸರಿಯಾಗಿ ಸಿಗದ ಬಿತ್ತನೆ ಬೀಜ, ಗೊಬ್ಬರ ಕೂಡ ರೈತರ ಸಮಸ್ಯೆಗಳನ್ನು ಇಮ್ಮಡಿಗೊಳಿಸುತ್ತಲೇ ಹೋದವು. ಕೊರೆಯಿಸಿದ ಬೋರ್‌ವೆಲ್ ಗಳಲ್ಲಿ ನೀರು ಬರದೆ ರೈತರು ತಲೆಮೇಲೆ ಕೈಹೊತ್ತುಕೊಂಡು ಕೂರುವ ಸ್ಥಿತಿ ನಿರ್ಮಾಣವಾಯಿತು.

ಇದೆಲ್ಲದರ ಪರಿಣಾಮ ಇಡೀ ಕೃಷಿ ಜಗತ್ತಿನ ಮೇಲೆಯೇ ಆಯಿತು. ರೈತರು ಸ್ವಾಭಿಮಾನಿಗಳು. ತೆಗೆದುಕೊಂಡ ಸಾಲ ತೀರಿಸಲಾಗದೆ ಮನೆ, ಜಮೀನು ಜಫ್ತಿಗೆ ಬಂದರೆ ಅದನ್ನು ಹೇಗೆ ಸಹಿಸಿಕೊಳ್ಳಲು ಸಾಧ್ಯ? ಅವಮಾನವನ್ನು ತಡೆದುಕೊಳ್ಳುವ ಶಕ್ತಿಯಿಲ್ಲದ, ತನ್ನ ಕುಟುಂಬವನ್ನು ನಿರ್ವಹಿಸಲಾಗದ ಒತ್ತಡಗಳು ನಿರ್ಮಾಣವಾದಾಗ ಆತ್ಮಹತ್ಯೆಗೆ ಶರಣಾಗತೊಡಗಿದರು. ಸರಣಿ ಸರಣಿಯಾಗಿ ಆತ್ಮಹತ್ಯೆಗಳು ನಡೆಯತೊಡಗಿದವು. ಅನ್ನದಾತ, ನೇಗಿಲಯೋಗಿ, ಕಾಯಕಯೋಗಿ, ದೇಶದ ಜೀವನಾಡಿ ಎಂದೆಲ್ಲ ಕರೆಯಿಸಿಕೊಂಡ ರೈತರ ಬದುಕು ಮೂರಾಬಟ್ಟೆಯಾಗಿಹೋಗಿದೆ. ರೈತರ ಪಾಲಿಗೆ ಇವತ್ತು ಸರ್ಕಾರಗಳು ಇಲ್ಲ, ನಾಗರಿಕ ಸಮಾಜವೂ ಇಲ್ಲ ಎಂಬಂಥ ದಾರುಣ ಸ್ಥಿತಿ ನಿರ್ಮಾಣವಾಯಿತು.

ರೈತ ನಮ್ಮ ದೇಶದ ಬೆನ್ನುಲುಬು ಎಂದು ನಮ್ಮ ರಾಜಕಾರಣಿಗಳು ಭಾಷಣಗಳಲ್ಲಿ ಮಾತ್ರ ಹೇಳುತ್ತಾರೆ. ಆದರೆ ರೈತರ ಸಮಸ್ಯೆಗಳಿಗೆ ಅವರ ಬಳಿ ಪರಿಹಾರವೇ ಇಲ್ಲ. ಅಷ್ಟಕ್ಕೂ ರೈತರು ಭಿಕ್ಷುಕರೇನಲ್ಲ, ಅವರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಕ್ಕರೆ ಅವರು ನೆಮ್ಮದಿಯಿಂದ ಜೀವನ ಮಾಡುತ್ತಾರೆ. ಇಷ್ಟು ವ್ಯವಸ್ಥೆಯನ್ನು ನಮ್ಮ ಸರ್ಕಾರಗಳು ಮಾಡಿಕೊಟ್ಟಿದ್ದರೆ ಸಾಕಿತ್ತು. ಆದರೆ ಸಾಲಮನ್ನಾ, ಬೆಂಬಲ ಬೆಲೆ, ಬೆಳೆವಿಮೆ ಹೀಗೆ ಸರ್ಕಾರಗಳು ತೆಗೆದುಕೊಳ್ಳುವ ಪರಿಹಾರೋಪಾಯದ ಕಾರ್ಯಗಳು ನಿಜವಾಗಿಯೂ ರೈತನಿಗೆ ತಲುಪುತ್ತಲೇ ಇಲ್ಲ.
ಈ ಸಂದರ್ಭದಲ್ಲಿ ನನಗೆ ಕಾಡಿದ ಪ್ರಶ್ನೆಗಳು ಅನೇಕ. ಹಿಂದೆ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಎನ್.ಡಿ.ಸುಂದರೇಶ್‌ರಂಥ ಅದ್ಭುತ ರೈತ ನಾಯಕರ ನೇತೃತ್ವದಲ್ಲಿ ರೈತ ಸಂಘಟನೆ ಬೆಳೆದು ನಿಂತಿದ್ದಾಗ ಯಾವ ರೈತರೂ ಆತ್ಮಹತ್ಯೆಯ ಮಾರ್ಗ ಹಿಡಿದಿರಲಿಲ್ಲ. ಚಳವಳಿ ಎಂಬುದು ರೈತರ ನೈತಿಕ ಶಕ್ತಿಯಾಗಿತ್ತು. ಏನೇ ಸಮಸ್ಯೆ ಬಂದರೂ ಅದನ್ನು ಎದುರಿಸುವ ಧೀಮಂತಿಕೆ ರೈತರಿಗಿತ್ತು. ತೀರಾ ಬ್ಯಾಂಕು ಸಾಲಗಳು ಬೆಳೆದು ಮನೆ ಜಮೀನು ಹರಾಜಿಗೆ ಬಂದರೂ ಎದೆಯೊಡ್ಡಿ ನಿಂತು ಬಡಿದಾಡುವ ಛಲ ರೈತರಿಗಿತ್ತು. ಮನೆ ಜಫ್ತಿಗೆ ಬಂದ ಅಧಿಕಾರಿಗಳನ್ನು ಕಟ್ಟಿಹಾಕಿ ಪ್ರತಿಭಟಿಸಿದ ನಿದರ್ಶನಗಳು ಸಾವಿರಾರು ಇದ್ದವು. ಊರ ಮುಂದಿನ ರೈತ ಸಂಘಟನೆಯ ನಾಮಫಲಕವನ್ನು ನೋಡಿದರೆ ಒಳಗೆ ಪ್ರವೇಶ ಮಾಡಲು ಅಧಿಕಾರಿಗಳು ಹಿಂಜರಿಯುತ್ತಿದ್ದ ಕಾಲವದು. ಸಾಲ ಸೋಲಕ್ಕೆ, ಅಧಿಕಾರಿಗಳ ಗೊಡ್ಡು ಬೆದರಿಕೆಗಳಿಗೆ ರೈತರು ಮಣಿದವರಲ್ಲ.

ಬ್ಯಾಂಕ್‌ನವರು ಮತ್ತು ಸರ್ಕಾರಿ ಅಧಿಕಾರಿಗಳು ಜಫ್ತಿಗೆ, ಹರಾಜಿಗೆ ಬಂದರೆ ಎದುರಿಸಿ ಊರಿಂದಲೇ ಓಡಿಸುವಷ್ಟು ಶಕ್ತಿಶಾಲಿಗಳಾಗಿದ್ದ ರೈತರು ಇಂದು ಸಣ್ಣಪುಟ್ಟ ಅವಮಾನಗಳನ್ನೂ ಸಹಿಸಿಕೊಳ್ಳುವ ಶಕ್ತಿ ಕಳೆದುಕೊಂಡಿದ್ದಾರೆ, ಹಾಗಾಗಬಾರದು. ಹಿಂದೆ ರಾಷ್ಟ್ರೀಕೃತ ಬ್ಯಾಂಕುಗಳು, ಕೋ ಆಪರೇಟಿವ್ ಸೊಸೈಟಿಗಳಿಂದ ಸಾಲ ಪಡೆಯುತ್ತಿದ್ದ ರೈತರು ಲೋಕಲ್ ಮಾರ್‍ವಾಡಿಗಳ ಬಳಿ ಸಾಲ ಮಾಡಿ ಆ ಸಾಲದ ಸುಳಿಯಲ್ಲೂ ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. ಹಿಂದೆಲ್ಲ ರೈತ ಸಂಘಟನೆ ಪ್ರಬಲವಾಗಿದ್ದ ಪ್ರತಿ ಗ್ರಾಮಗ್ರಾಮಗಳಲ್ಲೂ ಶಾಖೆಗಳಿದ್ದವು. ರೈತರ ಆ ಕಾಲದ ಸಮಸ್ಯೆಗಳಿಗೆ ಆಗಿಂದಾಗ್ಯೆ ಪರಿಹಾರ ಹುಡುಕಿಕೊಳ್ಳುವುದು ಆಗ ಸಾಧ್ಯವಾಗಿತ್ತು. ಆದರೆ ಅಂಥ ಪರಿಸ್ಥಿತಿ ಈಗ ಎಲ್ಲೂ ಕಂಡುಬರುತ್ತಿಲ್ಲ.

ಹೀಗಾಗಿ ಆತ್ಮಾವಲೋಕನ ಕೇವಲ ಸರ್ಕಾರ ಮತ್ತು ವ್ಯವಸ್ಥೆಯಿಂದ ಮಾತ್ರವಲ್ಲ, ನಮ್ಮೆಲ್ಲರಿಂದಲೂ ಆಗಬೇಕಿದೆ. ನಾವು ಸಂಘಟಿತರಾಗದೇ ಹೋದಲ್ಲಿ ಹೀಗೆಯೇ ಒಬ್ಬೊಬ್ಬರಾಗಿ ಜೀವ ಕಳೆದುಕೊಳ್ಳುವ ದಿನಗಳು ಬರುತ್ತಲೇ ಇರುತ್ತವೆ. ರೈತರು ತಾವೇ ತಾವಾಗಿ ಸಾಯುತ್ತಿದ್ದಾರೆ ಎಂದರೆ ಈ ಸಮಾಜದ ಅಂತಃಸಾಕ್ಷಿಯೇ ಆತ್ಮಹತ್ಯೆಗೆ ಒಳಗಾಗುತ್ತಿದೆ ಎಂದರ್ಥ.

ಈ ಸಂದರ್ಭದಲ್ಲಿ ತಮಗೆ ಒಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ನಾಡಿನ ಯಾವುದೇ ಮೂಲೆಯಲ್ಲಿರುವ ಯಾವುದೇ ರೀತಿಯ ರೈತನ ಜತೆಯೂ ಕರ್ನಾಟಕ ರಕ್ಷಣಾ ವೇದಿಕೆ ಇರುತ್ತದೆ. ನಮ್ಮ ಸಂಘಟನೆಯಲ್ಲಿ ಇರುವವರಲ್ಲಿ ಬಹುತೇಕರು ರೈತರ ಮಕ್ಕಳೇ ಆಗಿದ್ದಾರೆ. ಹೀಗಾಗಿ ರೈತರ ನೆರವಿಗೆ ನಾವು ಸದಾ ಸಿದ್ಧವಿದ್ದೇವೆ. ಬ್ಯಾಂಕುಗಳು, ಖಾಸಗಿ ಲೇವಾದೇವಿದಾರರು ರೈತರನ್ನು ಪೀಡಿಸುತ್ತಿದ್ದರೆ ಅವರ ರಕ್ಷಣೆಗೆ ನನ್ನ ಲಕ್ಷಾಂತರ ಕಾರ್ಯಕರ್ತರು ಸದಾ ಸಿದ್ಧರಿರುತ್ತಾರೆ. ರೈತರ ಯಾವುದೇ ರೂಪದ ಸಮಸ್ಯೆಯಾದರೂ ಅದಕ್ಕೊಂದು ಪರಿಹಾರವಿದ್ದೇ ಇರುತ್ತದೆ. ಇಂಥ ಸಮಸ್ಯೆಗಳು ಬಂದಾಗ ನನ್ನನ್ನಾಗಲೀ, ನನ್ನ ಸಂಘಟನೆಯ ಪದಾಧಿಕಾರಿಗಳನ್ನಾಗಲೀ ಸಂಪರ್ಕಿಸಬಹುದು.

ನನ್ನ ನಾಡಿನ ಅನ್ನದಾತರ ಪಾದಗಳಿಗೆ ನಮಿಸಿ ಹೇಳುತ್ತೇನೆ, ‘ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ’. ಸಮಸ್ಯೆಗಳು ಸಾವಿರವಿರಲಿ, ಎಲ್ಲವನ್ನೂ ಎದುರಿಸಿ ನಿಲ್ಲೋಣ. ನಾವೆಲ್ಲರೂ ಸಂಘಟಿತರಾಗಿ ನಮ್ಮ ಬದುಕನ್ನು ನರಕ ಮಾಡುತ್ತಿರುವ ಶೋಷಕ ವ್ಯವಸ್ಥೆಯ ವಿರುದ್ಧ ಬಡಿದಾಡೋಣ. ಈ ದೊಡ್ಡ ಹೋರಾಟದಲ್ಲಿ ನೀವು ಏಕಾಂಕಿಗಳಲ್ಲ, ನಿಮ್ಮೊಂದಿಗೆ ನಾವಿದ್ದೇವೆ. ನನ್ನಂತೆ ಯೋಚಿಸುವ ಲಕ್ಷಾಂತರ ಜನರಿದ್ದಾರೆ. ಎಲ್ಲರೂ ಸೇರಿಯೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳೋಣ.

ರೈತರು ರಾಜಕೀಯ ಅಧಿಕಾರವನ್ನು ಪಡೆದುಕೊಂಡು ಕೃಷಿ ನೀತಿಯನ್ನು ತಾವೇ ನಿರೂಪಿಸುವಂಥ ಕಾಲ ಬರಬೇಕು. ಆಗ ಶೋಷಕ ವ್ಯವಸ್ಥೆಗೆ ಯಾವ ಜಾಗವೂ ಇರುವುದಿಲ್ಲ. ಅಲ್ಲಿಯವರೆಗೆ ನಾವು ನಮ್ಮ ಸಾಮಾಜಿಕ, ರಾಜಕೀಯ ಸಂಘರ್ಷವನ್ನು ಮುಂದುವರೆಸೋಣ. ಯಾವ ಕಾರಣಕ್ಕೂ ನೀವು ಧೃತಿಗೆಡುವುದು ಬೇಡ, ಆತ್ಮಹತ್ಯೆಯಂಥ ದಾರುಣ ನಿರ್ಧಾರವನ್ನು ಕೈಗೊಳ್ಳುವುದು ಬೇಡ. ನಿಮ್ಮೊಂದಿಗೆ ನಾವಿದ್ದೇವೆ, ಇಡೀ ಕರ್ನಾಟಕ ರಕ್ಷಣಾ ವೇದಿಕೆ ಇದೆ.

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ

(ಸಂಯುಕ್ತ ಕರ್ನಾಟಕ, 16-8-2015ರ ಸಂಚಿಕೆಯಲ್ಲಿ ಪ್ರಕಟಿತ)