Friday, 21 August 2015

ರೈತರ ಆತ್ಮಹತ್ಯೆ: ಸಾವಿಗೀಡಾದ ಸಮಾಜದ ಅಂತಃಸಾಕ್ಷಿ

ದಿನನಿತ್ಯ ಹತ್ತು ಹದಿನೈದು ಮಂದಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಘೋರ ದುರಂತ ಕಣ್ಮುಂದೆ ಇರುವಾಗ ಎಲ್ಲರೊಂದಿಗೆ ನನ್ನ ಒಂದಷ್ಟು ಮಾತುಗಳನ್ನು ಹಂಚಿಕೊಳ್ಳಬೇಕಿದೆ. ರೈತರು ಈ ಜಗತ್ತಿನ ಅನ್ನದಾತರು. ಇದಕ್ಕಾಗಿಯೇ ಜಗದ ಕವಿ, ಯುಗದ ಕವಿ ಶ್ರೀ ಕುವೆಂಪುರವರು ರೈತರನ್ನು ‘ನೇಗಿಲಯೋಗಿ’ಗಳೆಂದು ಕರೆದರು. ‘ರಾಜ್ಯಗಳುದಿಸಲಿ ರಾಜ್ಯಗಳಲಿಯಲಿ, ಹಾರಲಿ ಗದ್ದುಗೆ ಮುಕುಟಗಳು, ಮುತ್ತಿಗೆ ಹಾಕಲಿ ಸೈನಿಕರೆಲ್ಲ, ಬಿತ್ತುಳುವುದನವ ಬಿಡುವುದೇ ಇಲ್ಲ’ ಎಂದು ರೈತನ ಕರ್ತವ್ಯಪರತೆಯನ್ನು ಬಣ್ಣಿಸಿದರು. ‘ರೈತನೇ ದೇಶದ ಬೆನ್ನೆಲುಬು’ ಎಂಬ ಮಾತನ್ನು ಪದೇ ಪದೇ ನಾವೆಲ್ಲರೂ ಹೇಳಿಕೊಂಡೇ ಬರುತ್ತಿದ್ದೇವೆ.

ನಾನು ಸಹ ಒಬ್ಬ ರೈತನ ಮಗ, ನಾನೂ ಸಹ ಉಳುಮೆ ಮಾಡಿದವನೇ, ಈಗಲೂ ರೈತನೆಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ರೈತರು ಅನುಭವಿಸುತ್ತಿರುವ ಸಂಕಷ್ಟಗಳೆಲ್ಲ ನನಗೆ ಗೊತ್ತು. ‘ನೇಗಿಲಯೋಗಿ’ಗಳೆನಿಸಿಕೊಂಡ ನಾವು ಯಾಕಾಗಿ ಇಂಥ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ? ಯಾಕೆ ನಮ್ಮ ಒಡನಾಡಿಗಳು ಆತ್ಮಹತ್ಯೆಯಂಥ ದಾರುಣ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ? ಇದನ್ನು ತಡೆಗಟ್ಟುವುದಾದರೂ ಹೇಗೆ? ಇವೆಲ್ಲ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಕೊಳ್ಳಬೇಕಿದೆ.

ನಾನು ಪದೇಪದೇ ಒಂದು ಮಾತನ್ನು ಹೇಳುತ್ತಲೇ ಇರುತ್ತೇನೆ. ನಮ್ಮ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂಥ ಹೇಡಿಗಳೇನು ಅಲ್ಲ. ತೊಂಭತ್ತರ ದಶಕಕ್ಕೂ ಮುನ್ನ ರೈತರು ಸರಣಿ ಸರಣಿಯಾಗಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೂ ಇಲ್ಲ. ಆದರೆ ಕಳೆದ ಎರಡೂವರೆ ದಶಕಗಳಲ್ಲಿ ಪರಿಸ್ಥಿತಿ ಬದಲಾಗಿಹೋಗಿದೆ. ರೈತರ ಆತ್ಮಹತ್ಯೆ ಎಂಬುದು ಮಾಮೂಲಿ ವಿದ್ಯಮಾನವಾಗಿ ಹೋಗಿದೆ. ಇದನ್ನು ನಮ್ಮ ಸರ್ಕಾರಗಳು, ನಾಗರಿಕ ಸಮಾಜ ಸುಮ್ಮನೆ ನೋಡಿಕೊಂಡು ಕೂರುವಂಥ ಅಮಾನವೀಯ ಸ್ಥಿತಿಗೆ ತಲುಪಿಕೊಂಡಿವೆ.

ರೈತರ ಆತ್ಮಹತ್ಯೆ ಎಂಬುದು ನನ್ನ ದೃಷ್ಟಿಯಲ್ಲಿ ಆತ್ಮಹತ್ಯೆಗಳಲ್ಲ, ಇಡೀ ವ್ಯವಸ್ಥೆಯೇ ಒಂದಾಗಿ ಮಾಡುತ್ತಿರುವ ಸಾಮೂಹಿಕ ಕೊಲೆಗಳು. ಈ ವ್ಯವಸ್ಥೆಯಲ್ಲಿ ಸರ್ಕಾರ, ನಾಗರಿಕ ಸಮಾಜ, ಜನಪ್ರತಿನಿಧಿಗಳು, ರಾಜಕಾರಣ ಎಲ್ಲವೂ ಇವೆ. ರೈತರು ರಣಹೇಡಿಗಳಲ್ಲ, ಆದರೆ ನಮ್ಮ ವ್ಯವಸ್ಥೆಯೇ ಅವರನ್ನು ಸಾವಿನ ಕೂಪಕ್ಕೆ ತಳ್ಳುತ್ತಿದೆ.

ತೊಂಭತ್ತರ ದಶಕದ ಆದಿಯಲ್ಲಿ ಭಾರತ ದೇಶ ಆರ್ಥಿಕ ಉದಾರೀಕರಣಕ್ಕೆ ತೆರೆದುಕೊಂಡಿತು. ಡಂಕೆಲ್ ಪ್ರಸ್ತಾಪಕ್ಕೆ ಎಷ್ಟೇ ವಿರೋಧಗಳಿದ್ದರೂ ಗ್ಯಾಟ್ ಸದಸ್ಯ ರಾಷ್ಟ್ರಗಳು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಡಂಕೆಲ್ ಪ್ರಸ್ತಾವಗಳನ್ನು ಒಪ್ಪಿಕೊಂಡವು. ಅಂತಾರಾಷ್ಟ್ರೀಯ ವ್ಯಾಪಾರ ನಡೆಸಲು ಪರಸ್ಪರ ಸ್ವೀಕೃತವಾದ ನಿಯಮಗಳನ್ನೊಳಗೊಂಡ ಒಪ್ಪಂದವೇ ಗ್ಯಾಟ್ ಒಪ್ಪಂದ ಅರ್ಥಾತ್ ಬಹುರಾಷ್ಟ್ರೀಯ ವ್ಯಾಪಾರ ಪದ್ಧತಿಯಲ್ಲಿ ಆಮದು ರಫ್ತು ಸುಂಕಗಳ ಮತ್ತು ವ್ಯಾಪಾರದ ಬಗ್ಗೆ ಮಾಡಿಕೊಳ್ಳುವ ಸಾಮಾನ್ಯ ಒಪ್ಪಂದವೇ ಗ್ಯಾಟ್.  ಈ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಭಾರತ ರೈತರ ಅವನತಿಯ ಪರ್ವ ಆರಂಭವಾಯಿತು.  ಕರ್ನಾಟಕ ಮಾತ್ರವಲ್ಲ, ಇಡೀ ಜಗತ್ತಿನ ರೈತರಿಗೆ ಮಾರ್ಗದರ್ಶಕರಾಗಿದ್ದ ರೈತ ಚಳವಳಿಯ ಮೇರು ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ಗ್ಯಾಟ್ ಒಪ್ಪಂದದ ದುಷ್ಪರಿಣಾಮಗಳನ್ನು ಆಗಲೇ ಗುರುತಿಸಿದ್ದರು. ‘ರೈತರು ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುವ ದಿನಗಳು ದೂರವಿಲ್ಲ’ ಎಂದು ಅವರು ಅಂದೇ ಭವಿಷ್ಯ ನುಡಿದಿದ್ದರು. ರೈತರು ಆತ್ಮಹತ್ಯೆಗೆ ಶರಣಾಗುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲದಿದ್ದ ಆ ದಿನಗಳಲ್ಲಿ ನಂಜುಂಡಸ್ವಾಮಿಯವರ ಹೇಳಿಕೆ ಹಲವರಿಗೆ ಉತ್ಪ್ರೇಕ್ಷೆಯಂತೆ ಕಂಡಿತ್ತು. ಆದರೆ ನಂಜುಂಡಸ್ವಾಮಿಯವರಿಗೆ ಇದ್ದ ದೂರದರ್ಶಿತ್ವ ಅಸಾಧಾರಣವಾದದ್ದು. ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಈ ಅಂತಾರಾಷ್ಟ್ರೀಯ ವ್ಯಾಪಾರ ಒಪ್ಪಂದಗಳ ವಿರುದ್ಧವಾಗಿಯೇ ಹೋರಾಡಿದ, ಬಡಿದಾಡಿದ, ಜಗತ್ತಿನ ರೈತರನ್ನು ಸಂಘಟಿಸಲು ಪ್ರಯತ್ನಿಸಿದ ನಂಜುಂಡಸ್ವಾಮಿಯವರ ಮಾತುಗಳು ಕೊನೆಗೂ ನಿಜವಾಗಿಹೋದವು.

ಕುವೆಂಪು ಅವರೇನೋ ‘ನೇಗಿಲ ಕುಳದೊಳಡಗಿದೆ ಕರ್ಮ, ನೇಗಿಲ ಮೇಲೆಯೇ ನಿಂತಿದೆ ಧರ್ಮ’ ಎಂದು ಕೃಷಿ ಮತ್ತು ರೈತರ ಮಹತ್ವವನ್ನು ಸಾರಿದ್ದರು. ಆದರೆ ನಮ್ಮನ್ನು ಆಳುವ ಜನರಿಗೆ ಅದು ಅರ್ಥವಾಗಲಿಲ್ಲ. ಜಗತ್ತಿನ ಮುಂದುವರೆದ ದೇಶಗಳ ರೈತರ ಜತೆಗೆ ನಮ್ಮ ರೈತರನ್ನು ಸ್ಪರ್ಧೆಗೆ ಬಿಟ್ಟು ಅವರನ್ನು ಅತಂತ್ರರನ್ನಾಗಿಸಲಾಯಿತು. ಕೃಷಿ ಕ್ಷೇತ್ರದಲ್ಲಿ ಸುಧಾರಣೆಯ ಹೆಸರಿನಲ್ಲಿ ಬಂದ ಬದಲಾವಣೆಗಳು ರೈತರನ್ನು ಪರಾವಲಂಬಿಯನ್ನಾಗಿ ಮಾಡಿದವು. ಮೊದಲು ಗೊಬ್ಬರ, ಬೀಜ ಎಲ್ಲವನ್ನೂ ತಾನೇ ತಯಾರಿಸಿಕೊಳ್ಳುತ್ತಿದ್ದ ರೈತರು ಯಾರನ್ನೂ ಅವಲಂಬಿಸದೆ ವ್ಯವಸಾಯ ಮಾಡಿಕೊಂಡಿದ್ದರು. ಆದರೆ ನಂತರ ಬಂದ ಕುಲಾಂತರಿ ಬೀಜಗಳು, ರಾಸಾಯನಿಕ ಗೊಬ್ಬರಗಳು ರೈತರ ಬದುಕನ್ನೇ ಮೂರಾಬಟ್ಟೆಯಾಗಿ ಮಾಡಿದವು.
ಗ್ಯಾಟ್ ಒಪ್ಪಂದ ಪರಿಣಾಮ ಭೀಕರವಾಗಿತ್ತು. ಕೃಷಿಗೆ ಬಳಸುವ ವಸ್ತುಗಳು ಹಾಗು ಕೃಷಿ ಉತ್ಪನ್ನಗಳ ಹಕ್ಕುಗಳು ನಮ್ಮ ಕೈತಪ್ಪಿ ಹೋದವು. ಯಾರ ಕಣ್ಣಿಗೂ ಕಾಣದ ಬಹುರಾಷ್ಟ್ರೀಯ ಸಂಸ್ಥೆಗಳು ಇದೆಲ್ಲವನ್ನು ತಮ್ಮ ಹಿಡಿತಕ್ಕೆ ತಂದುಕೊಂಡು ರೈತರನ್ನು ಪರೋಕ್ಷವಾಗಿ ತಮ್ಮ ಜೀತದಾಳುಗಳನ್ನಾಗಿ ಮಾಡಿಕೊಂಡವು. ರೈತರಿಗೆ ಕಣ್ಣಿಗೆ ಕಾಣದ ಶತ್ರುಗಳು ಹುಟ್ಟಿಕೊಂಡರು ಮತ್ತು ಅವರು ಅಗೋಚರವಾಗಿಯೇ ತಮ್ಮ ಕರಾಮತ್ತುಗಳನ್ನು ನಡೆಸತೊಡಗಿದರು. ಊಳಿಗಮಾನ್ಯ ಪದ್ಧತಿಯ ಹೊಸ ರೂಪವಾಗಿ ಆರ್ಥಿಕ ಉದಾರೀಕರಣ ಬದಲಾಯಿತು ಮತ್ತು ರೈತರನ್ನು ಶೋಷಿಸತೊಡಗಿತು. ಗ್ಯಾಟ್ ಒಪ್ಪಂದದ ನಂತರ ೧೯೯೫ರಲ್ಲಿ ವಿಶ್ವ ವ್ಯಾಪಾ ಸಂಘಟನೆ (ಡಬ್ಲ್ಯುಟಿಒ) ಅಸ್ತಿತ್ವಕ್ಕೆ ಬಂದು ಎಗ್ಗಿಲ್ಲದಂತೆ ರೈತರ ಕುತ್ತಿಗೆಯ ಮೇಲೇ ಕುಳಿತುಕೊಂಡಿತು. ಈ ಅಂತಾರಾಷ್ಟ್ರೀಯ ಒಪ್ಪಂದಗಳು, ಸಂಘಟನೆಗಳು ರೈತರಿಗೆ ರಸಗೊಬ್ಬರ ಸಬ್ಸಿಡಿಯನ್ನು ನೀಡಲು ವಿರೋಧಿಸುತ್ತವೆ. ಬೀಜಗಳ ಸಬ್ಸಿಡಿ ನೀಡುವುದನ್ನೂ ಒಪ್ಪುವುದಿಲ್ಲ. ಇದರ ಪರಿಣಾಮವಾಗಿ ಭಾರತ ಸರ್ಕಾರ ಸಬ್ಸಿಡಿ ಕಡಿತ ಆರಂಭಿಸಿತು. ಜತೆಗೆ ವಿದ್ಯುತ್ ದರದ ರಿಯಾಯಿತಿಯನ್ನು ತೆರವುಗೊಳಿಸಲು ವಿಶ್ವಬ್ಯಾಂಕ್ ಮೇಲಿಂದ ಮೇಲೆ ಒತ್ತಡಗಳನ್ನು ತಂದಿತು. ಬೀಜಗಳಿಗೆ ಪೇಟೆಂಟ್ ಹಕ್ಕುಗಳನ್ನು ಬಹುರಾಷ್ಟ್ರೀಯ ಕಂಪೆನಿಗಳು ಪಡೆದ ಪರಿಣಾಮವಾಗಿ ರೈತರು ಸಂಪೂರ್ಣವಾಗಿ ಪರಾವಲಂಬಿಗಳಾದರು. ರೈತರು ಕಂಡು ಕೇಳರಿಯದ ರೋಗಬಾಧೆಗಳು ತಾವು ಬೆಳೆದ ಬೆಳೆಗೆ ಕಾಡಲಾರಂಭಿಸಿದರು. ಈ ರೋಗಗಳಿಗೆ ಕೀಟನಾಶಕಗಳನ್ನು ಸಿದ್ಧಪಡಿಸಿದ್ದೂ ಸಹ ಇದೇ ಬಹುರಾಷ್ಟ್ರೀಯ ಸಂಸ್ಥೆಗಳು. ಹೀಗಾಗಿ ರೈತ ಸಂಪೂರ್ಣವಾಗಿ ತಮ್ಮ ಕಣ್ಣಿಗೆ ಕಾಣದ ಬಹುರಾಷ್ಟ್ರೀಯ ಕಂಪೆನಿಗಳ ಗುಲಾಮನಾಗುವ ದಾರುಣ ಸ್ಥಿತಿಯನ್ನು ತಲುಪಿದ,
ಸಂಯುಕ್ತ ಕರ್ನಾಟಕ, ನಾಡು-ನುಡಿ ಅಂಕಣ, 16-8-2015

ಜಾಗತೀಕರಣದ ಸುಂಟರಗಾಳಿ ಇಷ್ಟನ್ನು ಮಾಡಿ ಸುಮ್ಮನಿರಲಿಲ್ಲ. ಜನರಲ್ಲಿ ‘ಕೊಳ್ಳುಬಾಕ ಸಂಸ್ಕೃತಿ’ಯನ್ನು ಅದು ಉದ್ದೀಪಿಸಿತು. ಭಾರತದಂಥ ಬೃಹತ್ ಜನಸಂಖ್ಯೆಯ ರಾಷ್ಟ್ರಗಳು ಬಹುರಾಷ್ಟ್ರೀಯ ಕಂಪೆನಿಗಳಿಗೆ ಬಹುದೊಡ್ಡ ಮಾರುಕಟ್ಟೆ. ಹೀಗಾಗಿ ಥರಾವರಿ ಉತ್ಪನ್ನಗಳು ಮಾರುಕಟ್ಟೆಗೆ ಬಂದವು. ನಗರಗಳ ಜನರ ಬದುಕುವ ಶೈಲಿ ಬದಲಾಯಿತು. ಅದರ ಪರಿಣಾಮ ಹಳ್ಳಿಗರ ಮೇಲೂ ಆದವು. ನಗರಗಳ ಮಾಲ್‌ಗಳು, ಬಿಗ್ ಬಜಾರುಗಳನ್ನು ರೈತರನ್ನು ಆಕರ್ಷಿಸಲಾರಂಭಿಸಿದವು. ಆಧುನಿಕ ಜಗತ್ತಿನ ಲೋಲುಪ ಬದುಕಿಗೆ ನಾವು ಒಗ್ಗಿಕೊಳ್ಳತೊಡಗಿದೆವು. ಅದರ ಪರಿಣಾಮವಾಗಿ ನಮ್ಮ ‘ಬದುಕುವ ವೆಚ್ಚ’ವೂ ಗಣನೀಯವಾಗಿ ಹೆಚ್ಚುತ್ತ ಬಂದಿತು. ಸಾಮಾಜಿಕ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಲು ಆಡಂಬರದ ಬದುಕಿನ ಕಡೆಗೆ ವಾಲುವಂಥ ಸನ್ನಿವೇಶಗಳು ಸೃಷ್ಟಿಯಾದವು.

ಇದೆಲ್ಲ ಒಂದೆಡೆಯಾದರೆ, ಅತಿವೃಷ್ಟಿ, ಅನಾವೃಷ್ಟಿಗಳು ರೈತರ ಮೇಲೆ ಎರಗಿ ಬಂದವು. ಅತಿವೃಷ್ಟಿಯಾದಾಗ ಬೆಳೆನಾಶ, ಅನಾವೃಷ್ಟಿಯಾದಾಗ ಬೆಳೆಯನ್ನೇ ಬೆಳೆಯಲಾಗದ ದುರಂತಮಯ ದಿನಗಳು ನಮ್ಮದಾದವು. ಬೆಳೆದ ಬೆಲೆಗೆ ನಿಶ್ಚಿತವಾದ ಬೆಲೆ ಸಿಗದೆ ಬದುಕು ದುರ್ಬರವಾಗುವ ಸನ್ನಿವೇಶಗಳು ನಿರ್ಮಾಣವಾದವು. ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲವನ್ನು ತೀರಿಸಲು ಆಗದೆ ರೈತರು ಕಂಗೆಟ್ಟುಹೋದರು. ಇದಲ್ಲದೆ ಅವೈಜ್ಞಾನಿಕ ಬೆಳೆ ಪದ್ಧತಿ, ಸಮಯಕ್ಕೆ ಸರಿಯಾಗಿ ಸಿಗದ ಬಿತ್ತನೆ ಬೀಜ, ಗೊಬ್ಬರ ಕೂಡ ರೈತರ ಸಮಸ್ಯೆಗಳನ್ನು ಇಮ್ಮಡಿಗೊಳಿಸುತ್ತಲೇ ಹೋದವು. ಕೊರೆಯಿಸಿದ ಬೋರ್‌ವೆಲ್ ಗಳಲ್ಲಿ ನೀರು ಬರದೆ ರೈತರು ತಲೆಮೇಲೆ ಕೈಹೊತ್ತುಕೊಂಡು ಕೂರುವ ಸ್ಥಿತಿ ನಿರ್ಮಾಣವಾಯಿತು.

ಇದೆಲ್ಲದರ ಪರಿಣಾಮ ಇಡೀ ಕೃಷಿ ಜಗತ್ತಿನ ಮೇಲೆಯೇ ಆಯಿತು. ರೈತರು ಸ್ವಾಭಿಮಾನಿಗಳು. ತೆಗೆದುಕೊಂಡ ಸಾಲ ತೀರಿಸಲಾಗದೆ ಮನೆ, ಜಮೀನು ಜಫ್ತಿಗೆ ಬಂದರೆ ಅದನ್ನು ಹೇಗೆ ಸಹಿಸಿಕೊಳ್ಳಲು ಸಾಧ್ಯ? ಅವಮಾನವನ್ನು ತಡೆದುಕೊಳ್ಳುವ ಶಕ್ತಿಯಿಲ್ಲದ, ತನ್ನ ಕುಟುಂಬವನ್ನು ನಿರ್ವಹಿಸಲಾಗದ ಒತ್ತಡಗಳು ನಿರ್ಮಾಣವಾದಾಗ ಆತ್ಮಹತ್ಯೆಗೆ ಶರಣಾಗತೊಡಗಿದರು. ಸರಣಿ ಸರಣಿಯಾಗಿ ಆತ್ಮಹತ್ಯೆಗಳು ನಡೆಯತೊಡಗಿದವು. ಅನ್ನದಾತ, ನೇಗಿಲಯೋಗಿ, ಕಾಯಕಯೋಗಿ, ದೇಶದ ಜೀವನಾಡಿ ಎಂದೆಲ್ಲ ಕರೆಯಿಸಿಕೊಂಡ ರೈತರ ಬದುಕು ಮೂರಾಬಟ್ಟೆಯಾಗಿಹೋಗಿದೆ. ರೈತರ ಪಾಲಿಗೆ ಇವತ್ತು ಸರ್ಕಾರಗಳು ಇಲ್ಲ, ನಾಗರಿಕ ಸಮಾಜವೂ ಇಲ್ಲ ಎಂಬಂಥ ದಾರುಣ ಸ್ಥಿತಿ ನಿರ್ಮಾಣವಾಯಿತು.

ರೈತ ನಮ್ಮ ದೇಶದ ಬೆನ್ನುಲುಬು ಎಂದು ನಮ್ಮ ರಾಜಕಾರಣಿಗಳು ಭಾಷಣಗಳಲ್ಲಿ ಮಾತ್ರ ಹೇಳುತ್ತಾರೆ. ಆದರೆ ರೈತರ ಸಮಸ್ಯೆಗಳಿಗೆ ಅವರ ಬಳಿ ಪರಿಹಾರವೇ ಇಲ್ಲ. ಅಷ್ಟಕ್ಕೂ ರೈತರು ಭಿಕ್ಷುಕರೇನಲ್ಲ, ಅವರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಕ್ಕರೆ ಅವರು ನೆಮ್ಮದಿಯಿಂದ ಜೀವನ ಮಾಡುತ್ತಾರೆ. ಇಷ್ಟು ವ್ಯವಸ್ಥೆಯನ್ನು ನಮ್ಮ ಸರ್ಕಾರಗಳು ಮಾಡಿಕೊಟ್ಟಿದ್ದರೆ ಸಾಕಿತ್ತು. ಆದರೆ ಸಾಲಮನ್ನಾ, ಬೆಂಬಲ ಬೆಲೆ, ಬೆಳೆವಿಮೆ ಹೀಗೆ ಸರ್ಕಾರಗಳು ತೆಗೆದುಕೊಳ್ಳುವ ಪರಿಹಾರೋಪಾಯದ ಕಾರ್ಯಗಳು ನಿಜವಾಗಿಯೂ ರೈತನಿಗೆ ತಲುಪುತ್ತಲೇ ಇಲ್ಲ.
ಈ ಸಂದರ್ಭದಲ್ಲಿ ನನಗೆ ಕಾಡಿದ ಪ್ರಶ್ನೆಗಳು ಅನೇಕ. ಹಿಂದೆ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಎನ್.ಡಿ.ಸುಂದರೇಶ್‌ರಂಥ ಅದ್ಭುತ ರೈತ ನಾಯಕರ ನೇತೃತ್ವದಲ್ಲಿ ರೈತ ಸಂಘಟನೆ ಬೆಳೆದು ನಿಂತಿದ್ದಾಗ ಯಾವ ರೈತರೂ ಆತ್ಮಹತ್ಯೆಯ ಮಾರ್ಗ ಹಿಡಿದಿರಲಿಲ್ಲ. ಚಳವಳಿ ಎಂಬುದು ರೈತರ ನೈತಿಕ ಶಕ್ತಿಯಾಗಿತ್ತು. ಏನೇ ಸಮಸ್ಯೆ ಬಂದರೂ ಅದನ್ನು ಎದುರಿಸುವ ಧೀಮಂತಿಕೆ ರೈತರಿಗಿತ್ತು. ತೀರಾ ಬ್ಯಾಂಕು ಸಾಲಗಳು ಬೆಳೆದು ಮನೆ ಜಮೀನು ಹರಾಜಿಗೆ ಬಂದರೂ ಎದೆಯೊಡ್ಡಿ ನಿಂತು ಬಡಿದಾಡುವ ಛಲ ರೈತರಿಗಿತ್ತು. ಮನೆ ಜಫ್ತಿಗೆ ಬಂದ ಅಧಿಕಾರಿಗಳನ್ನು ಕಟ್ಟಿಹಾಕಿ ಪ್ರತಿಭಟಿಸಿದ ನಿದರ್ಶನಗಳು ಸಾವಿರಾರು ಇದ್ದವು. ಊರ ಮುಂದಿನ ರೈತ ಸಂಘಟನೆಯ ನಾಮಫಲಕವನ್ನು ನೋಡಿದರೆ ಒಳಗೆ ಪ್ರವೇಶ ಮಾಡಲು ಅಧಿಕಾರಿಗಳು ಹಿಂಜರಿಯುತ್ತಿದ್ದ ಕಾಲವದು. ಸಾಲ ಸೋಲಕ್ಕೆ, ಅಧಿಕಾರಿಗಳ ಗೊಡ್ಡು ಬೆದರಿಕೆಗಳಿಗೆ ರೈತರು ಮಣಿದವರಲ್ಲ.

ಬ್ಯಾಂಕ್‌ನವರು ಮತ್ತು ಸರ್ಕಾರಿ ಅಧಿಕಾರಿಗಳು ಜಫ್ತಿಗೆ, ಹರಾಜಿಗೆ ಬಂದರೆ ಎದುರಿಸಿ ಊರಿಂದಲೇ ಓಡಿಸುವಷ್ಟು ಶಕ್ತಿಶಾಲಿಗಳಾಗಿದ್ದ ರೈತರು ಇಂದು ಸಣ್ಣಪುಟ್ಟ ಅವಮಾನಗಳನ್ನೂ ಸಹಿಸಿಕೊಳ್ಳುವ ಶಕ್ತಿ ಕಳೆದುಕೊಂಡಿದ್ದಾರೆ, ಹಾಗಾಗಬಾರದು. ಹಿಂದೆ ರಾಷ್ಟ್ರೀಕೃತ ಬ್ಯಾಂಕುಗಳು, ಕೋ ಆಪರೇಟಿವ್ ಸೊಸೈಟಿಗಳಿಂದ ಸಾಲ ಪಡೆಯುತ್ತಿದ್ದ ರೈತರು ಲೋಕಲ್ ಮಾರ್‍ವಾಡಿಗಳ ಬಳಿ ಸಾಲ ಮಾಡಿ ಆ ಸಾಲದ ಸುಳಿಯಲ್ಲೂ ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. ಹಿಂದೆಲ್ಲ ರೈತ ಸಂಘಟನೆ ಪ್ರಬಲವಾಗಿದ್ದ ಪ್ರತಿ ಗ್ರಾಮಗ್ರಾಮಗಳಲ್ಲೂ ಶಾಖೆಗಳಿದ್ದವು. ರೈತರ ಆ ಕಾಲದ ಸಮಸ್ಯೆಗಳಿಗೆ ಆಗಿಂದಾಗ್ಯೆ ಪರಿಹಾರ ಹುಡುಕಿಕೊಳ್ಳುವುದು ಆಗ ಸಾಧ್ಯವಾಗಿತ್ತು. ಆದರೆ ಅಂಥ ಪರಿಸ್ಥಿತಿ ಈಗ ಎಲ್ಲೂ ಕಂಡುಬರುತ್ತಿಲ್ಲ.

ಹೀಗಾಗಿ ಆತ್ಮಾವಲೋಕನ ಕೇವಲ ಸರ್ಕಾರ ಮತ್ತು ವ್ಯವಸ್ಥೆಯಿಂದ ಮಾತ್ರವಲ್ಲ, ನಮ್ಮೆಲ್ಲರಿಂದಲೂ ಆಗಬೇಕಿದೆ. ನಾವು ಸಂಘಟಿತರಾಗದೇ ಹೋದಲ್ಲಿ ಹೀಗೆಯೇ ಒಬ್ಬೊಬ್ಬರಾಗಿ ಜೀವ ಕಳೆದುಕೊಳ್ಳುವ ದಿನಗಳು ಬರುತ್ತಲೇ ಇರುತ್ತವೆ. ರೈತರು ತಾವೇ ತಾವಾಗಿ ಸಾಯುತ್ತಿದ್ದಾರೆ ಎಂದರೆ ಈ ಸಮಾಜದ ಅಂತಃಸಾಕ್ಷಿಯೇ ಆತ್ಮಹತ್ಯೆಗೆ ಒಳಗಾಗುತ್ತಿದೆ ಎಂದರ್ಥ.

ಈ ಸಂದರ್ಭದಲ್ಲಿ ತಮಗೆ ಒಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ನಾಡಿನ ಯಾವುದೇ ಮೂಲೆಯಲ್ಲಿರುವ ಯಾವುದೇ ರೀತಿಯ ರೈತನ ಜತೆಯೂ ಕರ್ನಾಟಕ ರಕ್ಷಣಾ ವೇದಿಕೆ ಇರುತ್ತದೆ. ನಮ್ಮ ಸಂಘಟನೆಯಲ್ಲಿ ಇರುವವರಲ್ಲಿ ಬಹುತೇಕರು ರೈತರ ಮಕ್ಕಳೇ ಆಗಿದ್ದಾರೆ. ಹೀಗಾಗಿ ರೈತರ ನೆರವಿಗೆ ನಾವು ಸದಾ ಸಿದ್ಧವಿದ್ದೇವೆ. ಬ್ಯಾಂಕುಗಳು, ಖಾಸಗಿ ಲೇವಾದೇವಿದಾರರು ರೈತರನ್ನು ಪೀಡಿಸುತ್ತಿದ್ದರೆ ಅವರ ರಕ್ಷಣೆಗೆ ನನ್ನ ಲಕ್ಷಾಂತರ ಕಾರ್ಯಕರ್ತರು ಸದಾ ಸಿದ್ಧರಿರುತ್ತಾರೆ. ರೈತರ ಯಾವುದೇ ರೂಪದ ಸಮಸ್ಯೆಯಾದರೂ ಅದಕ್ಕೊಂದು ಪರಿಹಾರವಿದ್ದೇ ಇರುತ್ತದೆ. ಇಂಥ ಸಮಸ್ಯೆಗಳು ಬಂದಾಗ ನನ್ನನ್ನಾಗಲೀ, ನನ್ನ ಸಂಘಟನೆಯ ಪದಾಧಿಕಾರಿಗಳನ್ನಾಗಲೀ ಸಂಪರ್ಕಿಸಬಹುದು.

ನನ್ನ ನಾಡಿನ ಅನ್ನದಾತರ ಪಾದಗಳಿಗೆ ನಮಿಸಿ ಹೇಳುತ್ತೇನೆ, ‘ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ’. ಸಮಸ್ಯೆಗಳು ಸಾವಿರವಿರಲಿ, ಎಲ್ಲವನ್ನೂ ಎದುರಿಸಿ ನಿಲ್ಲೋಣ. ನಾವೆಲ್ಲರೂ ಸಂಘಟಿತರಾಗಿ ನಮ್ಮ ಬದುಕನ್ನು ನರಕ ಮಾಡುತ್ತಿರುವ ಶೋಷಕ ವ್ಯವಸ್ಥೆಯ ವಿರುದ್ಧ ಬಡಿದಾಡೋಣ. ಈ ದೊಡ್ಡ ಹೋರಾಟದಲ್ಲಿ ನೀವು ಏಕಾಂಕಿಗಳಲ್ಲ, ನಿಮ್ಮೊಂದಿಗೆ ನಾವಿದ್ದೇವೆ. ನನ್ನಂತೆ ಯೋಚಿಸುವ ಲಕ್ಷಾಂತರ ಜನರಿದ್ದಾರೆ. ಎಲ್ಲರೂ ಸೇರಿಯೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳೋಣ.

ರೈತರು ರಾಜಕೀಯ ಅಧಿಕಾರವನ್ನು ಪಡೆದುಕೊಂಡು ಕೃಷಿ ನೀತಿಯನ್ನು ತಾವೇ ನಿರೂಪಿಸುವಂಥ ಕಾಲ ಬರಬೇಕು. ಆಗ ಶೋಷಕ ವ್ಯವಸ್ಥೆಗೆ ಯಾವ ಜಾಗವೂ ಇರುವುದಿಲ್ಲ. ಅಲ್ಲಿಯವರೆಗೆ ನಾವು ನಮ್ಮ ಸಾಮಾಜಿಕ, ರಾಜಕೀಯ ಸಂಘರ್ಷವನ್ನು ಮುಂದುವರೆಸೋಣ. ಯಾವ ಕಾರಣಕ್ಕೂ ನೀವು ಧೃತಿಗೆಡುವುದು ಬೇಡ, ಆತ್ಮಹತ್ಯೆಯಂಥ ದಾರುಣ ನಿರ್ಧಾರವನ್ನು ಕೈಗೊಳ್ಳುವುದು ಬೇಡ. ನಿಮ್ಮೊಂದಿಗೆ ನಾವಿದ್ದೇವೆ, ಇಡೀ ಕರ್ನಾಟಕ ರಕ್ಷಣಾ ವೇದಿಕೆ ಇದೆ.

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ

(ಸಂಯುಕ್ತ ಕರ್ನಾಟಕ, 16-8-2015ರ ಸಂಚಿಕೆಯಲ್ಲಿ ಪ್ರಕಟಿತ)

No comments:

Post a Comment