Sunday, 23 August 2015

ಕಳಸಾ-ಬಂಡೂರಿ: ಪ್ರಭುತ್ವಕ್ಕೆ ರಕ್ತಕ್ರಾಂತಿಯೇ ಬೇಕಾಗಿದೆಯೇ?


ಮಲಪ್ರಭೆಯ ನೀರಿನ ಗುಣವೇ ಅಂಥದ್ದಿರಬೇಕು. ಬಂಡಾಯದ ಬಿಸಿ ಮಲಪ್ರಭೆಯ ಒಡಲಲ್ಲೇ ಮಿಳಿತವಾಗಿದೆ. ರೈತರು ಕೆರಳಿ ನಿಂತರೆ ಅವರನ್ನು ಹಿಡಿದು ನಿಲ್ಲಿಸಲು ಯಾವ ಸರ್ಕಾರಕ್ಕೂ ಸಾಧ್ಯವಿಲ್ಲ, ಯಾವ ಪೊಲೀಸು ಶಕ್ತಿಯೂ ಈ ಜನಶಕ್ತಿಯ ಎದುರು ನಿಲ್ಲಲಾರದು. ಇಲ್ಲಿನ ಜನರು ಸಹಿಷ್ಣುಗಳು ಎಂಬುದೇನೋ ನಿಜ, ಆದರೆ ಸಿಡಿದೆದ್ದು ನಿಂತರೆ ಎದುರಿಗೆ ಎಂಥ ಪ್ರಚಂಡ ಚಂಡಮಾರುತವೇ ಬಂದರೂ ಪುಡಿಗಟ್ಟಿ ನಿಲ್ಲುವಷ್ಟು ಧೀಶಕ್ತಿ ಹೊಂದಿದವರು.
ಅವತ್ತು ೧೯೮೦ರ ಜುಲೈ ೨೧. ನರಗುಂದದಲ್ಲಿ ಅಂದು ಈರಪ್ಪ ಕಡ್ಲಿಕೊಪ್ಪ ಎಂಬ ರೈತನ ಹೆಣ ರಸ್ತೆಯಲ್ಲಿ ಬಿದ್ದಿತ್ತು. ಏಳೆಂಟು ಸಾವಿರ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಒಂದಷ್ಟು ಹೆಚ್ಚು ಕಡಿಮೆ ಆಗುವುದು ಸಹಜ. ತಹಸೀಲ್ದಾರ್ ಕಚೇರಿ ಮುಚ್ಚಿ ಪ್ರತಿಭಟಿಸಲು ಯತ್ನಿಸುತ್ತಿದ್ದ ರೈತರ ಮೇಲೆ ಸಿಕಂದರ್ ಪಟೇಲ್ ಎಂಬ ಸಬ್ ಇನ್ಸ್‌ಪೆಕ್ಟರ್ ಗುಂಡು ಹಾರಿಸಿಬಿಟ್ಟಿದ್ದ. ಈರಪ್ಪನ ಹೆಣ ಬೀಳುತ್ತಿದ್ದಂತೆ ರೈತರ ಆವೇಶದ ಕಟ್ಟೆಯೊಡೆದುಹೋಗಿತ್ತು. ಅಷ್ಟಕ್ಕೂ ಅಲ್ಲಿ ಗೋಲಿಬಾರ್ ಮಾಡಲೇಬೇಕಾದ ಸನ್ನಿವೇಶವೇನೂ ಇರಲಿಲ್ಲ. ಆದರೆ ಪೊಲೀಸು ಬಂದೂಕು ಮೊಳಗತೊಡಗಿತ್ತು. ರೈತರು ಸಿಡಿದೆದ್ದು ನಿಂತರು. ಪೊಲೀಸರ ಮೇಲೆ ದಾಳಿಯಾಯಿತು. ಆಸ್ಪತ್ರೆಯೊಂದರಲ್ಲಿ ಅಡಗಿ ಕುಳಿತಿದ್ದ ಸಿಕಂದರ್ ಪಟೇಲ್‌ನನ್ನು ಹುಡುಕಿದ ಜನರು ಕೈಯಲ್ಲೇ ಜಜ್ಜಿ ಕೊಂದುಹಾಕಿಬಿಟ್ಟರು. ಇನ್ನೂ ಒಬ್ಬ ಪೊಲೀಸ್ ಅಧಿಕಾರಿ ಬಲಿಯಾದರು.
ಮಲಪ್ರಭೆ ಹುಟ್ಟುವುದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ. ಸವದತ್ತಿ, ರಾಮದುರ್ಗ, ನರಗುಂದ ತಾಲೂಕುಗಳಲ್ಲಿ ಹರಿದು ಬಿಜಾಪುರ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಕೃಷ್ಣಾ ನದಿಗೆ ಸೇರುತ್ತದೆ. ಮಲಪ್ರಭಾ ಜಲಾಶಯ ಯೋಜನೆಗೆ ಶಂಕುಸ್ಥಾಪನೆಯಾಗಿದ್ದು ೧೯೬೦ರಲ್ಲಿ. ಆದರೆ ಅದು ಮುಗಿಯುತ್ತಾ ಬಂದಿದ್ದು ೧೯೭೭ರ ಸುಮಾರಿಗೆ. ಅಣೆಕಟ್ಟು ನಿರ್ಮಾಣ ಮುಗಿದು, ರೈತರ ಜಮೀನಿಗೆ ಸರಿಯಾಗಿ ನೀರು ಹರಿಯುವುದಕ್ಕೆ ಮುನ್ನವೇ ಸರ್ಕಾರ ರೈತರ ಮೇಲೆ ಕರಭಾರವನ್ನು ಹೊರೆಸಿತ್ತು. ಈ ಕಪ್ಪು ಭೂಮಿಯು ನೀರು ಬಸಿಯುವ ಗುಣ ಹೊಂದಿರಲಿಲ್ಲವಾದ್ದರಿಂದ ಉಪಕಾಲುವೆಗಳಲ್ಲಿ ನೀರು ಹರಿದಿರಲಿಲ್ಲ. ಅಣೆಕಟ್ಟಿನಿಂದ ಹರಿಸಿದ ನೀರು ಅಲ್ಲಲ್ಲೇ ನಿಂತು ಫಲವತ್ತಾದದ ಮೈಲ್ಮೈ ಮಣ್ಣು ಕೊಚ್ಚಿ ಹೋಗಿತ್ತು. ಇದಲ್ಲದೆ, ನೀರಾವರಿ ಪದ್ಧತಿಯ ಅನುಭವವೇ ಇಲ್ಲದ ರೈತರು ತಮ್ಮ ಸಾಂಪ್ರದಾಯಿಕ ಬೆಳೆಗಳನ್ನು ಬಿಟ್ಟು ಅನಿವಾರ್ಯವಾಗಿ ಬೇರೆ ಬೆಳೆಯನ್ನು ಬೆಳೆಯಬೇಕಾದ ಸ್ಥಿತಿ ತಲುಪಿದ್ದರು. ಹೊಸ ಬಗೆಯ ಬೇಸಾಯದ ಮಾರ್ಗಗಳೂ ರೈತರಿಗೆ ಗೊತ್ತಿರಲಿಲ್ಲ. ಇದನ್ನೆಲ್ಲ ಮೊದಲೇ ಗ್ರಹಿಸಿಬೇಕಿದ್ದ ಸರ್ಕಾರಿ ಅಧಿಕಾರಿಗಳು ಮೈಮರೆತು ಕುಳಿತಿದ್ದರು. ರಸಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜಗಳ ಬೆಲೆ ಗಗನಕ್ಕೇರಿತ್ತು. ಬ್ಯಾಂಕುಗಳಲ್ಲಿ ಸಾಲ ಹೆಚ್ಚಿತು, ಸಾಲ ತೀರಿಸಲು ಮತ್ತಷ್ಟು ಸಾಲ ಮಾಡುವ ಅನಿವಾರ್ಯತೆಗೆ ರೈತರು ಬಂದಿದ್ದರು. ಅಲ್ಲಿಗೆ ಜನರ ಬದುಕಿನಲ್ಲಿ ಬಂಗಾರದ ಹೊಳೆ ಹರಿಸಬೇಕಿದ್ದ ನೀರಾವರಿ ಯೋಜನೆ, ಅವರ ಬದುಕನ್ನೇ ಹರಿದು ತಿನ್ನುವಂತಾಗಿತ್ತು. ಇದೆಲ್ಲ ಸಮಸ್ಯೆಗಳನ್ನಿಟ್ಟುಕೊಂಡು ರೈತರು ಹೋರಾಟ ಆರಂಭಿಸಿದರು. ಆದರೆ ಸರ್ಕಾರಿ ಅಧಿಕಾರಿಗಳು ಬಲವಂತವಾಗಿ ನೀರಾವರಿ ಜಮೀನಿನ ಹೆಸರಿನಲ್ಲಿ ಲೆವಿ ಸಂಗ್ರಹಿಸಲುತೊಡಗಿದಾಗ ರೈತರ ಸಿಟ್ಟು ರಟ್ಟೆಗೆ ಬಂದಿತ್ತು. ಸತ್ಯಾಗ್ರಹಗಳ ಮೇಲೆ ಸತ್ಯಾಗ್ರಹಗಳು ನಡೆದವು. ಅರೆಬೆತ್ತಲೆ ಮೆರವಣಿಗೆ, ಬಾರುಕೋಲು ಚಳವಳಿಗಳು ನಡೆದವು. ಸರ್ಕಾರ ಕಣ್ಣು ತೆರೆಯಲಿಲ್ಲ. ಕಡೆಗೆ ಕರ ನಿರಾಕರಣೆಗೆ ರೈತ ಮುಖಂಡರು ಕರೆ ನೀಡಿದರು. ೧೯೮೦ರ ಜೂನ್ ೩ರಂದು ಸುಮಾರು ಹತ್ತು ಸಾವಿರ ರೈತರು ನರಗುಂದಲ್ಲಿ ಸಮಾವೇಶಗೊಂಡರು. ರೋಣ, ಸವದತ್ತಿ, ನವಲಗುಂದ, ನರಗುಂದ, ರಾಮದುರ್ಗ ತಾಲ್ಲೂಕುಗಳ ರೈತರೆಲ್ಲ ಸಂಘಟಿತರಾದರು. ಹದಿಮೂರು ಹಕ್ಕೊತ್ತಾಯಗಳನ್ನು ಈ ಬೃಹತ್ ಸಮಾವೇಶ ಮಂಡಿಸಿತು. ಸರ್ಕಾರ ಆಗಲೂ ಕಣ್ಣು ತೆರೆಯಲಿಲ್ಲ.

ಇದಾದ ನಂತರ ಬಂದಿದ್ದೇ ಆ ಕರಾಳ ದಿನ.  ೧೯೮೦ರ ಜುಲೈ ೨೧ರಂದು ನರಗುಂದ, ನವಲುಗುಂದ, ಸವದತ್ತಿ ಬಂದ್ ಆಚರಣೆಗೆ ಕರೆ ನೀಡಲಾಗಿತ್ತು. ಮೂರೂ ತಾಲ್ಲೂಕು ಕೇಂದ್ರಗಳಲ್ಲಿ ಸಹಸ್ರಾರು ರೈತರು ಬಂದು ಸಮಾವೇಶಗೊಂಡಿದ್ದರು. ನವಲಗುಂದದಲ್ಲಿ ಕುಚೇಷ್ಠೆಗೆಂದು ಕೆಲವರು ಹಬ್ಬಿಸಿದ ಸುಳ್ಳು ಸುದ್ದಿಯಿಂದಾಗಿ ರೈತರು ನೀರಾವರಿ ಇಲಾಖೆ ಕಚೇರಿಯನ್ನು ಧ್ವಂಸ ಮಾಡಿದರು. ಪೊಲೀಸರ ಬಂದೂಕು ಆರ್ಭಟಿಸಿತು. ರೈತ ಬಸಪ್ಪ ಲಕ್ಕುಂಡಿ ಗುಂಡು ತಿಂದು ರಸ್ತೆಯಲ್ಲೇ ಶವವಾಗಿ ಮಲಗಿದ.

ರೈತ ಗುಂಡೇತು ತಿಂದು ಸತ್ತ ಸುದ್ದಿ ನರಗುಂದಕ್ಕೆ ತಲುಪಲು ಹೆಚ್ಚು ಸಮಯವೇನೂ ಬೇಕಾಗಿರಲಿಲ್ಲ. ನರಗುಂದ ತಹಸೀಲ್ದಾರ್ ಕಚೇರಿ ಮುಂಭಾಗ ರೈತರು ಅಡ್ಡ ಮಲಗಿ ಅಧಿಕಾರಿಗಳು ಕೆಲಸ ಮಾಡದಂತೆ ತಡೆದಿದ್ದರು. ಅಧಿಕಾರದ ಪಿತ್ಥ ನೆತ್ತಿಗೇರಿದ್ದ ಅಮಲ್ದಾರ ರೈತರ ಎದೆಗಳ ಮೇಲೇ ಕಾಲಿಟ್ಟುಕೊಂಡು ಅವರನ್ನು ತುಳಿದುಕೊಂಡೇ ಒಳಹೋಗಿಬಿಟ್ಟ. ಜನಾಕ್ರೋಶ ಮುಗಿಲು ಮುಟ್ಟಿತ್ತು. ರೈತರು ತಹಸೀಲ್ದಾರ್ ಕಚೇರಿ ಒಳಗೆ ನುಗ್ಗಲು ಯತ್ನಿಸಿದರು. ಆಮೇಲೆ ನಡೆದದ್ದು ದಾರುಣ ದುರಂತ. ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಟೇಲ್ ರೈತರ ಮೇಲೆ ಗುಂಡು ಹಾರಿಸಿ ಒಬ್ಬ ರೈತನನ್ನು ಕೊಂದು ಹಾಕಿದ. ರೈತನನ್ನು ಕೊಂದ ತಪ್ಪಿಗೆ ತಾನೂ ಬಲಿಯಾಗಿಹೋದ. ರೈತರ ಎದೆ ಮೇಲೆ ನಡೆದುಕೊಂಡು ಹೋದ ಅಮಲ್ದಾರನನ್ನು ಪ್ರಜ್ಞೆ ತಪ್ಪುವವರೆಗೆ ರೈತರು ಹೊಡೆದರು.

ಆಮೇಲೆ ನಡೆದಿದ್ದೆಲ್ಲ ಇತಿಹಾಸ. ಈ ಐತಿಹಾಸಿಕ ಘಟನೆಯನ್ನೇ ನಾವು ನರಗುಂದ-ನವಲಗುಂದ ಬಂಡಾಯ ಎಂದು ಕರೆಯುತ್ತೇವೆ. ಈ ಭಾಗದ ರೈತರ ಪ್ರತಿಭಟನೆಗೆ ಇಡೀ ರಾಜ್ಯವೇ ಧ್ವನಿಗೂಡಿಸಿತು. ರೈತ ಚಳವಳಿ ಹಳ್ಳಿ ಹಳ್ಳಿಯಲ್ಲೂ ಸ್ಥಾಪಿತವಾಯಿತು. ರೈತರ ಪ್ರತಿಭಟನೆಗಳು, ಗೋಲಿಬಾರ್‌ಗಳು ಎಲ್ಲೆಡೆ ಮಾಮೂಲಿಯಾದವು. ಇನ್ನೂರಕ್ಕೂ ಹೆಚ್ಚು ರೈತರು ಪೊಲೀಸ್ ದೌರ್ಜನ್ಯಗಳಿಂದಲೇ ಅಸುನೀಗಿದರು.

ನರಗುಂದ-ನವಲಗುಂದ ಬಂಡಾಯದ ನಂತರ ನರಗುಂದದಿಂದ ರೈತರ ಬೃಹತ್ ಕಾಲ್ನಡಿಗೆ ಜಾಥಾ ಏರ್ಪಾಡಾಯಿತು. ಜಾಥಾ ಬೆಂಗಳೂರು ತಲುಪುವ ಹೊತ್ತಿಗೆ ನಾಲ್ಕೈದು ಲಕ್ಷ ಮಂದಿ ರೈತರು ಒಗ್ಗೂಡಿದ್ದರು. ೧೯೮೧ ಜನವರಿ ೧೬ರಂದು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಉದ್ಘಾಟಿಸಿದ ಜಾಥಾ ಬೆಂಗಳೂರು ತಲುಪುತ್ತಿದ್ದಂತೆ ಆಳುವ ಸರ್ಕಾರ ಅದುರಿ ಹೋಯಿತು. ಕಬ್ಬನ್ ಪಾರ್ಕ್‌ನಲ್ಲಿ ಸುಮಾರು ನಾಲ್ಕು ಲಕ್ಷ ಮಂದಿ ರೈತರು ನೆರೆದು ವಿಧಾನಸೌಧದಲ್ಲಿ ಕುಳಿತ ಗುಂಡುರಾವ್ ಅವರ ಸರ್ಕಾರಕ್ಕೆ ಸವಾಲೊಡ್ಡಿದರು.  ಅದಾದ ನಂತರ ನಡೆದ ಚುನಾವಣೆಯಲ್ಲಿ ಗುಂಡುರಾವ್ ಅವರ ಪಕ್ಷ ಹೀನಾಯವಾಗಿ ಸೋತುಹೋಯಿತು. ರೈತರ ಎದೆಯ ಮೇಲೆ ಗುಂಡುಹೊಡೆದವರು ಎಷ್ಟು ಕಾಲ ಅಧಿಕಾರದಲ್ಲಿರಲು ಸಾಧ್ಯ?

ಈಗ ಇತಿಹಾಸ ಮರುಕಳಿಸುತ್ತಿದೆ. ಆಗಲೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು, ಈಗಲೂ ಕಾಂಗ್ರೆಸ್ ಸರ್ಕಾರವಿದೆ. ಈಗ ಸಿಡಿದೆದ್ದು ನಿಂತಿರುವವರು ನರಗುಂದ-ನಲವಗುಂದ ಭಾಗದ ಜನರು ಮಾತ್ರವಲ್ಲ. ಇಡೀ ಮಲಪ್ರಭೆಯ ಮಡಿಲಿನ ಜನರೆಲ್ಲ ಮುನಿಸಿಕೊಂಡಿದ್ದಾರೆ. ಅವರ ಮುನಿಸಿಗೊಂದು ಕಾರಣವಿದೆ. ಮಹದಾಯಿಯನ್ನು ಮಲಪ್ರಭೆಗೆ ಜೋಡಿಸಿ ಎಂಬುದು ಅವರ ದಶಕಗಳ ಹಿಂದಿನ ಮೂಲಭೂತ ಬೇಡಿಕೆ. ಆದರೆ ಅದು ಈಡೇರುವ ಹಾಗೆ ಕಾಣುತ್ತಿಲ್ಲ. ಮಹದಾಯಿಯನ್ನು ಮಲಪ್ರಭೆಗೆ ಜೋಡಿಸುವುದಿರಲಿ, ಒಮ್ಮೆ ಕೇಂದ್ರ ಸರ್ಕಾರದ ಒಪ್ಪಿಗೆಯನ್ನೂ ಪಡೆದು ನೂರಾರು ಕೋಟಿ ರುಪಾಯಿಗಳ ಕಾಮಗಾರಿಯೂ ನಡೆದು ಅರ್ಧಕ್ಕೆ ನಿಂತಿರು ಕನಿಷ್ಠ ಕಳಸಾ ಮತ್ತು ಬಂಡೂರಿ ನಾಲೆಗಳನ್ನಾದರೂ ಮಲಪ್ರಭೆಗೆ ಜೋಡಿಸುವ ಯೋಜನೆಯಾದರೂ ಮುಗಿಸಿಕೊಡಿ ಎಂಬುದು ಅವರ ಬೇಡಿಕೆ. ಈ ಭಾಗದ ಜನರು ಎದ್ದುನಿಂತಿದ್ದಾರೆ. ಮಲಪ್ರಭೆಯ ಮಡಿಲಿನ ಜನರು ಸಹಿಷ್ಣುಗಳು, ದಶಕಗಟ್ಟಲೆ ಕಾಲ ಕಾದು ಬೆಂಡಾಗಿದ್ದಾರೆ. ಈಗ ಅವರ ಸಿಟ್ಟು ರಟ್ಟೆಗೆ ಬರುವ ಸಮಯ. ಸರ್ಕಾರಗಳು ಈಗಲಾದರೂ ಕಣ್ತೆರೆಯುತ್ತವಾ?

ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಜಾಂಬೋಟಿ ಎಂಬಲ್ಲಿ ಹುಟ್ಟುವ ನದಿಯೇ ಮಹದಾಯಿ. ಇಲ್ಲಿಯೇ ಕಳಸಾ ಮತ್ತು ಬಂಡೂರಿ ಎಂಬ ಎರಡು ಹಳ್ಳಗಳನ್ನು ಮಲಪ್ರಭಾ ನದಿಗೆ ಸೇರಿಸಿದರೆ ಹುಬ್ಬಳ್ಳಿ ಧಾರವಾಡ, ಗದಗ, ಬೆಳಗಾವಿ ಜಿಲ್ಲೆಗಳಿಗೆ ಕುಡಿಯುವ ನೀರು ಕೊಡಬಹುದು. ಈ ಯೋಜನೆಯ ರೂಪುರೇಷೆಯನ್ನು ರೂಪಿಸಿದ್ದು ಹಾಲಿ ಸಚಿವ, ನೀರಾವರಿ ತಜ್ಞ ಎಚ್.ಕೆ.ಪಾಟೀಲ್ ಅವರು. ಕಳಸದಿಂದ ನಾಲ್ಕು ಟಿಎಂಸಿ, ಬಂಡೂರಿಯಿಂದ ೩.೫ ಟಿಎಂಸಿ ನೀರನ್ನು ಪಡೆಯಬಹುದು ಎಂಬುದು ಯೋಜನೆಯ ಉದ್ದೇಶ. ಇದು ಕುಡಿಯುವ ನೀರಿನ ಯೋಜನೆಯಾದ್ದರಿಂದ ಯಾವುದೇ ರಾಜ್ಯವೂ ವಿರೋಧ ಮಾಡುವಂತೆಯೂ ಇಲ್ಲ. ಇದನ್ನು ಕೇಂದ್ರ ಸರ್ಕಾರ, ಜಲ ಆಯೋಗ, ಸುಪ್ರೀಂ ಕೋರ್ಟ್‌ಗಳು ಪದೇ ಪದೇ ಹೇಳುತ್ತಲೇ ಬಂದಿವೆ. ೧೬೨ ಕಿ.ಮೀ ಉದ್ದ ಹರಿಯುವ ಮಹದಾಯಿ ನದಿಯ ಸುಮಾರು ೨೦೦ ಟಿ.ಎಂ.ಸಿ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತದೆ. ಹೀಗಿರುವಾಗ ೮ ಟಿಎಂಸಿಗೂ ಕಡಿಮೆ ನೀರನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳುವುದರಲ್ಲಿ ಯಾವ ಸಮಸ್ಯೆ ಕಾಣಿಸಿತೋ ಗೋವಾ ಸರ್ಕಾರಕ್ಕೆ? ಕಳಸಾ ಬಂಡೂರಿ ಯೋಜನೆ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾಪಕ್ಕೆ ಅಂದಿನ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರ ಅನುಮತಿ ನೀಡಿತ್ತು. ನಂತರ ವಾಜಪೇಯಿ ಸರ್ಕಾರವೇ ಗೋವಾ ಸರ್ಕಾರದ ಕಿತಾಪತಿಯಿಂದಾಗಿ ಯೋಜನೆಯನ್ನು ತಡೆಹಿಡಿದುಬಿಟ್ಟಿತು. ಅಂದು ಯೋಜನೆ ಸ್ಥಗಿತಗೊಂಡಿದ್ದು ಮತ್ತೆ ಆರಂಭವಾಗಲೇ ಇಲ್ಲ. ಗೋವಾ ಸರ್ಕಾರದ ಪಿತೂರಿಯಿಂದಾಗಿ ಈಗ ಮಹದಾಯಿ ನ್ಯಾಯಾಧಿಕರ ರಚನೆಯಾಗಿದೆ. ಅದು ಮೂರು ವರ್ಷಗಳಲ್ಲಿ ವರದಿಯೊಂದನ್ನು ನೀಡಬೇಕಿದೆ. ನ್ಯಾಯಾಧಿಕರಣ ಕಳಸಾ ಬಂಡೂರಿ ಯೋಜನೆಗೆ ಅಸ್ತು ಎನ್ನುತ್ತದೋ ಬಿಡುತ್ತದೋ ಎಂಬುದು ಕಾಲದ ಪ್ರಶ್ನೆ. ಹೀಗಾಗಿ ಉತ್ತರ ಕರ್ನಾಟಕದ ನಾಲ್ಕೈದು ಜಿಲ್ಲೆಗಳ ಜನರಿಗೆ ಕುಡಿಯುವ ನೀರಿಗೆ ಆಸರೆಯಾಗಬೇಕಿದ್ದ ಯೋಜನೆ ಶೈತ್ಯಾಗಾರ ಸೇರಿಹೋಗಿದೆ.

ಕಳಸಾ ಬಂಡೂರಿ ಪ್ರಶ್ನೆ ಈಗ ಮಹದಾಯಿ ನ್ಯಾಯಾಧಿಕರಣದ ಮುಂದಿದೆ. ಹಾಗೆಂದು ನಾವು ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳಲು ಸಾಧ್ಯವೇ? ಕಾವೇರಿ ನ್ಯಾಯಾಧಿಕರಣ, ಕೃಷ್ಣಾ ನ್ಯಾಯಾಧಿಕರಣಗಳಿಂದ ನಮಗೆ ಆದ ಅನ್ಯಾಯವನ್ನು ಅಷ್ಟು ಸುಲಭವಾಗಿ ಮರೆಯಲು ಸಾಧ್ಯವೇ? ಈ ನ್ಯಾಯಾಧಿಕರಣಗಳು ನಮ್ಮ ಎದೆಯ ಮೇಲೆ ಉಳಿಸಿರುವ ಗಾಯಗಳು ಎಂದೂ ವಾಸಿಯಾಗಲಾರವು. ಸಿಲಿಕಾನ್ ಸಿಟಿಯೆಂದೇ ಹೆಸರಾಗಿರುವ ಬೆಂಗಳೂರಿಗೆ ಕಾವೇರಿ ನೀರು ಕೊಡುವುದು ಬೇಡ, ಬೆಂಗಳೂರಿಗರ ಸಂಡಾಸಿನ ಒಳಚರಂಡಿ ನೀರನ್ನೇ ಶುದ್ಧೀಕರಿಸಿ ಕೊಡಿ ಎಂದು ನಿರ್ದಯವಾಗಿ ಹೇಳಿತು ಕಾವೇರಿ ನ್ಯಾಯಾಧಿಕರಣ. ಹೀಗಿರುವಾಗ ಮಹದಾಯಿ ನ್ಯಾಯಾಧಿಕರಣವೂ ಕಳಸಾ ಬಂಡೂರಿಗೆ ಅನುಮತಿ ನೀಡುತ್ತದೆ ಎಂದು ಹೇಗೆ ಹೇಳುವುದು? ಧಾರವಾಡ, ಗದಗಿನ ಜನರು ತಮ್ಮ ಮೂತ್ರವನ್ನೇ ಶುದ್ಧ ಮಾಡಿ ಕುಡಿಯಲಿ ಎಂದು ಈ ನ್ಯಾಯಾಧಿಕರಣ ಹೇಳುವುದಿಲ್ಲವೆಂದು ಹೇಗೆ ನಂಬುವುದು?

ಮಹದಾಯಿ ನದಿ ನೀರಿನಲ್ಲಿ ಕರ್ನಾಟಕವು ೪೪.೧೫ ಟಿಎಂಸಿ, ಗೋವಾ ೧೪೭ ಟಿಎಂಸಿ, ಮಹಾರಾಷ್ಟ್ರ ೭.೫೭ ಟಿಎಂಸಿ ನೀರಿನ ಹಕ್ಕು ಹೊಂದಿವೆ. ನಮ್ಮ ಹಕ್ಕನ್ನು ನಾವು ಬಳಸಿಕೊಳ್ಳಲು ದಶಕಗಟ್ಟಲೆ ಕಾಲ ನಾವು ಕಾಯಬೇಕೆ? ಈಗಾಗಲೇ ಕಳಸಾ ಬಂಡೂರಿ ಯೋಜನಾ ವಿಭಾಗ ಕಾಮಗಾರಿಗೆ ಕಣಕುಂಬಿ ಬಳಿ ಕೆಲಸ ಆರಂಭಗೊಂಡು ನಿಂತುಹೋಗಿದೆ. ಈಗಾಗಲೇ ೧೯೮ ಕೋಟಿ ರುಪಾಯಿಗಳ ಖರ್ಚು ಮಾಡಲಾಗಿದೆ. ಈಗ ನಮ್ಮ ನೆಲದಲ್ಲಿ ನಮ್ಮ ಯೋಜನೆ ಮಾಡಲು ದೆಹಲಿಯಲ್ಲಿ ಕುಳಿತ ದೊಣೆನಾಯಕರಿಗಾಗಿ ಕಾಯಬೇಕು. ಇದೆಂಥ ವಿಪರ್ಯಾಸ?

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳಸಾ-ಬಂಡೂರಿ ಹೆಸರು ಹೇಳಿಕೊಂಡೇ ರಾಜಕಾರಣ ಮಾಡಿದ ಹಲವರಿದ್ದಾರೆ. ಈ ಭಾಗದ ಶೇ.೮೦ ರಷ್ಟು ಜನಪ್ರತಿನಿಧಿಗಳು ಇದೇ ಯೋಜನೆ ಹೆಸರಲ್ಲಿ ಜನರಿಗೆ ಸುಳ್ಳು ಆಶ್ವಾಸನೆ ನೀಡಿ ಗೆದ್ದು ಬಂದವರು. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ತಾನೇ ನೀಡಿದ್ದ ಅನುಮತಿಯನ್ನು ತಾನೇ ರದ್ದುಗೊಳಿಸಿ ಕರ್ನಾಟಕಕ್ಕೆ ದ್ರೋಹವೆಸಗಿತು. ಈ ತಡೆಯಾಜ್ಞೆಯನ್ನು ತೆರವುಗೊಳಿಸಬಹುದಾಗಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಆ ಕೆಲಸ ಮಾಡಲೇ ಇಲ್ಲ. ಪುಟ್ಟ ರಾಜ್ಯ ಗೋವಾ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗಳನ್ನು ಪ್ರಭಾವಿಸಬಲ್ಲದಾದರೆ ಇಷ್ಟು ದೊಡ್ಡ ರಾಜ್ಯವಾದ ಕರ್ನಾಟಕಕ್ಕೆ ಯಾಕೆ ಆ ಶಕ್ತಿ ಇಲ್ಲ? ಈಗಲೂ ಅಷ್ಟೆ, ಪ್ರಧಾನಿ ನರೇಂದ್ರ ಮೋದಿಯವರ ಮನವೊಲಿಸಿ, ಈ ಸಮಸ್ಯೆಯನ್ನು ನ್ಯಾಯಾಧಿಕರಣದ ಹೊರಗೆ ಇತ್ಯರ್ಥ ಮಾಡುವಂತೆ ರಾಜ್ಯದ ಬಿಜೆಪಿ ನಾಯಕರು ಯಾಕೆ ಒತ್ತಾಯಿಸುವುದಿಲ್ಲ? ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬರಲು, ಆ ಪಕ್ಷದ ನೇತಾರರು ಗೆದ್ದು ಬರಲು ಕಳಸಾ ಬಂಡೂರಿಯ ಯೋಜನೆಯೇ ಕಾರಣವಲ್ಲವೇ?

ಇದೆಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡೇ ನಾವು ಹೋರಾಟವನ್ನು ಕಟ್ಟಬೇಕಿದೆ. ಕಳಸಾ ಬಂಡೂರಿ ಯೋಜನೆ ಜಾರಿಯಾಗಬೇಕು ಎಂಬ ಬೇಡಿಕೆಯಿಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆ ಈಗಾಗಲೇ ನೂರಾರು ಹೋರಾಟಗಳನ್ನು ಸಂಘಟಿಸಿದೆ. ಹಲವು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಹತ್ತು ಸಾವಿರ ಕಾರ್ಯಕರ್ತರ ಬೃಹತ್ ಜಾಥಾ ಒಂದನ್ನು ಆಯೋಜಿಸಿ, ಇಂದಿರಾ ಗಾಜಿನಲ್ಲಿ ಬೃಹತ್ ಸಮಾವೇಶ ಏರ್ಪಡಿಸಿದ್ದೆವು. ನಾಡೋಜ ಪಾಟೀಲ ಪುಟ್ಟಪ್ಪ ಅವರು ಆ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಉತ್ತರ ಕರ್ನಾಟಕ ಮಾತ್ರವಲ್ಲದೆ ರಾಜ್ಯದ ಎಲ್ಲ ಭಾಗಗಳಲ್ಲೂ ನಮ್ಮ ಕಾರ್ಯಕರ್ತರು ನೂರಾರು ಧರಣಿ, ಸತ್ಯಾಗ್ರಹಗಳನ್ನು ನಡೆಸಿ ಕಳಸಾ ಬಂಡೂರಿ ಯೋಜನೆ ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿದ್ದಾರೆ.

ಈಗಲೂ ಸಹ ಈ ಭಾಗದ ಜನರ ದಶಕಗಳ ಬೇಡಿಕೆಯ ಜತೆ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಗಳನ್ನು ಸಂಘಟಿಸುತ್ತಿದೆ. ಗದಗ ತೋಂಟಾದಾರ್ಯ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರೂ ಸೇರಿದಂತೆ ಆ ಭಾಗದ ಸ್ವಾಮೀಜಿಗಳೆಲ್ಲರೂ ಈಗ ಹೋರಾಟಕ್ಕೆ ಸ್ಫೂರ್ತಿಯನ್ನು ತುಂಬುತ್ತಿದ್ದಾರೆ. ಇದು ರಾಜಕೀಯ ರಹಿತವಾದ ಚಳವಳಿಯಾಗಿಯೇ ಮುಂದುವರೆದಿದೆ. ಮುಂದೆಯೂ ಹಾಗೆಯೇ ಮುಂದುವರೆಯಬೇಕಿದೆ. ರೈತರ ಸಿಟ್ಟು ನಿಧಾನವಾಗಿ ರಟ್ಟೆಗೆ ಬರುವುದಕ್ಕೆ ಮುನ್ನ ಸಿದ್ಧರಾಮಯ್ಯನವರ ಸರ್ಕಾರ ಮತ್ತು ಪ್ರತಿಪಕ್ಷಗಳೆಲ್ಲವೂ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದರೆ ಇತಿಹಾಸ ಮರುಕಳಿಸಿದರೆ ಅದಕ್ಕೆ ಯಾರೂ ಹೊಣೆಯಾಗುವುದಿಲ್ಲ.

ಕರವೇಯಂತೂ ಮಹದಾಯಿ ವಿಷಯದಲ್ಲಿ ಯಾವ ತ್ಯಾಗಕ್ಕೂ ಸಿದ್ಧವಿದೆ, ಕಾವೇರಿ ಚಳವಳಿ ವಿಷಯದಲ್ಲಿ ರಕ್ತವನ್ನಾದರೂ ಚೆಲ್ಲಿ ಕಾವೇರಿಯನ್ನು ಉಳಿಸಿಕೊಳ್ಳುತ್ತೇವೆ ಎಂಬ ನಮ್ಮ ಜನಪ್ರಿಯ ಘೋಷವಾಕ್ಯವೊಂದಿದೆ. ಮಹದಾಯಿ ವಿಷಯಕ್ಕೂ ಅದು ಅನ್ವಯಿಸುತ್ತದೆ. ಕಾದು ನೋಡಿದ್ದು ನಮಗೂ ಸಾಕಾಗಿದೆ, ರಕ್ತಕ್ರಾಂತಿಯೇ ಆಗಬೇಕು ಎಂಬುದು ಪ್ರಭುತ್ವದ ಬಯಕೆಯಾದರೆ ನಾವು ಅದಕ್ಕೂ ಸಿದ್ಧರಿದ್ದೇವೆ.

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

(ಸಂಯುಕ್ತ ಕರ್ನಾಟಕ, 23-8-2015)



No comments:

Post a Comment