Monday, 28 September 2015

ಎತ್ತಿನಹೊಳೆ ಯೋಜನೆ: ಸರ್ಕಾರ ಪಾರದರ್ಶಕವಾಗಿ ನಡೆದುಕೊಳ್ಳಲಿ

ಇದೆಂಥ ಧರ್ಮ ಸಂಕಟದ ಸನ್ನಿವೇಶ ಎದುರಾಗಿದೆ ನೋಡಿ. ಇತ್ತ ನಾವು ಧಾರವಾಡ, ಗದಗ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಕುಡಿಯವ ನೀರಿಗಾಗಿ ಮಹದಾಯಿ ತಿರುವು ಯೋಜನೆ ಜಾರಿಯಾಗಬೇಕು ಎಂದು ಚಳವಳಿ ನಡೆಸುತ್ತಿದ್ದೇವೆ. ಅತ್ತ ಎತ್ತಿನಹೊಳೆ ಯೋಜನೆ ವಿಷಯದಲ್ಲಿ ಕರಾವಳಿ, ಬಯಲುಸೀಮೆ ಮತ್ತು ಪಶ್ಚಿಮಘಟ್ಟದ ಜನತೆ ಪರಸ್ಪರ ಬಡಿದಾಡುವ ಸನ್ನಿವೇಶ ನಿರ್ಮಾಣವಾಗಿದೆ. ಎತ್ತಿನಹೊಳೆ ತಿರುವು ಯೋಜನೆಯಲ್ಲ, ಅನುಷ್ಠಾನವಾಗಬೇಕಿರುವುದು ನೇತ್ರಾವತಿ ತಿರುವು ಯೋಜನೆ ಎಂದು ಬಯಲುಸೀಮೆಯ ಜನರು ಪಟ್ಟು ಹಿಡಿದಿದ್ದರೆ, ನೇತ್ರಾವತಿಗೆ ಕೈ ಇಟ್ಟರೆ ಪ್ರತ್ಯೇಕ ತುಳುನಾಡು ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ಬುಸುಗುಡುತ್ತಿದ್ದಾರೆ. ಅಷ್ಟೇನು ರಾಜಕೀಯ ಶಕ್ತಿ ಇಲ್ಲದ ಪಶ್ಚಿಮಘಟ್ಟ ಭಾಗಕ್ಕೆ ಸೇರುವ ಸಕಲೇಶಪುರದ ಜನತೆ ಇಡೀ ಯೋಜನೆಯಿಂದ ಈ ಭಾಗದ ಜನರಿಗೆ, ಕಾಡಿಗೆ, ಜೀವಸಂಕುಲಕ್ಕೆ ಆಗುವ ಸಮಸ್ಯೆಯ ಬಗ್ಗೆ ಮಾತನಾಡುತ್ತಿದ್ದಾರೆ.

ಬಯಲು ಸೀಮೆಯ ಜನರ ಕುಡಿಯುವ ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ತುಮಕೂರು ಮತ್ತು ಹಾಸನ ಜಿಲ್ಲೆಯ ಕೆಲವು ಭಾಗಗಳಲ್ಲಿ ಹನಿ ನೀರಿಗಾಗಿ ಜನರು ಪರದಾಡುವ ಸ್ಥಿತಿ ಇದೆ. ಕೆಲವು ಜಿಲ್ಲೆಗಳಲ್ಲಂತೂ ಸಾವಿರಾರು ಅಡಿ ಕೊರೆದರೂ ಭೂಮಿಯಲ್ಲಿ ನೀರು ಹುಟ್ಟುತ್ತಿಲ್ಲ. ಕೆರೆಗಳನ್ನು ಹಾಳುಗೆಡವಿದ್ದು, ಮಳೆ ನೀರು ಸಂಗ್ರಹಕ್ಕೆ ಸರಿಯಾದ ವ್ಯವಸ್ಥೆ ಮಾಡದೇ ಹೋಗಿದ್ದು ಇತ್ಯಾದಿ ಕಾರಣಗಳಿಂದಾಗಿ ಈ ಜಿಲ್ಲೆಗಳ ಜೀವಜಲವೇ ಬತ್ತಿಹೋಗಿದೆ. ಅಲ್ಪಸ್ವಲ್ಪ ನೀರು ಸಿಕ್ಕರೂ ಅದರಲ್ಲಿನ ಫ್ಲೋರೈಡ್ ಅಂಶದಿಂದಾಗಿ ಫ್ಲೋರೋಸಿಸ್ ಖಾಯಿಲೆ ಬಂದು, ಜನಸಾಮಾನ್ಯರ ಬದುಕು ನರಕವಾಗಿ ಹೋಗಿದೆ.

ಈ ಭಾಗದ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಹೋದಾಗಲೂ ಅಲ್ಲಿನ ಜನರ ಬವಣೆಗಳನ್ನು ನಾನು ಕೇಳಿದ್ದೇನೆ. ನಮಗೆ ನೀರೊಂದನ್ನು ಕೊಟ್ಟುಬಿಡಿ, ಹೇಗೋ ಬದುಕು ಸಾಗಿಸುತ್ತೇವೆ ಎಂದು ಅವರು ನೊಂದು ನುಡಿಯುತ್ತಾರೆ. ಚೆನ್ನಾಗಿ ಮಳೆಯಾದ ವರ್ಷಗಳಲ್ಲಿ ಕುಡಿಯಲು ಅಲ್ಪಸ್ವಲ್ಪ ನೀರಾದರೂ ಸಿಗುತ್ತದೆ. ಆದರೆ ದುರದೃಷ್ಟವೆಂದರೆ ಈ ಜಿಲ್ಲೆಗಳು ಸದಾ ಬರಪೀಡಿತವಾಗಿಯೇ ಇರುತ್ತವೆ. ಕಾಲಕಾಲಕ್ಕೆ ಮಳೆಯಾಗುತ್ತದೆ ಎಂದು ನಿರೀಕ್ಷೆಯೂ ಮಾಡದಂಥ ದುರ್ಬರ ಸಂದರ್ಭ ಇದಾಗಿದೆ.

ಇಂಥ ಸಂದರ್ಭದಲ್ಲಿ ಈ ಜಿಲ್ಲೆಗಳ ಜನರ ದಾಹ ಇಂಗಿಸಲು ಮುಂದಾಗಬೇಕಾದ್ದು ಯಾವುದೇ ನಾಗರಿಕ ಸಮಾಜದ ಕರ್ತವ್ಯ. ಈ ಭೂಮಂಡಲದಲ್ಲಿ ಅನಿವಾರ್ಯವಾಗಿ ನಾವು ಒಪ್ಪಿಕೊಂಡಿರುವ ಸೂತ್ರ ‘ಮೊದಲು ಮನುಷ್ಯ’ ಎಂಬುದೇ ಆಗಿದೆ. ಇದು ಎಷ್ಟು ಸರಿ, ಎಷ್ಟು ತಪ್ಪು ಎಂಬ ವಿಶ್ಲೇಷಣೆಗೆ ಕಾಲ ಇದಲ್ಲ. ಸಂಕಷ್ಟದಲ್ಲಿರುವ ಜನರ ಬೆನ್ನಿಗೆ ನಿಲ್ಲಬೇಕು ಎಂಬುದೇ ಮಾನವೀಯ ನಿಲುವು.

ಈ ಹಿನ್ನೆಲೆಯಲ್ಲಿ ಈ ಬರಪೀಡಿತ ಜಿಲ್ಲೆಗಳಿಗೆ ಪಶ್ಚಿಮಘಟ್ಟಗಳಲ್ಲಿ ಹರಿಯುವ ನದಿಗಳನ್ನು ಪೂರ್ವಾಭಿಮುಖವಾಗಿ ತಿರುಗಿಸುವ ಯೋಜನೆಗಳನ್ನು ಪ್ರಸ್ತಾಪಿಸಿದ್ದು ಪರಮಶಿವಯ್ಯನವರ ವರದಿ. ಪರಮಶಿವಯ್ಯನವರು ಕೇವಲ ಪಶ್ಚಿಮಘಟ್ಟದ ನದಿಗಳನ್ನು ತಿರುಗಿಸುವ ಪ್ರಸ್ತಾಪವನ್ನಷ್ಟೇ ಅಲ್ಲದೆ, ರಾಜ್ಯದ ವಿವಿಧ ಭಾಗಗಳಲ್ಲಿ ಮಾಡಬಹುದಾದ ನದಿ ತಿರುವು ಯೋಜನೆಗಳ ಕುರಿತು ಸಮಗ್ರ ವರದಿ ನೀಡಿದ್ದರು. ಈ ವರದಿ ಬಂದನಂತರ ಬಯಲುಸೀಮೆಯ ಜನರು, ಸಂಘಟನೆಗಳು ನೇತ್ರಾವತಿ ನದಿ ತಿರುವು ಯೋಜನೆ ಜಾರಿಗೆ ತಂದು ತಮ್ಮ ಜಿಲ್ಲೆಗಳಲ್ಲಿ ಕುಡಿಯುವ ನೀರು ಯೋಜನೆ ಮತ್ತು ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವಂತೆ ಆಗ್ರಹಿಸುತ್ತಲೇ ಇದ್ದಾರೆ.

ನೇತ್ರಾವತಿ ತಿರುವು ಯೋಜನೆಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ನಾಗರಿಕರು, ರಾಜಕಾರಣಿಗಳು, ಸಂಘಟನೆಗಳು ಮತ್ತು ಪರಿಸರವಾದಿಗಳಿಂದ ತೀವ್ರ ವಿರೋಧ ಬಂದ ಹಿನ್ನೆಲೆಯಲ್ಲಿ ನೇತ್ರಾವತಿ ತಿರುವ ಯೋಜನೆಯ ಒಂದು ಭಾಗವಾಗಿ ಎತ್ತಿನಹೊಳೆ ತಿರುವು ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಹಿಂದೆ ಇದ್ದ ಬಿಜೆಪಿ ಸರ್ಕಾರವೇ ಎತ್ತಿನಹೊಳೆ ಯೋಜನೆಗೆ ಹಸಿರು ನಿಶಾನೆ ತೋರಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಯೋಜನೆಯನ್ನು ಆರಂಭಗೊಳಿಸಿದೆ. ಇದಕ್ಕಾಗಿ ಸಾವಿರದ ಮುನ್ನೂರು ಕೋಟಿ ರುಪಾಯಿಗಳನ್ನು ಬಜೆಟ್‌ನಲ್ಲಿ ಎತ್ತಿಡಲಾಗಿದೆ.

ಎತ್ತಿನಹೊಳೆ ಯೋಜನೆಯ ಸಾಧಕಬಾಧಕಗಳ ಬಗ್ಗೆ ಚರ್ಚೆ ನಡೆಸುವ ಮುನ್ನ, ಈ ಎತ್ತಿನಹೊಳೆ ಯೋಜನೆ ಎಂದರೇನು ಎಂಬುದನ್ನು ಮೊದಲು ಗಮನಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನದಿಯಾದ ನೇತ್ರಾವತಿಗೆ ಇರುವ ಹಲವು ಉಪನದಿಗಳಲ್ಲಿ ಎತ್ತಿನಹೊಳೆಯೂ ಒಂದು. ಹಾಗೆ ನೋಡಿದರೆ ಎತ್ತಿನಹೊಳೆಯು ನೇರವಾಗಿ ನೇತ್ರಾವತಿಯನ್ನು ಸೇರುವುದಿಲ್ಲ. ಅದು ಕೆಂಪುಹೊಳೆಯನ್ನು ಸೇರಿ ನಂತರ ನೇತ್ರಾವತಿಯನ್ನು ಕೂಡುತ್ತದೆ. ಎತ್ತಿನಹೊಳೆಯನ್ನು ಸ್ಥಳೀಯರು ಹೊಳೆಯೆಂದು ಕರೆಯುವುದಿಲ್ಲ. ಅದು ಎತ್ತಿನಹಳ್ಳ. ಸಕಲೇಶಪುರ ತಾಲ್ಲೂಕಿನ ಮೂರ್ಕಣ್ಣು ಗುಡ್ಡದ ಬಳಿ ಸಣ್ಣ ತೊರೆಯಾಗಿ ಹುಟ್ಟುವ ಈ ಹಳ್ಳ ಆರು ಕಿ.ಮೀ ದೂರ ಹರಿದು ಕೆಂಪುಹೊಳೆಯನ್ನು ಸೇರುತ್ತದೆ.

ಸುಮಾರು ೧೦ ಚದರ ಕಿಮೀ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ನೀರನ್ನು ಹೆಗ್ಗದ್ದೆ ಮತ್ತು ಕಾಡುಮನೆಗಳಲ್ಲಿ ತಲಾ ಎರಡು ಚೆಕ್ ಡ್ಯಾಂ ಮತ್ತು ಕೆಂಕೇರಿಹಳ್ಳದಲ್ಲಿ ಒಂದು ಚೆಕ್ ಡ್ಯಾಂಗಳಲ್ಲಿ ಸಂಗ್ರಹಿಸಿ ಲಿಫ್ಟ್ ಮಾಡುವ ಮೊದಲ ಹಂತದ ಯೋಜನೆಯ ಕೆಲಸಗಳು ಈಗ ನಡೆಯುತ್ತಿವೆ. ಆದರೆ ವಿಶೇಷವೆಂದರೆ ಈ ಭಾಗದಲ್ಲಿ ಆಗುತ್ತಿರುವ ವಾರ್ಷಿಕ ಮಳೆಯ ಅಂದಾಜು ಹಾಕಿದರೆ ಇಲ್ಲಿ ಸಂಗ್ರಹವಾಗುವ ನೀರು ಏಳೆಂಟು ಟಿಎಂಸಿ ದಾಟುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಎತ್ತಿನಹೊಳೆ ಮಾತ್ರವಲ್ಲದೆ ಕಾಡುಮನೆಹೊಳೆ, ಹೊಂಗಡಹಳ್ಳ, ಕೆಂಕೇರಿಹಳ್ಳಗಳ ನೀರನ್ನೂ ಸೇರಿಸಿದರೂ ಲಭ್ಯವಾಗುವ ನೀರಿನ ಪ್ರಮಾಣ ಒಂಭತ್ತು ಟಿಎಂಸಿ ದಾಟುವುದಿಲ್ಲ ಎಂಬ ಅಂದಾಜಿದೆ. ಆದರೆ ಯೋಜನೆಯ ಆರಂಭದಲ್ಲಿ ಮುಖ್ಯಮಂತ್ರಿಗಳು ಯೋಜನೆಯಿಂದ ೨೪ ಟಿಎಂಸಿ ನೀರು ಲಭ್ಯವಾಗುತ್ತದೆ ಎಂದು ಘೋಷಿಸಿದ್ದರು. ಸರ್ಕಾರದ ಡಿಪಿಆರ್‌ನಲ್ಲಿ ೨೨ ಟಿಎಂಸಿ ನೀರಿನ ಯೋಜನೆ ಎಂದೇ ಉಲ್ಲೇಖಿಸಲಾಗಿದೆ. ಹಾಗಿದ್ದರೆ ನಿಜವಾಗಿಯೂ ಸರ್ಕಾರದ ಉದ್ದೇಶವೇನು? ಯೋಜನಾವರದಿಯನ್ನು ಗಮನಿಸಿದರೆ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಮತ್ತು ಹಾಸನ ಜಿಲ್ಲೆಗಳಿಗೆ ನೀರು ಕೊಡಬೇಕಾಗುತ್ತದೆ. ಇದನ್ನು ಸರ್ಕಾರ ಮೇಲಿಂದ ಮೇಲೆ ಕುಡಿಯುವ ನೀರಿನ ಯೋಜನೆ ಎಂದು ಹೇಳುತ್ತಿದ್ದರೂ ದಾಖಲೆಗಳು ಹೇಳುತ್ತಿರುವುದೇ ಬೇರೆ, ಈ ನೀರನ್ನು ನೀರಾವರಿ ಮತ್ತು ಜಲವಿದ್ಯುತ್ ಯೋಜನೆಗಳಿಗೂ ಬಳಸಿಕೊಳ್ಳುವ ಲೆಕ್ಕಾಚಾರ ಸರ್ಕಾರಕ್ಕಿದೆ. ಡಿಪಿಆರ್ ಪ್ರಕಾರ ಕೋಲಾರ, ಚಿಕ್ಕಬಳ್ಳಾಪುರಕ್ಕೆ ೨೦೪೪ ಇಸವಿ ತನಕ ಸರಾಸರಿ ೫ ಟಿಎಂಸಿ ನೀರು ಮಾತ್ರ ಸರಬರಾಜು ಮಾಡಲಾಗುವುದು ಎಂದು ನಮೂದಿಸಲಾಗಿದ್ದರೆ,  ರಾಮನಗರ ಜಿಲ್ಲೆಯೊಂದಕ್ಕೆ ೧೩ ಟಿಎಂಸಿಗೂ ಹೆಚ್ಚು ನೀರು ಹರಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ. ಅದರರ್ಥ ಇದು ಕುಡಿಯುವ ನೀರು ಯೋಜನೆ ಮಾತ್ರವಲ್ಲ ಎಂಬುದನ್ನು ಗಮನಿಸಬೇಕು.

ಇಂಥ ಸನ್ನಿವೇಶದಲ್ಲಿ ಸರ್ಕಾರ ಏನು ಮಾಡಬೇಕು? ಮೊಟ್ಟ ಮೊದಲು ಪಶ್ಚಿಮಘಟ್ಟ, ಕರಾವಳಿ ಮತ್ತು ಬಯಲು ಸೀಮೆಯ ಜನರಲ್ಲಿ ಉದ್ಭವಿಸಿರುವ ಅನುಮಾನಗಳನ್ನು ಬಗೆಹರಿಸುವ ಕೆಲಸವನ್ನು ಮಾಡಬೇಕಿದೆ. ಇದು ಕೇವಲ ಎತ್ತಿನಹೊಳೆ ಯೋಜನೆಯೋ ಅಥವಾ ನೇತ್ರಾವತಿ ತಿರುವು ಯೋಜನೆಯೋ ಎಂಬುದನ್ನು ಸ್ಪಷ್ಟಪಡಿಸಬೇಕು. ಇದು ಕುಡಿಯುವ ನೀರಿನ ಯೋಜನೆಯೋ ಅಥವಾ ಶಾಶ್ವತ ನೀರಾವರಿ ಯೋಜನೆಯೋ ಎಂಬ ಪ್ರಶ್ನೆಗೆ ಉತ್ತರ ಕೊಡಬೇಕಿದೆ. ಇಂಥ ಬೃಹತ್ ಯೋಜನೆಗಳ ವಿಷಯದಲ್ಲಿ ಸರ್ಕಾರ ಕದ್ದುಮುಚ್ಚಿ ಏನನ್ನೂ ಮಾಡದೆ, ಪಾರದರ್ಶಕವಾಗಿರಬೇಕು. ಈ ಯೋಜನೆಗೆ ಎಷ್ಟು ಅರಣ್ಯ ಭೂಮಿ, ಖಾಸಗಿ  ಭೂಮಿಯನ್ನು ವಶಪಡಿಸಿಕೊಳ್ಳಲಾಗುವುದು ಎಂಬುದನ್ನು ಪಾರದರ್ಶಕವಾಗಿ ಜನತೆಯ ಮುಂದೆ ಬಿಡಿಸಿಡಬೇಕು. ಆಗುವ ಹಾನಿಯನ್ನು ತುಂಬಿಕೊಡುವ ನಿಟ್ಟಿನಲ್ಲಿ ಸರ್ಕಾರ ಏನೇನು ಕ್ರಮ ಕೈಗೊಳ್ಳಲಿದೆ ಮತ್ತು ನಷ್ಟಕ್ಕೀಡಾಗುವ ಜನರಿಗೆ ಯಾವ ರೀತಿಯ ಪರಿಹಾರೋಪಾಯಗಳನ್ನು ಕಲ್ಪಿಸಿಕೊಡಲಿದೆ ಎಂಬುದನ್ನು ಸ್ಪಷ್ಟಪಡಿಸಬೇಕು.

ಈಗೀಗ ಎಲ್ಲ ಅಭಿವೃದ್ಧಿ ಕಾರ್ಯಗಳಲ್ಲೂ ರಾಜಕೀಯ ನುಸುಳಿಬಿಡುತ್ತದೆ. ಎತ್ತಿನಹೊಳೆ ವಿಷಯದಲ್ಲಿ ರಾಜಕಾರಣಿಗಳ ಭಿನ್ನ ಭಿನ್ನ ವೇಷವನ್ನು ನಾವು ಗಮನಿಸುತ್ತಿದ್ದೇವೆ. ಒಂದೇ ಪಕ್ಷದ ಹಲವು ನಾಯಕರು ಯೋಜನೆ ವಿಷಯದಲ್ಲಿ ಭಿನ್ನಭಿನ್ನ ನಿಲುವುಗಳನ್ನು ತಾಳಿದ್ದಾರೆ. ಚಿಕ್ಕಬಳ್ಳಾಪುರವನ್ನು ತಮ್ಮ ಕ್ಷೇತ್ರವನ್ನಾಗಿ ಮಾಡಿಕೊಂಡಿರುವ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿಯವರಿಗೆ ಎತ್ತಿನಹೊಳೆ ಯೋಜನೆ ಸಾಕಾರವಾಗಬೇಕಿದೆ. ಇನ್ನೊಂದೆಡೆ ಅವರದೇ ಪಕ್ಷದ ಹಿರಿಯ ಮುಖಂಡ, ಮತ್ತೋರ್ವ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಬಿಜೆಪಿಯಲ್ಲೂ ಹಾಗೆ, ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗಲೇ ಎತ್ತಿನಹೊಳೆ ಯೋಜನೆಗೆ ಅನುಮತಿ ದೊರೆತಿತ್ತು. ಈಗಲೂ ಅವರು ಯೋಜನೆ ಪರವಾಗಿದ್ದಾರೆ. ಆದರೆ ದಕ್ಷಿಣ ಕನ್ನಡದ ಸಂಸದರು ಸೇರಿದಂತೆ ಆ ಜಿಲ್ಲೆಯ ಬಿಜೆಪಿ ಮುಖಂಡರು ಯೋಜನೆಯನ್ನು ವಿರೋಧಿಸುತ್ತಿದ್ದಾರೆ.

ಇಂಥ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಎಲ್ಲರನ್ನೂ ಒಂದು ವೇದಿಕೆಗೆ ತಂದು ಗಂಭೀರ ಚರ್ಚೆಗೆ ಅನುವು ಮಾಡಿಕೊಡಬೇಕಿದೆ. ಹೇಳಿ ಕೇಳಿ ಇದು ಹದಿಮೂರು ಸಾವಿರ ಕೋಟಿ ರುಪಾಯಿಗಳ ಯೋಜನೆ. ಇತರ ಯೋಜನೆಗಳ ಇತಿಹಾಸವನ್ನು ಗಮನಿಸಿದರೆ ಈ ಯೋಜನೆ ಪೂರ್ಣವಾಗುವ ಹೊತ್ತಿಗೆ ಇಪ್ಪತ್ತು ಮೂವತ್ತು ಸಾವಿರ ಕೋಟಿ ರುಪಾಯಿಗಳ ಗಡಿ ದಾಟುವ ಎಲ್ಲ ಸಾಧ್ಯತೆಗಳೂ ಇವೆ. ಇಂಥ ಬೃಹತ್ ಯೋಜನೆ ಜಾರಿಯಾಗುವ ಪ್ರದೇಶದಲ್ಲೇ ಜನರ ಜತೆ ಸರ್ಕಾರ ಸಂವಹನ ನಡೆಸದಿದ್ದರೆ ಹೇಗೆ? ಯೋಜನೆಯಿಂದ ಭೂಮಿ ಕಳೆದುಕೊಳ್ಳುವ, ನಷ್ಟ ಅನುಭವಿಸುವ, ಸ್ಥಳಾಂತರಗೊಳ್ಳುವ, ಬೇರೆ ಬೇರೆ ರೀತಿಯ ಪ್ರತ್ಯಕ್ಷ, ಪರೋಕ್ಷ ಸಮಸ್ಯೆಗಳನ್ನು ಎದುರಿಸುವ ಜನರ ಜತೆ ಸಂವಾದ ನಡೆಸಿ, ಅವರ ಅನುಮಾನಗಳನ್ನು ಬಗೆಹರಿಸದಿದ್ದರೆ ಹೇಗೆ?

ಬಯಲುಸೀಮೆಯ ಜನರ ದಾಹ ಇಂಗಿಸಲು ಪಶ್ಚಿಮಘಟ್ಟವನ್ನು ವಿನಾಶಗೊಳಿಸದೇ ನದಿ ತಿರುವು ಯೋಜನೆ ಜಾರಿಯಾಗಬೇಕು. ಈಗ ಕೈಗೆತ್ತಿಕೊಂಡಿರುವ ಯೋಜನೆ ಕೇವಲ ಕುಡಿಯುವ ನೀರಿನ ಯೋಜನೆಯಾದರೆ ಯಾರೂ ಸಹ ತೀವ್ರ ಸ್ವರೂಪದ ಪ್ರತಿರೋಧ ತೋರಿಸುವುದಿಲ್ಲ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಎತ್ತಿನಹೊಳೆ ಯೋಜನೆ ಈಗ ಪಶ್ಚಿಮಘಟ್ಟ, ಕರಾವಳಿ ಮತ್ತು ಬಯಲು ಸೀಮೆಯ ಜನರಿಗೆ ಭಾವನಾತ್ಮಕ ವಿಷಯವಾಗಿ ಬದಲಾಗಿ ಹೋಗಿದೆ. ಸರ್ಕಾರ ಮನಸು ಮನಸುಗಳನ್ನು ಕಟ್ಟುವ ಕೆಲಸವನ್ನು ಮೊದಲು ಮಾಡಬೇಕು, ಆಮೇಲೆ ಅಣೆಕಟ್ಟುಗಳು ತನ್ನಿಂತಾನೇ ನಿರ್ಮಾಣವಾಗುತ್ತವೆ. ತನ್ಮೂಲಕವಾದರೂ ಬಯಲು ಸೀಮೆಯಲ್ಲಿ ಬಾಯಾರಿ ನೊಂದಿರುವ ಜನತೆಗೆ ಕುಡಿಯುವ ನೀರು ಸಿಗುವಂತಾಗಲಿ.

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

Monday, 21 September 2015

ಕನ್ನಡ ನುಡಿಗೂ ಅಧಿಕೃತ ಭಾಷೆಯ ಸ್ಥಾನಮಾನ ದೊರೆಯಬೇಕಿದೆ...

ನಮ್ಮ ನಡುವೆ ಚಾಲ್ತಿಯಲ್ಲಿರುವ ಕೆಲವು ಹಸಿಹಸಿ ಸುಳ್ಳುಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈ ಸುಳ್ಳುಗಳನ್ನು ಒಡೆಯುವ ಕೆಲಸವನ್ನು ಮೊದಲು ಮಾಡಬೇಕು. ಈ ದೇಶದ ಜನರಲ್ಲಿ ತುಂಬಲಾಗಿರುವ ಬಹುದೊಡ್ಡ ಸುಳ್ಳು ಎಂದರೆ ‘ಹಿಂದಿ ಈ ದೇಶದ ರಾಷ್ಟ್ರಭಾಷೆ’ ಎಂಬುದು. ಈ ಸುಳ್ಳು ಎಷ್ಟು ಜನಜನಿತವಾಗಿದೆ ಎಂದರೆ ಹಿಂದಿ ಭಾಷೆಯ ಎರಡು ಶಬ್ದಗಳ ಅರ್ಥ ಗೊತ್ತಿಲ್ಲದವನೂ ಇದನ್ನು ನಂಬಿಕೊಂಡಿದ್ದಾರೆ. ಈ ಸುಳ್ಳನ್ನು ಎಷ್ಟು ಆಕ್ರಮಣಕಾರಿಯಾಗಿ ಹಬ್ಬಿಸಲಾಗಿದೆ ಎಂದರೆ ನಾವು ಓದಿದ ಪಠ್ಯಪುಸ್ತಕಗಳಲ್ಲೂ ‘ಹಿಂದಿ ನಮ್ಮ ರಾಷ್ಟ್ರಭಾಷೆ’ ಎಂದು ಬರೆಯಲಾಗಿದೆ. ಅದನ್ನೇ ನಮ್ಮ ಶಿಕ್ಷಕರು ನಮಗೆ ಕಲಿಸಿದ್ದಾರೆ.

ಹಿಂದಿಯಾಗಲೀ, ಇನ್ಯಾವುದೇ ಭಾಷೆಯಾಗಲಿ ಈ ದೇಶದ ರಾಷ್ಟ್ರಭಾಷೆಯಲ್ಲ, ಹಾಗೆಂದು ನಮ್ಮ ಸಂವಿಧಾನದಲ್ಲಿ ಎಲ್ಲೂ ಉಲ್ಲೇಖಿಸಲಾಗಿಲ್ಲ. ಇತ್ತೀಚಿಗೆ ಗುಜರಾತ್ ಹೈಕೋರ್ಟ್ ನೀಡಿದ ಆದೇಶದಲ್ಲೂ ಹಿಂದಿ ರಾಷ್ಟ್ರಭಾಷೆಯಲ್ಲ, ರಾಷ್ಟ್ರಭಾಷೆಯೆಂಬುದು ಇಲ್ಲವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು.

ಹಾಗಿದ್ದರೆ ಹಿಂದಿ ಭಾಷೆ ಹೇಗೆ ಬಂದು ನಮ್ಮ ನಡುವೆ ನುಸುಳಿಕೊಂಡಿತು? ವಿಶೇಷವಾಗಿ ದ್ರಾವಿಡ ಭಾಷೆಗಳನ್ನಾಡುವ ಜನರಿಗೆ ಸಂಬಂಧವೇ ಇಲ್ಲದ ಈ ಭಾಷೆ ಹಂತಹಂತವಾಗಿ ನಮ್ಮನ್ನು ಆವರಿಸಿಕೊಳ್ಳುತ್ತಿರುವುದಕ್ಕೆ ಏನು ಕಾರಣ? ಯಾಕೆ ನಮ್ಮ ಮಕ್ಕಳಿಗೆ ತೃತೀಯ ಭಾಷೆಯಾಗಿ ಹಿಂದಿಯನ್ನು ಕಡ್ಡಾಯವಾಗಿ ಕಲಿಸಲಾಗುತ್ತದೆ? ಕೇಂದ್ರ ಸರ್ಕಾರಿ ಇಲಾಖೆಗಳು, ಕಚೇರಿಗಳಲ್ಲಿ ಯಾರಿಗೂ ಅರ್ಥವಾಗದ ಹಿಂದಿ ಭಾಷೆಯನ್ನು ಯಾಕೆ ತಂದು ತುರುಕಲಾಗುತ್ತಿದೆ?

ಇದಕ್ಕೆಲ್ಲ ಉತ್ತರಗಳನ್ನು ಹುಡುಕಲು ಭಾರತ ಸ್ವಾತಂತ್ರ್ಯವನ್ನು ಪಡೆದ ನಂತರ ನಡೆದ ಬೆಳವಣಿಗೆಗಳನ್ನು ಗಮನಿಸಬೇಕು. ದೇಶ ಸ್ವತಂತ್ರಗೊಂಡು, ಸಂವಿಧಾನ ರಚಿಸುವ ಸಂದರ್ಭದಲ್ಲಿ ಇಡೀ ದೇಶಕ್ಕೆ ಒಪ್ಪಿತವಾಗುವ ಒಂದು ಭಾಷೆಯನ್ನು ಸಂಪರ್ಕ ಭಾಷೆಯನ್ನಾಗಿ ಮಾಡಬೇಕು ಎಂಬ ಆಲೋಚನೆ ಹುಟ್ಟಿತು. ಹಿಂದಿ ಭಾಷೆ ಕೇವಲ ಹಿಂದಿ ಭಾಷಿಕ ರಾಜ್ಯಗಳಲ್ಲಿ ಮಾತ್ರ ಬಳಕೆಯಲ್ಲಿ ಇದ್ದರಿಂದಾಗಿ ಹಿಂದಿಯನ್ನೇ ಆ ಸಂಪರ್ಕ ಭಾಷೆಯನ್ನಾಗಿ ಮಾಡುವುದೆಂದು ಸಂವಿಧಾನ ನಿರ್ಮಾತೃಗಳು ತೀರ್ಮಾನಿಸಿದರು. ಆದರೆ ಹಿಂದಿ ರಾಜ್ಯಗಳ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಹಿಂದಿ ಅಪರಿಚಿತ ಭಾಷೆಯಾದ್ದರಿಂದ ಹಾಗೆ ಮಾಡಲು ಸಾಧ್ಯವಾಗದೇ, ಹಿಂದಿಯ ಜತೆ ಇಂಗ್ಲಿಷನ್ನು ಅಧಿಕೃತ ಭಾಷೆಯನ್ನಾಗಿ ಸಂವಿಧಾನದಲ್ಲೇ ಘೋಷಿಸಲಾಯಿತು. ಹದಿನೈದು ವರ್ಷಗಳ ನಂತರ ಇಂಗ್ಲಿಷ್ ಭಾಷೆಯನ್ನು ತೆಗೆದು ಹಿಂದಿಯೊಂದನ್ನೇ ದೇಶದ ಅಧಿಕೃತ ಸಂಪರ್ಕ ಭಾಷೆಯನ್ನಾಗಿ ಮಾಡುವ ಪ್ರಸ್ತಾಪವೂ ಸಂವಿಧಾನದಲ್ಲಿತ್ತು.

ಹಿಂದಿಯ ಜತೆ ಯಾವ ಸಂಬಂಧವೂ ಇಲ್ಲದ ದ್ರಾವಿಡ ರಾಜ್ಯಗಳು ಮತ್ತು ಇತರ ಹಿಂದಿಯೇತರ ರಾಜ್ಯಗಳು ಕೇಂದ್ರ ಸರ್ಕಾರದ ಏಕೈಕ ಅಧಿಕೃತ ಸಂಪರ್ಕ ಭಾಷೆಯನ್ನಾಗಿ ಹಿಂದಿಯನ್ನು ಪ್ರತಿಷ್ಠಾಪಿಸಲು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿರಲಿಲ್ಲ. ಇದು ಒಕ್ಕೂಟದ ಮೂಲಮಂತ್ರಕ್ಕೇ ವಿರುದ್ಧವಾಗಿತ್ತು. ಭಾರತದ ಅಖಂಡತೆಗೆ ಈ ಥರದ ಏಕಭಾಷಾ ಹೇರಿಕೆ ದೊಡ್ಡ ಅಪಾಯವಾಗಿ ಕಾಣಿಸತೊಡಗಿತು. ಹಿಂದಿಯೇತರ ರಾಜ್ಯಗಳು ಹಿಂದಿಯನ್ನು ಅಧಿಕೃತವಾಗಿ ಹೇರುವ ಈ ಹುನ್ನಾರಗಳ ವಿರುದ್ಧ ಪ್ರತಿಭಟಿಸಿದವು. ಹೀಗಾಗಿ ೧೯೬೩ರಲ್ಲಿ ದ್ರಾವಿಡ ರಾಜ್ಯಗಳ ಒತ್ತಡಕ್ಕೆ ಮಣಿದ ಸಂಸತ್ತು ಇಂಗ್ಲಿಷನ್ನೂ ಹಿಂದಿಯ ಜತೆ ಅಧಿಕೃತ ಸಂಪರ್ಕ ಭಾಷೆಯನ್ನಾಗಿ ಉಳಿಸಿಕೊಳ್ಳುವ ನಿರ್ಣಯವನ್ನು (ಖಿhe ಔಜಿಜಿiಛಿiಚಿಟ ಐಚಿಟಿguಚಿges ಂಛಿಣ, ೧೯೬೩ ) ಅಂಗೀಕರಿಸಿತು. ಆದರೆ ೧೯೬೪ರಲ್ಲಿ ಇಂಗ್ಲಿಷ್ ಭಾಷೆಯ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಎಲ್ಲ ರಾಜ್ಯಗಳ ಮೇಲೂ ಹಿಂದಿಯನ್ನು ಹೇರುವ ಕುತಂತ್ರ ನಡೆಯಿತು. ಇದರ ವಿರುದ್ಧ ಆಗ ಹಿಂದಿಯೇತರ ರಾಜ್ಯಗಳು ತೀವ್ರಸ್ವರೂಪದಲ್ಲಿ ಪ್ರತಿಭಟಿಸಿದವು. ವಿಶೇಷವಾಗಿ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಆಂಧ್ರಪದೇಶ ಮತ್ತು ಪಾಂಡಿಚೇರಿಗಳಲ್ಲಿ ವ್ಯಾಪಕ ಚಳವಳಿಗಳು ನಡೆದವು. ತಮಿಳುನಾಡಿನಲ್ಲಿ ಚಳವಳಿಯ ಹಿಂಸಾರೂಪಕ್ಕೂ ತಿರುಗಿತು. ಆಗ ಅನಿವಾರ್ಯವಾಗಿ ಕೇಂದ್ರ ಸರ್ಕಾರ ೧೯೬೩ರ ಅಧಿಕೃತ ಭಾಷೆಗಳ ಕಾಯ್ದೆಗೆ ತಿದ್ದುಪಡಿ ತಂದು, ಎಲ್ಲ ರಾಜ್ಯಗಳೂ ಹಿಂದಿಯನ್ನು ಸಂಪರ್ಕಭಾಷೆಯನ್ನಾಗಿ ಒಪ್ಪಿ, ತಮ್ಮ ತಮ್ಮ ಶಾಸನಸಭೆಗಳಲ್ಲಿ ನಿರ್ಣಯ ಅಂಗೀಕರಿಸುವವರೆಗೂ ಇಂಗ್ಲಿಷ್ ಕೂಡ ಅಧಿಕೃತ ಸಂವಹನದ ಭಾಷೆಯಾಗಿ ಉಳಿಯುತ್ತದೆ ಎಂದು ಕಾನೂನು ಮಾಡಿತು.

ಭಾರತದ ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಭಾಷಿಕ ವೈವಿಧ್ಯತೆ ಅನನ್ಯವಾದದ್ದು. ಇತರ ದೇಶಗಳೊಂದಿಗೆ ಭಾರತವನ್ನು ಹೋಲಿಸಲಾಗದು. ವಿವಿಧತೆಯಲ್ಲಿ ಏಕತೆ ಎಂಬುದು ಸ್ವಾತಂತ್ರ್ಯ ಚಳವಳಿಗೂ ಹಿಂದಿನ ಘೋಷವಾಕ್ಯವಾಗಿತ್ತು. ಎಲ್ಲ ಭಾಷಿಕ ಸಮುದಾಯಗಳೂ ತಮ್ಮ ವೈವಿಧ್ಯತೆಯನ್ನು ಉಳಿಸಿಕೊಂಡೇ ಈ ದೇಶ ಒಂದಾಗಿ ಉಳಿಯಲು ಸಹಕರಿಸಿದ್ದರು. ಬ್ರಿಟಿಷರ ಆಳ್ವಿಕೆಗೂ ಮುನ್ನ ಸಾವಿರಾರು ದೊರೆಗಳ, ಸಾಮಂತರ ಅಡಿಯಲ್ಲಿ ಛಿದ್ರವಾಗಿದ್ದ ಭೂಭಾಗಗಳೆಲ್ಲ ಒಂದಾಗಿಯೇ ದೇಶವಾಗಿದೆ. ಇಂಥ ವೈವಿಧ್ಯತೆಯ ನೆಲದಲ್ಲಿ ಒಂದು ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿಯನ್ನು ಬಲವಂತವಾಗಿ ಎಲ್ಲರ ಮೇಲೂ ಹೇರುವುದು ಕ್ರೌರ್ಯ ಮತ್ತು ರಾಜಕೀಯ ದಾದಾಗಿರಿ, ಸಾಂಸ್ಕೃತಿಕ ಭಯೋತ್ಪಾದನೆಯ ಲಕ್ಷಣ. ಅದು ಯಾವ ಕಾಲಕ್ಕೂ ಆಗಕೂಡದು. ಈ ಥರದ ರಾಜಕೀಯ ದಾದಾಗಿರಿ ನಡೆದಾಗಲೆಲ್ಲ ಜನರು ಸಿಡಿದೆದ್ದು ಪ್ರತಿಭಟಿಸಿದ್ದಾರೆ. ಜನರು ತಾವಾಡುವ ನುಡಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುತ್ತಾರೆ. ಅವರ ನುಡಿಗೆ ಹೊರತಾದ ಇನ್ಯಾವುದೋ ಅಪರಿಚಿತ ಭಾಷೆಯನ್ನೇ ನೀವು ಆಡಬೇಕು, ಬಳಸಬೇಕು ಎಂಬ ಫರ್ಮಾನು ಹೊರಡಿಸಿದರೆ ಆ ಭಾಷಾ ಸಮುದಾಯ ಬಂಡಾಯವೇಳುತ್ತದೆ.

ತುಂಬಾ ದೂರದ ಉದಾಹರಣೆಗಳು ಬೇಡ. ನಮ್ಮ ಪಾಕಿಸ್ತಾನದ ಬಾಂಗ್ಲಾದೇಶ ಯಾಕೆ ಪಾಕಿಸ್ತಾನದಿಂದ ಪ್ರತ್ಯೇಕಗೊಂಡಿತು? ಎರಡೂ ದೇಶಗಳೂ ಒಂದೇ ಧರ್ಮದ ನೆಲೆಯನ್ನು ಹೊಂದಿದ್ದವು. ಹಾಗಿದ್ದಾಗ್ಯೂ ಪೂರ್ವ ಪಾಕಿಸ್ತಾನ ಎಂದು ಕರೆಯಲ್ಪಡುತ್ತಿದ್ದ ಬಾಂಗ್ಲಾದೇಶದ ವಿಮೋಚನಾ ಚಳವಳಿ ಯಾಕೆ ಆರಂಭವಾಯಿತು? ಬಾಂಗ್ಲಾದೇಶದ ಮುಸ್ಲಿಮರು ಬೆಂಗಾಳಿ ಭಾಷೆಯನ್ನು ತಾಯ್ನುಡಿಯನ್ನಾಗಿ ಹೊಂದಿದವರು. ಆದರೆ ಪಶ್ಚಿಮ ಪಾಕಿಸ್ತಾನದ ಪ್ರಭುಗಳು ಬಲವಂತವಾಗಿ ಬಾಂಗ್ಲಾದೇಶೀಯರ ಮೇಲೆ ಉರ್ದು ಭಾಷೆಯನ್ನು ಹೇರಲು ಪ್ರಯತ್ನಿಸಿದರು. ಇದನ್ನು ವಿರೋಧಿಸಿ ಇಡೀ ಬಾಂಗ್ಲಾದೇಶದಾದ್ಯಂತ ಪ್ರತಿಭಟನೆಗಳು ಆರಂಭಗೊಂಡವು.  ೧೯೫೨ರ ಫೆಬ್ರವರಿ ೨೧ರಂದು ಉರ್ದು ಹೇರಿಕೆ ಖಂಡಿಸಿ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಗುಂಡು ಹಾರಿಸಿ ೨೧ ಮಂದಿಯನ್ನು ಕೊಂದರು. ಭಾಷಾ ಚಳವಳಿಯೇ ಪ್ರತ್ಯೇಕ ರಾಷ್ಟ್ರ ಚಳವಳಿಯಾಗಿ ಬದಲಾಯಿತು. ಸುಮಾರು ಒಂಭತ್ತು ವರ್ಷಗಳ ವಿಮೋಚನಾ ಹೋರಾಟದ ನಂತರ ಭಾರತದ ಬೆಂಬಲದೊಂದಿಗೆ ಬಾಂಗ್ಲಾದೇಶ ವಿಮೋಚನೆಗೊಂಡಿತು. ವಿಶೇಷವೆಂದರೆ ಬಾಂಗ್ಲಾದಲ್ಲಿ ಗೋಲಿಬಾರ್ ನಡೆದ ಫೆ.೨೧ರ ದಿನವನ್ನು ವಿಶ್ವಸಂಸ್ಥೆ ‘ವಿಶ್ವ ತಾಯ್ನುಡಿ ದಿನ’ವನ್ನಾಗಿ ಘೋಷಿಸಿತು.

ಬಾಂಗ್ಲಾ ವಿಮೋಚನೆಯ ಪಾಠವನ್ನು ನಮ್ಮ ದೇಶದ ರಾಜಕಾರಣಿಗಳು ಸರಿಯಾಗಿ ಅರಿತುಕೊಂಡೇ ಇಲ್ಲ. ಯಾವುದೇ ಭಾಷಿಕ ಸಮುದಾಯವನ್ನು ಹಿಂಸೆಯ ಮೂಲಕ, ಬಲಪ್ರಯೋಗದ ಮೂಲಕ ಹತ್ತಿಕ್ಕಲು ಯತ್ನಿಸಿದರೆ ಅದರ ಪರಿಣಾಮ ಭೀಕರವಾಗಿರುತ್ತದೆ. ಅದರಲ್ಲೂ ಸ್ಥಳೀಯ ಭಾಷೆಯನ್ನು ಧಿಕ್ಕರಿಸಿ ಇನ್ನೊಂದು ಭಾಷೆಯನ್ನು ಹೇರಲು ಯತ್ನಿಸಿದರೆ ಅದರಿಂದಾಗಿ ಬಾಂಗ್ಲಾ ದಂಗೆಯಂಥವು ಯಾವ ದೇಶದಲ್ಲಾದರೂ ನಡೆಯಬಹುದು. ೧೯೬೪-೬೫ರಲ್ಲಿ ನಡೆದ ಹಿಂದಿಹೇರಿಕೆ ವಿರೋಧಿ ಚಳವಳಿಯೂ ಸಹ ಇಂಥದ್ದೆ ಸ್ವರೂಪದ ಪ್ರತಿರೋಧವಾಗಿತ್ತು. ಹೀಗಾಗಿ ಹಿಂದಿವಾಲಾಗಳು ದೇಶ ಛಿದ್ರವಾದೀತೆಂಬ ಭಯದಲ್ಲಿ ಒಂದು ಹೆಜ್ಜೆ ಹಿಂದೆ ಇಟ್ಟು, ಹಿಂದಿಯನ್ನು ರಾಷ್ಟ್ರವ್ಯಾಪಿ ಹೇರುವ ಕುತಂತ್ರವನ್ನು ಮುಂದೂಡಿಕೊಂಡಿದ್ದರು.

ಆದರೆ ‘ಹಿಂದಿ ಹೇರಿಕೆ’ ನಂತರವಾದರೂ ನಿಂತುಹೋಯಿತೆ? ಖಂಡಿತಾ ಇಲ್ಲ. ರಾಜಮಾರ್ಗದಲ್ಲಿ ಹಿಂದಿಯನ್ನು ತಂದು ಪ್ರತಿಷ್ಠಾಪಿಸುವುದು ದೇಶದ ಅಖಂಡತೆಗೆ ಪೆಟ್ಟು ಕೊಡುತ್ತದೆ ಎಂಬುದು ಗೊತ್ತಿದ್ದರಿಂದ ಹಿಂದಿ ಸಾಮ್ರಾಜ್ಯಶಾಹಿಗಳು ವಾಮಮಾರ್ಗದಲ್ಲಿ ಹಿಂದಿಯನ್ನು ಹೇರತೊಡಗಿದರು. ಸಂವಿಧಾನದಲ್ಲಿ ಅಧಿಕೃತ ಸಂವಹನದ ಭಾಷೆಯಾಗಿ ಹಿಂದಿಯೂ ಇರುವುದರಿಂದ ಅದರ ಉತ್ತೇಜನಕ್ಕೆಂದು ನೂರೆಂಟು ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಅದಕ್ಕಾಗಿ ಪ್ರತಿವರ್ಷ ಕೋಟಿಗಟ್ಟಲೆ ಹಣ ಖರ್ಚು ಮಾಡಲಾಯಿತು, ಈಗಲೂ ಮಾಡಲಾಗುತ್ತಿದೆ.

ಮಕ್ಕಳಿಗೆ ಹಿಂದಿಯನ್ನೂ ಒಂದು ಭಾಷೆಯನ್ನಾಗಿ ಕಡ್ಡಾಯವಾಗಿ ಕಲಿಸುವುದು ಮೊದಲ ಹಂತದ ಹೇರಿಕೆ. ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಹಿಂದಿಯನ್ನೇ ಬಳಸುವಂತೆ ಪ್ರಚೋದಿಸುವುದು, ಹಿಂದಿ ಕಲಿತವರಿಗೆ ಮನ್ನಣೆ ನೀಡುವುದು, ನೌಕರಿ ನೇಮಕಾತಿ, ಶಿಕ್ಷಣ ನೇಮಕಾತಿಗಳೂ ಸೇರಿದಂತೆ ವಿವಿಧ ಪ್ರವೇಶ ಪರೀಕ್ಷೆಗಳಲ್ಲಿ ಹಿಂದಿ ಕಲಿತವರಿಗೆ ಮನ್ನಣೆ ನೀಡುವುದು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹಿಂದಿ ಬಳಕೆಯನ್ನು ತುರುಕುವುದು, ಹಿಂದಿ ಸಪ್ತಾಹ-ಹಿಂದಿ ದಿವಸ ಎಂಬ ಕಾರ್ಯಕ್ರಮಗಳ ಮೂಲಕ ಇತರ ಭಾಷಿಕರಿಗೆ ಹಿಂದಿ ಕಲಿತು, ಹಿಂದಿಯನ್ನು ಮಾತ್ರ ಬಳಸುವಂತೆ ತಾಕೀತು ಮಾಡುವುದು, ಇದಕ್ಕಾಗಿ ಬಹುಮಾನ-ವಿಶೇಷ ಭತ್ಯೆಗಳನ್ನು ನೀಡುವುದು ಇಂಥ ಹತ್ತು ಹಲವು ರೀತಿಯ ಕುತಂತ್ರಗಳು ವ್ಯವಸ್ಥಿತವಾಗಿ ಕೇಂದ್ರ ಸರ್ಕಾರದ ಮೂಗಿನ ಅಡಿಯಲ್ಲೇ ನಡೆಯುತ್ತಿವೆ.

ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯಾಗಿದ್ದೇ ಆಯಾ ಭಾಷಿಕ ಸಮುದಾಯಗಳು ಆತ್ಮಗೌರವದಿಂದ ತಮ್ಮ ಹಕ್ಕುಗಳನ್ನು ಚಲಾಯಿಸುವಂತಾಗಬೇಕು, ಈ ಒಕ್ಕೂಟದ ಎಲ್ಲ ರಾಜ್ಯಗಳು ಸಮಾನ ಹಕ್ಕು-ಅವಕಾಶಗಳನ್ನು ಪಡೆಯುವಂತಾಗಬೇಕು ಎಂಬ ಉದ್ದೇಶದಿಂದ. ಹೀಗಿರುವಾಗ ಹಿಂದಿಯನ್ನು ಒಳದಾರಿಯಲ್ಲಿ ತಂದು ತುರುಕುತ್ತ ಹೋದರೆ ಅದನ್ನು ನೋಡಿಕೊಂಡು ನಾವು ಸುಮ್ಮನಿರಬೇಕೆ? ಹಿಂದಿ ಭಾಷೆಯ ವಿರುದ್ಧ ನಮಗೆ ಯಾವ ವಿರೋಧವೂ ಇಲ್ಲ, ದ್ವೇಷವೂ ಇಲ್ಲ. ಹಿಂದಿಯೂ ದೇಶದ ೨೨ ಭಾಷೆಗಳ ಹಾಗೆ ಒಂದು ಭಾಷೆ. ಆ ಭಾಷೆಯನ್ನು ತುಸು ಹೆಚ್ಚು ಮಂದಿ ಮಾತನಾಡುವವರು ಇದ್ದಾರೆ ಎಂಬ ಕಾರಣಕ್ಕೆ ಎಲ್ಲ ದೇಶಭಾಷೆಗಳನ್ನು ನಾಶ ಮಾಡಿ ಅದೊಂದೇ ಭಾಷೆಯನ್ನು ಒಪ್ಪಿಕೊಳ್ಳುವ ಅಗತ್ಯವಾದರೂ ಏನಿದೆ? ಹಿಂದಿ ಇತ್ತೀಚಿಗೆ ಹುಟ್ಟಿಕೊಂಡ ಭಾಷೆ. ಕನ್ನಡ, ತಮಿಳು, ತೆಲುಗು ಭಾಷೆಗಳ ಹಾಗೆ ಸಾವಿರಾರು ವರ್ಷಗಳ ಇತಿಹಾಸವಿರುವ ಶಾಸ್ತ್ರೀಯ ಭಾಷೆ ಏನಲ್ಲ. ನಿಜವಾದ ಒಕ್ಕೂಟ ಧರ್ಮವೆಂದರೆ ದೇಶದ ಎಲ್ಲ ಭಾಷೆಗಳನ್ನೂ ಸಮಾನವಾಗಿ ಕಾಣುವುದು ಮತ್ತು ಎಲ್ಲ ಭಾಷಿಕ ಸಮುದಾಯಗಳಿಗೆ ಸಮಾನ ಹಕ್ಕು-ಅವಕಾಶಗಳನ್ನು ಒದಗಿಸುವುದು. ಇದನ್ನು ಬಿಟ್ಟು ಕಾಯ್ದೆ ಕಾನೂನುಗಳ ಒಳದಾರಿಗಳನ್ನು ಬಳಸಿ ಒಂದು ಭಾಷೆಯ ಉದ್ಧಾರಕ್ಕೆ, ಪ್ರಸಾರಕ್ಕೆ ಹಣ ಕೊಡುವುದು, ಅದಕ್ಕಾಗಿ ಅಧಿಕಾರ ಚಲಾಯಿಸುವುದು ಎಷ್ಟು ಸರಿ?

ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಡೆಯುತ್ತಿರುವ ಈ ಅನೈತಿಕ ಹಿಂದಿ ಹೇರಿಕೆ ವಿರುದ್ಧ ದೇಶದ ಎಲ್ಲ ಭಾಷಿಕ ಸಮುದಾಯಗಳೂ ಒಂದಾಗುತ್ತಿವೆ. ಸಂವಿಧಾನದಲ್ಲಿ ಇಂಗ್ಲಿಷ್ ಮತ್ತು ಹಿಂದಿಗೆ ನೀಡಿರುವ ಅಧಿಕೃತ ಸಂವಹನ ಭಾಷೆಯ ಸ್ಥಾನಮಾನವನ್ನು ಸಂವಿಧಾನದ ಪರಿಚ್ಛೇದ ೮ರಲ್ಲಿ ಉಲ್ಲೇಖಿಸಲಾಗಿರುವ ಎಲ್ಲ ೨೨ ಭಾಷೆಗಳಿಗೂ ವಿಸ್ತರಿಸಬೇಕು ಎಂಬ ಬೇಡಿಕೆ ಎಲ್ಲ ಕಡೆಗಳಿಂದಲೂ ಮೊಳಗುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ಕೂಡ ಈ ವಿಷಯವನ್ನು ಆದ್ಯತೆಯಾಗಿ ಪರಿಗಣಿಸಿ ಕನ್ನಡಕ್ಕೂ ಅಧಿಕೃತ ಸಂಪರ್ಕ ಭಾಷೆಯ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಚಳವಳಿ ಆರಂಭಿಸಿದೆ. ಇದು ಕಠಿಣ ಮತ್ತು ದೂರದ ಹಾದಿ ಎಂಬುದು ನಮಗೆ ಗೊತ್ತಿದೆ. ಆದರೆ ಒಕ್ಕೂಟದ ಅಖಂಡತೆಗೆ ಯಾವತ್ತೂ ಧಕ್ಕೆಯಾಗಿರುವ ಈ ಭಾಷಾನೀತಿಯನ್ನು ನಾವು ಬದಲಿಸಲೇಬೇಕಾಗಿದೆ. ದೇಶದ ಅಖಂಡತೆಯನ್ನು ಉಳಿಸಿಕೊಳ್ಳಬೇಕಾಗಿದೆ.

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

ಒಡೆದು ಆಳುವುದೇ ಹಿಂದಿ ಸಾಮ್ರಾಜ್ಯಶಾಹಿಯ ಕುತಂತ್ರ

ಕಳೆದ ಆರು ವಾರಗಳಿಂದ ನಾಡಿನ ಹೆಮ್ಮೆಯ ದಿನಪತ್ರಿಕೆಗಳಲ್ಲಿ ಒಂದಾದ ಸಂಯುಕ್ತ ಕರ್ನಾಟಕದಲ್ಲಿ ‘ನಾಡುನುಡಿ’ ಎಂಬ ಹೆಸರಿನಲ್ಲಿ ಅಂಕಣವೊಂದನ್ನು ಬರೆಯುತ್ತಿದ್ದೇನೆ. ಪ್ರತಿ ಭಾನುವಾರದ ಸಂಯುಕ್ತ ಕರ್ನಾಟಕದ ಸಂಪಾದಕೀಯ ಪುಟದಲ್ಲಿ ಈ ಅಂಕಣ ಪ್ರಕಟಗೊಳ್ಳುತ್ತಿದೆ. ಕಳೆದ ವಾರ ಹಿಂದಿಹೇರಿಕೆ ಬಗ್ಗೆ ನಾನು ಈ ಅಂಕಣದಲ್ಲಿ ಪ್ರಸ್ತಾಪಿಸಿದ್ದೆ. ಹಲವಾರು ಮಂದಿ ಆಶ್ಚರ್ಯದಿಂದ ಪ್ರತಿಕ್ರಿಯಿಸಿದ್ದಾರೆ. ಕೆಲವರು ನನಗೆ ಕರೆ ಮಾಡಿ, ‘ಗೌಡ್ರೆ, ಇಷ್ಟು ದಿನ ನಾವೂ ಸಹ ಹಿಂದಿಯನ್ನು ರಾಷ್ಟ್ರಭಾಷೆ ಎಂದೇ ಭಾವಿಸಿದ್ದೆವು. ನಾವೆಲ್ಲ ನಮ್ಮ ಶಾಲಾ ಪಠ್ಯಗಳಲ್ಲೂ ಹಾಗೇ ಓದಿಕೊಂಡುಬಂದಿದ್ದೆವು. ನಮ್ಮ ತಪ್ಪು ಕಲ್ಪನೆಗಳೆಲ್ಲ ದೂರವಾದವು. ಹಿಂದಿ ಹೇರಿಕೆಯ ಪರಿಣಾಮಗಳ ಬಗ್ಗೆ ನಿಮ್ಮ ಮಾತುಗಳನ್ನು ಓದಿದ ನಂತರ ಈ ವ್ಯವಸ್ಥಿನ ಸಂಚಿನ ಆಳ-ಅಗಲವೆಲ್ಲ ಪರಿಚಯವಾದಂತಾಯಿತು’ ಎಂದು ಹೇಳಿದರು.

ಭಾಷೆ ಎಂದರೆ ಕೇವಲ ನಮ್ಮ ನಡುವಿನ ಸಂವಹನದ ಸಾಧನ ಅಷ್ಟೆ ಎಂದು ಹಲವರು ಭಾವಿಸಿದ್ದಾರೆ. ಆದರೆ ಭಾಷೆ ಅಂದರೆ ಅಷ್ಟೇ ಅಲ್ಲ, ಅದರಾಚೆಗೂ ಅದರ ಅರ್ಥ-ವ್ಯಾಖ್ಯಾನಗಳು ವಿಸ್ತರಿಸಿಕೊಂಡಿರುತ್ತವೆ. ಭಾಷೆ ಎಂದರೆ ಬದುಕು, ಭಾಷೆ ಎಂದರೆ ಪರಂಪರೆ, ಭಾಷೆ ಎಂದರೆ ಸಂಸ್ಕೃತಿ. ಯಾವುದೇ ನುಡಿಯ ಒಂದು ಶಬ್ದ ಸತ್ತುಹೋಯಿತೆಂದರೆ ಆ ಭಾಷಾ ಸಮುದಾಯದ ಸಂಸ್ಕೃತಿಯ ತಂತು ಕಡಿದುಹೋಯಿತು ಎಂದೇ ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ಎಲ್ಲ ನುಡಿಗಳೂ ಉಳಿದುಕೊಳ್ಳಬೇಕು. ಎಲ್ಲ ನುಡಿಗಳಿಗೂ ಸಮಾನ ಗೌರವವಿರಬೇಕು. ನುಡಿಯನ್ನು ಗೌರವಿಸುವೆಂದರೆ ಆ ನುಡಿಯನ್ನಾಡುವ ಜನರನ್ನು ಗೌರವಿಸಿದಂತೆ.

ಆದರೆ ಹಿಂದಿ ಸಾಮ್ರಾಜ್ಯಶಾಹಿಗೆ ಜಾಣ ಕುರುಡು. ಅದು ಇಡೀ ದೇಶವನ್ನೇ ವ್ಯಾಪಿಸಿಕೊಳ್ಳಬಯಸುತ್ತದೆ. ಇಡೀ ದೇಶಕ್ಕೆ ಒಂದು ನುಡಿ ಇರಬೇಕು ಎಂದು ವಾದಿಸುತ್ತದೆ. ಹಿಂದಿಗೂ ರಾಷ್ಟ್ರೀಯತೆಗೂ ಇಲ್ಲದ ಸಂಬಂಧವನ್ನು ಕಲ್ಪಿಸುತ್ತದೆ. ಹಿಂದಿಯೊಂದೇ ದೇಶವನ್ನು ಒಂದುಗೂಡಿಸುತ್ತದೆ ಎಂದು ಸುಳ್ಳು ಸುಳ್ಳೇ ಹೇಳುತ್ತದೆ. ಹಿಂದಿ ಸಾಮ್ರಾಜ್ಯಶಾಹಿ ಬಹುತ್ವದ ವಿರೋಧಿ. ‘ವಿವಿಧತೆಯಲ್ಲಿ ಏಕತೆ’ ಎಂದು ಸಾರುವ ಈ ಭಾರತ ಒಕ್ಕೂಟದ ಮೂಲಮಂತ್ರದ ವಿರೋಧಿ. ಈ ಒಕ್ಕೂಟ ಬಹುಸಂಸ್ಕೃತಿ, ಬಹುಭಾಷೆ, ಬಹುಧರ್ಮಗಳ ನಾಡಾಗಿಯೇ ಉಳಿದಿರುವವರೆಗೆ ಇದಕ್ಕೆ ಭವಿಷ್ಯ. ದೇಶದ ಎಲ್ಲ ಭಾಷೆಗಳನ್ನು, ಸಂಸ್ಕೃತಿಗಳನ್ನು ಹೊಸಕಿ ಹಾಕಿ ಒಂದು ಭಾಷೆ, ಒಂದು ಸಂಸ್ಕೃತಿಯನ್ನು ಹೇರುವ ಪ್ರಕ್ರಿಯೆ ಭಾರತ ಒಕ್ಕೂಟಕ್ಕೆ ಆತ್ಮಹತ್ಯಾಕಾರಿಯಾದ ನಿಲುವು. ಇದನ್ನು ದಿಲ್ಲಿಯಲ್ಲಿ ಕುಳಿತ ಜನರು ಅರ್ಥ ಮಾಡಿಕೊಳ್ಳಬೇಕಿದೆ.

ಈ ಚರ್ಚೆಯ ಸಂದರ್ಭದಲ್ಲೇ ಗೋದಾವರಿ-ಕೃಷ್ಣಾ ನದಿಗಳ ಜೋಡಣೆ ಕಾರ್ಯ ಆಂಧ್ರಪ್ರದೇಶದಲ್ಲಿ ಉದ್ಘಾಟನೆಯಾಗಿದೆ. ಕರ್ನಾಟಕಕ್ಕೆ ಮತ್ತೊಂದು ಆಘಾತವಾಗಿದೆ. ಮಂಗಳವಾರ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಕರೆದಿದ್ದ ವಿವಿಧ ರಾಜ್ಯಗಳ ಆರನೇ ಜಲಸಂಪನ್ಮೂಲ ಸಚಿವರ ಸಭೆಯಲ್ಲಿ ಕರ್ನಾಟಕ ಸರ್ಕಾರ ಗೋದಾವರಿ-ಕೃಷ್ಣಾ ನದಿಗಳ ಜೋಡಣೆ ವಿಷಯದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ತನ್ನ ಪ್ರತಿಭಟನೆಯನ್ನು ಸಲ್ಲಿಸಿದೆ. ಗೋದಾವರಿ ನದಿ ತಿರುವು ಯೋಜನೆಯಿಂದ ೧೩೦೦ ಟಿಎಂಸಿ ಹೆಚ್ಚುವರಿ ನೀರು ಲಭ್ಯವಾಗುವ ಕುರಿತು ೧೯೮೦ರಲ್ಲಿ ಸಿದ್ಧಗೊಂಡ ಯೋಜನಾ ವರದಿಯಲ್ಲಿ ಅಂದಾಜು ಮಾಡಲಾಗಿತ್ತು. ಈ ಪೈಕಿ ಕರ್ನಾಟಕ ರಾಜ್ಯದ ಪಾಲು ೨೮೩ ಟಿಎಂಸಿ ( ೧೯೬ ಟಿಎಂಸಿ ಕೃಷ್ಣಾ ನದಿ ಪಾತ್ರ ಮತ್ತು ೮೭ ಟಿಎಂಸಿ ಕಾವೇರಿ ನದಿ ಪಾತ್ರ) ಎಂದು ಅಂದಾಜಿಸಲಾಗಿತ್ತು. ೨೦೦೦ದಲ್ಲಿ ಆದ ಪರಿಷ್ಕೃತ ಅಂದಾಜಿನಲ್ಲಿ ಹೆಚ್ಚುವರಿಯಾಗಿ ಬಳಕೆಯಾಗುವ ನೀರು ೯೨೫ ಟಿಎಂಸಿ ಎಂದು ಅಂದಾಜು ಮಾಡಿದ್ದರಿಂದಾಗಿ ಅದರಲ್ಲಿ ಕರ್ನಾಟಕದ ಪಾಲು ೧೬೪ ಟಿಎಂಸಿ (ಕೃಷ್ಣಾ ೧೦೭ ಟಿಎಂಸಿ, ಕಾವೇರಿ ೫೭ ಟಿಎಂಸಿ) ಎಂದು ಪುನರ್ ಅಂದಾಜು ಮಾಡಲಾಗಿತ್ತು. ಆದರೆ ಮತ್ತೆ ೨೦೧೦ರಲ್ಲಿ ಈ ಯೋಜನೆ ಮತ್ತೆ ಪರಿಷ್ಕೃತಗೊಂಡು ಲಭ್ಯವಾಗುವ ನೀರು ೭೧೮ ಟಿಎಂಸಿ ಎಂದು ಅಂದಾಜು ಮಾಡಲಾಯಿತು. ಇದರಲ್ಲಿ ಕರ್ನಾಟಕದ ಪಾಲು ಸೊನ್ನೆ!

ಇದು ಹೇಗೆ ಸಾಧ್ಯ? ಯಾವುದೇ ನದಿ ತಿರುವು ಯೋಜನೆಗಳಿಂದ ಹೆಚ್ಚುವರಿಯಾಗಿ ಉತ್ಪಾದನೆಯಾಗುವ ನೀರನ್ನು ಜಲನ್ಯಾಯಮಂಡಳಿಗಳ ನಿರ್ದೇಶನದಂತೆ ಸಂಬಂಧಪಟ್ಟ ಎಲ್ಲ ರಾಜ್ಯಗಳು ಹಂಚಿಕೊಳ್ಳಬೇಕಾಗುತ್ತದೆ. ಆದರೆ ಕರ್ನಾಟಕವನ್ನು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಸಂಪೂರ್ಣವಾಗಿ ನಿರ್ಲಕ್ಷಿಸಲು ಹೇಗೆ ಸಾಧ್ಯ? ಕೇಂದ್ರ ಸರ್ಕಾರದ ನಿರ್ದೇಶನವಿಲ್ಲದೆ ಇಂಥ ಅನಾಹುತಕಾರಿ ನಿರ್ಧಾರವನ್ನು ಜಲ ಅಭಿವೃದ್ಧಿ ಸಂಸ್ಥೆ ತೆಗೆದುಕೊಳ್ಳಲು ಸಾಧ್ಯವೇ?
ಈ ದೇಶದಲ್ಲಿ ಇಂಥ ವಿಚಿತ್ರಗಳೆಲ್ಲ ಸಂಭವಿಸುತ್ತವೆ ನೋಡಿ. ಇದೆಲ್ಲವೂ ಆಕಸ್ಮಿಕವಾಗಿ ನಡೆಯುತ್ತಿರುವ ಘಟನಾವಳಿಗಳೂ ಎಂದು ಭಾವಿಸಬೇಕಾಗಿಲ್ಲ. ನಾವೀಗ ಆಂಧ್ರಪ್ರದೇಶದ ಜತೆ ಮತ್ತೊಂದು ಸುತ್ತಿನ ಜಗಳ ಆಡಬೇಕಿದೆ. ಕೃಷ್ಣಾ ನದಿ ನೀರು ಹಂಚಿಕೆ ವಿಷಯವಾಗಿ ನಾವು ಜಗಳವಾಡಿದ್ದಾಗಿದೆ. ಈಗ ಗೋದಾವರಿ ನದಿ ತಿರುವು ವಿಷಯದಲ್ಲೂ ಒಂದು ಸಂಘರ್ಷ ಶುರುವಾಗಿದೆ.

ಹಾಗೆ ನೋಡಿದರೆ ಕರ್ನಾಟಕಕ್ಕೆ ಜಗಳಗಂಟ ರಾಜ್ಯ ಎಂಬ ಬಿರುದು ಎಂದೋ ಪ್ರಾಪ್ತವಾಗಿಹೋಗಿದೆ. ನೆರೆಯ ಪ್ರತಿ ರಾಜ್ಯಗಳ ಜತೆಯೂ ನಾವು ಅನಿವಾರ್ಯವಾಗಿ ಸಂಘರ್ಷ ನಡೆಸಬೇಕಿದೆ. ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ತಮಿಳುನಾಡಿನ ಜತೆ ನಮ್ಮ ಸಂಘರ್ಷಕ್ಕೆ ಬಹುದೊಡ್ಡ ಇತಿಹಾಸವಿದೆ. ಕಾವೇರಿ ನದಿ ನೀರಿನ ವಿಷಯದಲ್ಲಿ ತುಂಬ ಸರಳವಾಗಿ ಎರಡೂ ರಾಜ್ಯಗಳು ಕುಳಿತು ಇತ್ಯರ್ಥ ಮಾಡಿಕೊಳ್ಳಬಹುದಾದ ಸಮಸ್ಯೆಯನ್ನು ನ್ಯಾಯಮಂಡಳಿ ಸ್ಥಾಪನೆಯೊಂದಿಗೆ ದೊಡ್ಡದನ್ನಾಗಿ ಮಾಡಲಾಯಿತು. ಕಾವೇರಿ ಎರಡೂ ರಾಜ್ಯಗಳಲ್ಲಿ ಎಷ್ಟು ದೂರ ಹರಿಯುತ್ತಾಳೆ, ಎರಡೂ ರಾಜ್ಯಗಳಲ್ಲಿ ಎಷ್ಟು ನೀರು ಉತ್ಪಾದನೆಯಾಗುತ್ತದೆ ಎಂಬ ಆಧಾರದಲ್ಲಿ ನೀರು ಹಂಚಿಕೆಯನ್ನು ಮಾಡಿಕೊಳ್ಳಬಹುದಿತ್ತು. ಸರಳ ಅಂಕಗಣಿತವೊಂದೇ ಇದಕ್ಕೆ ಸಾಕಿತ್ತು. ಆದರೆ ಇದಕ್ಕೊಂದು ನ್ಯಾಯಮಂಡಳಿ ರಚನೆಯಾಗಿ ಅದು ಅನ್ಯಾಯದ ತೀರ್ಪು ಕೊಡುವಂತೆ ಮಾಡಿದ್ದು ಕೇಂದ್ರ ಸರ್ಕಾರ. ಕುಡಿಯುವ ನೀರಿನ ವಿಷಯದಲ್ಲಿ ಯಾವ ರಾಜ್ಯವೂ ಕಿರಿಕಿರಿ ಮಾಡಬಾರದು ಎಂದು ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟು, ವಿವಿಧ ಜಲನ್ಯಾಯಮಂಡಳಿಗಳು ಹೇಳುತ್ತವೆ. ಆದರೆ ಕೇವಲ ೭.೫ ಟಿಎಂಸಿ ಕುಡಿಯುವ ನೀರಿನ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ತಡೆ ನೀಡಿತು. ಯೋಜನೆ ನೆನೆಗುದಿಗೆ ಬಿದ್ದಿತು. ಹೀಗಾಗಿ ಗೋವಾ ಜತೆಯಲ್ಲಿ ಯಕಶ್ಚಿತ್ ಕುಡಿಯುವ ನೀರಿನ ವಿಷಯದಲ್ಲಿ ದೊಡ್ಡ ಸಂಘರ್ಷವನ್ನೇ ನಡೆಸಬೇಕಿದೆ.

ಇದೆಲ್ಲವನ್ನು ಗಮನಿಸಿದರೆ ಕೇಂದ್ರದಲ್ಲಿ ಆಳುವ ಸರ್ಕಾರಗಳಿಗೆ ದಕ್ಷಿಣದ ರಾಜ್ಯಗಳು ನೆಮ್ಮದಿಯಿಂದ ಇರುವುದೇ ಬೇಡವಾಗಿದೆಯೇನೋ ಎನಿಸುತ್ತದೆ. ದಕ್ಷಿಣದ ರಾಜ್ಯಗಳೆಂದರೆ ಹಿಂದಿಯೇತರ ರಾಜ್ಯಗಳು. ಹಿಂದಿ ರಾಜಕಾರಣಿಗಳು ಮತ್ತು ಅಧಿಕಾರಕ್ಕಾಗಿ ಹಿಂದಿಯನ್ನರನ್ನು ಓಲೈಸುವ ರಾಜಕಾರಣಿಗಳು ಸ್ವಾತಂತ್ರ್ಯಾನಂತರ ದಕ್ಷಿಣದ ಭಾರತದ ರಾಜ್ಯಗಳು ನೆಮ್ಮದಿಯಾಗಿ ಇರಲು ಬಿಟ್ಟೇ ಇಲ್ಲ. ಪದೇಪದೇ ರಾಜ್ಯರಾಜ್ಯಗಳ ನಡುವೆ ಜಗಳ ತಂದಿಡುವುದು, ನ್ಯಾಯಮಂಡಳಿಗಳ ಹೆಸರಿನಲ್ಲಿ ಅನ್ಯಾಯದ ತೀರ್ಪುಗಳನ್ನು ಹೇರುವುದು, ಜನರನ್ನು ರೊಚ್ಚಿಗೆಬ್ಬಿಸುವುದು, ಕಾನೂನು ಸುವ್ಯವಸ್ಥೆ ಸಮಸ್ಯೆಯಾದರೆ ಮಿಲಿಟರಿ ತಂದು ಸರಿ ಮಾಡುತ್ತೇವೆ ಎಂಬ ಗುಮ್ಮನನ್ನು ಬಿಡುವುದು ನಡೆದುಕೊಂಡೇ ಬಂದಿದೆ.

ಒಡೆದು ಆಳುವ ನೀತಿ ಬ್ರಿಟಿಷರು ದೇಶದಲ್ಲಿ ಬಿಟ್ಟು ಹೋದ ಪಳೆಯುಳಿಕೆ. ಸ್ವಾತಂತ್ರ್ಯಾನಂತರ ಈ ದೇಶವನ್ನು ಆಳಿರುವವರೆಲ್ಲ ಹಿಂದಿ ಸಾಮ್ರಾಜ್ಯಶಾಹಿಗಳು ಅಥವಾ ಅವರ ಗುಲಾಮರು. ಈ ಜನರು ಕೂಡ ಬ್ರಿಟಿಷರಂತೆ ಒಡೆದು ಆಳುವ ನೀತಿಯನ್ನೇ ಪಾಲಿಸುತ್ತ ಬಂದಿದ್ದಾರೆ. ೧೯೬೫ರ ಹಿಂದಿ ಸಾಮ್ರಾಜ್ಯಶಾಹಿಯ ವಿರುದ್ಧದ ದಕ್ಷಿಣ ರಾಜ್ಯಗಳ ದಂಗೆಯ ನಂತರವಂತೂ ಈ ರಾಜ್ಯಗಳ ನಡುವೆಯೇ ಜಗಳ ತಂದಿಟ್ಟು ಆಟ ನೋಡುವುದು ಈ ಜನರ ಕುತಂತ್ರವಾಗಿದೆ. ಈ ಕುತಂತ್ರಕ್ಕೆ ಪದೇಪದೇ ಬಲಿಯಾಗುತ್ತಿರುವುದು ಕರ್ನಾಟಕ ರಾಜ್ಯ.

ಈಗಲೂ ಅಷ್ಟೆ, ಗೋದಾವರಿ ನದಿ ತಿರುವಿನ ವಿಷಯದಲ್ಲಿ ನಾವು ಆಂಧ್ರಪ್ರದೇಶವನ್ನು ಕೇಳುವುದೇನಿದೆ? ಸಮಗ್ರ ಪರಿಷ್ಕೃತ ಯೋಜನಾ ವರದಿಯನ್ನು ಸಿದ್ಧಗೊಳಿಸಬೇಕಿರುವುದು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ. ಇದು ಕೇಂದ್ರ ಸರ್ಕಾರದ ಮೂಗಿನ ನೇರಕ್ಕೆ ಕೆಲಸ ಮಾಡುವ ಸಂಸ್ಥೆ. ಇದು ಕರ್ನಾಟಕದ ಪಾಲನ್ನೇ ಇಲ್ಲವಾಗಿ ಮಾಡುತ್ತದೆ ಎಂದರೆ ಏನರ್ಥ? ಏನು ಇದರ ಉದ್ದೇಶ? ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ ಅಧಿಕಾರಿಗಳ ತಲೆಯಲ್ಲಿ ಮೆದುಳು ಇದೆಯೋ ಅಥವಾ ಮಣ್ಣು ಇದೆಯೋ? ಈಗ ಕರ್ನಾಟಕವೇನೋ ತನ್ನ ಪ್ರತಿಭಟನೆಯನ್ನು ದಾಖಲು ಮಾಡಿದೆ. ಕೇಂದ್ರ ಸಚಿವೆ ಉಮಾಭಾರತಿ ಕರ್ನಾಟಕದ ತಕರಾರನ್ನು ಪರಿಗಣಿಸುವುದಾಗಿ ಹೇಳಿದ್ದಾರೆ. ಆದರೆ ನಮ್ಮ ಅಳಲನ್ನು ನಿಜವಾಗಿಯೂ ಕೇಳುವ ವ್ಯವಧಾನ ಕೇಂದ್ರ ಸರ್ಕಾರಕ್ಕಿದೆಯೇ?
ಕೇಂದ್ರ ಸರ್ಕಾರ ಈಗಾಗಲೇ ಗಂಗಾ ನದಿ ಶುದ್ಧೀಕರಣಕ್ಕಾಗಿ ಇಪ್ಪತ್ತು ಸಾವಿರ ಕೋಟಿ ರುಪಾಯಿಗಳನ್ನು ತನ್ನ ಬಜೆಟ್‌ನಲ್ಲಿ ನೀಡಲು ತೀರ್ಮಾನಿಸಿದೆ. ಉತ್ತರ ಭಾರತೀಯರ ಈ ಕನಸಿನ ಯೋಜನೆಗೆ ಬರುವ ಐದು ವರ್ಷಗಳಲ್ಲಿ ಇಡೀ ದೇಶದ ಜನರ ತೆರಿಗೆ ಹಣ ಖರ್ಚಾಗಲಿದೆ. ದಕ್ಷಿಣ ಭಾರತದ ಯಾವುದಾದರೂ ನದಿಯ ವಿಷಯದಲ್ಲಿ ಕೇಂದ್ರ ಸರ್ಕಾರ ಇಂಥ ಯೋಜನೆಯೊಂದನ್ನು ಹಮ್ಮಿಕೊಳ್ಳುವ ಬಗ್ಗೆ ನಾವು ಕನಸು ಮನಸಿನಲ್ಲಾದರೂ ಕಲ್ಪಿಸಿಕೊಳ್ಳಲು ಸಾಧ್ಯವೇ? ‘ನವಾಮಿ ಗಂಗೆ’ಗಾಗಿ ಇಪ್ಪತ್ತು ಸಾವಿರ ಕೋಟಿ ರುಪಾಯಿ ಖರ್ಚು ಮಾಡುವ ಕೇಂದ್ರ ಸರ್ಕಾರ ಇಲ್ಲಿ ನಮ್ಮ ದುಡ್ಡಿನಲ್ಲಿ ನಾವೇ ಕಳಸಾ ಬಂಡೂರಿ ಯೋಜನೆ ಮಾಡಿಕೊಂಡು ಏಳುವರೆ ಟಿಎಂಸಿ ಕುಡಿಯುವ ನೀರು ಪಡೆಯುತ್ತೇವೆ ಎಂದರೆ ಅದಕ್ಕಾಗಿ ಒಂದು ಜಲನ್ಯಾಯ ಮಂಡಳಿ ರಚಿಸಿ ಕೈ ತೊಳೆದುಕೊಂಡು ಜಗಳ ತಂದಿಡುತ್ತದೆ. ಅತ್ತ ಗೋದಾವರಿ ನದಿ ತಿರುವು ಯೋಜನೆಯ ಕರ್ನಾಟಕದ ಪಾಲನ್ನು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ ಮೂಲಕ ತಿರಸ್ಕರಿಸಿ ಕನ್ನಡಿಗರ ಬೆನ್ನಿಗೆ ಚೂರಿ ಇರಿಯುತ್ತದೆ.

ಹಿಂದಿ ಸಾಮ್ರಾಜ್ಯಶಾಹಿ ಕೇವಲ ಭಾಷೆಯ ವಿಷಯದಲ್ಲಿ ಮಾತ್ರವಲ್ಲ, ಭಾಷಾ ಸಮುದಾಯಗಳನ್ನು ಹೇಗೆ ಕಾಲ್ಚೆಂಡಾಗಿ ಬಳಸಿಕೊಂಡು ಆಟವಾಡುತ್ತಿದೆ ನೋಡಿ. ಈ ಸಂಕಟದ ಸ್ಥಿತಿಯಲ್ಲಿ ಒಂದಾಗಿ ಹೋರಾಡಬೇಕಿದ್ದ ದಕ್ಷಿಣದ ರಾಜ್ಯಗಳು ಪರಸ್ಪರ ಜಗಳ, ಸಂಘರ್ಷ ನಡೆಸಿಕೊಂಡು ಹೈರಾಣಾಗಿ ಹೋಗಿವೆ. ಇದಕ್ಕಿಂತ ವ್ಯಂಗ್ಯ ಮತ್ತೊಂದಿರಲು ಸಾಧ್ಯವೇ?

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

Monday, 7 September 2015

ಕಲಬುರ್ಗಿ ಹತ್ಯೆ: ಕನ್ನಡ ಸಂಸ್ಕೃತಿಯ ಭೀಕರ ಕಗ್ಗೊಲೆ



ಆಗಸ್ಟ್ ೩೦, ಕನ್ನಡ ನಾಡು ಮಾತ್ರವಲ್ಲ, ಇಡೀ ದೇಶಕ್ಕೇ ಕರಾಳ ದಿನ. ಕನ್ನಡದ ಹೆಸರಾಂತ ಸಂಶೋಧಕ, ವಿದ್ವಾಂಸ, ಸಾಹಿತಿ, ಸಂಸ್ಕೃತಿ ಚಿಂತಕ ಡಾ. ಎಂ.ಎಂ. ಕಲಬುರ್ಗಿಯವರನ್ನು ಅವರ ಮನೆಯಲ್ಲೇ ದಾರುಣವಾಗಿ ಹತ್ಯೆ ಮಾಡಲಾಯಿತು. ಇದು ನಿಜಕ್ಕೂ ಆಘಾತಕಾರಿ. ಈ ಕೊಲೆಯ ಸುದ್ದಿ ಸುದ್ದಿವಾಹಿನಿಗಳಲ್ಲಿ ಬಿತ್ತರವಾಗುತ್ತಿದ್ದಾಗ ಅದನ್ನು ಮೊದಮೊದಲು ನಂಬಲು ಸಾಧ್ಯವಾಗುತ್ತಲೇ ಇರಲಿಲ್ಲ. ಹೇಗಾದರೂ ಈ ಸುದ್ದಿ ಸುಳ್ಳಾಗಿರಲಿ ಎಂದು ಪ್ರಾರ್ಥಿಸುತ್ತಿದ್ದೆ. ಆದರೆ ಅದೇ ನಿಜವಾಗಿಹೋಗಿದೆ.

ತಾಲಿಬಾನಿಗಳು, ಲಷ್ಕರ್-ಇ-ತೊಯಿಬಾಗಳು, ಅಲ್ ಖೈದಾಗಳು ಇಂಥ ಭಯೋತ್ಪಾದಕ ಕೃತ್ಯಗಳನ್ನು ನಡೆಸಿರುವುದನ್ನು ಗಮನಿಸಿದ್ದೇವೆ. ತಮ್ಮ ವಿಚಾರಗಳನ್ನು ವಿರೋಧಿಸುವ ಸಾಹಿತಿಗಳು, ಪತ್ರಕರ್ತರನ್ನು ಗುಂಡಿಟ್ಟು ಕೊಲ್ಲುವ ವಿದ್ಯಮಾನಗಳು ಪಾಕಿಸ್ತಾನ, ಅಫಘಾನಿಸ್ತಾನ, ಇರಾಕ್, ಸಿರಿಯಾದಂಥ ದೇಶಗಳಲ್ಲಿ ಮಾಮೂಲಿ ವಿದ್ಯಮಾನ. ಆದರೆ ಇದು ಭಾರತ ದೇಶಕ್ಕೂ ಕಾಲಿಟ್ಟುಬಿಟ್ಟಿದೆ. ನೆರೆಯ ಮಹಾರಾಷ್ಟ್ರದಲ್ಲಿ ಮೂಢ ನಂಬಿಕೆಗಳ ವಿರುದ್ಧ ಹೋರಾಡುತ್ತಿದ್ದ ನರೇಂದ್ರ ದಾಬೋಲ್ಕರ್ ಅವರನ್ನು ಎರಡು ವರ್ಷಗಳ ಹಿಂದೆ ಕಲಬುರ್ಗಿಯವರನ್ನು ಕೊಂದ ಮಾದರಿಯಲ್ಲೇ ಗುಂಡಿಟ್ಟು ಕೊಲ್ಲಲಾಯಿತು. ನಂತರ ಗೋವಿಂದ ಪನ್ಸಾರಿಯವರನ್ನು ಇದೇ ರೀತಿ ಕೊಲ್ಲಲಾಯಿತು. ಈಗ ಈ ಹೀನಪರಂಪರೆ ಕರ್ನಾಟಕಕ್ಕೂ ಕಾಲಿಟ್ಟಿದೆ. ಅದೂ ಕೂಡ ಕನ್ನಡ ಸಾಹಿತ್ಯ-ಸಂಸ್ಕೃತಿಯ ತವರು ಮನೆ ಎನಿಸಿಕೊಂಡಿರುವ ಧಾರವಾಡದಲ್ಲಿ ನಡೆದಿದೆ.

ಹಿಂದೆ ಒಂದು ಮಾತಿತ್ತು. ಧಾರವಾಡದಲ್ಲಿ ನಿಂತು ಒಂದು ಕಲ್ಲು ಮೇಲಕ್ಕೆ ಒಗದರೆ ಅದು ಹೋಗಿ ಯಾವುದಾದರೂ ಸಾಹಿತಿಯ ಮನೆಯ ಮೇಲೇ ಬೀಳುತ್ತದೆ ಎಂದು ಹೇಳಲಾಗುತ್ತಿತ್ತು. ಅದರರ್ಥ ಧಾರವಾಡ ಸಂಸ್ಕೃತಿವಂತರಿಂದಲೇ ತುಂಬಿ ತುಳುಕುತ್ತಿದೆ ಎಂದು. ಇಂಥ ಧಾರವಾಡದಲ್ಲಿ ನಾಡಿನ ಹೆಮ್ಮೆಯ ಸಂಸ್ಕೃತಿ ಚಿಂತಕರನ್ನು ಪುಡಿ ರೌಡಿಯನ್ನು ಕೊಲ್ಲುವ ಹಾಗೆ ಕೊಲ್ಲಲಾಗಿದೆ ಎಂದರೆ ಹೇಗೆ ನಂಬುವುದು?

ರಾಷ್ಟ್ರಕವಿ ಕುವೆಂಪು ಅವರು ಈ ನಾಡನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಕರೆದಿದ್ದರು. ಎಲ್ಲಿದೆ ಆ ಶಾಂತಿ. ಒಬ್ಬ ಅಹಿಂಸಾವಾದಿ ಸಜ್ಜನ ಸಾಹಿತಿಯನ್ನು ಮನೆಗೆ ನುಗ್ಗಿ ಹಣೆಗೆ ಗುಂಡಿಟ್ಟು ಕೊಂದು ಹೋಗುತ್ತಾರೆಂದರೆ ಈ ನಾಡಿಗೇನಾಗಿ ಹೋಯಿತು? ‘ದಯವೇ ಧರ್ಮದ ಮೂಲವಯ್ಯ’ ಎಂದರು ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರು. ಆದರೆ ಎಲ್ಲಿದೆ ದಯೆ, ಕರುಣೆ, ಸಹಬಾಳ್ವೆ, ಸಾಮರಸ್ಯ?

ನಿಜ, ಕಲಬುರ್ಗಿಯವರ ಹತ್ಯೆಯ ಕುರಿತ ತನಿಖೆಯನ್ನು ಪೊಲೀಸರು ನಡೆಸುತ್ತಿರುವುದರಿಂದ ಹತ್ಯೆಗೆ ಇರಬಹುದಾದ ಕಾರಣಗಳ ಬಗ್ಗೆ ಈಗಲೇ ಒಂದು ತೀರ್ಮಾನಕ್ಕೆ ಬರಲಾಗದು. ಗುಂಡಿನೇಟು ತಿಂದು ಅಸು ನೀಗಿರುವವರು ಯಾವುದೋ ರೌಡಿಯಲ್ಲ, ಸಮಾಜ ಘಾತುಕ ಅಲ್ಲ. ಈ ನಾಡು ಕಂಡ ಹೆಮ್ಮೆಯ ಸಂಶೋಧಕ. ಮಾತ್ರವಲ್ಲ ಕನ್ನಡ ಸಂಸ್ಕೃತಿ, ಸಾಹಿತ್ಯ, ಜಾನಪದ, ಇತಿಹಾಸ, ಛಂದಸ್ಸು, ಶಾಸನ, ಹಸ್ತಪ್ರತಿ ಶಾಸ್ತ್ರ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ದಶಕಗಟ್ಟಲೆ ದುಡಿದು ಕನ್ನಡ ಸಾಂಸ್ಕೃತಿಕ ಜಗತ್ತನ್ನು ಬೆಳೆಸಿದ ಧೀಮಂತ ಸಾಹಿತಿ. ಕನ್ನಡ ಅಧ್ಯಯನ ಪೀಠದ ಉಪನ್ಯಾಸಕರಾಗಿ, ಪ್ರವಾಚಕರಾಗಿ, ಬಸವ ಪೀಠದ ಪ್ರಾಧ್ಯಾಪಕರಾಗಿ, ಕನ್ನಡ ಪೀಠದ ಮುಖ್ಯಸ್ಥರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ ಮಹೋನ್ನತ ವ್ಯಕ್ತಿತ್ವ ಅವರದು. ಹೀಗಿರುವಾಗ ಕಲಬುರ್ಗಿಯವರ ಹತ್ಯೆಯನ್ನು ಸರಳವಾಗಿ ನೋಡುವ ಹಾಗಿಲ್ಲ. ೭೭ರ ಇಳಿ ವಯಸ್ಸಿನಲ್ಲಿರುವ ಕಲಬುರ್ಗಿಯವರ ಹತ್ಯೆಗೆ ಪ್ರಬಲವಾದ ಕಾರಣವಿದ್ದೇ ಇರುತ್ತದೆ. ಅದರ ಶೋಧ ಆಗಲೇಬೇಕು ಮತ್ತು ಇಂಥ ಘಟನೆ ಇನ್ನೆಂದೂ ಈ ನಾಡಿನಲ್ಲಿ ಆಗದಂತೆ ತಡೆಯಲೇಬೇಕು.

ಕಲಬುರ್ಗಿಯವರ ಹತ್ಯೆಗೆ ಕಾರಣಗಳೇನೇ ಇರಲಿ, ಅವರು ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಮೂಲಭೂತವಾದಿಗಳ ಬೆದರಿಕೆಯನ್ನು ಎದುರಿಸುತ್ತಿದ್ದರು ಎಂಬುದು ಸ್ಪಷ್ಟ. ಈ ಬೆದರಿಕೆಗಳ ಹಿನ್ನೆಲೆಯಲ್ಲೇ ಅವರ ನಿವಾಸಕ್ಕೆ ಪೊಲೀಸ್ ಭದ್ರತೆಯನ್ನೂ ನೀಡಲಾಗಿತ್ತು. ಕಲಬುರ್ಗಿಯವರ ವಿನಂತಿಯ ಮೇರೆಗೆ ಈ ಭದ್ರತೆಯನ್ನು ಪೊಲೀಸ್ ಇಲಾಖೆ ಹಿಂದಕ್ಕೆ ಪಡೆದಿತ್ತು. ಅದಕ್ಕೂ ಮುನ್ನ ಇದೇ ಮತಾಂಧ ಶಕ್ತಿಗಳು ಕಲಬುರ್ಗಿಯವರ ಮನೆಯ ಮೇಲೆ ಸೋಡಾ ಬಾಟಲಿಗಳನ್ನು ಎಸೆದಿದ್ದರು. ಕೆಲ ಮತೀಯ ಸಂಘಟನೆಗಳು ಅವರ ಮನೆ ಮುಂದೆ ಪ್ರತಿಭಟನೆಯ ಹೆಸರಲ್ಲಿ ದಾಂಧಲೆಯನ್ನೂ ನಡೆಸಿದ್ದವು. ಇದಲ್ಲದೆ ದಾಬೋಲ್ಕರ್ ಮತ್ತು ಪನ್ಸಾರೆಯವರ ಕೊಲೆ ನಡೆದ ಹಾಗೆಯೇ ಕಲಬುರ್ಗಿಯವರ ಕೊಲೆ ನಡೆದಿದೆ. ಮೂವರೂ ಮೂಲಭೂತವಾದಿಗಳ ಬೆದರಿಕೆಗಳನ್ನು ಎದುರಿಸುತ್ತಿದ್ದರು. ಹೀಗಾಗಿ ಈ ಮೂವರ ವೈಚಾರಿಕ ನಿಲುವನ್ನು ಒಪ್ಪದವರೇ ಈ ಕೊಲೆಗಳನ್ನು ಮಾಡಿರುವ ಸಾಧ್ಯತೆಗಳಿವೆ. ಇಂಥ ಸಂದರ್ಭದಲ್ಲಿ ಈ ನಾಡಿನ ಸಜ್ಜನರು ಸುಮ್ಮನಿದ್ದರೆ ಅದು ಅವರಿಗೆ ಶೋಭೆಯಲ್ಲ, ನಾಗರಿಕ ಸಮಾಜ ತಲೆ ತಗ್ಗಿಸುವಂಥ ಇಂಥ ಘಟನೆಯ ವಿರುದ್ಧ ನಾವೆಲ್ಲರೂ ಸಿಡಿದು ನಿಲ್ಲದಿದ್ದರೆ ಇಂಥ ಹತ್ತಾರು ಕೊಲೆಗಳು, ಹಲ್ಲೆಗಳು ನಮ್ಮ ಕಣ್ಣೆದುರು ನಡೆಯುವ ದುರಂತದ ದಿನಗಳು ಹತ್ತಿರವಾಗಲಿವೆ.

ಡಾ. ಎಂ.ಎಂ.ಕಲಬುರ್ಗಿಯವರ ಹತ್ಯೆಯ ನಂತರ ನಡೆದಿರುವ ವಿದ್ಯಮಾನಗಳನ್ನು ಗಮನಿಸಿದರೆ ದಿಗ್ಬ್ರಮೆಯಾಗುತ್ತದೆ. ಕಲಬುರ್ಗಿಯವರ ಕೊಲೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಮರ್ಥಿಸಿಕೊಳ್ಳುವವರ ಒಂದು ಗುಂಪೇ ಕ್ರಿಯಾಶೀಲವಾಗಿದೆ ಎಂಬ ಮಾತನ್ನು ನಾನು ಕೇಳಿದೆ. ಕಲಬುರ್ಗಿಯವರ ಸಾವನ್ನು ಹಲವರು ಸಂಭ್ರಮಿಸುತ್ತಿದ್ದಾರೆ ಎಂದೂ ಸಹ ಕೇಳಲ್ಪಟ್ಟೆ. ಯಾರದ್ದೇ ಸಾವನ್ನು ಸಂಭ್ರಮಿಸುವುದು ಹೀನ ಮನಸ್ಥಿತಿಯವರಿಗಷ್ಟೆ ಸಾಧ್ಯ. ಅದರಲ್ಲೂ ಕಲಬುರ್ಗಿಯವರ ಸಾವನ್ನು ಸಂಭ್ರಮಿಸುತ್ತಿರುವವರು ಮನುಷ್ಯರೆನಿಸಿಕೊಳ್ಳಲು ಯೋಗ್ಯರಲ್ಲ. ಹಿಂದೆ ಡಾ. ಯು.ಆರ್.ಅನಂತಮೂರ್ತಿಯವರು ಸಾವಿಗೀಡಾದಾಗಲೂ ಇಂಥ ಶಕ್ತಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದವು.

ಈಗ ನಮ್ಮ ಸರ್ಕಾರದ ಮುಂದಿರುವ ಸವಾಲು ಬಹುದೊಡ್ಡದು. ಕಲಬುರ್ಗಿಯವರ ಹತ್ಯೆ ಪ್ರಕರಣವನ್ನು ಈಗ ಸರ್ಕಾರ ಸಿಬಿಐಗೆ ವಹಿಸಿ ಕೈ ತೊಳೆದುಕೊಂಡಿದೆ. ಇಂಥ ನೂರಾರು ಹತ್ಯೆ ಪ್ರಕರಣಗಳ ತನಿಖೆಯನ್ನು ಇದೇ ಸಿಬಿಐ ಸಂಸ್ಥೆ ವರ್ಷಗಟ್ಟಲೆ ಶೈತ್ಯಾಗಾರದಲ್ಲಿ ಇಟ್ಟಿದೆ ಎಂಬುದನ್ನು ನಾವು ಮರೆಯುವಂತಿಲ್ಲ. ಬೇರೇನೂ ಬೇಡ, ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಎರಡು ವರ್ಷಗಳಾದರೂ ತನಿಖೆ ಬಹುತೇಕ ಸತ್ತೇ ಹೋಗಿದೆ. ಇಂಥ ಸಂದರ್ಭದಲ್ಲಿ ಕಲಬುರ್ಗಿಯವರ ಹತ್ಯೆ ಪ್ರಕರಣವನ್ನು ಸಿಬಿಐ ಭೇದಿಸಬಹುದು ಎಂಬ ವಿಶ್ವಾಸ ಯಾರಲ್ಲೂ ಇದ್ದ ಹಾಗಿಲ್ಲ.

ಕಲಬುರ್ಗಿಯವರ ಹತ್ಯೆ ಒಂದು ಆಕಸ್ಮಿಕ ಘಟನೆ ಎಂಬಂತಿದೆ ಸರ್ಕಾರದ ಪ್ರತಿಕ್ರಿಯೆ. ಕಲಬುರ್ಗಿಯವರಿಗೆ ಇದ್ದ ಬೆದರಿಕೆಗಳು ಸರ್ಕಾರಕ್ಕೆ ಗೊತ್ತಿರದ ವಿಷಯವೇನಲ್ಲ. ಕಲಬುರ್ಗಿಯವರು ಪೊಲೀಸ್ ಭದ್ರತೆ ಹಿಂದಕ್ಕೆ ಪಡೆಯಲು ಹೇಳಿದಾಗ ಕನಿಷ್ಠ ಅವರ ಮನೆ ಮುಂದೆ ಒಂದು ಸಿಸಿ ಟಿವಿ ಕ್ಯಾಮೆರಾಗಳನ್ನಾದರೂ ಅಳವಡಿಸಬಹುದಿತ್ತು. ಅದೆಲ್ಲ ಹಾಗಿರಲಿ, ಮುಖ್ಯಮಂತ್ರಿಗಳ ನೇರ ಉಸ್ತುವಾರಿಯಲ್ಲಿ ಇರುವ ಗುಪ್ತಚರ ಇಲಾಖೆ ಏನು ಮಾಡುತ್ತಿದೆ. ಕಲಬುರ್ಗಿ ಹತ್ಯೆಯ ಸಣ್ಣ ಸುಳಿವೂ ಈ ಇಲಾಖೆಗೆ ಗೊತ್ತಾಗಲಿಲ್ಲವೇ?

ಸರ್ಕಾರ ಈಗಲಾದರೂ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದೆ. ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಇಂತಿಂಥ ಸಾಹಿತಿಗಳನ್ನು ಕೊಲ್ಲಲಾಗುವುದು ಎಂದು ಹಿಟ್ ಲಿಸ್ಟ್‌ಗಳನ್ನು ಬಹಿರಂಗವಾಗಿ ನೀಡಲಾಗುತ್ತಿದೆಯಂತೆ. ಸರ್ಕಾರದ ಬಳಿ ಇಂಥ ಶಕ್ತಿಗಳ ಕುರಿತು ಮಾಹಿತಿ ಇಲ್ಲವೆಂದೇನಿಲ್ಲ. ಇಂಥ ಭಯೋತ್ಪಾದಕ ಶಕ್ತಿಗಳನ್ನು ಬಗ್ಗುಬಡಿಯುವುದು ಕಷ್ಟದ ಕೆಲಸವೇನೂ ಅಲ್ಲ. ಆ ಕೆಲಸವನ್ನು ಈಗಲಾದರೂ ಮಾಡಲಿ. ಸಾಹಿತಿಗಳ ಮನೆ ಮುಂದೆ ಪೊಲೀಸ್ ವ್ಯಾನುಗಳನ್ನು ನಿಲ್ಲಿಸುವ ಬದಲು, ಸಮಾಜಘಾತಕರನ್ನು ಹುಡುಕಿ ತಂದು ಜೈಲಿಗಟ್ಟುವ ಕೆಲಸವನ್ನು ಸರ್ಕಾರ ಮಾಡಲಿ.

ಇವತ್ತು ನಮ್ಮೆಲ್ಲರನ್ನು ಕಾಡುತ್ತಿರುವ ಪ್ರಶ್ನೆ ಒಂದೇ. ಈ ಕೊಲೆಯನ್ನು ನಡೆಸಿರುವ ಆ ಭಯೋತ್ಪಾದಕ ಶಕ್ತಿಯಾದರೂ ಯಾವುದು? ಭಿನ್ನಮತ, ಅಭಿಪ್ರಾಯ ಭೇದ ಪ್ರಜಾಪ್ರಭುತ್ವದ ದೇಶದಲ್ಲಿ ಅತ್ಯಂತ ಸಹಜ. ಒಬ್ಬ ವ್ಯಕ್ತಿಯ ನಿಲುವನ್ನು ಮತ್ತೊಬ್ಬ ಒಪ್ಪಲೇಬೇಕಾಗಿಲ್ಲ. ಒಪ್ಪಲು ಸಾಧ್ಯವೂ ಇಲ್ಲ. ಸಾಂಸ್ಕೃತಿಕ ಜಗತ್ತಿನಲ್ಲಿ ಕ್ರಿಯಾಶೀಲರಾಗಿರುವ ವ್ಯಕ್ತಿಗಳು ಸಹಜವಾಗಿಯೇ ತಮಗೆ ಅನಿಸಿದ್ದನ್ನು ಪ್ರಕಟಪಡಿಸುವ ಎಲ್ಲ ಹಕ್ಕನ್ನೂ ಹೊಂದಿರುತ್ತಾರೆ. ಸಮಾಜ ಚಲನಶೀಲವಾಗಿರುವುದು ಹೀಗೆಯೇ. ಅದರಲ್ಲೂ ಸಂಶೋಧನಾ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿರುವ ಕಲಬುರ್ಗಿಯವರು ತಾವು ಕಂಡುಕೊಂಡ ಸತ್ಯವನ್ನು ಹೇಳಲು ಎಂದೂ ಹಿಂದೆ ಸರಿದವರಲ್ಲ, ನೇರವಾಗಿ-ನಿಷ್ಠುರವಾಗಿ ಮಾತನಾಡುವುದು ಅವರ ಅಭ್ಯಾಸವಾಗಿತ್ತು. ಕಲಬುರ್ಗಿಯವರು ಮಾತನಾಡುತ್ತಿದ್ದುದು ಸರಿಯಲ್ಲವೆನಿಸಿದರೆ ಅದನ್ನು ಹೇಳುವುದಕ್ಕೆ ಸಾಕಷ್ಟು ಮಾಧ್ಯಮಗಳಿವೆ, ಎಲ್ಲರಿಗೂ ಅವರದೇ ಆದ ಸ್ವಾತಂತ್ರ್ಯವೂ ಇದೆ. ಇದೆಲ್ಲವನ್ನು ನೋಡಿದರೆ ನಾವು ಯಾವ ನಾಡಿನಲ್ಲಿದ್ದೇವೆ ಎಂಬ ದಿಗ್ಭ್ರಮೆ ಮೂಡುತ್ತದೆ. ಇಂಥ ಹೀನಸ್ಥಿತಿಗೆ, ರೋಗಗ್ರಸ್ಥ ಸ್ಥಿತಿಗೆ ನಮ್ಮ ಸಮಾಜ ತಲುಪಬೇಕಾ?

ಕಲಬುರ್ಗಿಯವರು ಕನ್ನಡ ನಾಡಿಗೆ, ಸಂಸ್ಕೃತಿಗೆ, ಸಂಶೋಧನಾ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ. ಒಂದು ವಿಶ್ವವಿದ್ಯಾಲಯವು ಮಾಡಬಹುದಾದಷ್ಟು ಕೆಲಸಗಳನ್ನು ಅವರೊಬ್ಬರೇ ಮಾಡಿದ್ದಾರೆ. ಸಂಶೋಧನೆ ಎಂದರೆ ಸತ್ಯದ ಶೋಧವಷ್ಟೇ, ಮಿಕ್ಕಿದ್ದೆಲ್ಲ ನಗಣ್ಯ ಎಂಬುದು ಕಲಬುರ್ಗಿಯವರ ನಂಬಿಕೆಯಾಗಿತ್ತು. ಈ ಸತ್ಯಾನ್ವೇಷಣೆಯ ಹಾದಿಯಲ್ಲಿ ಅವರು ಕಂಡುಕೊಂಡಿದ್ದನ್ನೆಲ್ಲ ಸಮಾಜದ ಮುಂದೆ ಇಡುತ್ತಿದ್ದರು. ಅದು ಕೆಲವರಿಗೆ ಅಪಥ್ಯವೆನಿಸುತ್ತಿತ್ತು. ಆ ಕಾರಣಕ್ಕೆ ಕಲಬುರ್ಗಿಯವರು ಸತ್ಯ ಹೇಳಲು ಎಂದಿಗೂ ಅಂಜಿದವರಲ್ಲ.

ಈ ನಾಡಿಗೆ ಏನೆಲ್ಲವನ್ನೂ ಕೊಟ್ಟ ಡಾ. ಎಂ.ಎಂ.ಕಲಬುರ್ಗಿಯವರಿಗೆ ಒಂದು ನೆಮ್ಮದಿಯ ಸಹಜ ಸಾವನ್ನು ಈ ಸಮಾಜದ ದುಷ್ಟಶಕ್ತಿಗಳು ನೀಡಲಿಲ್ಲ. ಅಸಾಮಾನ್ಯ ಪ್ರತಿಭೆ, ಅಪಾರವಾದ ಪರಿಶ್ರಮ, ಪ್ರಾಮಾಣಿಕ ನಡೆ ನೀತಿ, ನಿಷ್ಠುರವಾದ ನಿಲುವುಗಳನ್ನು ಇಡೀ ಸಮಾಜದ ಹಿತಕ್ಕೆ ಬಳಸಿದ ಕಲಬುರ್ಗಿಯವರಿಗೆ ಅತ್ಯಂತ ಕೆಟ್ಟ ವಿದಾಯವನ್ನು ಹೇಳಿದ್ದೇವೆ. ಈ ಆಘಾತ ನಮ್ಮನ್ನು ಬಹುದಿನಗಳವರೆಗೆ ಕಾಡಲಿದೆ.

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ