Monday, 7 September 2015

ಕಲಬುರ್ಗಿ ಹತ್ಯೆ: ಕನ್ನಡ ಸಂಸ್ಕೃತಿಯ ಭೀಕರ ಕಗ್ಗೊಲೆ



ಆಗಸ್ಟ್ ೩೦, ಕನ್ನಡ ನಾಡು ಮಾತ್ರವಲ್ಲ, ಇಡೀ ದೇಶಕ್ಕೇ ಕರಾಳ ದಿನ. ಕನ್ನಡದ ಹೆಸರಾಂತ ಸಂಶೋಧಕ, ವಿದ್ವಾಂಸ, ಸಾಹಿತಿ, ಸಂಸ್ಕೃತಿ ಚಿಂತಕ ಡಾ. ಎಂ.ಎಂ. ಕಲಬುರ್ಗಿಯವರನ್ನು ಅವರ ಮನೆಯಲ್ಲೇ ದಾರುಣವಾಗಿ ಹತ್ಯೆ ಮಾಡಲಾಯಿತು. ಇದು ನಿಜಕ್ಕೂ ಆಘಾತಕಾರಿ. ಈ ಕೊಲೆಯ ಸುದ್ದಿ ಸುದ್ದಿವಾಹಿನಿಗಳಲ್ಲಿ ಬಿತ್ತರವಾಗುತ್ತಿದ್ದಾಗ ಅದನ್ನು ಮೊದಮೊದಲು ನಂಬಲು ಸಾಧ್ಯವಾಗುತ್ತಲೇ ಇರಲಿಲ್ಲ. ಹೇಗಾದರೂ ಈ ಸುದ್ದಿ ಸುಳ್ಳಾಗಿರಲಿ ಎಂದು ಪ್ರಾರ್ಥಿಸುತ್ತಿದ್ದೆ. ಆದರೆ ಅದೇ ನಿಜವಾಗಿಹೋಗಿದೆ.

ತಾಲಿಬಾನಿಗಳು, ಲಷ್ಕರ್-ಇ-ತೊಯಿಬಾಗಳು, ಅಲ್ ಖೈದಾಗಳು ಇಂಥ ಭಯೋತ್ಪಾದಕ ಕೃತ್ಯಗಳನ್ನು ನಡೆಸಿರುವುದನ್ನು ಗಮನಿಸಿದ್ದೇವೆ. ತಮ್ಮ ವಿಚಾರಗಳನ್ನು ವಿರೋಧಿಸುವ ಸಾಹಿತಿಗಳು, ಪತ್ರಕರ್ತರನ್ನು ಗುಂಡಿಟ್ಟು ಕೊಲ್ಲುವ ವಿದ್ಯಮಾನಗಳು ಪಾಕಿಸ್ತಾನ, ಅಫಘಾನಿಸ್ತಾನ, ಇರಾಕ್, ಸಿರಿಯಾದಂಥ ದೇಶಗಳಲ್ಲಿ ಮಾಮೂಲಿ ವಿದ್ಯಮಾನ. ಆದರೆ ಇದು ಭಾರತ ದೇಶಕ್ಕೂ ಕಾಲಿಟ್ಟುಬಿಟ್ಟಿದೆ. ನೆರೆಯ ಮಹಾರಾಷ್ಟ್ರದಲ್ಲಿ ಮೂಢ ನಂಬಿಕೆಗಳ ವಿರುದ್ಧ ಹೋರಾಡುತ್ತಿದ್ದ ನರೇಂದ್ರ ದಾಬೋಲ್ಕರ್ ಅವರನ್ನು ಎರಡು ವರ್ಷಗಳ ಹಿಂದೆ ಕಲಬುರ್ಗಿಯವರನ್ನು ಕೊಂದ ಮಾದರಿಯಲ್ಲೇ ಗುಂಡಿಟ್ಟು ಕೊಲ್ಲಲಾಯಿತು. ನಂತರ ಗೋವಿಂದ ಪನ್ಸಾರಿಯವರನ್ನು ಇದೇ ರೀತಿ ಕೊಲ್ಲಲಾಯಿತು. ಈಗ ಈ ಹೀನಪರಂಪರೆ ಕರ್ನಾಟಕಕ್ಕೂ ಕಾಲಿಟ್ಟಿದೆ. ಅದೂ ಕೂಡ ಕನ್ನಡ ಸಾಹಿತ್ಯ-ಸಂಸ್ಕೃತಿಯ ತವರು ಮನೆ ಎನಿಸಿಕೊಂಡಿರುವ ಧಾರವಾಡದಲ್ಲಿ ನಡೆದಿದೆ.

ಹಿಂದೆ ಒಂದು ಮಾತಿತ್ತು. ಧಾರವಾಡದಲ್ಲಿ ನಿಂತು ಒಂದು ಕಲ್ಲು ಮೇಲಕ್ಕೆ ಒಗದರೆ ಅದು ಹೋಗಿ ಯಾವುದಾದರೂ ಸಾಹಿತಿಯ ಮನೆಯ ಮೇಲೇ ಬೀಳುತ್ತದೆ ಎಂದು ಹೇಳಲಾಗುತ್ತಿತ್ತು. ಅದರರ್ಥ ಧಾರವಾಡ ಸಂಸ್ಕೃತಿವಂತರಿಂದಲೇ ತುಂಬಿ ತುಳುಕುತ್ತಿದೆ ಎಂದು. ಇಂಥ ಧಾರವಾಡದಲ್ಲಿ ನಾಡಿನ ಹೆಮ್ಮೆಯ ಸಂಸ್ಕೃತಿ ಚಿಂತಕರನ್ನು ಪುಡಿ ರೌಡಿಯನ್ನು ಕೊಲ್ಲುವ ಹಾಗೆ ಕೊಲ್ಲಲಾಗಿದೆ ಎಂದರೆ ಹೇಗೆ ನಂಬುವುದು?

ರಾಷ್ಟ್ರಕವಿ ಕುವೆಂಪು ಅವರು ಈ ನಾಡನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಕರೆದಿದ್ದರು. ಎಲ್ಲಿದೆ ಆ ಶಾಂತಿ. ಒಬ್ಬ ಅಹಿಂಸಾವಾದಿ ಸಜ್ಜನ ಸಾಹಿತಿಯನ್ನು ಮನೆಗೆ ನುಗ್ಗಿ ಹಣೆಗೆ ಗುಂಡಿಟ್ಟು ಕೊಂದು ಹೋಗುತ್ತಾರೆಂದರೆ ಈ ನಾಡಿಗೇನಾಗಿ ಹೋಯಿತು? ‘ದಯವೇ ಧರ್ಮದ ಮೂಲವಯ್ಯ’ ಎಂದರು ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರು. ಆದರೆ ಎಲ್ಲಿದೆ ದಯೆ, ಕರುಣೆ, ಸಹಬಾಳ್ವೆ, ಸಾಮರಸ್ಯ?

ನಿಜ, ಕಲಬುರ್ಗಿಯವರ ಹತ್ಯೆಯ ಕುರಿತ ತನಿಖೆಯನ್ನು ಪೊಲೀಸರು ನಡೆಸುತ್ತಿರುವುದರಿಂದ ಹತ್ಯೆಗೆ ಇರಬಹುದಾದ ಕಾರಣಗಳ ಬಗ್ಗೆ ಈಗಲೇ ಒಂದು ತೀರ್ಮಾನಕ್ಕೆ ಬರಲಾಗದು. ಗುಂಡಿನೇಟು ತಿಂದು ಅಸು ನೀಗಿರುವವರು ಯಾವುದೋ ರೌಡಿಯಲ್ಲ, ಸಮಾಜ ಘಾತುಕ ಅಲ್ಲ. ಈ ನಾಡು ಕಂಡ ಹೆಮ್ಮೆಯ ಸಂಶೋಧಕ. ಮಾತ್ರವಲ್ಲ ಕನ್ನಡ ಸಂಸ್ಕೃತಿ, ಸಾಹಿತ್ಯ, ಜಾನಪದ, ಇತಿಹಾಸ, ಛಂದಸ್ಸು, ಶಾಸನ, ಹಸ್ತಪ್ರತಿ ಶಾಸ್ತ್ರ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ದಶಕಗಟ್ಟಲೆ ದುಡಿದು ಕನ್ನಡ ಸಾಂಸ್ಕೃತಿಕ ಜಗತ್ತನ್ನು ಬೆಳೆಸಿದ ಧೀಮಂತ ಸಾಹಿತಿ. ಕನ್ನಡ ಅಧ್ಯಯನ ಪೀಠದ ಉಪನ್ಯಾಸಕರಾಗಿ, ಪ್ರವಾಚಕರಾಗಿ, ಬಸವ ಪೀಠದ ಪ್ರಾಧ್ಯಾಪಕರಾಗಿ, ಕನ್ನಡ ಪೀಠದ ಮುಖ್ಯಸ್ಥರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ ಮಹೋನ್ನತ ವ್ಯಕ್ತಿತ್ವ ಅವರದು. ಹೀಗಿರುವಾಗ ಕಲಬುರ್ಗಿಯವರ ಹತ್ಯೆಯನ್ನು ಸರಳವಾಗಿ ನೋಡುವ ಹಾಗಿಲ್ಲ. ೭೭ರ ಇಳಿ ವಯಸ್ಸಿನಲ್ಲಿರುವ ಕಲಬುರ್ಗಿಯವರ ಹತ್ಯೆಗೆ ಪ್ರಬಲವಾದ ಕಾರಣವಿದ್ದೇ ಇರುತ್ತದೆ. ಅದರ ಶೋಧ ಆಗಲೇಬೇಕು ಮತ್ತು ಇಂಥ ಘಟನೆ ಇನ್ನೆಂದೂ ಈ ನಾಡಿನಲ್ಲಿ ಆಗದಂತೆ ತಡೆಯಲೇಬೇಕು.

ಕಲಬುರ್ಗಿಯವರ ಹತ್ಯೆಗೆ ಕಾರಣಗಳೇನೇ ಇರಲಿ, ಅವರು ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಮೂಲಭೂತವಾದಿಗಳ ಬೆದರಿಕೆಯನ್ನು ಎದುರಿಸುತ್ತಿದ್ದರು ಎಂಬುದು ಸ್ಪಷ್ಟ. ಈ ಬೆದರಿಕೆಗಳ ಹಿನ್ನೆಲೆಯಲ್ಲೇ ಅವರ ನಿವಾಸಕ್ಕೆ ಪೊಲೀಸ್ ಭದ್ರತೆಯನ್ನೂ ನೀಡಲಾಗಿತ್ತು. ಕಲಬುರ್ಗಿಯವರ ವಿನಂತಿಯ ಮೇರೆಗೆ ಈ ಭದ್ರತೆಯನ್ನು ಪೊಲೀಸ್ ಇಲಾಖೆ ಹಿಂದಕ್ಕೆ ಪಡೆದಿತ್ತು. ಅದಕ್ಕೂ ಮುನ್ನ ಇದೇ ಮತಾಂಧ ಶಕ್ತಿಗಳು ಕಲಬುರ್ಗಿಯವರ ಮನೆಯ ಮೇಲೆ ಸೋಡಾ ಬಾಟಲಿಗಳನ್ನು ಎಸೆದಿದ್ದರು. ಕೆಲ ಮತೀಯ ಸಂಘಟನೆಗಳು ಅವರ ಮನೆ ಮುಂದೆ ಪ್ರತಿಭಟನೆಯ ಹೆಸರಲ್ಲಿ ದಾಂಧಲೆಯನ್ನೂ ನಡೆಸಿದ್ದವು. ಇದಲ್ಲದೆ ದಾಬೋಲ್ಕರ್ ಮತ್ತು ಪನ್ಸಾರೆಯವರ ಕೊಲೆ ನಡೆದ ಹಾಗೆಯೇ ಕಲಬುರ್ಗಿಯವರ ಕೊಲೆ ನಡೆದಿದೆ. ಮೂವರೂ ಮೂಲಭೂತವಾದಿಗಳ ಬೆದರಿಕೆಗಳನ್ನು ಎದುರಿಸುತ್ತಿದ್ದರು. ಹೀಗಾಗಿ ಈ ಮೂವರ ವೈಚಾರಿಕ ನಿಲುವನ್ನು ಒಪ್ಪದವರೇ ಈ ಕೊಲೆಗಳನ್ನು ಮಾಡಿರುವ ಸಾಧ್ಯತೆಗಳಿವೆ. ಇಂಥ ಸಂದರ್ಭದಲ್ಲಿ ಈ ನಾಡಿನ ಸಜ್ಜನರು ಸುಮ್ಮನಿದ್ದರೆ ಅದು ಅವರಿಗೆ ಶೋಭೆಯಲ್ಲ, ನಾಗರಿಕ ಸಮಾಜ ತಲೆ ತಗ್ಗಿಸುವಂಥ ಇಂಥ ಘಟನೆಯ ವಿರುದ್ಧ ನಾವೆಲ್ಲರೂ ಸಿಡಿದು ನಿಲ್ಲದಿದ್ದರೆ ಇಂಥ ಹತ್ತಾರು ಕೊಲೆಗಳು, ಹಲ್ಲೆಗಳು ನಮ್ಮ ಕಣ್ಣೆದುರು ನಡೆಯುವ ದುರಂತದ ದಿನಗಳು ಹತ್ತಿರವಾಗಲಿವೆ.

ಡಾ. ಎಂ.ಎಂ.ಕಲಬುರ್ಗಿಯವರ ಹತ್ಯೆಯ ನಂತರ ನಡೆದಿರುವ ವಿದ್ಯಮಾನಗಳನ್ನು ಗಮನಿಸಿದರೆ ದಿಗ್ಬ್ರಮೆಯಾಗುತ್ತದೆ. ಕಲಬುರ್ಗಿಯವರ ಕೊಲೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಮರ್ಥಿಸಿಕೊಳ್ಳುವವರ ಒಂದು ಗುಂಪೇ ಕ್ರಿಯಾಶೀಲವಾಗಿದೆ ಎಂಬ ಮಾತನ್ನು ನಾನು ಕೇಳಿದೆ. ಕಲಬುರ್ಗಿಯವರ ಸಾವನ್ನು ಹಲವರು ಸಂಭ್ರಮಿಸುತ್ತಿದ್ದಾರೆ ಎಂದೂ ಸಹ ಕೇಳಲ್ಪಟ್ಟೆ. ಯಾರದ್ದೇ ಸಾವನ್ನು ಸಂಭ್ರಮಿಸುವುದು ಹೀನ ಮನಸ್ಥಿತಿಯವರಿಗಷ್ಟೆ ಸಾಧ್ಯ. ಅದರಲ್ಲೂ ಕಲಬುರ್ಗಿಯವರ ಸಾವನ್ನು ಸಂಭ್ರಮಿಸುತ್ತಿರುವವರು ಮನುಷ್ಯರೆನಿಸಿಕೊಳ್ಳಲು ಯೋಗ್ಯರಲ್ಲ. ಹಿಂದೆ ಡಾ. ಯು.ಆರ್.ಅನಂತಮೂರ್ತಿಯವರು ಸಾವಿಗೀಡಾದಾಗಲೂ ಇಂಥ ಶಕ್ತಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದವು.

ಈಗ ನಮ್ಮ ಸರ್ಕಾರದ ಮುಂದಿರುವ ಸವಾಲು ಬಹುದೊಡ್ಡದು. ಕಲಬುರ್ಗಿಯವರ ಹತ್ಯೆ ಪ್ರಕರಣವನ್ನು ಈಗ ಸರ್ಕಾರ ಸಿಬಿಐಗೆ ವಹಿಸಿ ಕೈ ತೊಳೆದುಕೊಂಡಿದೆ. ಇಂಥ ನೂರಾರು ಹತ್ಯೆ ಪ್ರಕರಣಗಳ ತನಿಖೆಯನ್ನು ಇದೇ ಸಿಬಿಐ ಸಂಸ್ಥೆ ವರ್ಷಗಟ್ಟಲೆ ಶೈತ್ಯಾಗಾರದಲ್ಲಿ ಇಟ್ಟಿದೆ ಎಂಬುದನ್ನು ನಾವು ಮರೆಯುವಂತಿಲ್ಲ. ಬೇರೇನೂ ಬೇಡ, ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಎರಡು ವರ್ಷಗಳಾದರೂ ತನಿಖೆ ಬಹುತೇಕ ಸತ್ತೇ ಹೋಗಿದೆ. ಇಂಥ ಸಂದರ್ಭದಲ್ಲಿ ಕಲಬುರ್ಗಿಯವರ ಹತ್ಯೆ ಪ್ರಕರಣವನ್ನು ಸಿಬಿಐ ಭೇದಿಸಬಹುದು ಎಂಬ ವಿಶ್ವಾಸ ಯಾರಲ್ಲೂ ಇದ್ದ ಹಾಗಿಲ್ಲ.

ಕಲಬುರ್ಗಿಯವರ ಹತ್ಯೆ ಒಂದು ಆಕಸ್ಮಿಕ ಘಟನೆ ಎಂಬಂತಿದೆ ಸರ್ಕಾರದ ಪ್ರತಿಕ್ರಿಯೆ. ಕಲಬುರ್ಗಿಯವರಿಗೆ ಇದ್ದ ಬೆದರಿಕೆಗಳು ಸರ್ಕಾರಕ್ಕೆ ಗೊತ್ತಿರದ ವಿಷಯವೇನಲ್ಲ. ಕಲಬುರ್ಗಿಯವರು ಪೊಲೀಸ್ ಭದ್ರತೆ ಹಿಂದಕ್ಕೆ ಪಡೆಯಲು ಹೇಳಿದಾಗ ಕನಿಷ್ಠ ಅವರ ಮನೆ ಮುಂದೆ ಒಂದು ಸಿಸಿ ಟಿವಿ ಕ್ಯಾಮೆರಾಗಳನ್ನಾದರೂ ಅಳವಡಿಸಬಹುದಿತ್ತು. ಅದೆಲ್ಲ ಹಾಗಿರಲಿ, ಮುಖ್ಯಮಂತ್ರಿಗಳ ನೇರ ಉಸ್ತುವಾರಿಯಲ್ಲಿ ಇರುವ ಗುಪ್ತಚರ ಇಲಾಖೆ ಏನು ಮಾಡುತ್ತಿದೆ. ಕಲಬುರ್ಗಿ ಹತ್ಯೆಯ ಸಣ್ಣ ಸುಳಿವೂ ಈ ಇಲಾಖೆಗೆ ಗೊತ್ತಾಗಲಿಲ್ಲವೇ?

ಸರ್ಕಾರ ಈಗಲಾದರೂ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದೆ. ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಇಂತಿಂಥ ಸಾಹಿತಿಗಳನ್ನು ಕೊಲ್ಲಲಾಗುವುದು ಎಂದು ಹಿಟ್ ಲಿಸ್ಟ್‌ಗಳನ್ನು ಬಹಿರಂಗವಾಗಿ ನೀಡಲಾಗುತ್ತಿದೆಯಂತೆ. ಸರ್ಕಾರದ ಬಳಿ ಇಂಥ ಶಕ್ತಿಗಳ ಕುರಿತು ಮಾಹಿತಿ ಇಲ್ಲವೆಂದೇನಿಲ್ಲ. ಇಂಥ ಭಯೋತ್ಪಾದಕ ಶಕ್ತಿಗಳನ್ನು ಬಗ್ಗುಬಡಿಯುವುದು ಕಷ್ಟದ ಕೆಲಸವೇನೂ ಅಲ್ಲ. ಆ ಕೆಲಸವನ್ನು ಈಗಲಾದರೂ ಮಾಡಲಿ. ಸಾಹಿತಿಗಳ ಮನೆ ಮುಂದೆ ಪೊಲೀಸ್ ವ್ಯಾನುಗಳನ್ನು ನಿಲ್ಲಿಸುವ ಬದಲು, ಸಮಾಜಘಾತಕರನ್ನು ಹುಡುಕಿ ತಂದು ಜೈಲಿಗಟ್ಟುವ ಕೆಲಸವನ್ನು ಸರ್ಕಾರ ಮಾಡಲಿ.

ಇವತ್ತು ನಮ್ಮೆಲ್ಲರನ್ನು ಕಾಡುತ್ತಿರುವ ಪ್ರಶ್ನೆ ಒಂದೇ. ಈ ಕೊಲೆಯನ್ನು ನಡೆಸಿರುವ ಆ ಭಯೋತ್ಪಾದಕ ಶಕ್ತಿಯಾದರೂ ಯಾವುದು? ಭಿನ್ನಮತ, ಅಭಿಪ್ರಾಯ ಭೇದ ಪ್ರಜಾಪ್ರಭುತ್ವದ ದೇಶದಲ್ಲಿ ಅತ್ಯಂತ ಸಹಜ. ಒಬ್ಬ ವ್ಯಕ್ತಿಯ ನಿಲುವನ್ನು ಮತ್ತೊಬ್ಬ ಒಪ್ಪಲೇಬೇಕಾಗಿಲ್ಲ. ಒಪ್ಪಲು ಸಾಧ್ಯವೂ ಇಲ್ಲ. ಸಾಂಸ್ಕೃತಿಕ ಜಗತ್ತಿನಲ್ಲಿ ಕ್ರಿಯಾಶೀಲರಾಗಿರುವ ವ್ಯಕ್ತಿಗಳು ಸಹಜವಾಗಿಯೇ ತಮಗೆ ಅನಿಸಿದ್ದನ್ನು ಪ್ರಕಟಪಡಿಸುವ ಎಲ್ಲ ಹಕ್ಕನ್ನೂ ಹೊಂದಿರುತ್ತಾರೆ. ಸಮಾಜ ಚಲನಶೀಲವಾಗಿರುವುದು ಹೀಗೆಯೇ. ಅದರಲ್ಲೂ ಸಂಶೋಧನಾ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿರುವ ಕಲಬುರ್ಗಿಯವರು ತಾವು ಕಂಡುಕೊಂಡ ಸತ್ಯವನ್ನು ಹೇಳಲು ಎಂದೂ ಹಿಂದೆ ಸರಿದವರಲ್ಲ, ನೇರವಾಗಿ-ನಿಷ್ಠುರವಾಗಿ ಮಾತನಾಡುವುದು ಅವರ ಅಭ್ಯಾಸವಾಗಿತ್ತು. ಕಲಬುರ್ಗಿಯವರು ಮಾತನಾಡುತ್ತಿದ್ದುದು ಸರಿಯಲ್ಲವೆನಿಸಿದರೆ ಅದನ್ನು ಹೇಳುವುದಕ್ಕೆ ಸಾಕಷ್ಟು ಮಾಧ್ಯಮಗಳಿವೆ, ಎಲ್ಲರಿಗೂ ಅವರದೇ ಆದ ಸ್ವಾತಂತ್ರ್ಯವೂ ಇದೆ. ಇದೆಲ್ಲವನ್ನು ನೋಡಿದರೆ ನಾವು ಯಾವ ನಾಡಿನಲ್ಲಿದ್ದೇವೆ ಎಂಬ ದಿಗ್ಭ್ರಮೆ ಮೂಡುತ್ತದೆ. ಇಂಥ ಹೀನಸ್ಥಿತಿಗೆ, ರೋಗಗ್ರಸ್ಥ ಸ್ಥಿತಿಗೆ ನಮ್ಮ ಸಮಾಜ ತಲುಪಬೇಕಾ?

ಕಲಬುರ್ಗಿಯವರು ಕನ್ನಡ ನಾಡಿಗೆ, ಸಂಸ್ಕೃತಿಗೆ, ಸಂಶೋಧನಾ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ. ಒಂದು ವಿಶ್ವವಿದ್ಯಾಲಯವು ಮಾಡಬಹುದಾದಷ್ಟು ಕೆಲಸಗಳನ್ನು ಅವರೊಬ್ಬರೇ ಮಾಡಿದ್ದಾರೆ. ಸಂಶೋಧನೆ ಎಂದರೆ ಸತ್ಯದ ಶೋಧವಷ್ಟೇ, ಮಿಕ್ಕಿದ್ದೆಲ್ಲ ನಗಣ್ಯ ಎಂಬುದು ಕಲಬುರ್ಗಿಯವರ ನಂಬಿಕೆಯಾಗಿತ್ತು. ಈ ಸತ್ಯಾನ್ವೇಷಣೆಯ ಹಾದಿಯಲ್ಲಿ ಅವರು ಕಂಡುಕೊಂಡಿದ್ದನ್ನೆಲ್ಲ ಸಮಾಜದ ಮುಂದೆ ಇಡುತ್ತಿದ್ದರು. ಅದು ಕೆಲವರಿಗೆ ಅಪಥ್ಯವೆನಿಸುತ್ತಿತ್ತು. ಆ ಕಾರಣಕ್ಕೆ ಕಲಬುರ್ಗಿಯವರು ಸತ್ಯ ಹೇಳಲು ಎಂದಿಗೂ ಅಂಜಿದವರಲ್ಲ.

ಈ ನಾಡಿಗೆ ಏನೆಲ್ಲವನ್ನೂ ಕೊಟ್ಟ ಡಾ. ಎಂ.ಎಂ.ಕಲಬುರ್ಗಿಯವರಿಗೆ ಒಂದು ನೆಮ್ಮದಿಯ ಸಹಜ ಸಾವನ್ನು ಈ ಸಮಾಜದ ದುಷ್ಟಶಕ್ತಿಗಳು ನೀಡಲಿಲ್ಲ. ಅಸಾಮಾನ್ಯ ಪ್ರತಿಭೆ, ಅಪಾರವಾದ ಪರಿಶ್ರಮ, ಪ್ರಾಮಾಣಿಕ ನಡೆ ನೀತಿ, ನಿಷ್ಠುರವಾದ ನಿಲುವುಗಳನ್ನು ಇಡೀ ಸಮಾಜದ ಹಿತಕ್ಕೆ ಬಳಸಿದ ಕಲಬುರ್ಗಿಯವರಿಗೆ ಅತ್ಯಂತ ಕೆಟ್ಟ ವಿದಾಯವನ್ನು ಹೇಳಿದ್ದೇವೆ. ಈ ಆಘಾತ ನಮ್ಮನ್ನು ಬಹುದಿನಗಳವರೆಗೆ ಕಾಡಲಿದೆ.

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

No comments:

Post a Comment