Monday, 21 September 2015

ಒಡೆದು ಆಳುವುದೇ ಹಿಂದಿ ಸಾಮ್ರಾಜ್ಯಶಾಹಿಯ ಕುತಂತ್ರ

ಕಳೆದ ಆರು ವಾರಗಳಿಂದ ನಾಡಿನ ಹೆಮ್ಮೆಯ ದಿನಪತ್ರಿಕೆಗಳಲ್ಲಿ ಒಂದಾದ ಸಂಯುಕ್ತ ಕರ್ನಾಟಕದಲ್ಲಿ ‘ನಾಡುನುಡಿ’ ಎಂಬ ಹೆಸರಿನಲ್ಲಿ ಅಂಕಣವೊಂದನ್ನು ಬರೆಯುತ್ತಿದ್ದೇನೆ. ಪ್ರತಿ ಭಾನುವಾರದ ಸಂಯುಕ್ತ ಕರ್ನಾಟಕದ ಸಂಪಾದಕೀಯ ಪುಟದಲ್ಲಿ ಈ ಅಂಕಣ ಪ್ರಕಟಗೊಳ್ಳುತ್ತಿದೆ. ಕಳೆದ ವಾರ ಹಿಂದಿಹೇರಿಕೆ ಬಗ್ಗೆ ನಾನು ಈ ಅಂಕಣದಲ್ಲಿ ಪ್ರಸ್ತಾಪಿಸಿದ್ದೆ. ಹಲವಾರು ಮಂದಿ ಆಶ್ಚರ್ಯದಿಂದ ಪ್ರತಿಕ್ರಿಯಿಸಿದ್ದಾರೆ. ಕೆಲವರು ನನಗೆ ಕರೆ ಮಾಡಿ, ‘ಗೌಡ್ರೆ, ಇಷ್ಟು ದಿನ ನಾವೂ ಸಹ ಹಿಂದಿಯನ್ನು ರಾಷ್ಟ್ರಭಾಷೆ ಎಂದೇ ಭಾವಿಸಿದ್ದೆವು. ನಾವೆಲ್ಲ ನಮ್ಮ ಶಾಲಾ ಪಠ್ಯಗಳಲ್ಲೂ ಹಾಗೇ ಓದಿಕೊಂಡುಬಂದಿದ್ದೆವು. ನಮ್ಮ ತಪ್ಪು ಕಲ್ಪನೆಗಳೆಲ್ಲ ದೂರವಾದವು. ಹಿಂದಿ ಹೇರಿಕೆಯ ಪರಿಣಾಮಗಳ ಬಗ್ಗೆ ನಿಮ್ಮ ಮಾತುಗಳನ್ನು ಓದಿದ ನಂತರ ಈ ವ್ಯವಸ್ಥಿನ ಸಂಚಿನ ಆಳ-ಅಗಲವೆಲ್ಲ ಪರಿಚಯವಾದಂತಾಯಿತು’ ಎಂದು ಹೇಳಿದರು.

ಭಾಷೆ ಎಂದರೆ ಕೇವಲ ನಮ್ಮ ನಡುವಿನ ಸಂವಹನದ ಸಾಧನ ಅಷ್ಟೆ ಎಂದು ಹಲವರು ಭಾವಿಸಿದ್ದಾರೆ. ಆದರೆ ಭಾಷೆ ಅಂದರೆ ಅಷ್ಟೇ ಅಲ್ಲ, ಅದರಾಚೆಗೂ ಅದರ ಅರ್ಥ-ವ್ಯಾಖ್ಯಾನಗಳು ವಿಸ್ತರಿಸಿಕೊಂಡಿರುತ್ತವೆ. ಭಾಷೆ ಎಂದರೆ ಬದುಕು, ಭಾಷೆ ಎಂದರೆ ಪರಂಪರೆ, ಭಾಷೆ ಎಂದರೆ ಸಂಸ್ಕೃತಿ. ಯಾವುದೇ ನುಡಿಯ ಒಂದು ಶಬ್ದ ಸತ್ತುಹೋಯಿತೆಂದರೆ ಆ ಭಾಷಾ ಸಮುದಾಯದ ಸಂಸ್ಕೃತಿಯ ತಂತು ಕಡಿದುಹೋಯಿತು ಎಂದೇ ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ಎಲ್ಲ ನುಡಿಗಳೂ ಉಳಿದುಕೊಳ್ಳಬೇಕು. ಎಲ್ಲ ನುಡಿಗಳಿಗೂ ಸಮಾನ ಗೌರವವಿರಬೇಕು. ನುಡಿಯನ್ನು ಗೌರವಿಸುವೆಂದರೆ ಆ ನುಡಿಯನ್ನಾಡುವ ಜನರನ್ನು ಗೌರವಿಸಿದಂತೆ.

ಆದರೆ ಹಿಂದಿ ಸಾಮ್ರಾಜ್ಯಶಾಹಿಗೆ ಜಾಣ ಕುರುಡು. ಅದು ಇಡೀ ದೇಶವನ್ನೇ ವ್ಯಾಪಿಸಿಕೊಳ್ಳಬಯಸುತ್ತದೆ. ಇಡೀ ದೇಶಕ್ಕೆ ಒಂದು ನುಡಿ ಇರಬೇಕು ಎಂದು ವಾದಿಸುತ್ತದೆ. ಹಿಂದಿಗೂ ರಾಷ್ಟ್ರೀಯತೆಗೂ ಇಲ್ಲದ ಸಂಬಂಧವನ್ನು ಕಲ್ಪಿಸುತ್ತದೆ. ಹಿಂದಿಯೊಂದೇ ದೇಶವನ್ನು ಒಂದುಗೂಡಿಸುತ್ತದೆ ಎಂದು ಸುಳ್ಳು ಸುಳ್ಳೇ ಹೇಳುತ್ತದೆ. ಹಿಂದಿ ಸಾಮ್ರಾಜ್ಯಶಾಹಿ ಬಹುತ್ವದ ವಿರೋಧಿ. ‘ವಿವಿಧತೆಯಲ್ಲಿ ಏಕತೆ’ ಎಂದು ಸಾರುವ ಈ ಭಾರತ ಒಕ್ಕೂಟದ ಮೂಲಮಂತ್ರದ ವಿರೋಧಿ. ಈ ಒಕ್ಕೂಟ ಬಹುಸಂಸ್ಕೃತಿ, ಬಹುಭಾಷೆ, ಬಹುಧರ್ಮಗಳ ನಾಡಾಗಿಯೇ ಉಳಿದಿರುವವರೆಗೆ ಇದಕ್ಕೆ ಭವಿಷ್ಯ. ದೇಶದ ಎಲ್ಲ ಭಾಷೆಗಳನ್ನು, ಸಂಸ್ಕೃತಿಗಳನ್ನು ಹೊಸಕಿ ಹಾಕಿ ಒಂದು ಭಾಷೆ, ಒಂದು ಸಂಸ್ಕೃತಿಯನ್ನು ಹೇರುವ ಪ್ರಕ್ರಿಯೆ ಭಾರತ ಒಕ್ಕೂಟಕ್ಕೆ ಆತ್ಮಹತ್ಯಾಕಾರಿಯಾದ ನಿಲುವು. ಇದನ್ನು ದಿಲ್ಲಿಯಲ್ಲಿ ಕುಳಿತ ಜನರು ಅರ್ಥ ಮಾಡಿಕೊಳ್ಳಬೇಕಿದೆ.

ಈ ಚರ್ಚೆಯ ಸಂದರ್ಭದಲ್ಲೇ ಗೋದಾವರಿ-ಕೃಷ್ಣಾ ನದಿಗಳ ಜೋಡಣೆ ಕಾರ್ಯ ಆಂಧ್ರಪ್ರದೇಶದಲ್ಲಿ ಉದ್ಘಾಟನೆಯಾಗಿದೆ. ಕರ್ನಾಟಕಕ್ಕೆ ಮತ್ತೊಂದು ಆಘಾತವಾಗಿದೆ. ಮಂಗಳವಾರ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಕರೆದಿದ್ದ ವಿವಿಧ ರಾಜ್ಯಗಳ ಆರನೇ ಜಲಸಂಪನ್ಮೂಲ ಸಚಿವರ ಸಭೆಯಲ್ಲಿ ಕರ್ನಾಟಕ ಸರ್ಕಾರ ಗೋದಾವರಿ-ಕೃಷ್ಣಾ ನದಿಗಳ ಜೋಡಣೆ ವಿಷಯದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ತನ್ನ ಪ್ರತಿಭಟನೆಯನ್ನು ಸಲ್ಲಿಸಿದೆ. ಗೋದಾವರಿ ನದಿ ತಿರುವು ಯೋಜನೆಯಿಂದ ೧೩೦೦ ಟಿಎಂಸಿ ಹೆಚ್ಚುವರಿ ನೀರು ಲಭ್ಯವಾಗುವ ಕುರಿತು ೧೯೮೦ರಲ್ಲಿ ಸಿದ್ಧಗೊಂಡ ಯೋಜನಾ ವರದಿಯಲ್ಲಿ ಅಂದಾಜು ಮಾಡಲಾಗಿತ್ತು. ಈ ಪೈಕಿ ಕರ್ನಾಟಕ ರಾಜ್ಯದ ಪಾಲು ೨೮೩ ಟಿಎಂಸಿ ( ೧೯೬ ಟಿಎಂಸಿ ಕೃಷ್ಣಾ ನದಿ ಪಾತ್ರ ಮತ್ತು ೮೭ ಟಿಎಂಸಿ ಕಾವೇರಿ ನದಿ ಪಾತ್ರ) ಎಂದು ಅಂದಾಜಿಸಲಾಗಿತ್ತು. ೨೦೦೦ದಲ್ಲಿ ಆದ ಪರಿಷ್ಕೃತ ಅಂದಾಜಿನಲ್ಲಿ ಹೆಚ್ಚುವರಿಯಾಗಿ ಬಳಕೆಯಾಗುವ ನೀರು ೯೨೫ ಟಿಎಂಸಿ ಎಂದು ಅಂದಾಜು ಮಾಡಿದ್ದರಿಂದಾಗಿ ಅದರಲ್ಲಿ ಕರ್ನಾಟಕದ ಪಾಲು ೧೬೪ ಟಿಎಂಸಿ (ಕೃಷ್ಣಾ ೧೦೭ ಟಿಎಂಸಿ, ಕಾವೇರಿ ೫೭ ಟಿಎಂಸಿ) ಎಂದು ಪುನರ್ ಅಂದಾಜು ಮಾಡಲಾಗಿತ್ತು. ಆದರೆ ಮತ್ತೆ ೨೦೧೦ರಲ್ಲಿ ಈ ಯೋಜನೆ ಮತ್ತೆ ಪರಿಷ್ಕೃತಗೊಂಡು ಲಭ್ಯವಾಗುವ ನೀರು ೭೧೮ ಟಿಎಂಸಿ ಎಂದು ಅಂದಾಜು ಮಾಡಲಾಯಿತು. ಇದರಲ್ಲಿ ಕರ್ನಾಟಕದ ಪಾಲು ಸೊನ್ನೆ!

ಇದು ಹೇಗೆ ಸಾಧ್ಯ? ಯಾವುದೇ ನದಿ ತಿರುವು ಯೋಜನೆಗಳಿಂದ ಹೆಚ್ಚುವರಿಯಾಗಿ ಉತ್ಪಾದನೆಯಾಗುವ ನೀರನ್ನು ಜಲನ್ಯಾಯಮಂಡಳಿಗಳ ನಿರ್ದೇಶನದಂತೆ ಸಂಬಂಧಪಟ್ಟ ಎಲ್ಲ ರಾಜ್ಯಗಳು ಹಂಚಿಕೊಳ್ಳಬೇಕಾಗುತ್ತದೆ. ಆದರೆ ಕರ್ನಾಟಕವನ್ನು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಸಂಪೂರ್ಣವಾಗಿ ನಿರ್ಲಕ್ಷಿಸಲು ಹೇಗೆ ಸಾಧ್ಯ? ಕೇಂದ್ರ ಸರ್ಕಾರದ ನಿರ್ದೇಶನವಿಲ್ಲದೆ ಇಂಥ ಅನಾಹುತಕಾರಿ ನಿರ್ಧಾರವನ್ನು ಜಲ ಅಭಿವೃದ್ಧಿ ಸಂಸ್ಥೆ ತೆಗೆದುಕೊಳ್ಳಲು ಸಾಧ್ಯವೇ?
ಈ ದೇಶದಲ್ಲಿ ಇಂಥ ವಿಚಿತ್ರಗಳೆಲ್ಲ ಸಂಭವಿಸುತ್ತವೆ ನೋಡಿ. ಇದೆಲ್ಲವೂ ಆಕಸ್ಮಿಕವಾಗಿ ನಡೆಯುತ್ತಿರುವ ಘಟನಾವಳಿಗಳೂ ಎಂದು ಭಾವಿಸಬೇಕಾಗಿಲ್ಲ. ನಾವೀಗ ಆಂಧ್ರಪ್ರದೇಶದ ಜತೆ ಮತ್ತೊಂದು ಸುತ್ತಿನ ಜಗಳ ಆಡಬೇಕಿದೆ. ಕೃಷ್ಣಾ ನದಿ ನೀರು ಹಂಚಿಕೆ ವಿಷಯವಾಗಿ ನಾವು ಜಗಳವಾಡಿದ್ದಾಗಿದೆ. ಈಗ ಗೋದಾವರಿ ನದಿ ತಿರುವು ವಿಷಯದಲ್ಲೂ ಒಂದು ಸಂಘರ್ಷ ಶುರುವಾಗಿದೆ.

ಹಾಗೆ ನೋಡಿದರೆ ಕರ್ನಾಟಕಕ್ಕೆ ಜಗಳಗಂಟ ರಾಜ್ಯ ಎಂಬ ಬಿರುದು ಎಂದೋ ಪ್ರಾಪ್ತವಾಗಿಹೋಗಿದೆ. ನೆರೆಯ ಪ್ರತಿ ರಾಜ್ಯಗಳ ಜತೆಯೂ ನಾವು ಅನಿವಾರ್ಯವಾಗಿ ಸಂಘರ್ಷ ನಡೆಸಬೇಕಿದೆ. ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ತಮಿಳುನಾಡಿನ ಜತೆ ನಮ್ಮ ಸಂಘರ್ಷಕ್ಕೆ ಬಹುದೊಡ್ಡ ಇತಿಹಾಸವಿದೆ. ಕಾವೇರಿ ನದಿ ನೀರಿನ ವಿಷಯದಲ್ಲಿ ತುಂಬ ಸರಳವಾಗಿ ಎರಡೂ ರಾಜ್ಯಗಳು ಕುಳಿತು ಇತ್ಯರ್ಥ ಮಾಡಿಕೊಳ್ಳಬಹುದಾದ ಸಮಸ್ಯೆಯನ್ನು ನ್ಯಾಯಮಂಡಳಿ ಸ್ಥಾಪನೆಯೊಂದಿಗೆ ದೊಡ್ಡದನ್ನಾಗಿ ಮಾಡಲಾಯಿತು. ಕಾವೇರಿ ಎರಡೂ ರಾಜ್ಯಗಳಲ್ಲಿ ಎಷ್ಟು ದೂರ ಹರಿಯುತ್ತಾಳೆ, ಎರಡೂ ರಾಜ್ಯಗಳಲ್ಲಿ ಎಷ್ಟು ನೀರು ಉತ್ಪಾದನೆಯಾಗುತ್ತದೆ ಎಂಬ ಆಧಾರದಲ್ಲಿ ನೀರು ಹಂಚಿಕೆಯನ್ನು ಮಾಡಿಕೊಳ್ಳಬಹುದಿತ್ತು. ಸರಳ ಅಂಕಗಣಿತವೊಂದೇ ಇದಕ್ಕೆ ಸಾಕಿತ್ತು. ಆದರೆ ಇದಕ್ಕೊಂದು ನ್ಯಾಯಮಂಡಳಿ ರಚನೆಯಾಗಿ ಅದು ಅನ್ಯಾಯದ ತೀರ್ಪು ಕೊಡುವಂತೆ ಮಾಡಿದ್ದು ಕೇಂದ್ರ ಸರ್ಕಾರ. ಕುಡಿಯುವ ನೀರಿನ ವಿಷಯದಲ್ಲಿ ಯಾವ ರಾಜ್ಯವೂ ಕಿರಿಕಿರಿ ಮಾಡಬಾರದು ಎಂದು ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟು, ವಿವಿಧ ಜಲನ್ಯಾಯಮಂಡಳಿಗಳು ಹೇಳುತ್ತವೆ. ಆದರೆ ಕೇವಲ ೭.೫ ಟಿಎಂಸಿ ಕುಡಿಯುವ ನೀರಿನ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ತಡೆ ನೀಡಿತು. ಯೋಜನೆ ನೆನೆಗುದಿಗೆ ಬಿದ್ದಿತು. ಹೀಗಾಗಿ ಗೋವಾ ಜತೆಯಲ್ಲಿ ಯಕಶ್ಚಿತ್ ಕುಡಿಯುವ ನೀರಿನ ವಿಷಯದಲ್ಲಿ ದೊಡ್ಡ ಸಂಘರ್ಷವನ್ನೇ ನಡೆಸಬೇಕಿದೆ.

ಇದೆಲ್ಲವನ್ನು ಗಮನಿಸಿದರೆ ಕೇಂದ್ರದಲ್ಲಿ ಆಳುವ ಸರ್ಕಾರಗಳಿಗೆ ದಕ್ಷಿಣದ ರಾಜ್ಯಗಳು ನೆಮ್ಮದಿಯಿಂದ ಇರುವುದೇ ಬೇಡವಾಗಿದೆಯೇನೋ ಎನಿಸುತ್ತದೆ. ದಕ್ಷಿಣದ ರಾಜ್ಯಗಳೆಂದರೆ ಹಿಂದಿಯೇತರ ರಾಜ್ಯಗಳು. ಹಿಂದಿ ರಾಜಕಾರಣಿಗಳು ಮತ್ತು ಅಧಿಕಾರಕ್ಕಾಗಿ ಹಿಂದಿಯನ್ನರನ್ನು ಓಲೈಸುವ ರಾಜಕಾರಣಿಗಳು ಸ್ವಾತಂತ್ರ್ಯಾನಂತರ ದಕ್ಷಿಣದ ಭಾರತದ ರಾಜ್ಯಗಳು ನೆಮ್ಮದಿಯಾಗಿ ಇರಲು ಬಿಟ್ಟೇ ಇಲ್ಲ. ಪದೇಪದೇ ರಾಜ್ಯರಾಜ್ಯಗಳ ನಡುವೆ ಜಗಳ ತಂದಿಡುವುದು, ನ್ಯಾಯಮಂಡಳಿಗಳ ಹೆಸರಿನಲ್ಲಿ ಅನ್ಯಾಯದ ತೀರ್ಪುಗಳನ್ನು ಹೇರುವುದು, ಜನರನ್ನು ರೊಚ್ಚಿಗೆಬ್ಬಿಸುವುದು, ಕಾನೂನು ಸುವ್ಯವಸ್ಥೆ ಸಮಸ್ಯೆಯಾದರೆ ಮಿಲಿಟರಿ ತಂದು ಸರಿ ಮಾಡುತ್ತೇವೆ ಎಂಬ ಗುಮ್ಮನನ್ನು ಬಿಡುವುದು ನಡೆದುಕೊಂಡೇ ಬಂದಿದೆ.

ಒಡೆದು ಆಳುವ ನೀತಿ ಬ್ರಿಟಿಷರು ದೇಶದಲ್ಲಿ ಬಿಟ್ಟು ಹೋದ ಪಳೆಯುಳಿಕೆ. ಸ್ವಾತಂತ್ರ್ಯಾನಂತರ ಈ ದೇಶವನ್ನು ಆಳಿರುವವರೆಲ್ಲ ಹಿಂದಿ ಸಾಮ್ರಾಜ್ಯಶಾಹಿಗಳು ಅಥವಾ ಅವರ ಗುಲಾಮರು. ಈ ಜನರು ಕೂಡ ಬ್ರಿಟಿಷರಂತೆ ಒಡೆದು ಆಳುವ ನೀತಿಯನ್ನೇ ಪಾಲಿಸುತ್ತ ಬಂದಿದ್ದಾರೆ. ೧೯೬೫ರ ಹಿಂದಿ ಸಾಮ್ರಾಜ್ಯಶಾಹಿಯ ವಿರುದ್ಧದ ದಕ್ಷಿಣ ರಾಜ್ಯಗಳ ದಂಗೆಯ ನಂತರವಂತೂ ಈ ರಾಜ್ಯಗಳ ನಡುವೆಯೇ ಜಗಳ ತಂದಿಟ್ಟು ಆಟ ನೋಡುವುದು ಈ ಜನರ ಕುತಂತ್ರವಾಗಿದೆ. ಈ ಕುತಂತ್ರಕ್ಕೆ ಪದೇಪದೇ ಬಲಿಯಾಗುತ್ತಿರುವುದು ಕರ್ನಾಟಕ ರಾಜ್ಯ.

ಈಗಲೂ ಅಷ್ಟೆ, ಗೋದಾವರಿ ನದಿ ತಿರುವಿನ ವಿಷಯದಲ್ಲಿ ನಾವು ಆಂಧ್ರಪ್ರದೇಶವನ್ನು ಕೇಳುವುದೇನಿದೆ? ಸಮಗ್ರ ಪರಿಷ್ಕೃತ ಯೋಜನಾ ವರದಿಯನ್ನು ಸಿದ್ಧಗೊಳಿಸಬೇಕಿರುವುದು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ. ಇದು ಕೇಂದ್ರ ಸರ್ಕಾರದ ಮೂಗಿನ ನೇರಕ್ಕೆ ಕೆಲಸ ಮಾಡುವ ಸಂಸ್ಥೆ. ಇದು ಕರ್ನಾಟಕದ ಪಾಲನ್ನೇ ಇಲ್ಲವಾಗಿ ಮಾಡುತ್ತದೆ ಎಂದರೆ ಏನರ್ಥ? ಏನು ಇದರ ಉದ್ದೇಶ? ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ ಅಧಿಕಾರಿಗಳ ತಲೆಯಲ್ಲಿ ಮೆದುಳು ಇದೆಯೋ ಅಥವಾ ಮಣ್ಣು ಇದೆಯೋ? ಈಗ ಕರ್ನಾಟಕವೇನೋ ತನ್ನ ಪ್ರತಿಭಟನೆಯನ್ನು ದಾಖಲು ಮಾಡಿದೆ. ಕೇಂದ್ರ ಸಚಿವೆ ಉಮಾಭಾರತಿ ಕರ್ನಾಟಕದ ತಕರಾರನ್ನು ಪರಿಗಣಿಸುವುದಾಗಿ ಹೇಳಿದ್ದಾರೆ. ಆದರೆ ನಮ್ಮ ಅಳಲನ್ನು ನಿಜವಾಗಿಯೂ ಕೇಳುವ ವ್ಯವಧಾನ ಕೇಂದ್ರ ಸರ್ಕಾರಕ್ಕಿದೆಯೇ?
ಕೇಂದ್ರ ಸರ್ಕಾರ ಈಗಾಗಲೇ ಗಂಗಾ ನದಿ ಶುದ್ಧೀಕರಣಕ್ಕಾಗಿ ಇಪ್ಪತ್ತು ಸಾವಿರ ಕೋಟಿ ರುಪಾಯಿಗಳನ್ನು ತನ್ನ ಬಜೆಟ್‌ನಲ್ಲಿ ನೀಡಲು ತೀರ್ಮಾನಿಸಿದೆ. ಉತ್ತರ ಭಾರತೀಯರ ಈ ಕನಸಿನ ಯೋಜನೆಗೆ ಬರುವ ಐದು ವರ್ಷಗಳಲ್ಲಿ ಇಡೀ ದೇಶದ ಜನರ ತೆರಿಗೆ ಹಣ ಖರ್ಚಾಗಲಿದೆ. ದಕ್ಷಿಣ ಭಾರತದ ಯಾವುದಾದರೂ ನದಿಯ ವಿಷಯದಲ್ಲಿ ಕೇಂದ್ರ ಸರ್ಕಾರ ಇಂಥ ಯೋಜನೆಯೊಂದನ್ನು ಹಮ್ಮಿಕೊಳ್ಳುವ ಬಗ್ಗೆ ನಾವು ಕನಸು ಮನಸಿನಲ್ಲಾದರೂ ಕಲ್ಪಿಸಿಕೊಳ್ಳಲು ಸಾಧ್ಯವೇ? ‘ನವಾಮಿ ಗಂಗೆ’ಗಾಗಿ ಇಪ್ಪತ್ತು ಸಾವಿರ ಕೋಟಿ ರುಪಾಯಿ ಖರ್ಚು ಮಾಡುವ ಕೇಂದ್ರ ಸರ್ಕಾರ ಇಲ್ಲಿ ನಮ್ಮ ದುಡ್ಡಿನಲ್ಲಿ ನಾವೇ ಕಳಸಾ ಬಂಡೂರಿ ಯೋಜನೆ ಮಾಡಿಕೊಂಡು ಏಳುವರೆ ಟಿಎಂಸಿ ಕುಡಿಯುವ ನೀರು ಪಡೆಯುತ್ತೇವೆ ಎಂದರೆ ಅದಕ್ಕಾಗಿ ಒಂದು ಜಲನ್ಯಾಯ ಮಂಡಳಿ ರಚಿಸಿ ಕೈ ತೊಳೆದುಕೊಂಡು ಜಗಳ ತಂದಿಡುತ್ತದೆ. ಅತ್ತ ಗೋದಾವರಿ ನದಿ ತಿರುವು ಯೋಜನೆಯ ಕರ್ನಾಟಕದ ಪಾಲನ್ನು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ ಮೂಲಕ ತಿರಸ್ಕರಿಸಿ ಕನ್ನಡಿಗರ ಬೆನ್ನಿಗೆ ಚೂರಿ ಇರಿಯುತ್ತದೆ.

ಹಿಂದಿ ಸಾಮ್ರಾಜ್ಯಶಾಹಿ ಕೇವಲ ಭಾಷೆಯ ವಿಷಯದಲ್ಲಿ ಮಾತ್ರವಲ್ಲ, ಭಾಷಾ ಸಮುದಾಯಗಳನ್ನು ಹೇಗೆ ಕಾಲ್ಚೆಂಡಾಗಿ ಬಳಸಿಕೊಂಡು ಆಟವಾಡುತ್ತಿದೆ ನೋಡಿ. ಈ ಸಂಕಟದ ಸ್ಥಿತಿಯಲ್ಲಿ ಒಂದಾಗಿ ಹೋರಾಡಬೇಕಿದ್ದ ದಕ್ಷಿಣದ ರಾಜ್ಯಗಳು ಪರಸ್ಪರ ಜಗಳ, ಸಂಘರ್ಷ ನಡೆಸಿಕೊಂಡು ಹೈರಾಣಾಗಿ ಹೋಗಿವೆ. ಇದಕ್ಕಿಂತ ವ್ಯಂಗ್ಯ ಮತ್ತೊಂದಿರಲು ಸಾಧ್ಯವೇ?

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

No comments:

Post a Comment