Monday, 7 December 2015

ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ಬೇಕಾಗಿದೆ



ಕನ್ನಡ ರಾಜ್ಯೋತ್ಸವ ಮಾಸ ಮುಗಿಯುತ್ತಿದೆ. ಈ ಸಂದರ್ಭದಲ್ಲಿ ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಸಾಕಷ್ಟಿವೆ. ನಮಗೆಲ್ಲ ಗೊತ್ತಿದೆ, ಕನ್ನಡ ಎನ್ನುವುದೇ ಒಂದು ದೇಶವಾಗಿತ್ತು. ಹತ್ತಾರು ರಾಜವಂಶಗಳು ಈ ಕನ್ನಡ ನಾಡನ್ನು ಕಟ್ಟಿ ಬೆಳೆಸಿದ್ದವು. ಸ್ವಾತಂತ್ರ್ಯ ಸಂಗ್ರಾಮದ ನಂತರ ಕನ್ನಡ ನಾಡು ಭಾರತ ಒಕ್ಕೂಟದಲ್ಲಿ ವಿಲೀನವಾಯಿತು. ವಿಲೀನವಾಗುವುದು ಎಂದರೆ ತನ್ನತನವನ್ನು ಕಳೆದುಕೊಂಡು ಪರಾಧೀನವಾಗುವುದಲ್ಲ. ತನ್ನ ಅಸ್ಮಿತೆಯನ್ನು ಉಳಿಸಿಕೊಂಡೇ ಈ ಒಕ್ಕೂಟದ ಹೆಮ್ಮೆಯ ಭಾಗವಾಗುವುದು.

ಆದರೆ ಹುಸಿ ರಾಷ್ಟ್ರೀಯತೆಯ ಹೆಸರಿನಲ್ಲಿ, ಏಕತ್ವವನ್ನು ಸಾರುವ ಹುನ್ನಾರದಲ್ಲಿ ಪ್ರಾದೇಶಿಕ ನುಡಿ, ಸಂಸ್ಕೃತಿಗಳ ಅಸ್ತಿತ್ವವನ್ನೇ ಕಡೆಗಣಿಸುತ್ತಿರುವ ಬೆಳವಣಿಗೆಗಳು ಸಾಲುಸಾಲಾಗಿ ನಡೆಯುತ್ತಿವೆ. ಬೇರೇನೂ ಬೇಡ, ಕನ್ನಡ ನಾಡು ತನ್ನದೇ ಒಂದು ಬಾವುಟವನ್ನು ಅಧಿಕೃತವಾಗಿ ಹೊಂದಲು ಸಾಧ್ಯವಾಗಿಲ್ಲ ಎಂಬುದೊಂದು ದೊಡ್ಡ ವ್ಯಂಗ್ಯ, ಒಕ್ಕೂಟ ವ್ಯವಸ್ಥೆಯ ಅಣಕ. ಕನ್ನಡ ನಾಡಿಗೊಂದು ಬಾವುಟವಿರಬೇಕು ಎಂದರೆ ರಾಷ್ಟ್ರಧ್ವಜವನ್ನು ತಿರಸ್ಕರಿಸಬೇಕು ಎಂದೇನೂ ಅಲ್ಲ, ಅಥವಾ ಆ ಧ್ವಜಕ್ಕಿಂತ ಎತ್ತರದ ಸ್ಥಾನಮಾನವನ್ನು ನಾಡಧ್ವಜಕ್ಕೆ ಕೊಡಬೇಕು ಎಂದೇನೂ ಅಲ್ಲ. ಭಾರತ ಒಕ್ಕೂಟದ ಎಲ್ಲ ರಾಜ್ಯಗಳು ತಮ್ಮದೇ ಆದ ನುಡಿ, ಸಂಸ್ಕೃತಿಗಳನ್ನು ಹೊಂದಿರುವಂತೆ ತಮ್ಮದೇ ಆದ ಗುರುತುಗಳನ್ನು, ಹೆಮ್ಮೆಯ ಪ್ರತೀಕಗಳನ್ನು ಹೊಂದಿರುವುದರಲ್ಲಿ ತಪ್ಪೇನಿದೆ? ಆದರೆ ಈ ಕೆಲಸ ಇದುವರೆಗೆ ಆಗಿಲ್ಲ ಎಂದರೆ ಬಹಳ ಮಂದಿಗೆ ಆಶ್ಚರ್ಯವಾಗಬಹುದು. ಹಾಗಿದ್ದರೆ ನಾವು ಬಳಸುತ್ತಿರುವ ಹರಿಶಿನ-ಕೆಂಪು ಬಣ್ಣದ ಧ್ವಜಕ್ಕೆ ಅಧಿಕೃತ ಮಾನ್ಯತೆಯಿಲ್ಲವೇ? ಯಾಕೆ ಅದನ್ನು ಕೊಡಲಾಗಿಲ್ಲ ಎಂಬ ಪ್ರಶ್ನೆಗಳೂ ಉದ್ಭವವಾಗಬಹುದು. ಇದಕ್ಕೆ ನಮ್ಮ ಧ್ವಜದ ಇತಿಹಾಸವನ್ನೊಮ್ಮೆ ಅವಲೋಕಿಸಿದರೆ ಒಂದಷ್ಟು ಉತ್ತರಗಳು ಸಿಗಬಹುದು.
ಕನ್ನಡಕ್ಕೆ, ಕರ್ನಾಟಕಕ್ಕೆ ಒಂದು ಧ್ವಜವನ್ನು ರೂಪಿಸಿಕೊಟ್ಟಿದ್ದು ಕರ್ನಾಟಕ ಸರ್ಕಾರವಲ್ಲ. ಸರ್ಕಾರ ನೇಮಿಸಿದ ಅಧಿಕಾರಿಗಳ ಸಮಿತಿಯೂ ಅಲ್ಲ, ಸರ್ಕಾರದ ಯಾವುದೇ ಇಲಾಖೆಯೂ ಅಲ್ಲ. ಕರ್ನಾಟಕ ಸರ್ಕಾರ ಇವತ್ತಿನವರೆಗೂ ನಮ್ಮೆ ಹೆಮ್ಮೆಯ ಹಳದಿ-ಕೆಂಪು ಬಾವುಟವನ್ನು ಅಧಿಕೃತ ನಾಡಧ್ವಜ ಎಂದು ಒಪ್ಪಿಕೊಂಡೇ ಇಲ್ಲ, ಅಧಿಕೃತ ಮಾನ್ಯತೆಯನ್ನೂ ನೀಡಿಲ್ಲ. ಕನ್ನಡ ಧ್ವಜ ನೀಡಿದ್ದು ಕನ್ನಡ ಚಳವಳಿಗಾರರು.

೧೯೬೬ರವರೆಗೆ ಕನ್ನಡಕ್ಕೊಂದು ನಿರ್ದಿಷ್ಟ ಬಾವುಟವೇ ಇರಲಿಲ್ಲ. ಕೆಲವರು ಭುವನೇಶ್ವರಿ ಚಿತ್ರವಿದ್ದ ಕೇಸರಿ ಬಣ್ಣದ ಬಾವುಟವನ್ನು ಬಳಸುತ್ತಿದ್ದರಾದರೂ ಅದನ್ನು ಒಪ್ಪಿಕೊಳ್ಳಲು ಹೆಚ್ಚುಮಂದಿ ತಯಾರಿರಲಿಲ್ಲ. ಕೇಸರಿ ಬಣ್ಣ ನಿರ್ದಿಷ್ಟ ಧಾರ್ಮಿಕತೆಯನ್ನು ಸಂಕೇತಿಸುವುದರಿಂದ ಅದು ಬೇಡ ಎಂಬುದು ಬಹಳಷ್ಟು ಮಂದಿಯ ಅಭಿಪ್ರಾಯವಾಗಿತ್ತು.
ಅರವತ್ತರ ದಶಕ ಕನ್ನಡ ಚಳವಳಿ ಮೊಳಕೆಯೊಡೆದ ಕಾಲಘಟ್ಟ. ಆಗ ಬೆಂಗಳೂರಿನಲ್ಲಿ ವಲಸಿಗ ತಮಿಳರ ಆಟಾಟೋಪಗಳು ಮಿತಿಮೀರಿದ್ದವು. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಅಬ್ಬರ ನಡೆಯುತ್ತಿತ್ತು. ಭಾಷಾ ದುರಭಿಮಾನಿ ತಮಿಳರು ಡಿಎಂಕೆ ಬಾವುಟವನ್ನೇ (ಕಪ್ಪು-ಕೆಂಪು ಬಣ್ಣ) ತಮಿಳು ಬಾವುಟದಂತೆ ಬಳಸುತ್ತಿದ್ದರು. ಕನ್ನಡಿಗರನ್ನು ಕೆಣಕಲೆಂದೇ ಎತ್ತರದ ಜಾಗದಲ್ಲಿ ದೊಡ್ಡ ದೊಡ್ಡ ಧ್ವಜಸ್ಥಂಭಗಳನ್ನು ನಿರ್ಮಿಸಿ ಡಿಎಂಕೆ ಬಾವುಟ ಏರಿಸುತ್ತಿದ್ದರು. ಬೆಂಗಳೂರು ಮಹಾನಗರಪಾಲಿಕೆಗೆ ಡಿಎಂಕೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಆಯ್ಕೆಯಾಗಿ ಬರುತ್ತಿದ್ದರು. ಕನ್ನಡಿಗರ ಮೇಲೆ ಪ್ರತಿನಿತ್ಯ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿದ್ದವು.

ಇಂಥ ಸಂಕಷ್ಟದ ಕಾಲದಲ್ಲಿ ಮ.ರಾಮಮೂರ್ತಿ ವೀರಸೇನಾನಿಯಾಗಿ ಕನ್ನಡ ಚಳವಳಿಯ ನೇತೃತ್ವ ವಹಿಸಿಕೊಂಡಿದ್ದರು. ಹಲವೆಡೆ ಡಿಎಂಕೆ ಧ್ವಜಗಳನ್ನು ರಾಮಮೂರ್ತಿಯವರೇ ಮುಂದೆ ನಿಂತು ತೆರವುಗೊಳಿಸಿದರು. ಕನ್ನಡಕ್ಕೂ ಒಂದು ಧ್ವಜ ಬೇಕೇಬೇಕು ಎಂಬ ತೀರ್ಮಾನಕ್ಕೆ ರಾಮಮೂರ್ತಿ ಬಂದಿದ್ದರು. ಆಗ ಕ್ರಿಯಾಶೀಲರಾಗಿದ್ದ ಎಲ್ಲ ಕನ್ನಡ ಚಳವಳಿಗಾರರಿಗೂ ಕನ್ನಡ ಧ್ವಜದ ಅನಿವಾರ್ಯತೆ ಅರ್ಥವಾಗಿತ್ತು. ೧೯೬೬ರಲ್ಲಿ ಮೈಸೂರಿನ ಚೇಂಬರ್ ಆಫ್ ಕಾಮರ್‍ಸ್‌ನಲ್ಲಿ ಅಖಿಲ ಕರ್ನಾಟಕ ಕನ್ನಡಿಗರ ಬೃಹತ್ ಸಮಾವೇಶ ಮ.ರಾಮಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕನ್ನಡ ಬಾವುಟ ರಚನೆಯೇ ಸಮಾವೇಶದ ಪ್ರಮುಖ ಉದ್ದೇಶವಾಗಿತ್ತು.

ತೆಳು ಹಳದಿ ಬಣ್ಣದ ಎರಡು ಮೂಲೆ ಇರುವ ಬಾವುಟ ರಚಿಸಲು ಸಮಾವೇಶ ತೀರ್ಮಾನಿಸಿತು. ಬಾವುಟದ ಮಧ್ಯಭಾಗದಲ್ಲಿ ಅಖಂಡ ಕರ್ನಾಟಕದ ಭೂಪಟವನ್ನು ಕೆಂಪುಬಣ್ಣದಲ್ಲಿ ಚಿತ್ರಿಸಲು ಮತ್ತು ಮಧ್ಯದಲ್ಲೆ ಬೆಳೆಯುತ್ತಿರುವ ಏಳು ಪೈರು (ತೆನೆಯ) ಚಿತ್ರ ಇರಿಸಲು ನಿರ್ಧರಿಸಲಾಯಿತು. ಹಳದಿ ಬಣ್ಣ ಶಾಂತಿಯ ಸಂಕೇತವಾಗಿ ಬಳಕೆಯಾಗಿತ್ತು. ಮಾತ್ರವಲ್ಲದೆ ಕರ್ನಾಟಕವು ಚಿನ್ನದ ನಾಡು ಎಂಬುದನ್ನು ಹೇಳುತ್ತಿತ್ತು. ಕೆಂಪು ಬಣ್ಣವು ಕರ್ನಾಟಕದಿಂದ ಹೊರಗೆ ಉಳಿದ ಕನ್ನಡ ಪ್ರದೇಶಗಳನ್ನು ಮತ್ತೆ ರಾಜ್ಯಕ್ಕೆ ಸೇರಿಸಿಕೊಳ್ಳುವ ಸಲುವಾಗಿ ನಡೆಸಬೇಕಾದ ಹೋರಾಟದ ಸಂಕೇತವಾಗಿತ್ತು. ಹಸಿರು ತೆನೆ ಸಮೃದ್ಧಿಯ ಸಂಕೇತವಾಗಿತ್ತು. ಏಳು ಸಾಮ್ರಾಜ್ಯಗಳು ಕನ್ನಡನಾಡನ್ನು ಆಳಿದ್ದರಿಂದ ಏಳು ತೆನೆಗಳನ್ನು ಇರಿಸಲಾಗಿತ್ತು. ಕನ್ನಡ ಪಕ್ಷ ಅಧಿಕಾರಕ್ಕೆ ಬಂದಮೇಲೆ ಎಂಟನೇ ತೆನೆಯನ್ನು ಇರಿಸುವ ನಿರ್ಧಾರವನ್ನೂ ಕೈಗೊಳ್ಳಲಾಗಿತ್ತು.
ಈ ಬಾವುಟ ಅಸ್ತಿತ್ವಕ್ಕೆ ಬಂದ ನಂತರ ನಾನಾರೀತಿಯ ಪ್ರತಿಕ್ರಿಯೆಗಳು ಬಂದವು. ಪ್ರಾಯೋಗಿಕವಾಗಿ ಈ ಬಾವುಟ ಬಳಕೆ ಕ್ಲಿಷ್ಟಕರವಾಗಿತ್ತು. ಸರಳವಾಗಿಲ್ಲದ ಬಾವುಟ ಜನರ ಬಳಕೆಗೆ ಬರುವುದಾದರೂ ಹೇಗೆ ಎಂಬುದು ಬಹಳಷ್ಟು ಮಂದಿಯ ಪ್ರಶ್ನೆಯಾಗಿತ್ತು. ಮ.ರಾಮಮೂರ್ತಿಯವರಿಗೂ ಇದು ಸಾರ್ವತ್ರಿಕ ಬಳಕೆಗೆ ಸರಿಹೊಂದದ ಬಾವುಟ ಎಂದು ಅನ್ನಿಸಿತ್ತು. ಈ ಕಾರಣದಿಂದ ಮತ್ತೊಂದು ಬಾವುಟವನ್ನು ರೂಪಿಸುವುದು ಅನಿವಾರ್ಯವಾಗಿತ್ತು. ಹೀಗಾಗಿ ಮ.ರಾಮಮೂರ್ತಿ ಮತ್ತೊಮ್ಮೆ ಎಲ್ಲ ಕನ್ನಡಚಳವಳಿಗಾರರ ಸಭೆ ಕರೆದರು.

ಅರಳಿಪೇಟೆಯಲ್ಲಿ ಮ.ರಾಮಮೂರ್ತಿಯವರು ಕರೆದ ಆ ಐತಿಹಾಸಿಕ ಸಭೆ ನಡೆದಿತ್ತು. ಸಭೆಯಲ್ಲಿ ಹಿರಿಯ ಕನ್ನಡ ಚಳವಳಿಗಾರರಾದ ಬೆ.ನಿ.ಈಶ್ವರಪ್ಪ, ಕ.ಮು.ಸಂಪಂಗಿ ರಾಮಯ್ಯ, ಮು.ಗೋವಿಂದರಾಜು ಮೊದಲಾದವರು ಭಾಗವಹಿಸಿದ್ದರು. ಸರಳವಾಗಿ ಹಳದಿ ಕೆಂಪು ಬಣ್ಣದ ನಾಲ್ಕುಮೂಲೆಗಳ ಬಾವುಟದ ಪ್ರಸ್ತಾಪವನ್ನು ರಾಮಮೂರ್ತಿಯವರು ಸಭೆಯ ಮುಂದಿಟ್ಟರು. ಸಭೆ ಸರ್ವಾನುಮತದಿಂದ ಈ ಪ್ರಸ್ತಾಪವನ್ನು ಅಂಗೀಕರಿಸಿತು. ಕಡೆಗೂ ಕನ್ನಡ ಬಾವುಟ ಮೈದಳೆದಿತ್ತು.
ಆದರೆ ಈ ಬಾವುಟವನ್ನೂ ಹಲವರು ಟೀಕಿಸಿದರು. ಹೊಸ ಬಾವುಟದ ವಿರುದ್ಧ ಕರಪತ್ರ ಚಳವಳಿಯನ್ನೂ ನಡೆಸಿದರು. ಆದರೆ ಕನ್ನಡದ ಜನತೆ ಮನಸಾರೆ ಈ ಬಾವುಟವನ್ನು ಒಪ್ಪಿಕೊಂಡಿದ್ದರು. ಹೀಗಾಗಿ ಮುಂದೆ ಗೊಂದಲಗಳಿಲ್ಲದಂತೆ ಈ ಬಾವುಟವೇ ಚಲಾವಣೆಗೆ ಬಂದಿತು.

ಹಾಗಿದ್ದರೆ ಕನ್ನಡ ಬಾವುಟ ಕರ್ನಾಟಕದ ಅಧಿಕೃತ ಬಾವುಟವೇ? ಅದಕ್ಕೆ ಸಾಂವಿಧಾನಿಕ ಮಾನ್ಯತೆ ಇದೆಯೇ? ಅದಕ್ಕೊಂದು ಧ್ವಜಸಂಹಿತೆಯೊಂದನ್ನು ರೂಪಿಸಲಾಗಿದೆಯೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡು ಹೊರಟರೆ ನಿರಾಶೆ ಮೂಡುತ್ತದೆ. ಇನ್ನೂ ಒಂದು ಖೇದವಾಗುವ ಸಂಗತಿಯೆಂದರೆ ಕನ್ನಡ ರಾಜ್ಯೋತ್ಸವವು ಹಿಂದೆ ಸರ್ಕಾರದ ಆಚರಣೆಯೂ ಆಗಿರಲಿಲ್ಲ. ಕರ್ನಾಟಕ ಏಕೀಕರಣಗೊಂಡಿದ್ದರೂ ಏಕೀಕರಣಗೊಂಡ ದಿನವನ್ನು ರಾಜ್ಯೋತ್ಸವವನ್ನಾಗಿ ಆಚರಿಸುವ ಪರಿಪಾಠವೇನೂ ಇರಲಿಲ್ಲ. ಇದನ್ನು ಗಮನಿಸಿದ ಮ.ರಾಮಮೂರ್ತಿಯವರೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ನಿರ್ಧಾರ ಮಾಡಿದರು. ೧೯೬೩ರ ನವೆಂಬರ್ ೧ರಂದು ರಾಜ್ಯೋತ್ಸವ ಆಚರಿಸಲು ನಿರ್ಧರಿಸಲಾಯಿತು. ಅಲ್ಲಿಯವರೆಗೆ ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವಗಳನ್ನಷ್ಟೇ ಸರ್ಕಾರ-ಸಂಘಸಂಸ್ಥೆಗಳು ಆಚರಿಸುತ್ತಿದ್ದವು. ಅದೇ ರೀತಿಯಲ್ಲಿ ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವ ಆಚರಿಸಲು ಮ.ರಾಮಮೂರ್ತಿ ಮತ್ತು ಕನ್ನಡ ಚಳವಳಿಗಾರರು ಅವತ್ತಿನಿಂದ ಇಂದಿನವರೆಗೆ ಲಕ್ಷಾಂತರ ಸಂಘಟನೆಗಳು ನಾಡಿನಾದ್ಯಂತ ಮತ್ತು ಜಗತ್ತಿನಾದ್ಯಂತ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿವೆ.
ನಂತರದ ವರ್ಷಗಳಲ್ಲಿ ನವೆಂಬರ್ ಒಂದರಂದು ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು ರಾಮಮೂರ್ತಿ ಸರ್ಕಾರಕ್ಕೆ ಬೇಡಿಕೆಯಿಟ್ಟರು. ಅದಕ್ಕಾಗಿ ಹೋರಾಟ ನಡೆಸಿದರು. ಅವರು ಸಂಪಾದಿಸುತ್ತಿದ್ದ ಕನ್ನಡ ಯುವಜನ ಪತ್ರಿಕೆಯಲ್ಲಿ ನಿರಂತರವಾಗಿ ಈ ಬಗ್ಗೆ ಬರೆದರು. ಸರ್ಕಾರ ಈ ಮನವಿಗೆ ಸ್ಪಂದಿಸದೇ ಇದ್ದ ನೇರವಾಗಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರನ್ನು ಟೀಕಿಸುವುದಕ್ಕೂ ಮ.ರಾಮಮೂರ್ತಿಯವರು ಹಿಂದೆ ಬೀಳಲಿಲ್ಲ. “ಕರ್ನಾಟಕದ ಶಿಲ್ಪಿಗಳೆಂದು ಕರೆಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರು ಕನ್ನಡದ ವಿಷಯದಲ್ಲಿ ಎಷ್ಟು ಅಭಿಮಾನಶೂನ್ಯರಾಗಿದ್ದರೆಂಬುದಕ್ಕೆ ರಾಜ್ಯೋತ್ಸವ ದಿನದಂದು ರಜಾ ಘೋಷಿಸದಿರುವುದೇ ಒಂದು ನಿದರ್ಶನವಾಗಿದೆ” ಎಂದು ಬಿರುನುಡಿಗಳನ್ನಾಡಿದ್ದರು.

ಕಡೆಗೂ ಸರ್ಕಾರ ಮಣಿಯಿತು. ಕನ್ನಡ ರಾಜ್ಯೋತ್ಸವದಂದು ರಜೆ ಘೋಷಣೆಯಾಯಿತು. ಸರ್ಕಾರವೇ ರಾಜ್ಯೋತ್ಸವ ಆಚರಣೆ ಆರಂಭಿಸಿತು. ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರಧ್ವಜವನ್ನಲ್ಲದೆ ಇತರೆ ಧ್ವಜವನ್ನು ಹಾರಿಸುವಂತಿಲ್ಲವಾದ್ದರಿಂದ ರಾಜ್ಯೋತ್ಸವದಂದು ರಾಷ್ಟ್ರಧ್ವಜಾರೋಹಣ ನಡೆಸಿ ನಂತರ ನಾಡಧ್ವಜ ಹಾರಿಸುವ ಪರಂಪರೆಯೊಂದು ಜಾರಿಗೆ ಬಂದಿತು.
ಕನ್ನಡದ ಹಳದಿ-ಕೆಂಪು ಬಣ್ಣವನ್ನು ಕನ್ನಡದ ಜನತೆ ಮನಪೂರ್ವಕವಾಗಿ ಒಪ್ಪಿಕೊಂಡರು. ಮ.ರಾಮಮೂರ್ತಿಯವರು ಕೊಟ್ಟ ಬಾವುಟವನ್ನು ಕನ್ನಡದ ಜನತೆಗೆ ತಲುಪಿಸುವ ಕೆಲಸವನ್ನು ಕನ್ನಡ ಚಳವಳಿಗಾರರು ನಡೆಸುತ್ತಲೇ ಬಂದರು. ಕರ್ನಾಟಕ ರಕ್ಷಣಾ ವೇದಿಕೆ ಆರಂಭಗೊಂಡ ನಂತರ ನಾವೂ ಸಹ ಕನ್ನಡದ ಬಾವುಟವನ್ನು ನಾವು ಬೀದರಿನಿಂದ ಹಿಡಿದು ಚಾಮರಾಜನಗರದವರೆಗೆ ಕೊಂಡೊಯ್ದೆವು. ಹಳದಿ-ಕೆಂಪು ಬಣ್ಣದ ಕನ್ನಡದ ಅಂಗವಸ್ತ್ರವನ್ನು (ಶಾಲು) ಮೊದಲು ಬಳಕೆಗೆ ತಂದಿದ್ದು ಕರ್ನಾಟಕ ರಕ್ಷಣಾ ವೇದಿಕೆ. ನಮ್ಮ ಲಕ್ಷಾಂತರ ಕಾರ್ಯಕರ್ತರು ಹೋರಾಟದ ಸಂದರ್ಭದಲ್ಲಿ ಇದೇ ಶಾಲನ್ನು ಬಳಸುತ್ತಾರೆ. ಕನ್ನಡ ಹೋರಾಟಕ್ಕೆ ಕೆಚ್ಚು ತುಂಬಿದ್ದು ಈ ಕನ್ನಡದಬಣ್ಣದ ಶಾಲು. ಕನ್ನಡ ದ್ರೋಹಿಗಳ ಎದೆ ನಡುಗಿಸುತ್ತಿರುವುದೂ ಇದೇ ಶಾಲು.

ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಎಂಬುದು ನಮ್ಮ ಘೋಷವಾಕ್ಯಗಳಲ್ಲಿ ಒಂದು. ಹಳದಿ ಬಣ್ಣ ನಮ್ಮ ವಿಶಾಲಹೃದಯದ ಸ್ನೇಹದ ಸಂಕೇತ. ಶಾಂತಿಯ ಸಂಕೇತ. ಆದರೆ ಸ್ನೇಹ-ಶಾಂತಿ ನಮ್ಮ ಹೇಡಿತನವಾಗಬಾರದು. ಕನ್ನಡಿಗರ ಆತ್ಮಾಭಿಮಾನ ಕೆರಳಿಸಿದರೆ ನಾವು ಸಮರಕ್ಕೆ, ಸಂಘರ್ಷಕ್ಕೂ ಸಿದ್ಧ. ಹೋರಾಟದ ಸಂಕೇತವಾಗಿ ಕೆಂಪು ಬಣ್ಣವಿದೆ.
ಈ ಹಿಂದೆ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ ರಾಜ್ಯೋತ್ಸವ ದಿನದಂದು ಕನ್ನಡ ಬಾವುಟ ಹಾರಿಸುವಂತಿಲ್ಲ ಎಂದು ಸರ್ಕಾರ ಆದೇಶವೊಂದನ್ನು ಹೊರಡಿಸಿದ್ದಾಗ ಇಡೀ ರಾಜ್ಯಾದ್ಯಂತ ಚಳವಳಿ ಸಂಘಟಿಸಿ, ಆ ಆದೇಶವನ್ನು ಹಿಂದಕ್ಕೆ ಪಡೆಯುವವರೆಗೆ ಆಂದೋಲನ ನಡೆಸಲಾಯಿತು. ನಂತರ ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ರಾಜ್ಯೋತ್ಸವದಂದು ಕಡ್ಡಾಯವಾಗಿ ಕನ್ನಡ ಧ್ವಜ ಹಾರಿಸುವಂತೆ ಆದೇಶ ಹೊರಡಿಸಿದ್ದರು. ಆದರೆ ಕನ್ನಡ ದ್ರೋಹಿಗಳು ಹೈಕೋರ್ಟ್‌ನಲ್ಲಿ ಸಲ್ಲಿಸಿದ ದಾವೆಯೊಂದರಿಂದಾಗಿ ಮುಂದೆ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರ ಕನ್ನಡ ಧ್ವಜಕ್ಕೆ ಯಾವ ಅಧಿಕೃತ ಮಾನ್ಯತೆಯೂ ಇಲ್ಲ ಎಂದು ಹೇಳುವುದರ ಜತೆಗೆ ಸದಾನಂದಗೌಡರ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ವಾಪಾಸು ಪಡೆಯಿತು.

ನ್ಯಾಯಾಲಯಗಳು ಇಂಥ ವಿಷಯಗಳಲ್ಲಿ ಮೂಗುತೂರಿಸುವುದು ಮೊದಲಿನಿಂದಲೂ ನಡೆದುಕೊಂಡೇ ಬಂದಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ಪರಿಣಾಮಕಾರಿಯಾದ ಕಾನೂನು ರೂಪಿಸಿ ಕನ್ನಡ ಧ್ಚಜಕ್ಕೆ ಅಧಿಕೃತ ಮಾನ್ಯತೆ ನೀಡುವುದರ ಜತೆಗೆ, ಧ್ವಜ ಸಂಹಿತೆಯನ್ನು ಜಾರಿಗೆ ತರಬೇಕಿದೆ. ಆ ಕೆಲಸ ಬೇಗ ಆಗಲಿ ಎಂದು ಆಶಿಸುವೆ.

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

No comments:

Post a Comment