Tuesday, 24 November 2015

ಕನ್ನಡ ಕ್ರೈಸ್ತರ ಕಣ್ಣೀರ ಕಥೆ ಕೇಳುತ್ತಿಲ್ಲವೇ ಮುಖ್ಯಮಂತ್ರಿಗಳೇ?

ಕಳೆದ ೨೦ ತಿಂಗಳಿಂದ ಆ ಮೂರು ಧರ್ಮಗುರುಗಳು ಜೈಲಿನಲ್ಲಿದ್ದಾರೆ. ಅವರ ನೋವಿನ ಧ್ವನಿ ಯಾರಿಗೂ ಕೇಳುತ್ತಿಲ್ಲ. ಕೇವಲ ಕನ್ನಡಕ್ಕಾಗಿ ಧ್ವನಿ ಎತ್ತಿದ್ದಕ್ಕಾಗಿ ಧರ್ಮಗುರುಗಳನ್ನು ಕೊಲೆ ಕೇಸಿನಲ್ಲಿ ಸಿಕ್ಕಿ ಹಾಕಿಸಲಾಗುತ್ತದೆ, ಅವರಿಗೆ ಯಾವ ಕಾರಣಕ್ಕೂ ಜಾಮೀನು ಸಿಗದಂತೆ ನೋಡಿಕೊಳ್ಳಲಾಗುತ್ತದೆ. ಒಂದು ಕೊಲೆ ಕೇಸಿನಲ್ಲಿ ತಮಗೆ ಯಾರು ವಿರೋಧಿಗಳೋ ಅವರನ್ನೆಲ್ಲ ಜೈಲಿಗೆ ಕಳುಹಿಸಿದರೆ ಅಲ್ಲಿಗೆ ಯುದ್ಧ ಗೆದ್ದಂತಲ್ಲವೇ? ಅದಕ್ಕೆ ಇದೇ ಕೊಲೆ ಕೇಸಿನ ಚಾರ್ಜ್‌ಶೀಟ್ ಸಲ್ಲಿಸುವಾಗ ತಮ್ಮ ವಿರುದ್ಧ ಪ್ರತಿಭಟಿಸಿದ ಮುಖ್ಯ ಧರ್ಮಾಧಿಕಾರಿಗಳು, ಚಳವಳಿ ಮುಖಂಡರನ್ನೆಲ್ಲ ಪ್ರಕರಣದಲ್ಲಿ ಸಿಲುಕಿಸಲಾಗುತ್ತದೆ. ಅಧಿಕಾರವೊಂದು ಕೈಯಲ್ಲಿದ್ದರೆ ಒಂದೇ ಏಟಿಗೆ ಎಷ್ಟೊಂದು ಹಕ್ಕಿ ಹೊಡೆದು ಎಸೆಯಬಹುದಲ್ಲವೇ? ಇದೆಂಥ ನೀಚ ಕುತಂತ್ರ?

ಮಾರ್ಚ್ ೩೧, ೨೦೧೩. ಅದು ಈಸ್ಟರ್ ಹಬ್ಬದ ದಿನ. ಯಶವಂತಪುರದ ಮೈಸೂರು ಲ್ಯಾಂಪ್ಸ್ ಬಳಿ ಇರುವ ಸೆಮಿನರಿಯ ರೆಕ್ಟರ್ ಕೆ.ಜೆ.ಥಾಮಸ್ ಅವರ ಕೊಲೆ ನಡೆಯುತ್ತದೆ. ರೆ. ಕೆ.ಜೆ.ಥಾಮಸ್ ಮೂಲತಃ ಮಲೆಯಾಳಿ. ಆದರೂ ಕನ್ನಡ ದ್ವೇಷಿಯೇನಲ್ಲ. ಸೆಮಿನರಿಯಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಅವಕಾಶ ನೀಡಿದವರು. ಕನ್ನಡ ಕ್ರೈಸ್ತರಿಗೂ ಅವರಿಗೂ ಯಾವುದೇ ಜಗಳವಿರಲಿಲ್ಲ, ಮನಸ್ತಾಪವಿರಲಿಲ್ಲ. ಪೊಲೀಸರು ಈ ಕೊಲೆ ಕೇಸಿನ ತನಿಖೆ ಆರಂಭಿಸಿದರು. ಹನ್ನೊಂದು ತಿಂಗಳಾಗುತ್ತ ಬಂದರೂ ಆರೋಪಿಗಳ ಬಂಧನವಾಗಿರಲಿಲ್ಲ. ಆದರೆ ಪೊಲೀಸರು ತನಿಖೆಯ ಜಾಡನ್ನು ಸರಿಯಾಗಿ ಗ್ರಹಿಸಿದ್ದರು ಮತ್ತು ಇನ್ನೇನು ಅದನ್ನು ಬಗೆಹರಿಸುವ ಹಂತದಲ್ಲಿದ್ದರು.

ಆಗ ಕೊಂಕಣಿ ಕ್ರೈಸ್ತರ ಸಮಾವೇಶವೊಂದು ಬೆಂಗಳೂರಿನಲ್ಲಿ ನಡೆಯಿತು. ಮುಖ್ಯಮಂತ್ರಿಗಳು ಭಾಗವಹಿಸಿದ್ದ ಸಮಾವೇಶವದು. ಬಿಷಪ್ ಬರ್ನಾಡ್ ಮೊರಾಸ್ ಈ ಕೊಲೆ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದರು. ಹನ್ನೊಂದು ತಿಂಗಳಾದರೂ ಕೊಲೆ ಆರೋಪಿಗಳನ್ನು ಬಂಧಿಸಲಾಗಿಲ್ಲ, ಇನ್ನು ಎರಡು ತಿಂಗಳೊಳಗೆ ಆರೋಪಿಗಳನ್ನು ಬಂಧಿಸಬೇಕು ಎಂದು ಎಚ್ಚರಿಕೆ ನೀಡಿದರು.

ಅದಾದ ನಂತರ ನಾಟಕೀಯವಾದ ವಿದ್ಯಮಾನಗಳು ನಡೆಯುತ್ತವೆ. ಕೊಂಕಣಿ ಕ್ರಿಶ್ಚಿಯನ್ ಆಗಿರುವ ನಿವೃತ್ತ ಡಿಸಿಪಿ ವಿಕ್ಟರ್ ಡಿಸೋಜ ಅವರನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಿಸಿ ಕೊಲೆ ಪ್ರಕರಣದ ತನಿಖೆಯನ್ನು ಅವರಿಗೆ ವಹಿಸಲಾಗುತ್ತದೆ. ಡಿಸೋಜಾ ಅಧಿಕಾರ ಸ್ವೀಕಾರ ಮಾಡಿದ ಕೂಡಲೇ ಕನ್ನಡ ಕ್ರೈಸ್ತರ ಪರವಾಗಿ ಹೋರಾಟದಲ್ಲಿ ನಿರತರಾಗಿದ್ದ ಫಾ. ಪ್ಯಾಟ್ರಿಕ್, ಫಾ. ಪೀಟರ್ ಮತ್ತು ಫಾ. ಇಲಿಯಾಜ್ ಅವರುಗಳನ್ನು ಬಂಧಿಸಿ ಜೈಲಿಗೆ ತಳ್ಳುತ್ತಾರೆ.

ಮೂವರು ಧರ್ಮಗುರುಗಳು ಈಗ ಜೈಲಿನಲ್ಲಿದ್ದಾರೆ. ಕಳೆದ ಇಪ್ಪತ್ತು ತಿಂಗಳಿನಿಂದ ಅವರಿಗೆ ಜಾಮೀನು ಸಹ ಸಿಕ್ಕಿಲ್ಲ, ಅವರ ಜತೆಗೆ ಇನ್ನೂ ನಾಲ್ಕು ಮಂದಿಯನ್ನು ಇದೇ ಕೇಸಿನಲ್ಲಿ ಹೆಸರಿಸಲಾಗಿದೆ. ಫಾ. ಅಯ್ಯಂತಪ್ಪ, ಫಾ.ಥಾಮಸ್, ಫಾ. ಚೆಸರಾ, ಫಾ.ಅಂತೋಣಿ ಹಾಗು ಕನ್ನಡ ಕ್ರೈಸ್ತರ ಹೋರಾಟದ ದೊಡ್ಡ ಶಕ್ತಿಯಾಗಿರುವ ರಫಾಯಿಲ್ ರಾಜ್ ಅವರುಗಳನ್ನು ಜೈಲಿಗೆ ತಳ್ಳಲು ಇಡೀ ವ್ಯವಸ್ಥೆ ತುದಿಗಾಲಲ್ಲಿ ನಿಂತಿದೆ.

ರೆ. ಕೆ.ಜೆ.ಥಾಮಸ್ ಯಾಕೆ ಕೊಲೆಯಾದರು? ಈ ಕೊಲೆ ಯಾರಿಗೆ ಹೇಗೆಲ್ಲ ಬಳಕೆಯಾಯಿತು? ಪೊಲೀಸರು ಯಾಕೆ ಕನ್ನಡ ಕ್ರೈಸ್ತರ ಪರವಾದ ಹೋರಾಟದಲ್ಲಿ ಇರುವವರನ್ನೆಲ್ಲ ಜೈಲಿಗೆ ತಳ್ಳುತ್ತಿದ್ದಾರೆ? ವಿಕ್ಟರ್ ಡಿಸೋಜಾ ಎಂಬ ತನಿಖಾಧಿಕಾರಿಗಳೂ ಆರ್ಚ್ ಬಿಷಪ್ ಬರ್ನಾಡ್ ಮೊರಾಸ್ ಅವರಿಗೂ ಏನು ಸಂಬಂಧ?

ಇದೆಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಕನ್ನಡ ಕ್ರೈಸ್ತರ ನಲವತ್ತು ವರ್ಷಗಳ ಹೋರಾಟವನ್ನು ಒಮ್ಮೆ ಅವಲೋಕಿಸಬೇಕು. ವೈದಿಕ ಧರ್ಮದಲ್ಲಿ ಸಂಸ್ಕೃತ ಹೇಗೆ ಆರಾಧನೆಯ ಭಾಷೆಯಾಗಿದೆಯೋ ಹಾಗೆ ಕ್ರೈಸ್ತರಿಗೆ ಪೂಜಾವಿಧಿವಿಧಾನಗಳನ್ನು ನಡೆಸಲು ಬಳಸುವ ಭಾಷೆಯಾಗಿದ್ದು ಲ್ಯಾಟಿನ್. ಸಂಸ್ಕೃತ ಹೇಗೆ ಬಹುತೇಕ ಹಿಂದೂಗಳಿಗೆ ಅರ್ಥವಾಗುವುದಿಲ್ಲವೋ ಹಾಗೆ ಲ್ಯಾಟಿನ್ ಸಹ ಇಟಲಿ, ಅಮೆರಿಕ ದೇಶಗಳನ್ನು ಹೊರತುಪಡಿಸಿ ಜಗತ್ತಿನ ಇನ್ಯಾವ ಭಾಗದ ಕ್ರಿಶ್ಚಿಯನ್ನರಿಗೂ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ೧೯೬೨ರಲ್ಲಿ ರೋಮ್‌ನಲ್ಲಿ ಪೋಪ್ ಅವರ ನೇತೃತ್ವದಲ್ಲಿ ಸಭೆ ಸೇರಿದ ಸುಮಾರು ೨೦೦೦ ಧರ್ಮಾಧ್ಯಕ್ಷರು ಇನ್ನುಮುಂದೆ ಆಯಾ ಭಾಗದ ಸ್ಥಳೀಯ ಭಾಷೆಗಳಲ್ಲೇ ಪ್ರಾರ್ಥನೆ, ಪೂಜಾವಿಧಿವಿಧಾನ ಮತ್ತು ಚರ್ಚುಗಳ ಆಡಳಿತ ನಡೆಯತಕ್ಕದ್ದು ಎಂಬ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ.

ಇದಾದ ನಂತರ ನ್ಯಾಯಯುತವಾಗಿ ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರಿನ ಚರ್ಚುಗಳಲ್ಲಿ ಕನ್ನಡವೇ ಪೂಜೆಯ ಭಾಷೆಯಾಗಬೇಕಿತ್ತು. ಆದರೆ ಆಗ ಇಲ್ಲಿದ್ದ ಬಿಷಪ್ ರೋಮ್‌ಗೆ ಒಂದು ಪತ್ರ ಬರೆದು, ಬೆಂಗಳೂರು ತಮಿಳುನಾಡಿನ ಭಾಗವಾಗಿರುವುದರಿಂದ ಇಲ್ಲಿ ತಮಿಳು ಭಾಷೆಯಲ್ಲೇ ಪ್ರಾರ್ಥನೆ, ಆಡಳಿತ ನಡೆಯುತ್ತದೆ ಎಂದು ತಿಳಿಸಿದರು. ಇದು ಗೊತ್ತಾಗುತ್ತಿದ್ದಂತೆ ಕನ್ನಡ ಕ್ರೈಸ್ತ ಧರ್ಮಗುರುಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು. ರೋಮ್‌ಗೆ ತಾವೂ ಸಹ ಪತ್ರಗಳನ್ನು ಬರೆದು ಬಿಷಪ್ ಅವರು ಸುಳ್ಳು ಮಾಹಿತಿ ನೀಡುತ್ತಿದ್ದಾರೆ, ಬೆಂಗಳೂರು ಕರ್ನಾಟಕದ ರಾಜಧಾನಿ. ಇಲ್ಲಿ ಕನ್ನಡವೇ ಆಡಳಿತ ಭಾಷೆ, ಜನಭಾಷೆ. ಬೆಂಗಳೂರು ತಮಿಳುನಾಡಿನ ಭಾಗವಲ್ಲ. ಇಲ್ಲಿನ ಬಿಷಪ್ ಅವರಿಗೆ ಕನ್ನಡದಲೇ ಆಡಳಿತ ಮತ್ತು ಪೂಜಾವಿಧಿವಿಧಾನ ನಡೆಸಲು ಆದೇಶ ನೀಡಬೇಕು ಎಂದು ಕನ್ನಡ ಕ್ರೈಸ್ತ ಧರ್ಮಗುರುಗಳು ಮನವಿ ಮಾಡುತ್ತಾರೆ.
ಆದರೆ ತಮಿಳುನಾಡು, ಕೇರಳ, ಪಾಂಡಿಚೇರಿ ಮೂಲದ ಧರ್ಮಾಧಿಕಾರಿಗಳು ಕನ್ನಡವನ್ನು ಬಳಸುವುದಕ್ಕೆ ಅವಕಾಶ ನೀಡುವುದಿಲ್ಲ. ಈ ಸಂಬಂಧ ರೋಮ್‌ನಿಂದಲೇ ನೇಮಿಸಲ್ಪಟ್ಟ ಬಿಷಪ್‌ಗಳ ಒಂದು ಸಮಿತಿ ಬೆಂಗಳೂರಿಗೆ ಭೇಟಿ ನೀಡಿ, ಅಧ್ಯಯನ ನಡೆಸಿ ಬೆಂಗಳೂರಿನಲ್ಲಿ ಕನ್ನಡವನ್ನೇ ಬಳಸಬೇಕು ಎಂದು ವರದಿ ನೀಡುತ್ತದೆ. ಆದರೆ ಒಬ್ಬರಾದ ಮೇಲೆ ಒಬ್ಬರಂತೆ ಬಂದ ಐದು ಮಂದಿ ಬಿಷಪ್‌ಗಳೂ ಕನ್ನಡದ ಆಡಳಿತವನ್ನು ತರಲು ನಿರಾಕರಿಸಿ, ತಮ್ಮ ಅಧಿಕಾರವನ್ನು ತ್ಯಜಿಸಿ ಹೊರಡುತ್ತಾರೆ.

೧೯೭೭ರಲ್ಲಿ ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತ ಸಂಘ ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡುತ್ತದೆ. ಕನ್ನಡ ಕ್ರೈಸ್ತರೆಲ್ಲರೂ ಒಂದಾಗಿ ಹೋರಾಟ ಆರಂಭಿಸುತ್ತಾರೆ. ೧೯೯೫ರಲ್ಲಿ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಕನ್ನಡ ಕ್ರೈಸ್ತರು ಬೆಂಗಳೂರಿನಲ್ಲಿ ಬೃಹತ್ ರ್‍ಯಾಲಿ ನಡೆಸಿ ಕನ್ನಡದಲ್ಲಿ ಪ್ರಾರ್ಥನೆಗಾಗಿ ತಮ್ಮ ಹಕ್ಕೊತ್ತಾಯವನ್ನು ಮಂಡಿಸುತ್ತಾರೆ.  ಗೋಕಾಕ್ ಚಳವಳಿ ಸಂದರ್ಭದಲ್ಲಿ ನಡೆದ ಈ ಚಳವಳಿ ಒಂದು ರೀತಿಯಲ್ಲಿ ಗೋಕಾಕ್ ಚಳವಳಿಗೂ ದೊಡ್ಡ ಸ್ಫೂರ್ತಿಯನ್ನು ನೀಡಿತ್ತು.

ಇತ್ತೀಚಿಗೆ ಬಂದ ಬಿಷಪ್ ಬರ್ನಾಡ್ ಮೊರಾಸ್ ಕನ್ನಡ ಕ್ರೈಸ್ತರ ಅಹವಾಲುಗಳನ್ನು ಕೇಳಿ, ತಮ್ಮ ಅಧಿಕಾರವಾಧಿಯಲ್ಲಿ ಕನ್ನಡವನ್ನೇ ಬಳಸಲು ತೀರ್ಮಾನಿಸುವುದಾಗಿ ಹೇಳಿದ್ದಲ್ಲದೆ, ಕನ್ನಡ ಕ್ರೈಸ್ತರ ಸಹಕಾರವನ್ನೂ ಕೋರಿದ್ದರು. ಕನ್ನಡ ಕ್ರೈಸ್ತರು ಅದನ್ನು ನಂಬಿಕೊಂಡು ಬರ್ನಾಡ್ ಮೊರಾಸ್ ಅವರಿಗೆ ಬೆಂಬಲ ನೀಡುತ್ತಿದ್ದರು.

ಇನ್ನೇನು ಕನ್ನಡ ಕ್ರೈಸ್ತರ ಎಲ್ಲ ಬೇಡಿಕೆಗಳೂ ಈಡೇರುತ್ತವೆ, ಬೆಂಗಳೂರಿನ ಎಲ್ಲ ಚರ್ಚುಗಳಲ್ಲಿ ಇನ್ನು ಕನ್ನಡವೇ ಮೊಳಗುತ್ತದೆ ಎಂದು ಕನ್ನಡ ಕ್ರೈಸ್ತರು ಕನಸು ಕಟ್ಟುತ್ತಿದ್ದರು. ಅಷ್ಟರಲ್ಲಿ ರೆ. ಕೆ.ಜೆ.ಥಾಮಸ್ ಕೊಲೆಯಾಗಿ ಹೋಗುತ್ತಾರೆ. ಆ ಕೊಲೆ ಕೇಸಿನಲ್ಲಿ ಹುಡುಹುಡುಕಿ ಕನ್ನಡ ಕ್ರೈಸ್ತರ ಪರವಾದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಧರ್ಮಾಧಿಕಾರಿಗಳನ್ನೆಲ್ಲ ಫಿಕ್ಸ್ ಮಾಡಲಾಗುತ್ತದೆ. ಕನ್ನಡಕ್ಕಾಗಿ ಹೋರಾಡುತ್ತಿದ್ದ ಕನ್ನಡ ಕ್ರೈಸ್ತರು ಈಗ ನಮ್ಮ ನಿರಪರಾಧಿ ಧರ್ಮಗುರುಗಳನ್ನು ಬಿಡುಗಡೆ ಮಾಡಿ ಎಂದು ಕಣ್ಣೀರಿಡುತ್ತಿದ್ದಾರೆ. ಆದರೆ ಅವರ ಗೋಳು ಯಾರಿಗೂ ಕೇಳುತ್ತಿಲ್ಲ.

ಕಳೆದ ಹದಿನೆಂಟು ವರ್ಷಗಳಿಂದ ನಾನು ಈ ಕನ್ನಡ ಕ್ರೈಸ್ತರ ಹೋರಾಟದಲ್ಲಿ ಪಾಲ್ಗೊಂಡಿದ್ದೇವೆ. ಅವರ ದುಃಖ ದುಮ್ಮಾನಗಳು ನನಗೆ ಚೆನ್ನಾಗಿ ಗೊತ್ತು. ಅವರದು ಸಾತ್ವಿಕ ಮಾರ್ಗದ ಹೋರಾಟ. ಅವರು ಕೊಲೆಗಡುಕರಾಗಲು ಸಾಧ್ಯವೇ ಇಲ್ಲ. ಸಾವಿರಾರು ಕನ್ನಡ ಕ್ರೈಸ್ತರು ಇಂದು ದಿನನಿತ್ಯ ಕಣ್ಣೀರು ಹಾಕುವ ಘೋರ ದುರಂತವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಆದರೆ ‘ಒಲೆ ಹತ್ತಿ ಉರಿದರೆ ನಿಲಬಹುದು, ಧರೆ ಹತ್ತಿ ಉರಿದರೆ ನಿಲಬಹುದೆ?’ ಎಂಬ ಶರಣರ ಮಾತಿನಂತೆ ಕನ್ನಡ ಕ್ರೈಸ್ತರು ನಿಂತ ನೆಲವೇ ಕುಸಿದುಹೋಗುತ್ತಿದೆ.

ಇದೇ ಕನ್ನಡ ಕ್ರೈಸ್ತರ ಪರವಾಗಿ ನಿಂತ ಕಾರಣಕ್ಕೆ ಆರ್‌ಟಿಐ ಕಾರ್ಯಕರ್ತನೆಂದು ಹೇಳಿಕೊಳ್ಳುವ ಬ್ಲಾಕ್ ಮೇಲರ್ ಒಬ್ಬಾತನನ್ನು ನನ್ನ ಮೇಲೆ ಛೂ ಬಿಟ್ಟು ಮಾಧ್ಯಮಗಳಲ್ಲಿ ಹೇಳಿಕೆ ಕೊಡಿಸಲಾಯಿತು. ನನ್ನನ್ನು ಮಾತ್ರವಲ್ಲ ಕನ್ನಡ ಚಳವಳಿಗಾರರನ್ನೆಲ್ಲ ಗುರಿಯಾಗಿರಿಸಿಕೊಂಡು ಅವರ ತೇಜೋವಧೆ ಮಾಡುವ ಪ್ರಯತ್ನಗಳು ನಡೆದವು.
ಹಿಂದೆ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಮತ್ತು ಬಿಷಪ್ ಬರ್ನಾಡ್ ಮೊರಾಸ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲೂ ನಾನು ಕನ್ನಡ ಕ್ರೈಸ್ತರ ಮೇಲೆ ಆಗುತ್ತಿರುವ ಶೋಷಣೆ, ದಬ್ಬಾಳಿಕೆ ನಿಲ್ಲಬೇಕು ಎಂದು ಒತ್ತಾಯಿಸಿದ್ದೆ. ಈಗಿನ ಗೃಹ ಸಚಿವರಾದ ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಕನ್ನಡ ಕ್ರೈಸ್ತರಿಗೆ ನ್ಯಾಯ ಒದಗಿಸಲು ಮನವಿ ಮಾಡಿದ್ದೆ. ಆದರೆ ಇದು ಬೇಲಿಯೇ ಎದ್ದು ಹೊಲ ಮೇಯುವ ಕಾಲ. ನ್ಯಾಯ ಎಲ್ಲಿ ಸಿಕ್ಕೀತು?

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಶೋಷಿತ ವರ್ಗಗಳ ಕುರಿತು ಕಾಳಜಿಯುಳ್ಳವರು. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವವರು. ಅವರಿಗಾದರೂ ಕನ್ನಡ ಕ್ರೈಸ್ತರ ಗೋಳಿನ ಕಥೆ ಮನ ಕಲಕುವುದಿಲ್ಲವೇ? ಹಣಬಲ, ತೋಳ್ಬಲ, ಅಧಿಕಾರ ಬಲವಿದ್ದರೆ ಯಾರನ್ನು ಬೇಕಾದರೂ ತುಳಿದುಹಾಕಬಹುದು ಎಂದರೆ ಇದನ್ನು ನಾಗರಿಕ ಸಮಾಜ ಎಂದು ನಾವು ಯಾಕೆ ಕರೆಯಬೇಕು?

ರೆ. ಕೆ.ಜೆ.ಥಾಮಸ್ ಕೊಲೆ ಕೇಸನ್ನು ಸಿಬಿಐಗೆ ವಹಿಸಿ, ನ್ಯಾಯಯುತವಾದ ತನಿಖೆ ನಡೆಯಲಿ ಎಂದು ಕನ್ನಡ ಕ್ರೈಸ್ತರೇ ಕಳೆದ ಇಪ್ಪತ್ತು ತಿಂಗಳಿನಿಂದ ಆಗ್ರಹಿಸುತ್ತ ಬಂದಿದ್ದಾರೆ. ಆದರೆ ಓರ್ವ ಧರ್ಮಾಧಿಕಾರಿಯ ನೆಂಟನಾಗಿರುವ ನಿವೃತ್ತ ಅಧಿಕಾರಿ ಕೊಂಕಣಿ ಭಾಷಿಕ ವಿಕ್ಟರ್ ಡಿಸೋಜಾ ಅವರನ್ನೇ ತನಿಖಾಧಿಕಾರಿನ್ನಾಗಿ ನೇಮಿಸಿದ್ದು ಯಾಕೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಹನ್ನೊಂದು ತಿಂಗಳಲ್ಲಿ ಬಗೆಹರಿಯದ ಕೊಲೆ ಪ್ರಕರಣವನ್ನು ಅಧಿಕಾರ ವಹಿಸಿಕೊಂಡ ತಕ್ಷಣ ವಿಕ್ಟರ್ ಡಿಸೋಜಾ ಹೇಗೆ ಬಗೆಹರಿಸಿದರು? ಈ ಕೇಸಿನಲ್ಲಿ ಕನ್ನಡ ಕ್ರೈಸ್ತರ ಪರವಾಗಿ ಹೋರಾಡುತ್ತಿದ್ದವರನ್ನೆಲ್ಲ ಫಿಕ್ಸ್ ಮಾಡಲು ಏನು ಕಾರಣ? ಇದರಲ್ಲಿ ಯಾರ ಕೈವಾಡವಿದೆ?

ಪ್ರಶ್ನೆಗಳು ನೂರಾರು ಇವೆ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಒಂದನ್ನು ನೆನಪಿಟ್ಟುಕೊಳ್ಳಬೇಕು. ಯಾರು ಎಷ್ಟೇ ಪ್ರಭಾವಿಗಳಾಗಿರಲಿ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಕೂಡದು. ನೀವು ಯಾರ ಕೈಗೊಂಬೆಯೂ ಆಗಬಾರದು. ನೀವು ಇಡೀ ಕರ್ನಾಟಕದ ಪ್ರತಿಯೊಬ್ಬ ಪ್ರಜೆ ಮುಖ್ಯಮಂತ್ರಿ ಎಂಬುದನ್ನು ಮರೆಯಬೇಡಿ. ಈಗಲಾದರೂ ನಿಮ್ಮ ಆತ್ಮಸಾಕ್ಷಿ ಜಾಗೃತಿಗೊಳ್ಳಲಿ. ಲಕ್ಷಾಂತರ ಕನ್ನಡ ಕ್ರೈಸ್ತರು ದಿನವೂ ಕಣ್ಣೀರಿಡುತ್ತಿದ್ದಾರೆ. ಅವರ ಕಣ್ಣೀರು ನಿಮ್ಮ ಸರ್ಕಾರಕ್ಕೆ ಎಂದಿಗೂ ಶೋಭೆ ತರದು. ಈಗಲಾದರೂ ಎಚ್ಚರಗೊಳ್ಳಿರಿ.

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ.

No comments:

Post a Comment