Wednesday, 28 October 2015

ರಾಜ್ಯೋತ್ಸವಕ್ಕೆ ಮುನ್ನ ಮುಖ್ಯಮಂತ್ರಿಗಳಿಗೊಂದು ಬಹಿರಂಗ ಅಹವಾಲು


ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರಿಗೆ,
ಆದರ ಪೂರ್ವಕ ನಮಸ್ಕಾರಗಳು ಹಾಗು ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಮತ್ತೆ ರಾಜ್ಯೋತ್ಸವ ಬಂದಿದೆ. ಕನ್ನಡಿಗರ ಸಮಸ್ಯೆಗಳು ಮಿತಿ ಮೀರಿ ಬೆಳೆಯುತ್ತಲೇ ಇದೆ. ಅದಕ್ಕಾಗಿ ನನ್ನ ಬಹಿರಂಗ ಅಹವಾಲುಗಳನ್ನು ನಿಮ್ಮ ಮುಂದಿರಿಸುತ್ತಿದ್ದೇನೆ.

ಈ ಬಾರಿಯೂ ರಾಜ್ಯೋತ್ಸವದ ಸಂಭ್ರಮ ಕಾಣಿಸುತ್ತಿಲ್ಲ. ರೈತರು ಸಾಲುಸಾಲಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವ ಆತಂಕಕಾರಿ ವಿದ್ಯಮಾನಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಅತ್ತ ಮಹದಾಯಿಯನ್ನು ಮಲಪ್ರಭೆಗೆ ಸೇರಿಸುವ ಮೂಲಕ ಐದಾರು ಜಿಲ್ಲೆಗಳಿಗೆ ನೀರಾವರಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಿ ಎಂದು ಉತ್ತರ ಕರ್ನಾಟಕ ಭಾಗದ ರೈತರು ಚಳವಳಿಗೆ ತೊಡಗಿ ನೂರು ದಿನಗಳು ಕಳೆದುಹೋಗಿವೆ. ಇನ್ನೊಂದೆಡೆ ರಾಯಚೂರಿಗೆ ಐಐಟಿ ಸಿಗಲಿಲ್ಲವೆಂಬ ಕಾರಣಕ್ಕೆ ಆ ಭಾಗದ ಜನರು ಮುನಿಸಿಕೊಂಡಿದ್ದಾರೆ. ರಾಜ್ಯೋತ್ಸವದ ದಿನವನ್ನು ಕರಾಳ ದಿನವನ್ನಾಗಿ ಆಚರಿಸುತ್ತೇವೆ ಎಂದು ಈ ಭಾಗಗಳ ಜನರು ನೊಂದು ನುಡಿಯುತ್ತಿದ್ದಾರೆ. ಎತ್ತಿನಹೊಳೆ ಯೋಜನೆ ಜಾರಿಯಾಗಬೇಕು ಎಂದು ಬಾಯಾರಿ ಬಳಲಿರುವ ಬಯಲುಸೀಮೆಯ ಜನರು ಬೇಡಿಕೊಳ್ಳುತ್ತಿದ್ದರೆ, ಈ ಯೋಜನೆಯಿಂದ ನಮ್ಮ ಬದುಕು ಮೂರಾಬಟ್ಟೆಯಾಗುತ್ತದೆ, ಹೀಗಾಗಿ ಯೋಜನೆ ಜಾರಿಗೆ ಅವಕಾಶ ನೀಡೆವು ಎಂದು ಕರಾವಳಿಯ ಜನರು ಸಿಟ್ಟಿಗೆದ್ದಿದ್ದಾರೆ. ರಾಜ್ಯದ ಎಲ್ಲೆಡೆ ತೀವ್ರ ಬರಗಾಲವಿದೆ, ಹೀಗಾಗಿ ಕುಡಿಯುವ ನೀರು, ವಿದ್ಯುತ್ ಇಲ್ಲದೆ ಜನರು ನರಳುವಂತಾಗಿದೆ. ದಿನೋಪಯೋಗಿ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ, ಬಡಜನರ ಬದುಕು ದುಸ್ತರವಾಗುತ್ತಲೇ ಹೋಗುತ್ತಿದೆ.

ಇದೆಲ್ಲ ಸಮಸ್ಯೆಗಳ ನಡುವೆ ದೇಶದ ಯಾವ ಒಕ್ಕೂಟ ರಾಜ್ಯವೂ ಅನುಭವಿಸದ ಸಮಸ್ಯೆಗಳನ್ನು ನಮ್ಮ ರಾಜ್ಯ ಎದುರಿಸಬೇಕಾಗಿದೆ. ಎಲ್ಲ ರಾಜ್ಯಗಳೂ ಸಮಾನ ಅವಕಾಶ, ಹಕ್ಕು, ಗೌರವಗಳನ್ನು ಪಡೆಯಬೇಕಾದ ಈ ಭಾರತ ಒಕ್ಕೂಟದಲ್ಲಿ ಕರ್ನಾಟಕ ಪದೇಪದೇ ಕಡೆಗಣಿಸಲ್ಪಟ್ಟಿದೆ ಮತ್ತು ವಂಚನೆಗೆ ಈಡಾಗುತ್ತ ಬರುತ್ತಿದೆ. ದೇಶಭಕ್ತಿಯ ಹೆಸರಿನಲ್ಲಿ ನಾಡಪ್ರೇಮ ಮುಕ್ಕಾಗುತ್ತಿದೆ. ಕನ್ನಡಿಗರ ಸ್ವಾಯತ್ತತೆ ಮಣ್ಣುಪಾಲಾಗಿದೆ. ‘ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಿರಬೇಕು’ ಎಂಬ ನಮ್ಮ ಆಶಯಕ್ಕೆ ಪದೇಪದೇ ಧಕ್ಕೆ ಬಂದೊದಗುತ್ತಿದೆ. ಕರ್ನಾಟಕ ವಲಸಿಗರ ಸ್ವರ್ಗವಾಗಿ ಕನ್ನಡಿಗರ ಅಸ್ಮಿತೆಯನ್ನೇ ನಿರಾಕರಿಸಲಾಗುತ್ತಿದೆ.

ನೀವು ಕನ್ನಡ ಕಾವಲು ಸಮಿತಿಯ (ಈಗಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷರಾಗಿದ್ದವರು. ನಿಮ್ಮ ರಾಜಕೀಯ ಜೀವನದ ಮೊದಲ ಹಂತದಲ್ಲೇ ಈ ಹುದ್ದೆಯನ್ನೇರಿ ಕೆಲಸ ಮಾಡಿದವರು. ಹೀಗಾಗಿ ಕನ್ನಡಿಗರ ಸಮಸ್ಯೆಗಳೇನು? ಅವುಗಳಿಗೆ ಕಂಡುಕೊಳ್ಳಬಹುದಾದ ಪರಿಹಾರಗಳೇನು ಎಂಬುದು ನಿಮಗೆ ಚೆನ್ನಾಗಿಯೇ ಗೊತ್ತಿದೆ. ಆದರೆ ನೀವು ಮುಖ್ಯಮಂತ್ರಿಯಾಗಿರುವ ಈ ಹೊತ್ತಿನಲ್ಲೂ ಕನ್ನಡಿಗರ ಸಮಸ್ಯೆಗಳು ಬೆಳೆಯುತ್ತಲೇ ಇವೆ. ಇದು ನನ್ನಂಥವರಿಗೆ ಅತ್ಯಂತ ನಿರಾಶೆಯನ್ನು ತರುತ್ತಿದೆ.
ರಾಜ್ಯೋತ್ಸವದ ಈ ಸಂದರ್ಭದಲ್ಲಿ ನಾವು ಮೊಟ್ಟ ಮೊದಲು ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ ಭಾರತ ಒಕ್ಕೂಟದಲ್ಲಿ ನಮಗೆ ಗೌರವಯುತ ಸ್ಥಾನಮಾನ, ಪಾಲು, ಅಧಿಕಾರ, ಸೌಲಭ್ಯಗಳು ದೊರೆತಿದೆಯೇ ಎಂಬುದು. ಇದಕ್ಕೆ ‘ಇಲ್ಲ’ ಎಂಬ ನಿರಾಶೆಯ ಉತ್ತರವೇ ನಮ್ಮ ಮುಂದೆ ನಿಂತು ನಮ್ಮನ್ನು ಹಂಗಿಸುತ್ತಿದೆ. ದೇಶದ ಅಭಿವೃದ್ಧಿಗೆ ನಮ್ಮ ರಾಜ್ಯವೇನೋ ಸಿಂಹಪಾಲು ನೀಡುತ್ತಿದೆ. ಆದರೆ ಕರ್ನಾಟಕವನ್ನು ಮಾತ್ರ ಈ ಒಕ್ಕೂಟ ವ್ಯವಸ್ಥೆ ಮಲತಾಯಿ ಧೋರಣೆಯಿಂದಲೇ ನೋಡಿಕೊಂಡು ಬಂದಿದೆ. ಕೋರ್ಟುಗಳು ನಮಗೆ ಅನ್ಯಾಯವೆಸಗಿವೆ. ಎಲ್ಲ ರಾಜ್ಯಗಳನ್ನು ಒಂದು ತಾಯಿಯ ಮಕ್ಕಳಂತೆ ನೋಡಬೇಕಾದ ಕೇಂದ್ರ ಸರ್ಕಾರಗಳು (ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸಹ) ಕರ್ನಾಟಕವನ್ನು ಕಡೆಗಣಿಸುತ್ತಲೇ ಬಂದಿವೆ.

ಒಕ್ಕೂಟದ ಎಲ್ಲ ರಾಜ್ಯಗಳು ತಮ್ಮ ತಮ್ಮ ಭಾಷೆ, ಸಂಸ್ಕೃತಿ ರಕ್ಷಣೆಯನ್ನು, ಅದರ ಪೋಷಣೆಯನ್ನು ಮಾಡಿಕೊಂಡು ಬರುವ ಅಧಿಕಾರ ಹೊಂದಿರುತ್ತವೆ ಎಂದು ಸಂವಿಧಾನವೇ ಹೇಳುತ್ತದೆ. ಆದರೆ ನ್ಯಾಯಾಲಯಗಳ ಹಸ್ತಕ್ಷೇಪದಿಂದ ಸರ್ಕಾರಗಳ ತೀರ್ಮಾನಗಳು ಕಸದ ಬುಟ್ಟಿಗೆ ಸೇರುತ್ತಿವೆ. ಮಾತೃಭಾಷಾ ಶಿಕ್ಷಣ ನೀತಿಗೆ ಸುಪ್ರೀಂ ಕೋರ್ಟ್ ಈಗಾಗಲೇ ಚರಮಗೀತೆ ಹಾಡಿದೆ. ಅದರ ವಿರುದ್ಧ ಸಂವಿಧಾನ ತಿದ್ದುಪಡಿಯನ್ನು ತಂದು ಎಲ್ಲ ಭಾಷಿಕ ಸಮುದಾಯಗಳನ್ನು, ಜನನುಡಿಗಳನ್ನು ರಕ್ಷಿಸಬೇಕು ಎಂಬ ನಮ್ಮ ಕೋರಿಕೆ ಈಡೇರಲೇ ಇಲ್ಲ. ಇದಕ್ಕಾಗಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಮಾತನಾಡಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಕಾರ್ಯ ಮಾಡಿ ಎಂದು ನಾವು ನಿಮ್ಮನ್ನು ಕೇಳಿಕೊಂಡೆವು. ಆದರೆ ನಿಮ್ಮ ಕಡೆಯಿಂದ ಆ ಪ್ರಯತ್ನ ನಡೆಯುತ್ತಿಲ್ಲ. ಶಿಕ್ಷಣ ಮಾಧ್ಯಮ ಕನ್ನಡವಾಗಿ ಉಳಿಯದೇ ಹೋದರೆ ವರ್ಷಗಳು ಕಳೆದಂತೆ ಕನ್ನಡವೂ ನಾಶವಾಗುತ್ತದೆ. ಭಾರತ ಒಂದು ದೇಶವಾಗಿದೆ ಎಂಬ ಒಂದೇ ಕಾರಣಕ್ಕೆ ನಾವು ನಮ್ಮ ಭಾಷೆಯನ್ನು ಕಳೆದುಕೊಳ್ಳಬೇಕೇ? ಭಾರತ ಒಂದು ದೇಶವಾಗುವುದಕ್ಕೂ ಮುನ್ನ ಇದು ಹಲವು ರಾಜ್ಯಗಳ ಒಕ್ಕೂಟ ಎಂಬುದನ್ನು ಮರೆಯಲು ಸಾಧ್ಯವೇ? ಇಂಥ ವಿಷಯಗಳ ಕುರಿತು ಪ್ರತಿರೋಧ ತೋರಬೇಕಿದ್ದ, ದೇಶದ ಎಲ್ಲ ಭಾಷಿಕ ಸಮುದಾಯಗಳನ್ನು ಒಗ್ಗೂಡಿಸಿ ಸಂವಿಧಾನ ತಿದ್ದುಪಡಿಗಾಗಿ ಆಗ್ರಹಿಸಬೇಕಿದ್ದ ನಿಮ್ಮ ಮೌನ ನಿಜಕ್ಕೂ ಅಚ್ಚರಿಯೆನಿಸುತ್ತಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ಯಾವ ರಾಜ್ಯದ ಜನರು ಇನ್ಯಾವುದೇ ರಾಜ್ಯಕ್ಕೆ ಹೋಗಿ ನೆಲೆಸಬಹುದು, ಎಲ್ಲಿ ಬೇಕಾದರೂ ತಮ್ಮ ಬದುಕನ್ನು ರೂಪಿಸಿಕೊಳ್ಳಬಹುದು. ಈ ನೀತಿಯ ಪರಿಣಾಮ ಏನಾಗಿದೆ ನೋಡಿ. ಪ್ರತಿನಿತ್ಯ ಸಾವಿರಾರು ಮಂದಿ ಹೊರರಾಜ್ಯಗಳಿಂದ ವಲಸಿಗರು ಬಂದು ಬೆಂಗಳೂರು, ಮೈಸೂರು ಮತ್ತಿತರ ನಗರಗಳಲ್ಲಿ ನೆಲೆ ನಿಲ್ಲುತ್ತಿದ್ದಾರೆ. ಹೀಗೇ ಮುಂದುವರೆದರೆ ಕನ್ನಡಿಗರೇ ಅಲ್ಪಸಂಖ್ಯಾತರಾಗಿ ಬಾಳುವ ದುರ್ಗತಿ ಬಂದೊದಗಿದರೂ ಆಶ್ಚರ್ಯವಿಲ್ಲ. ವಿಶೇಷವಾಗಿ ಉತ್ತರ ಭಾರತದಿಂದ ಆಗುತ್ತಿರುವ ವಲಸೆ ಎಷ್ಟು ಪ್ರಮಾಣದಲ್ಲಿದೆಯೆಂದರೆ ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಹಿಂದೀವಾಲಾಗಳದ್ದೇ ಅಬ್ಬರವಾಗಿಹೋಗಿದೆ. ವಲಸಿಗರು ಕನ್ನಡ ಕಲಿತು, ಇಲ್ಲಿನ ಜನರೊಂದಿಗೆ ಬೆರೆಯುವ ಬದಲು, ತಮ್ಮ ಭಾಷೆಯನ್ನೇ ಅದರಲ್ಲೂ ವಿಶೇಷವಾಗಿ ಹಿಂದಿಯನ್ನು ಕಲಿಯುವಂತೆ ಕನ್ನಡಿಗರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಇದಕ್ಕಿಂತ ಗಂಭೀರ ಸಮಸ್ಯೆ ಏನೆಂದರೆ ಕನ್ನಡಿಗರ ಆಸ್ತಿ ಈಗ ಕೈ ತಪ್ಪಿ ಹೋಗುತ್ತಿದೆ. ಎಲ್ಲೆಡೆ ಪರಭಾಷಿಗರದೇ ಆರ್ಭಟ. ಪರಭಾಷಿಗರು ನಿಧಾನವಾಗಿ ಕರ್ನಾಟಕದ ರಾಜಕಾರಣದ ಮೇಲೂ ಹಿಡಿತ ಸಾಧಿಸುತ್ತಿದ್ದಾರೆ. ನಮ್ಮ ರಾಜಕಾರಣಿಗಳೂ, ರಾಜಕೀಯ ಪಕ್ಷಗಳೂ ಸಹ ಮತಬ್ಯಾಂಕ್ ರಾಜಕಾರಣಕ್ಕಾಗಿ ಭಾಷಾ ಅಲ್ಪಸಂಖ್ಯಾತರ ಬೆನ್ನುಬಿದ್ದಿದ್ದಾರೆ. ಇದರ ಪರಿಣಾಮ ನೇರವಾಗಿ ಕನ್ನಡಿಗರ ಮೇಲೆ, ಕನ್ನಡ ಸಂಸ್ಕೃತಿಯ ಮೇಲೆ ಆಗುತ್ತಿದೆ. ಹೀಗಿರುವಾಗ ಈ ಅನಿಯಂತ್ರಿತ ವಲಸೆಯನ್ನು ನೀವಾದರೂ ತಡೆಯಬಹುದು ಎಂಬ ನಮ್ಮ ನಂಬುಗೆಯೂ ಹುಸಿಯಾಗಿದೆ. ವಲಸೆಯನ್ನು ತಡೆಯಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ನೀವು ಸಬೂಬು ಹೇಳಬಹುದು. ಆದರೆ ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ದಕ್ಕಬೇಕು ಎಂಬ ಸಂಕಲ್ಪವೊಂದನ್ನು ನೀವು ತೊಟ್ಟರೆ ಸಾಕು, ವಲಸೆ ಒಂದು ಹಂತದಲ್ಲಿ ನಿಯಂತ್ರಣಕ್ಕೆ ಬರುತ್ತದೆ. ಇದಕ್ಕಾಗಿ ಬೇರೇನೂ ಮಾಡಬೇಕಿಲ್ಲ. ಡಾ.ಸರೋಜಿನಿ ಮಹಿಷಿ ವರದಿಯನ್ನು ಈಗಿನ ಕಾಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿ ಜಾರಿಗೊಳಿಸಿದರೆ ಸಾಕು, ಆದರೆ ನಿಮ್ಮ ಸರ್ಕಾರಕ್ಕೆ ಆ ಇಚ್ಛಾಶಕ್ತಿ ಇದ್ದ ಹಾಗೆ ಕಾಣುತ್ತಿಲ್ಲ.

ನಿಮ್ಮ ಹಿಂದೆ ಇದ್ದ ಬಿಜೆಪಿ ಸರ್ಕಾರವೂ ಬಂಡವಾಳಶಾಹಿಗಳನ್ನು ಆಕರ್ಷಿಸುವ ಸಲುವಾಗಿ ಗ್ಲೋಬಲ್ ಇನ್ವೆಸ್ಟರ್‍ಸ್ ಮೀಟ್‌ನಂಥ ಬೃಹತ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ಈಗ ನೀವೂ ಸಹ ಇದನ್ನೇ ಮುಂದುವರೆಸುತ್ತಿದ್ದೀರಿ. ಬಂಡವಾಳಶಾಹಿಗಳಿಂದಲೇ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂಬ ಭ್ರಮೆಯನ್ನು ಈಗಾಗಲೇ ಬಿತ್ತಲಾಗಿದೆ. ಹೀಗಾಗಿ ನೀವು ಬಂಡವಾಳಶಾಹಿಗಳನ್ನು ಆಕರ್ಷಿಸಲು ರಿಯಾಯಿತಿ ದರದಲ್ಲಿ ಜಮೀನು, ರಿಯಾಯಿತಿ ದರದಲ್ಲಿ ವಿದ್ಯುತ್-ನೀರು, ತೆರಿಗೆ ಮನ್ನಾ, ತೆರಿಗೆ ರಜೆ ಅಥವಾ ತೆರಿಗೆ ರಿಯಾಯಿತಿ ಇತ್ಯಾದಿ ಸವಲತ್ತುಗಳನ್ನು ನೀಡುತ್ತೀರಿ. ಹೀಗೆಲ್ಲ ಸವಲತ್ತು ನೀಡುವಾಗ, ಅವರ ಸಂಸ್ಥೆಗಳಲ್ಲಿ ಶೇ. ೯೦ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೇ ಮೀಸಲಿಡಬೇಕು ಎಂಬ ಷರತ್ತನ್ನು ವಿಧಿಸಲು ಏನು ಸಮಸ್ಯೆ? ಈ ಬಂಡವಾಳಶಾಹಿಗಳಿಗಾಗಿ ರಾಜ್ಯದ ರೈತರು ತಮ್ಮ ಅಮೂಲ್ಯ ಜಮೀನನ್ನು ಬಿಟ್ಟುಕೊಟ್ಟಿದ್ದಾರೆ ಎಂಬುದನ್ನು ಮರೆಯಲು ಸಾಧ್ಯವೇ? ಈ ಸಂಸ್ಥೆಗಳು ಕನ್ನಡಿಗರಿಗಾಗಿ ಏನು ಮಾಡಿವೆ ಎಂಬುದರ ಅಂಕಿಅಂಶವನ್ನೇನಾದರೂ ಗಮನಿಸಿದ್ದೀರಾ?

ಖಾಸಗಿ ಸಂಸ್ಥೆಗಳ ವಿಷಯ ಹಾಗಿರಲಿ, ರೈಲ್ವೆ, ಬ್ಯಾಂಕಿಂಗ್, ವಿಮಾ ಕ್ಷೇತ್ರದಲ್ಲೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಗಳು ನಿಮ್ಮ ಗಮನಕ್ಕೆ ಬಂದಿಲ್ಲವೇ? ಇದರ ವಿರುದ್ಧ ಒಂದು ಸರ್ಕಾರವಾಗಿ ನಿಮ್ಮ ನಿಲುವೇನು? ಇತರೆ ರಾಜ್ಯಗಳು ತಮ್ಮ ತಮ್ಮ ಭಾಷಿಕ ಸಮುದಾಯಗಳಿಗೆ ಶೇ. ೮೦ರಿಂದ ೯೦ರಷ್ಟು ಉದ್ಯೋಗ ಮೀಸಲಾತಿಯನ್ನು ನೀಡುವ ಕಾನೂನುಗಳನ್ನು ಮಾಡಿಕೊಂಡಿವೆ. ಒರಿಸ್ಸಾ, ಮಹಾರಾಷ್ಟ್ರ ರಾಜ್ಯಗಳಿಗೆ ಸಾಧ್ಯವಾಗಿದ್ದು ಕರ್ನಾಟಕಕ್ಕೆ ಯಾಕೆ ಸಾಧ್ಯವಾಗುವುದಿಲ್ಲ. ಆ ರಾಜ್ಯಗಳಿಗೊಂದು ಸಂವಿಧಾನ, ನಮ್ಮ ರಾಜ್ಯಕ್ಕೊಂದು ಸಂವಿಧಾನ ಜಾರಿಯಲ್ಲಿದೆಯೇ?

ಮುಖ್ಯಮಂತ್ರಿಗಳೇ, ಸಮಸ್ಯೆ ನೂರೆಂಟು ಇವೆ. ನಾವು ಕನ್ನಡ ಚಳವಳಿಗಾರರು ಪದೇ ಪದೇ ಚಳವಳಿಯ ಮೂಲಕ ಇದನ್ನೆಲ್ಲ ನಿಮ್ಮ ಮುಂದಿಡುತ್ತಲೇ ಬಂದಿದ್ದೇವೆ. ಅದಕ್ಕಾಗಿ ನೀವು ನಮಗೆ ಕೊಡುವ ಉಡುಗೊರೆ ಪೊಲೀಸ್ ಕೇಸುಗಳು, ಜೈಲುವಾಸ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ತಮ್ಮ ಪಕ್ಷದ, ತಮ್ಮ ಪಕ್ಷದ ಪರವಾದ ಸಂಘಟನೆಗಳ ಮೇಲಿದ್ದ ಕ್ರಿಮಿನಲ್ ಕೇಸುಗಳನ್ನು ಹಿಂದಕ್ಕೆ ಪಡೆದರು. ನೀವು ಅಧಿಕಾರಕ್ಕೆ ಬಂದಮೇಲೆ ನಿಮಗೆ ಬೇಕಾದವರ ಕೇಸುಗಳನ್ನು ಹಿಂದಕ್ಕೆ ಪಡೆದಿರಿ. ಆದರೆ ನಾಡು-ನುಡಿಗಾಗಿ ಚಳವಳಿ ನಡೆಸಿದ ನಮ್ಮಗಳ ಮೇಲಿರುವ ಸಾವಿರಾರು ಕೇಸುಗಳು ಹಾಗೆಯೇ ಇವೆ. ನಾವು ಕೋರ್ಟು, ಜೈಲು ಅಲೆದುಕೊಂಡು ನಮ್ಮ ಹೋರಾಟ ಮುಂದುವರೆಸಿದ್ದೇವೆ.

ಸಮಸ್ಯೆಗಳು ನೂರೆಂಟು ಇವೆ. ಕೆಲವು ನಿಮ್ಮ ವ್ಯಾಪ್ತಿಯನ್ನು ಮೀರಿದ ಸಮಸ್ಯೆಗಳಿರಬಹುದು ನಿಜ. ಆದರೆ ರಾಜ್ಯದ ಮುಖ್ಯಮಂತ್ರಿಯಾದವರಿಗೆ ಈ ನಾಡನ್ನು ಕಾಪಾಡುವ ಹೊಣೆಯೇ ಮೊದಲಿನದ್ದು. ನಾಡನ್ನು ಕಾಪಾಡುವುದೆಂದರೆ ಈ ನಾಡಿನ ಜನರನ್ನು, ಅವರಾಡುವ ನುಡಿಯನ್ನು, ಅವರ ಸಂಸ್ಕೃತಿಯನ್ನು ಕಾಪಾಡುವುದು ಎಂದರ್ಥ. ಬರಿಯ ಘೋಷಣೆಗಳಿಂದ, ಭಾಷಾಭಿಮಾನದ ಮಾತುಗಳಿಂದ ಈ ನಾಡನ್ನು ರಕ್ಷಿಸಲಾಗದು. ಅದು ನಿಮಗೂ ಚೆನ್ನಾಗಿ ಗೊತ್ತಿದೆ. ಬೇಕಿರುವುದು ರಾಜಕೀಯ ಇಚ್ಛಾಶಕ್ತಿ ಮತ್ತು ಒಟ್ಟು ನಾಡನ್ನು ಕಾಪಾಡುವ ಕ್ರಿಯಾಶಕ್ತಿ. ನಿಮ್ಮ ಉಳಿದ ಅಧಿರಾವಧಿಯಲ್ಲಾದರೂ ಅದನ್ನು ಪ್ರದರ್ಶಿಸಬೇಕು ಎಂಬುದು ನನ್ನ ಆಗ್ರಹ.

ಅನ್ನಭಾಗ್ಯದಂಥ ಯೋಜನೆಗಳು ಜನರ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರಗಳು ಮಾತ್ರ. ನಮ್ಮ ರೈತರು, ಕೂಲಿ ಕಾರ್ಮಿಕರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕಿದೆ. ಕನ್ನಡದ ಮಕ್ಕಳಿಗೆ ಅತ್ಯಗತ್ಯವಾದ ಶಿಕ್ಷಣ ಮತ್ತು ಉದ್ಯೋಗವನ್ನು ದೊರಕಿಸಿಕೊಡುವ ಕಾರ್ಯ ಆಗಬೇಕಿದೆ. ರಾಜ್ಯದಲ್ಲಿ ಕುಂಟುತ್ತ ಸಾಗಿರುವ ಎಲ್ಲ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿದರೆ ನಾಡು ಸುಭಿಕ್ಷವಾಗದೇ ಇದ್ದೀತೆ? ಸರ್ಕಾರದ ಎಲ್ಲ ಯೋಜನೆಗಳು ಕಟ್ಟಕಡೆಯ ಮನುಷ್ಯನವರೆಗೆ ತಲುಪುವಂಥ ಪಾರದರ್ಶಕ, ಭ್ರಷ್ಟಾಚಾರ ರಹಿತ ವ್ಯವಸ್ಥೆ ಜಾರಿಗೆ ಬರಬೇಕಿದೆ. ಆಗ ಮಾತ್ರ ಬಡಜನರ ಪರವಾದ ಮುಖ್ಯಮಂತ್ರಿ ಎಂದು ನೀವು ಗಳಿಸಲು ಬಯಸುತ್ತಿರುವ ಕೀರ್ತಿಯೂ ಲಭಿಸುತ್ತದೆ.

ಮಾನ್ಯ ಮುಖ್ಯಮಂತ್ರಿಗಳೇ, ಈಗಲೂ ಕಾಲ ಮಿಂಚಿಲ್ಲ. ರಾಜ್ಯೋತ್ಸವದ ಈ ಸಂದರ್ಭದಲ್ಲಿ ನೀವು ಮತ್ತು ನಿಮ್ಮ ಸರ್ಕಾರ ಹೊಸನಾಡೊಂದನ್ನು ಕಟ್ಟುವ ಸಂಕಲ್ಪವನ್ನು ತೊಡಬೇಕಿದೆ. ಕನ್ನಡಿಗರ ಕನಸುಗಳನ್ನು ಸಾಕಾರಗೊಳಿಸುವ ದೊಡ್ಡ ಹೊಣೆ ನಿಮ್ಮ ಮುಂದಿದೆ. ಅದನ್ನು ಇನ್ನಾದರೂ ಮಾಡಬಹುದೆಂಬ ನಿರೀಕ್ಷೆ ನನ್ನದು.

ಗೌರವಾದರಗಳೊಂದಿಗೆ
ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

Friday, 23 October 2015

ರಾಜಸ್ಥಾನದ ‘ಶಿಲ್ಪಗ್ರಾಮ’ ಕರ್ನಾಟಕದಲ್ಲೂ ಆಗಬೇಕಿದೆ...


ಕಳೆದ ಮೂರು ನಾಲ್ಕು ದಿನಗಳಿಂದ ರಾಜಸ್ಥಾನ ಪ್ರವಾಸದಲ್ಲಿದ್ದೇನೆ. ಇದೊಂದು ಅಪೂರ್ವ ಅನುಭವ. ರಜಪೂತ ಸಂಸ್ಕೃತಿಯ ನೆಲೆವೀಡಾದ ರಾಜಸ್ಥಾನ ನಿಜವಾದ ಅರ್ಥದಲ್ಲಿ ರಾಜರುಗಳ ಸ್ಥಾನ. ಕಣ್ಣೆವೆ ಚಾಚಿದಷ್ಟು ಉದ್ದದ ಮರಳುಗಾಡನ್ನು ಒಡಲಲ್ಲಿ ಹೊಂದಿರುವ ಈ ನಾಡು, ದೇಶದ ಬಹುಸಂಸ್ಕೃತಿಯ ಅಸ್ಮಿತೆಗೆ ಬಹುದೊಡ್ಡ ಸಾಕ್ಷಿ. ಇತಿಹಾಸದ ಕಥೆಗಳನ್ನು ಹೇಳುವ ಕೋಟೆ ಕೊತ್ತಲಗಳು, ಅಪೂರ್ವ ಶಿಲ್ಪ ಸೌಂದರ್ಯದ ದೇಗುಲಗಳು ಕಣ್ಮನ ಸೆಳೆಯುವುದಲ್ಲದೆ, ನೋಡುಗರನ್ನು ಬೆರಗಾಗಿಸುತ್ತವೆ. ಎರಡನೇ ಸಾವಾಯಿ ಜೈಸಿಂಗ್ ನಿರ್ಮಿಸಿದ ಜೈಪುರ, ಈಗ ಪಿಂಕ್ ಸಿಟಿ ಎಂದೇ ಹೆಸರುವಾಸಿ. ಇಲ್ಲಿನ ಅಂಬರ್ ಕೋಟೆ, ನಹಾರಗಢ ಕೋಟೆ, ಹವಾ ಮಹಲ್, ಶೀಶ ಮಹಲ್, ಗಣೇಶ್ ಪೋಲ್ ಮತ್ತು ಜಲ ಮಹಲ್ ಇತ್ಯಾದಿ ಪ್ರವಾಸಿ ತಾಣಗಳಿಗೆ ವಿಶ್ವದ ನಾನಾ ಭಾಗದಿಂದ ಜನರು ಬಂದು ಹೋಗುತ್ತಾರೆ. ಹೀಗಾಗಿಯೇ ಜೈಪುರವನ್ನು ಭಾರತದ ಪ್ಯಾರಿಸ್ ಎಂದೂ ಕರೆಯುತ್ತಾರೆ. ಇದೆಲ್ಲಕ್ಕಿಂತ ನನ್ನನ್ನು ಇನ್ನಿಲ್ಲದಂತೆ ಸೆಳೆದದ್ದು ಇಲ್ಲಿನ ಜಾನಪದ ಕಲೆ-ಸಂಸ್ಕೃತಿಗಳ ವೈಭವ ಹಾಗು ಇದೆಲ್ಲದರ ಅಪೂರ್ವ ಸಂಗಮವಾಗಿರುವ ಅಪ್ಪಟ ದೇಸೀ ಶಿಲ್ಪಗ್ರಾಮ.

ಈ ಶಿಲ್ಪಗ್ರಾಮವನ್ನು ನೋಡಿದ ಮೇಲೆ ನಿಜಕ್ಕೂ ಇಂಥದ್ದೊಂದು ಜಾನಪದ ಕೇಂದ್ರ ಕರ್ನಾಟಕದಲ್ಲೂ ಇರಬೇಕಿತ್ತು, ಇರಲೇಬೇಕು, ಮುಂದೆಯಾದರೂ ಆಗಲೇಬೇಕು ಅನಿಸುತ್ತಿದೆ. ಅಷ್ಟಕ್ಕೂ ಈ ಶಿಲ್ಪಗ್ರಾಮದಲ್ಲಿ ಏನೇನಿದೆ ಎಂದು ಬರಿಯ ಮಾತುಗಳಲ್ಲಿ ಹೇಳಲಾಗುವುದಿಲ್ಲ. ಇಡೀ ರಾಜಸ್ಥಾನದ ಜೀವಾತ್ಮವೇ ಇಲ್ಲಿದೆಯೇನೋ ಎಂದನ್ನಿಸುತ್ತದೆ. ಈ ಮರಳುಗಾಡಿನ ನಾಡಿನ ಬದುಕಿನ ವೈವಿಧ್ಯ, ಕಲಾವಂತಿಕೆ, ಜಾನಪದ ಹಿರಿಮೆಗಳೆಲ್ಲವನ್ನೂ ಒಂದೆಡೆ ಕಲೆಹಾಕಿ, ಒಂದು ರೂಪಕದಂತೆ ನಮ್ಮ ಕಣ್ಣಮುಂದೆ ಬಿಡಿಸಿಡುವ ಅಪೂರ್ವ ಕೇಂದ್ರವಿದು.

ಸುಮಾರು ಎಪ್ಪತ್ತು ಎಕರೆ ಜಾಗದಲ್ಲಿ ನಿರ್ಮಾಣಗೊಂಡಿರುವ ಈ ಶಿಲ್ಪಗ್ರಾಮ, ರಾಜಸ್ಥಾನದ ಜಾನಪದ ವೈಭವ, ಗುಡಿ ಕೈಗಾರಿಕೆಗಳು, ಅಲ್ಲಿನ ವಿಶಿಷ್ಟ ಶೈಲಿಯ ಮನೆಗಳು, ರಾಜಸ್ಥಾನದ ಎಲ್ಲ ಬಗೆಯ ಸಂಪ್ರದಾಯಗಳು, ಅಲ್ಲಿನ ಚರಿತ್ರೆ, ಸಂಸ್ಕೃತಿ, ಕಲಾಪ್ರಕಾರಗಳು ಎಲ್ಲವೂ ಮೇಳೈಸಿದ ಅದ್ಭುತ ಕೇಂದ್ರ. ಕೇವಲ ರಾಜಸ್ಥಾನ ಮಾತ್ರವಲ್ಲ, ಪಶ್ಚಿಮ ಭಾರತದ ಐದು ರಾಜ್ಯಗಳ ಸಂಸ್ಕೃತಿಗಳನ್ನು ಬಿಂಬಿಸುವ ವರ್ಣರಂಜಿತ ದೃಶ್ಯವೈಭವ ಇಲ್ಲಿ ನೋಡಲು ಸಿಗುತ್ತದೆ. ಹತ್ತು ಹಲವು ಬಗೆಯ ನೃತ್ಯಗಾರರೊಂದಿಗೆ ಕುಣಿಯುತ್ತಲೇ ನೀವು ಆ ಎಲ್ಲ ಕಲಾಪ್ರಕಾರವನ್ನು ಸವಿಯಬಹುದು. ನೀವು ಎಂದೆಂದೂ ನೋಡದ ಸಂಗೀತ ವಾದ್ಯಗಳನ್ನು ಬಳಸಿ ಅಲ್ಲಿ ಹಾಡಲಾಗುತ್ತದೆ, ಹಾಡಿ ನಿಮ್ಮ ಹೃದಯವನ್ನು ಕುಣಿಸಲಾಗುತ್ತದೆ. ಒಂದರ್ಥದಲ್ಲಿ ಇಡೀ ರಾಜಸ್ಥಾನದ ಜನಪದ ಬದುಕನ್ನು ಇಲ್ಲಿ ಪುನರ್ ನಿರ್ಮಿಸಲಾಗಿದೆ. ಅಪ್ಪಟ ರಾಜಸ್ಥಾನಿ ಜಾನಪದ ಹಾಡುಗಳಿಂದ ಹಿಡಿದು ಸೂಫಿ ಸಂಗೀತದವರೆಗೆ ಎಲ್ಲ ರೀತಿಯ ಸಂಗೀತ ಪ್ರಕಾರಗಳನ್ನೂ ಇಲ್ಲಿ ಕೇಳಬಹುದು.

ಗೊಂಬೆಯಾಡಿಸುವವರಿಂದ ಹಿಡಿದು, ಒಂಟೆ ಮಾವುತರು, ಬಿಲ್ಲುಗಾರರು, ಮೀನುಗಾರರು, ಅಲೆಮಾರಿ ಸಮುದಾಯದವರು, ಗಿರಿಜನರು ಎಲ್ಲರನ್ನೂ ನೀವು ಇಲ್ಲಿ ಕಾಣಲು ಸಾಧ್ಯ. ಈ ಎಲ್ಲರೂ ತಮ್ಮ ತಮ್ಮ ಸಂಸ್ಕೃತಿಗಳನ್ನು, ಕಲಾನೈಪುಣ್ಯವನ್ನು ಪ್ರದರ್ಶಿಸುತ್ತ ನೋಡುಗರ ಮನ ಗೆಲ್ಲುತ್ತಾರೆ. ರಾಜಸ್ಥಾನ, ಗುಜರಾಥ್ ರಾಜ್ಯಗಳ ಕುಶಲಕರ್ಮಿ ಸಮುದಾಯಗಳ ಜನರು ಬಳಸುವ ವಿಶಿಷ್ಠ ಬಗೆಯ ಮನೆಗಳನ್ನು ಇಲ್ಲಿ ಪುನರ್ ನಿರ್ಮಿಸಲಾಗಿದೆ. ನೇಕಾರರು, ಗಿರಿಜನರು, ಮುಸ್ಲಿಮರು, ಕುಂಬಾರರು, ಹರಿಜನರು, ರೇಬಾರಿಗಳು ಹೀಗೆ ಕುಲಕಸುಬುಗಳನ್ನು ನೆಚ್ಚಿಕೊಂಡ ಹಲವು ಸಮುದಾಯಗಳ ಬದುಕಿನ ಶೈಲಿಯನ್ನು ಇಲ್ಲಿ ನೋಡಬಹುದು. ಒಟ್ಟಾರೆ ಗ್ರಾಮೀಣ ಭಾಗದ ಜನರ ಒಟ್ಟು ಬದುಕು ಇಲ್ಲಿ ನಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ.

ಶಿಲ್ಪಗ್ರಾಮ ಎಲ್ಲ ರೀತಿಯಲ್ಲೂ ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರ. ರಾಜಸ್ಥಾನ ಮತ್ತು ಪಶ್ಚಿಮ ಭಾರತದ ಬಗೆಬಗೆಯ ಖಾದ್ಯಗಳು ಸಹ ಇಲ್ಲಿ ಲಭ್ಯ. ಜ್ಞಾನ, ಮನರಂಜನೆಯಿಂದ ಹಿಡಿದು ಆಹಾರದವರೆಗೆ ಎಲ್ಲವೂ ಇಲ್ಲಿ ಸಂಗಮವಾಗಿದೆ. ಎಲ್ಲ ಬಗೆಯ ಗ್ರಾಮೀಣ ತಿಂಡಿ ತಿನಿಸುಗಳನ್ನು ಅಲ್ಲೇ ತಯಾರಿಸಿ ನೀಡಲಾಗುವುದರಿಂದ ಅದರ ಸ್ವಾದ ಇನ್ನೂ ಹೆಚ್ಚು.

ರಾಜಸ್ಥಾನ ಸರ್ಕಾರ ಇದೆಲ್ಲವನ್ನೂ ಪ್ರದರ್ಶನಕ್ಕೆ ಮಾತ್ರ ಇಟ್ಟಿದ್ದರೆ ಅದರ ಮಹತ್ವ ಅಷ್ಟೇನು ಇರುತ್ತಿರಲಿಲ್ಲವೇನೋ. ಪ್ರತಿ ಎರಡುವಾರಗಳಿಗೆ ಗ್ರಾಮೀಣ ಪರಿಸರದ ಕುಶಲಕರ್ಮಿ ತಂಡವೊಂದನ್ನು ಆಹ್ವಾನಿಸಿ, ಅವರಿಗೆ ಈ ಶಿಲ್ಪಗ್ರಾಮದಲ್ಲೇ ಇದ್ದು, ಅಲ್ಲೇ ವಸ್ತುಗಳನ್ನು ತಯಾರಿಸಿ, ಅಲ್ಲೇ ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ. ಮಾತ್ರವಲ್ಲ, ಅವರು ತಮ್ಮ ಸಂಸ್ಕೃತಿಯ ಹಾಡು, ನೃತ್ಯ ಇತ್ಯಾದಿ ಕಲಾಪ್ರಕಾರಗಳ ಪ್ರದರ್ಶನ ಮಾಡಲೂ ಅವಕಾಶ ನೀಡಿದೆ. ಜಾಗತೀಕರಣದ ಕಾಲಘಟ್ಟದಲ್ಲಿ ಯಾವುದೋ ಹಳ್ಳಿಯಿಂದ ಬಂದ ಈ ಜನರು ನಮ್ಮ ಕಣ್ಣೆದುರು ಮಾಯಾಸೋಜಿಗದಂತೆ ನಮ್ಮೆದುರು ತಮ್ಮ ಕೈಚಳಕವನ್ನು ಪ್ರದರ್ಶಿಸುತ್ತ, ಗ್ರಾಮೀಣ ಅಭಿವ್ಯಕ್ತಿಯನ್ನು ಹರವಿಡುತ್ತಿದ್ದರೆ ರೋಮಾಂಚನವಾಗದೇ ಇದ್ದೀತೆ?

ಇದೆಲ್ಲವನ್ನೂ ನೋಡಿದ ನಂತರ ನನಗನ್ನಿಸಿದ್ದು, ಇಂಥದ್ದೊಂದು ಶಿಲ್ಪಗ್ರಾಮ, ಜಾನಪದ ಕೇಂದ್ರ ನಮ್ಮ ನಾಡಿನಲ್ಲೂ ಇರಬೇಕಿತ್ತು ಎಂದು. ಹಾಗೆ ನೋಡಿದರೆ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ, ಜಾನಪದ ಸಂಶೋಧಕ ಎಚ್.ಎಲ್.ನಾಗೇಗೌಡರ ಕಲ್ಪನೆಯ ಕೂಸಾಗಿ ಅರಳಿದ ಜಾನಪದ ಲೋಕ, ರಾಮನಗರ ಸಮೀಪ ನೋಡುಗರನ್ನು ಸೆಳೆಯುತ್ತಿದೆ. ಸುಮಾರು ಹದಿನೈದು ಎಕರೆ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಜಾನಪದ ಲೋಕವೂ ಸಹ ಇಂಥದ್ದೇ ಉದ್ದೇಶವನ್ನು ಒಳಗೊಂಡ ಜಾನಪದ ಕೇಂದ್ರ. ಕರ್ನಾಟಕ ಜಾನಪದ ಪರಿಷತ್ತಿನ ಅಡಿಯಲ್ಲಿ ನಾಡೋಜ ಎಚ್.ಎಲ್.ನಾಗೇಗೌಡರು ರೂಪಿಸಿದ ಜಾನಪದ ಲೋಕ ಜನಪದ ಸಾಹಿತ್ಯ ಸಂಪಾದನೆ, ಪ್ರಕಟಣೆ, ಧ್ವನಿ ಸುರುಳಿ ಸಿದ್ಧತೆ, ಪತ್ರಿಕೆ ಪ್ರಕಟಣೆ, ಜಾನಪದ ಕೋಶ ತಯಾರಿಕೆ, ಗೀತಗಾಯನ ವಾದ್ಯ, ಕಲಾ ಪ್ರದರ್ಶನ ಕಲಿಕೆ, ಬೋಧನೆ, ವಿಚಾರ ಸಂಕಿರಣ, ಕಮ್ಮಟ, ಜಾನಪದ ತರಬೇತಿ, ಕ್ಷೇತ್ರ ಕಾರ್ಯ ಹೀಗೆ ಹತ್ತು ಹಲವಾರು ಕಾರ್ಯಗಳನ್ನು ಮಾಡುತ್ತ ಬಂದಿದೆ.

ಆದರೆ ಇದಕ್ಕೂ ಮೀರಿದ ವಿಶಾಲ ವ್ಯಾಪ್ತಿಯ, ರಾಜಸ್ಥಾನದ ಶಿಲ್ಪಗ್ರಾಮದ ಮಾದರಿಯ ಒಂದು ಪುಟ್ಟ ಕರ್ನಾಟಕವನ್ನು ನಾವು ನಿರ್ಮಿಸಬಾರದೇಕೆ? ನಮ್ಮ ಸಾಂಸ್ಕೃತಿಕ ವೈಭವ, ಜಾನಪದ ಸಿರಿ, ಕರಕುಶಲ ಕೈಗಾರಿಕೆಗಳಿಗೇನು ಕೊರತೆಯೇ? ನಮ್ಮ ನಾಡಿನ ಒಂದೊಂದು ಭಾಗ ಒಂದೊಂದು ಬಗೆಯ ಕಲೆಗಾರಿಕೆಗೆ ಪ್ರಸಿದ್ಧಿ. ಎಲ್ಲವನ್ನು ಪ್ರತಿನಿಧಿಸುವ ಒಂದು ಜಾನಪದ ಜಗತ್ತನ್ನೇ ನಿರ್ಮಿಸಿದರೆ ಅದೊಂದು ಅಪೂರ್ವ ಕೇಂದ್ರವಾಗಬಹುದು. ಅಷ್ಟು ಮಾತ್ರವಲ್ಲ, ನಶಿಸಿ ಹೋಗುತ್ತಿರುವ ಕಲಾಪ್ರಕಾರಗಳನ್ನು ಪುರಸ್ಕರಿಸಿ ಅವುಗಳನ್ನು ಮುಖ್ಯವಾಹಿನಿಗೆ ತಂದಂತೆಯೂ ಆಗುತ್ತದೆ. ಗುಡಿಕೈಗಾರಿಕೆಗಳೇ ನಾಶವಾಗುತ್ತಿರುವ ಇಂದಿನ ಆಧುನಿಕ ಬದುಕಿನ ನಡುವೆ, ಗುಡಿ ಕೈಗಾರಿಕೆಗಳಿಗೆ ಹೊಸ ತಾರಾ ಮೌಲ್ಯವನ್ನು ಕೊಟ್ಟು, ಅವುಗಳನ್ನು ತಯಾರಿಸುವ ಜನರ ಅಪಾರ ಜ್ಞಾನವನ್ನು ಗೌರವಿಸಿದಂತಾಗುತ್ತದೆ. ಆಧುನಿಕ ಕಾಲದಲ್ಲಿ ಜ್ಞಾನದ ಪರಿಭಾಷೆಯೇ ವಿಕೃತವಾಗಿದೆ. ಎಂಜಿನಿಯರಿಂಗ್, ಮೆಡಿಕಲ್ ಥರದ ಕೋರ್ಸುಗಳನ್ನು ಮಾಡಿದವರು ಮಾತ್ರ ಜ್ಞಾನವಂತರು ಎಂಬ ಭ್ರಮೆಯನ್ನು ಬಿತ್ತಲಾಗುತ್ತಿದೆ. ಇಂಥ ಕಾಲಘಟ್ಟದಲ್ಲಿ ಯಾವುದೋ ಹಳ್ಳಿಯ ಮೂಲೆಯಲ್ಲಿ ತನ್ನ ಕೈಗಳಿಂದಲೇ ಮೋಹಕ ಕುಸುರಿ ಕೆಲಸ ಮಾಡುವವನ ಜ್ಞಾನವನ್ನು ಪರಿಗಣಿಸಬೇಕಿದೆ, ಮುಖ್ಯವಾಹಿನಿಗೆ ತರಬೇಕಿದೆ, ಜಗತ್ತಿಗೆ ಪರಿಚಯಿಸಬೇಕಿದೆ.

ಕಲೆ, ಸಂಸ್ಕೃತಿ ನಶಿಸಿದರೆ, ನಾಡೂ ಅವಸಾನಗೊಂಡಂತೆಯೇ ಆಗುತ್ತದೆ. ಅಂಥದ್ದಕ್ಕೆ ನಾವು ಅವಕಾಶ ನೀಡಬಾರದು. ನಮ್ಮ ಬೇರುಗಳೆಲ್ಲ ಇರುವುದು ನಮ್ಮ ಹಳ್ಳಿಗಳಲ್ಲಿ ಮತ್ತು ಹಳ್ಳಿಯ ಬದುಕಿನಲ್ಲಿ. ಜಾಗತೀಕರಣದ ಸುಳಿಗಾಳಿಯಲ್ಲಿ ನಗರೀಕರಣ ಪ್ರಕ್ರಿಯೆ ಹೆಚ್ಚುತ್ತಿದ್ದಂತೆ ನಾವು ನಮ್ಮ ಬೇರುಗಳನ್ನು ಮರೆತಿದ್ದೇವೆ. ನಮ್ಮ ಬೇರುಗಳಿಗೆ ಹಿಂದಿರುಗಲು ಇದು ಸರಿಯಾದ ಸಮಯ. ಈ ಮೂಲಕವೇ ನಾವು ಮತ್ತೊಮ್ಮೆ ಗಾಂಧೀಜಿಯವರು ಕನಸಿದ್ದ ಗ್ರಾಮಭಾರತವನ್ನು ಪುನರ್ ರೂಪಿಸಬೇಕಿದೆ.
ನಮ್ಮಲ್ಲೂ ಎಲ್ಲವೂ ಇದೆ. ಇತರೆ ಎಲ್ಲ ರಾಜ್ಯಗಳಿಗಿಂತ ಹೆಚ್ಚು ಸಾಂಸ್ಕೃತಿಕ ಹಿರಿಮೆಗಳನ್ನು ಹೊಂದಿರುವ ನಾಡು ನಮ್ಮದು. ನಮ್ಮ ಜಾನಪದ ಸಂಸ್ಕೃತಿಗಂತೂ ಸಾಟಿಯೇ ಇಲ್ಲ. ನೂರೆಂಟು ಬಗೆಯ ಜಾನಪದ ಕಲಾಪ್ರಕಾರಗಳು ಇಲ್ಲಿವೆ. ಕರಕುಶಲತೆಯನ್ನೇ ಜೀವದ್ರವ್ಯವಾಗಿಸಿಕೊಂಡ ಅನೇಕಾನೇಕ ಸಮುದಾಯಗಳು ನಾಡಿನ ಮೂಲೆಮೂಲೆಗಳಲ್ಲಿ ಉಸಿರಾಡುತ್ತಿವೆ. ಈ ಎಲ್ಲವನ್ನೂ ಕನಿಷ್ಠ ನೂರು ಎಕರೆ ಜಾಗದ ಒಂದು ಕಲಾಕೇಂದ್ರದಲ್ಲಿ ತಂದು, ಇಡೀ ದೇಶ, ಜಗತ್ತು ಅತ್ತ ಕಡೆ ನೋಡುವಂತೆ ಮಾಡಬಹುದಲ್ಲವೇ?

ನಮ್ಮ ಸರ್ಕಾರಗಳು ಬಂಡವಾಳಶಾಹಿ ಕಾರ್ಪರೇಟ್ ಸಂಸ್ಥೆಗಳಿಗೆ ನೂರಾರು ಎಕರೆ ಜಮೀನು ಕೊಡುತ್ತದೆ. ಅವರಿಗೆ ತೆರಿಗೆ ರಜೆಯಿಂದ ಹಿಡಿದು, ರಿಯಾಯಿತಿ ದರದಲ್ಲಿ ನೀರು, ವಿದ್ಯುತ್ ಇತ್ಯಾದಿ ಎಲ್ಲ ಸೌಲಭ್ಯಗಳನ್ನು ನೀಡುತ್ತದೆ. ಮಲ್ಟಿನ್ಯಾಷನಲ್ ಕಂಪೆನಿಗಳಿಗಾಗಿಯೇ ಸ್ಮಾರ್ಟ್ ಸಿಟಿಗಳನ್ನು, ಐಟಿ ಪಾರ್ಕ್‌ಗಳು, ಎಸ್‌ಇಜಡ್‌ಗಳನ್ನು ನಿರ್ಮಿಸಿಕೊಡುವ ಸರ್ಕಾರ ನಮ್ಮ ಸಂಸ್ಕೃತಿಯ ಪುನರುತ್ಥಾನಕ್ಕೆ ಇಂಥದ್ದೊಂದು ಕೇಂದ್ರವನ್ನು ಮಾಡಲು ಮುಂದಾಗಬೇಕು ಮತ್ತು ಅದಕ್ಕೆ ಎಲ್ಲ ರೀತಿಯ ಸಹಕಾರಗಳನ್ನು ನೀಡಬೇಕು.

ಜಗತ್ತು ಬದಲಾಗುತ್ತಲೇ ಇದೆ. ಪಶ್ಚಿಮದ ಜಗತ್ತನ್ನೇ ನಮ್ಮ ಆದರ್ಶವೆಂದು ಭ್ರಮಿಸಿ ನಾವು ಅದರ ಹಿಂದೆ ಹೋದೆವು. ಈಗ ನಮ್ಮ ಬೇರುಗಳಿಗೆ ಹಿಂದಿರುಗುವ ಸಮಯ. ರಾಜಸ್ಥಾನದ ರಾಜಕಾರಣಿಗಳು ಅರ್ಥ ಮಾಡಿಕೊಂಡಿರುವ ಸತ್ಯವನ್ನು ನಮ್ಮ ರಾಜಕಾರಣಿಗಳೂ ಅರ್ಥ ಮಾಡಿಕೊಳ್ಳಬೇಕಿದೆ. ನಮ್ಮ ಕಲೆ, ಸಂಸ್ಕೃತಿ, ಕರಕುಶಲತೆಯನ್ನು ನಾವು ಗೌರವಿಸದ ಹೊರತು, ನಾವು ಇವುಗಳನ್ನು ಮೌಲ್ಯವನ್ನು ತಂದುಕೊಡದ ಹೊರತು ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲಾಗುವುದಿಲ್ಲ. ನಮ್ಮ ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ಪರಿಚಯಿಸುತ್ತಲೇ ನಾವು ನಮ್ಮ ಬೇರುಗಳನ್ನು ಬಲಪಡಿಸಿಕೊಳ್ಳಬೇಕಿದೆ. ಆ ಕೆಲಸ ಆದ್ಯತೆ ಮೇರೆಗೆ ನಡೆಯಲಿ ಎಂಬುದು ನನ್ನ ಆಶಯ.

ಕಡೆಯದಾಗಿ ಇನ್ನೊಂದು ಮಾತು, ರಾಜಸ್ಥಾನ ಪ್ರವಾಸದ ಸಂದರ್ಭದಲ್ಲಿ ಜೋಧಪುರಕ್ಕೆ ಹೋಗಿದ್ದಾಗ ಅಲ್ಲಿನ ಹಾಡುಗಾರರ ತಂಡವೊಂದು ಪರಿಚಯವಾಯಿತು. ಅವರಿಗೆ ನಾವು ಕರ್ನಾಟಕದವರು ಎಂದು ಗೊತ್ತಾಗುತ್ತಿದ್ದಂತೆ ನಿಮ್ಮ ನಾಡಿನ ಸಂಸ್ಕೃತಿ ನಮಗಿಷ್ಟ ಎಂದು ಹೇಳುತ್ತ ‘ಚೆಲ್ಲಿದರು ಮಲ್ಲಿಗೆಯಾ’ ಎಂಬ ಜಾನಪದ ಹಾಡನ್ನು ಹಾಡಿದರು. ನಮಗೆ ನಿಜಕ್ಕೂ ರೋಮಾಂಚನವಾಯಿತು. ದೂರದ ಜೋಧಪುರದ ಹಾಡುಗಾರರಿಗೆ ನಮ್ಮ ನಾಡಿನ ಮಾಯ್ಕಾರ ಮಾದೇವನೂ ಗೊತ್ತು, ಮಂಟೇಸ್ವಾಮಿಯೂ ಗೊತ್ತು, ಆದರೆ ನಮ್ಮ ಬೃಹತ್ ನಗರಗಳಲ್ಲಿ ಯಾವುದೋ ವಿದೇಶಿ ಹಾಡುಗಳ ಮಾಯೆಯಲ್ಲಿ ಸಿಲುಕಿ ಮೈಮರೆತಿರುವ ಜನರಿಗೆ ಇವರನ್ನೆಲ್ಲ ಪರಿಚಯಿಸಬೇಕಲ್ಲವೇ?

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

Tuesday, 13 October 2015

ಕನ್ನಡ ನಾಮಫಲಕಗಳೆಂದರೆ ಮೂಗು ಮುರಿಯುವುದೇಕೆ?

‘ರಾಜ್ಯದ ಎಲ್ಲ ವಾಣಿಜ್ಯ ಸಂಸ್ಥೆಗಳು ನಾಮಫಲಕಗಳಲ್ಲಿ ಕನ್ನಡ ಬಳಸಬೇಕು. ಎಲ್ಲೆಲ್ಲಿ ಕನ್ನಡದ ಜತೆಗೆ ಬೇರೆ ಭಾಷೆ ಗಳನ್ನು ಬಳಸಲಾಗುತ್ತದೆಯೋ, ಅಲ್ಲಿ ಕನ್ನಡವನ್ನು ದೊಡ್ಡ ಅಕ್ಷರಗಳಲ್ಲಿ ಹಾಗೂ ಪ್ರಧಾನವಾಗಿ ಬಳಸಬೇಕು. ಅನಂತರ ಬೇರೆ ಭಾಷೆಗಳನ್ನು ಕನ್ನಡಕ್ಕಿಂತ ಸಣ್ಣ ಪ್ರಮಾಣದಲ್ಲಿ ಬಳಸಬೇಕು’ ಎಂಬುದು ಕರ್ನಾಟಕ ಸರ್ಕಾರದ ಸ್ಪಷ್ಟ ನೀತಿ. ಈ ಸಂಬಂಧ ರಾಜ್ಯ ಸರ್ಕಾರ ಸಾಕಷ್ಟು ಸುತ್ತೋಲೆಗಳನ್ನು ಮೇಲಿಂದ ಮೇಲೆ ಹೊರಡಿಸಿದೆ. ಈ ನಿಯಮವನ್ನು ಪಾಲಿಸದವರಿಗೆ ದಂಡ ವಿಧಿಸುವ ಅಧಿಕಾರವೂ ಕಾರ್ಮಿಕ ಇಲಾಖೆಗಿದೆ.

ಇದು ಕೇವಲ ಕರ್ನಾಟಕ ರಾಜ್ಯವೊಂದಕ್ಕೆ ಅನ್ವಯವಾಗುವ ವಿಷಯವಲ್ಲ. ಎಲ್ಲ ರಾಜ್ಯಗಳೂ ತಮ್ಮ ತಮ್ಮ ನಾಡಿನಲ್ಲಿ ತಮ್ಮ ಆಡಳಿತ ಭಾಷೆಯನ್ನೇ ನಾಮಪಲಕಗಳಿಗೆ ಬಳಸುವಂತೆ ನಿಯಮಾವಳಿಗಳನ್ನು ರೂಪಿಸಿವೆ. ಅದನ್ನು ಎಲ್ಲ ಕಡೆಯೂ ಪಾಲಿಸಲಾಗುತ್ತಿದೆ.

ನಾವು ಕರ್ನಾಟಕ ರಕ್ಷಣಾ ವೇದಿಕೆಯನ್ನು ಆರಂಭಿಸುವ ಹೊತ್ತಿನಲ್ಲಿ ಅನ್ಯಭಾಷಾ ನಾಮಫಲಕಗಳ ಹಾವಳಿ ಮಿತಿಮೀರಿ ಹೋಗಿತ್ತು. ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಇಂಗ್ಲಿಷ್ ನಾಮಫಲಕಗಳೇ ಎಲ್ಲೆಡೆಯೂ ಕಣ್ಣಿಗೆ ರಾಚುತ್ತಿದ್ದವು. ಯಾವುದೇ ಚಳವಳಿಗಳ ಸಂದರ್ಭದಲ್ಲಿ ಚಳವಳಿಯ ಕಾರ್ಯಕರ್ತರು ಈ ಅನ್ಯಭಾಷಾ ನಾಮಫಲಕಗಳನ್ನು ಕಂಡರೆ ರೊಚ್ಚಿಗೇಳುತ್ತಿದ್ದರು. ಹೀಗಾಗಿ ಗೋಕಾಕ್ ಚಳವಳಿಯಿಂದ ಹಿಡಿದು, ನಾಡಿನಲ್ಲಿ ನಡೆದ ಅನೇಕ ಭಾಷಾ ಚಳವಳಿಗಳ ಸಂದರ್ಭದಲ್ಲಿ ಅನ್ಯಭಾಷಾ ನಾಮಫಲಕಗಳಿಗೆ ಕಲ್ಲು ಹೊಡೆಯುವ, ಕಿತ್ತು ಎಸೆಯುವ, ಮಸಿ ಬಳಿಯುವ ಚಳವಳಿಗಳೂ ಸಾಂಕೇತಿಕವಾಗಿ ನಡೆದುಕೊಂಡು ಬಂದಿವೆ. ಕರ್ನಾಟಕ ರಕ್ಷಣಾ ವೇದಿಕೆ ಸಹ ಕನ್ನಡವಿಲ್ಲದ ನಾಮಫಲಕಗಳ ವಿರುದ್ಧ ಹಲವು ಬಾರಿ ಅಭಿಯಾನ ನಡೆಸಿತು. ಈ ಸಂದರ್ಭದಲ್ಲಿ ಹಲವು ಬಾರಿ ಅಂಗಡಿ ಮುಂಗಟ್ಟು ಮಾಲೀಕರಿಗೆ ತಮ್ಮ ನಾಮಫಲಕಗಳಲ್ಲಿ ಕನ್ನಡವನ್ನು ಬಳಸುವಂತೆ ಮನವೊಲಿಸುವ ಕಾರ್ಯವನ್ನು ಮಾಡಿದ್ದೆವು. ನಂತರ ತಕ್ಕಮಟ್ಟಿಗೆ ಕನ್ನಡ ಚಳವಳಿಗಾರರಿಗೆ ಅಂಜಿಯೇ ಕನ್ನಡ ನಾಮಫಲಕಗಳನ್ನು ಅಳವಡಿಸಿಕೊಳ್ಳುವ ಕಾರ್ಯ ಆರಂಭವಾಯಿತು.

ಆದರೆ ಈಗ ಮತ್ತೆ ನಾವು ಕನ್ನಡ ನಾಮಫಲಕಗಳಿಗಾಗಿ ಬೀದಿಗಿಳಿಯುವ ಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕ ಅದರಲ್ಲೂ ವಿಶೇಷವಾಗಿ ಬೆಂಗಳೂರು ಬೇರೆ ಬೇರೆ ರಾಜ್ಯಗಳಿಂದ ವಲಸೆ ಬರುವ ಜನರ ಸ್ವರ್ಗವಾಗಿ ಪರಿಣಮಿಸಿದೆ. ಬೆಂಗಳೂರು ಸಿಲಿಕಾನ್ ಸಿಟಿ ಎಂದೇ ಹೆಸರಾಗಿಹೋಗಿದೆ. ಎಲ್ಲೂ ನೆಲೆ ನಿಲ್ಲದವರು ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಳ್ಳಬಹುದು ಎಂಬ ಭಾವ ಸಾರ್ವತ್ರಿಕವಾಗಿ ಹರಡಿ ಹೋಗಿದೆ. ಮೊದಲು ತಮಿಳುನಾಡು-ಆಂಧ್ರಪ್ರದೇಶ-ಕೇರಳಗಳಿಂದ ವಲಸೆ ಮೇರೆ ಮೀರಿತ್ತು. ಈಗ ಉತ್ತರ ಭಾರತೀಯರು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದಾರೆ.

ಕರ್ನಾಟಕದಲ್ಲಿ ವ್ಯವಹಾರ, ಉದ್ದಿಮೆ ಮಾಡಲು ಬರುವವರಿಗೆ ಇಲ್ಲಿ ಸಂಸ್ಕೃತಿ, ಭಾಷೆ, ನಡೆನುಡಿಯ ಬಗ್ಗೆ ಇನಿತೂ ಗೌರವವಿಲ್ಲ. ಹೀಗಾಗಿ ಅವರು ತಮ್ಮ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗವನ್ನೂ ಕೊಡುವುದಿಲ್ಲ, ಕನ್ನಡವನ್ನೂ ಬಳಸುವುದಿಲ್ಲ. ತೋರಿಕೆಗಾದರೂ ತಮ್ಮ ಸಂಸ್ಥೆಯ ನಾಮಫಲಕಗಳನ್ನು ಕನ್ನಡದಲ್ಲಿ ಬರೆಯಿಸುವುದಿಲ್ಲ. ಬಹುರಾಷ್ಟ್ರೀಯ ಕಂಪೆನಿಗಳು, ಕಾರ್ಪರೇಟ್ ಸಂಸ್ಥೆಗಳು ತಮ್ಮ ಜಾಹೀರಾತು ಫಲಕಗಳಲ್ಲೂ ಒಂದೇ ಒಂದು ಅಕ್ಷರ ಕನ್ನಡವನ್ನು ಬರೆಸುವುದಿಲ್ಲ. ಎಲ್ಲವೂ ಇಂಗ್ಲಿಷ್‌ನಲ್ಲಿ, ಈಗೀಗ ಇಂಗ್ಲಿಷ್ ಜತೆಗೆ ಹಿಂದಿಯೂ ರಾರಾಜಿಸುತ್ತಿದೆ.

ಹಾಗಿದ್ದರೆ ಭಾಷಾವಾರು ಪ್ರಾಂತ್ಯ ವಿಂಗಡಣೆಯ ಅರ್ಥವೇನು ಉಳಿಯಿತು? ಕನ್ನಡ ಸರ್ವಮಾಧ್ಯಮ ನುಡಿಯಾಗಿ ಬಳಕೆಯಾಗಬೇಕು ಎಂಬುದು ಮಹಾಕವಿ ಕುವೆಂಪು ಅವರಿಂದ ಹಿಡಿದು ಎಲ್ಲರ ಒಕ್ಕೊರಲ ಆಗ್ರಹವಾಗಿತ್ತು. ಈಗ ಎಲ್ಲಿದೆ ಕನ್ನಡ? ಆಡಳಿತ ಭಾಷೆಯಿಂದ ಹಿಡಿದು ಶಿಕ್ಷಣ ಮಾಧ್ಯಮದವರೆಗೆ ಎಲ್ಲೆಡೆ ಈಗ ಇಂಗ್ಲಿಷ್-ಹಿಂದಿಗಳ ಸಾಮ್ರಾಜ್ಯ. ಕನ್ನಡ ಸಂಸ್ಕೃತಿ ಪರಂಪರೆಯನ್ನು ಉಳಿಸಬೇಕಾದ ರಾಜ್ಯ ಸರ್ಕಾರವೂ ಕೈ ಕಟ್ಟಿ ಕುಳಿತರೆ ನಾಡು ಹೇಗೆ ಉಳಿದೀತು? ನುಡಿ ಹೇಗೆ ಉಳಿದೀತು?

ದುರದೃಷ್ಟವೆಂದರೆ ನಮ್ಮ ನ್ಯಾಯಾಂಗ ವ್ಯವಸ್ಥೆಯ ಅತಿಯಾದ ಕ್ರಿಯಾಶೀಲತೆಯೂ ಕನ್ನಡಿಗರಿಗೆ ಮುಳುವಾಗಿ ಪರಿಣಮಿಸಿದೆ.  ಕನ್ನಡ ನಾಮಫಲಕಗಳ ವಿಷಯದಲ್ಲಿ ಸರ್ಕಾರದ ನಿಯಮವನ್ನೇ ರಾಜ್ಯ ಹೈಕೋರ್ಟ್ ವಿಭಾಗೀಯ ಪೀಠ ರದ್ದು ಮಾಡಿತು. ವೊಡಾಫೋನ್ ಸಂಸ್ಥೆ ತನ್ನ ನಾಮಫಲಕಗಳನ್ನು ಇಂಗ್ಲಿಷ್‌ನಲ್ಲಿ ಬರೆಯಿಸಿದ ಪರಿಣಾಮ ರಾಜ್ಯ ಸರ್ಕಾರ ನೀಡಿದ ನೋಟಿಸ್‌ಗೆ ಪ್ರತಿಯಾಗಿ ಅದು ನ್ಯಾಯಾಲಯದ ಮೊರೆ ಹೋಯಿತು. ನ್ಯಾಯಾಲಯವೂ ಸಹ ವೊಡಾಫೋನ್ ಸಂಸ್ಥೆ ಇಂಗ್ಲಿಷ್‌ನಲ್ಲೇ ನಾಮಫಲಕ ಅಳವಡಿಸಿಕೊಳ್ಳಲು ಅನುಮತಿ ನೀಡಿದ್ದಲ್ಲದೆ, ಕನ್ನಡ ಕಡ್ಡಾಯವಾಗಿ ಬಳಸಲು ಆದೇಶಿಸುವ “ಮಳಿಗೆ ಮತ್ತು ವಾಣಿಜ್ಯ ಸಂಸ್ಥೆಗಳ ನಿಯಮ-೧೯೬೩ರ ಸೆಕ್ಷನ್ ೨೪(ಎ)”ಗೆ ೨೦೦೮ರಲ್ಲಿ ಮಾಡಿದ್ದ ತಿದ್ದುಪಡಿ ಆಧಾರದ ಮೇಲೆ ರೂಪಿಸಿದ್ದ ನಿಯಮವನ್ನು ಹೈಕೋರ್ಟ್ ರದ್ದುಪಡಿಸಿತು.

ನ್ಯಾಯಾಲಯಗಳ ಇಬ್ಬಗೆ ನೀತಿ ಹೇಗಿರುತ್ತದೆ ನೋಡಿ. ಹಿಂದೆ, ಇದೇ ರಾಜ್ಯ ಹೈಕೋರ್ಟ್ ಇದೇ ಸೆಕ್ಷನ್ ೨೪ (ಎ) ಬೆಂಬಲಿಸಿ ತೀರ್ಪು ನೀಡಿತ್ತು. ಬೆಳಗಾವಿಯ ಲಕ್ಷ್ಮಣ್ ಒಮಾನ್ನ ಭಾಮನೆ ಎಂಬಾತ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ೨೪-ಎ ಕಾಯ್ದೆಯ ಉಲ್ಲಂಘನೆ ಕೂಡದು ಎಂದು ಆದೇಶಿಸಿತ್ತು.

ನ್ಯಾಯಾಲಯಗಳು ಹೀಗೆ ಎರಡೆರಡು ರೀತಿಯ ತೀರ್ಪನ್ನು ಕೊಟ್ಟರೆ ಯಾವುದನ್ನು ಒಪ್ಪಬೇಕು, ಯಾವುದನ್ನು ಬಿಡಬೇಕು? ಎಲ್ಲ ನ್ಯಾಯಪೀಠಗಳು ಭಾರತ ಸಂವಿಧಾನದ ಆಶಯಕ್ಕೆ ತಕ್ಕಂತೆಯೇ ವಿಚಾರಣೆ ನಡೆಸಬೇಕು, ತೀರ್ಪು ನೀಡಬೇಕಲ್ಲವೇ? ಜನಪ್ರತಿನಿಧಿಗಳು ರೂಪಿಸಿದ ಶಾಸನಗಳು ಜನವಿರೋಧಿಯಾಗಿಲ್ಲದ ಹೊರತು ಅವುಗಳನ್ನು ರದ್ದುಪಡಿಸುವ ಕ್ರಮ ಪ್ರಜಾಪ್ರಭುತ್ವದ ಬೇರುಗಳನ್ನೇ ಅಲುಗಾಡಿಸುವುದಿಲ್ಲವೇ?

ಶಾಸಕಾಂಗ, ಕಾರ್ಯಾಂಗಗಳ ಜವಾಬ್ದಾರಿ, ಹೊಣೆಗಾರಿಕೆ, ಹಕ್ಕುಗಳನ್ನೆಲ್ಲ ನ್ಯಾಯಾಂಗವೇ ಚಲಾಯಿಸಲು ಆರಂಭಿಸಿದರೆ ಪ್ರಜಾಪ್ರಭುತ್ವ ದುರ್ಬಲವಾಗಿಹೋಗುತ್ತದೆ. ನ್ಯಾಯಾಲಯಗಳನ್ನು, ನ್ಯಾಯಾಲಯಗಳ ತೀರ್ಮಾನಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಪ್ಪಿಕೊಳ್ಳಬೇಕು ಎಂಬುದೇನೋ ಸರಿ. ಆದರೆ ನಮ್ಮ ಸಂವಿಧಾನವೇ ನೀಡಿರುವ ಈ ವಿಶಾಲವಾದ ಅಧಿಕಾರವನ್ನು ನ್ಯಾಯಾಲಯಗಳು ಸರಿಯಾಗಿ ನಿರ್ವಹಿಸುತ್ತಿವೆಯೇ ಎಂಬುದು ಮೂಲಭೂತ ಪ್ರಶ್ನೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ, ಇಲ್ಲಿ ಪ್ರಜೆಗಳೇ ಪ್ರಭುಗಳು ಎಂಬುದನ್ನು ನ್ಯಾಯಾಲಯಗಳು ಮನಗಾಣಬೇಕು. ಒಂದಷ್ಟು ಸ್ವಯಂ ನಿಯಂತ್ರಣ ಮತ್ತು ನಿರ್ಬಂಧಗಳಿಗೂ ಅವು ಒಳಪಡಲೇಬೇಕು. ಅದರಲ್ಲೂ ವಿಶೇಷವಾಗಿ ಜನಸಮೂಹವನ್ನು ಇಡಿಯಾಗಿ ಪ್ರಭಾವಿಸುವ ಭಾಷೆ-ಸಂಸ್ಕೃತಿಗಳಿಗೆ ಸಂಬಂಧಿಸಿದ ತೀರ್ಮಾನಗಳನ್ನು ನೀಡುವಾಗ ವಿವೇಚನೆಯಿಂದ ವರ್ತಿಸಬೇಕು.

ಶಿಕ್ಷಣ ಮಾಧ್ಯಮವಾಗಿ ಕನ್ನಡವನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ತೀರ್ಮಾನದ ವಿರುದ್ಧ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸಹ ಇಂಥದ್ದೇ ಆಗಿತ್ತು. ಬಹಳ ಹಿಂದೆಯೇ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು ಎಂದು ಹೇಳಿದ್ದ ಸುಪ್ರೀಂ ಕೋರ್ಟ್, ಇತ್ತೀಚಿನ ತೀರ್ಪಿನಲ್ಲಿ ಮಾತೃಭಾಷೆ ಯಾವುದೆಂಬುದನ್ನು ಪಾಲಕರೇ ತೀರ್ಮಾನ ಮಾಡಬೇಕು ಎಂದು ದ್ವಂದ್ವ ನೀತಿ ಪ್ರದರ್ಶಿಸಿತು.

ಭಾರತವೆಂಬುದು ಒಂದು ಒಕ್ಕೂಟ. ಭಾಷಾವಾರು ಪ್ರಾಂತ್ಯಗಳ ಒಕ್ಕೂಟದಲ್ಲಿ ಪ್ರತಿ ರಾಜ್ಯವೂ ತನ್ನ ಭಾಷೆ, ಸಂಸ್ಕೃತಿಯನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ. ಈ ಹಕ್ಕನ್ನು ಕಿತ್ತುಕೊಂಡರೆ ಒಕ್ಕೂಟಕ್ಕೇ ಅರ್ಥ ಉಳಿಯುವುದಿಲ್ಲ. ಒಂದು ಪಕ್ಷ ಒಕ್ಕೂಟ ವ್ಯವಸ್ಥೆ ಶಿಥಿಲಗೊಳ್ಳುತ್ತ ಹೋದರೆ ಈ ದೇಶದ ಅಖಂಡತೆಗೇ ದೊಡ್ಡ ಸವಾಲು ಬಂದುಬಿಡುವ ಸಾಧ್ಯತೆಗಳು ಇರುತ್ತವೆ. ನ್ಯಾಯಾಲಯಗಳು ತೀರ್ಮಾನಗಳನ್ನು ನೀಡುವ ಮೊದಲು ಈ ವಿಷಯವನ್ನು ಸೂಕ್ಷ್ಮವಾಗಿ ಗ್ರಹಿಸಬೇಕು. ಇಲ್ಲದೇ ಹೋದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಈ ದೇಶದ ಬಹುತ್ವ ನಾಶಗೊಂಡು, ಜನಸಮುದಾಯಗಳು ತಿರುಗಿ ಬೀಳುವ, ಆಂತರಿಕ ಕ್ಷೆಭೆ ಉಲ್ಬಣಿಸುವ ಸಾಧ್ಯತೆಗಳೇ ಹೆಚ್ಚು.

ನ್ಯಾಯಾಲಯಗಳ ತೀರ್ಪು ಏನೇ ಇರಲಿ. ಕನ್ನಡ ನಾಮಫಲಕಗಳಿಗಾಗಿ ನಮ್ಮ ಹೋರಾಟ ಮುಂದುವರೆಯುತ್ತದೆ. ಇನ್ನೇನು ನವೆಂಬರ್ ಮಾಸ ಬರುತ್ತಿದೆ. ನವೆಂಬರ್ ಅಂದರೆ ನಾಡಹಬ್ಬದ ಮಾಸ. ನಾವು ರಾಜ್ಯೋತ್ಸವಗಳಿಗೆ ಸೀಮಿತರಾದವರಲ್ಲ, ಪ್ರತಿ ವರ್ಷ ನಾಡಹಬ್ಬವನ್ನು ಕನ್ನಡ ಅನುಷ್ಠಾನದ ಹಬ್ಬವನ್ನಾಗಿ ಆಚರಿಸಿ ನಮಗೆ ರೂಢಿ.

ಬೆಂಗಳೂರು, ಮೈಸೂರು, ಹುಬ್ಬಳ್ಳಿ, ದಾವಣಗೆರೆ, ಬೆಳಗಾವಿಯಂಥ ನಗರಗಳಲ್ಲಿ ಅನ್ಯಭಾಷಾ ನಾಮಫಲಕಗಳ ಹಾವಳಿ ಮಿತಿಮೀರಿ ಹೋಗಿದೆ. ಅದರಲ್ಲೂ ವಿಶೇಷವಾಗಿ ಮಾಲ್‌ಗಳು, ದೊಡ್ಡ ದೊಡ್ಡ ವಾಣಿಜ್ಯ ಸಂಸ್ಥೆಗಳು ಕನ್ನಡವನ್ನು ಕಡೆಗಣಿಸುತ್ತಲೇ ಬಂದಿವೆ. ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಅಂಗಡಿ, ಮುಂಗಟ್ಟು, ಸಂಸ್ಥೆ, ಮಾಲ್‌ಗಳೂ ಕನ್ನಡವನ್ನೇ ಪ್ರಧಾನವಾಗಿ ಬಳಸಬೇಕು ಎಂಬುದು ನಮ್ಮ ಆಗ್ರಹ. ಅದನ್ನು ಮುಂಚಿತವಾಗಿಯೇ ತಿಳಿಸುವ ಕೆಲಸವನ್ನು ಮಾಡುತ್ತೇವೆ. ಒಂದು ವೇಳೆ ಈ ಸಂಸ್ಥೆಗಳು ಕನ್ನಡ ವಿರೋಧವನ್ನು ಮುಂದುವರೆಸಿದರೆ, ತೀವ್ರ ಸ್ವರೂಪದ ಪ್ರತಿಭಟನೆಗೂ ನಾವು ಸಿದ್ಧರಿರುತ್ತೇವೆ.

ನ್ಯಾಯಾಲಯಗಳು ಏನೇ ಹೇಳಿಕೊಳ್ಳಲಿ, ಸರ್ಕಾರ ಏನೇ ನಿಯಮಾವಳಿ ರೂಪಿಸಿಕೊಳ್ಳಲಿ. ಇದು ಕರ್ನಾಟಕ, ಕನ್ನಡಿಗರ ನಾಡು. ಇಲ್ಲಿ ಕನ್ನಡಿಗರೇ ಸಾರ್ವಭೌಮರು, ಕನ್ನಡವೇ ಸರ್ವಮಾಧ್ಯಮ ಭಾಷೆ. ಇದನ್ನು ಉಳಿಸಿಕೊಳ್ಳುವುದು ನಮ್ಮ ಹಕ್ಕು. ನಮ್ಮ ಚಳವಳಿ ಜಾರಿಯಲ್ಲಿರುತ್ತದೆ.

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

Thursday, 8 October 2015

ನಮ್ಮ ಬ್ಯಾಂಕುಗಳಲ್ಲಿ ಈಗ ಕನ್ನಡ ಉಳಿದುಕೊಂಡಿದೆಯೇ?

ಸೆಪ್ಟೆಂಬರ್ ೧೮ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ೧೩೨ನೇ ಬ್ಯಾಂಕರುಗಳ ಸಮಾವೇಶ ನಡೆಯಿತು. ಇದನ್ನು ಉದ್ಘಾಟಿಸುತ್ತ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅತ್ಯಂತ ಪ್ರಮುಖ ವಿಷಯವೊಂದನ್ನು ಪ್ರಸ್ತಾಪಿಸಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರದ ಪ್ರಮುಖರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಸಿದ್ಧರಾಮಯ್ಯನವರು ಮಾತನಾಡುತ್ತ ಬ್ಯಾಂಕುಗಳು ತ್ರಿಭಾಷಾ ಸೂತ್ರವನ್ನು ಪಾಲಿಸುತ್ತಿಲ್ಲ, ಕನ್ನಡವನ್ನು ಅವಗಣನೆ ಮಾಡುತ್ತಿವೆ. ಕನ್ನಡ ಬಲ್ಲವರನ್ನು ಉದ್ಯೋಗಕ್ಕೆ ತೆಗೆದುಕೊಳ್ಳುತ್ತಿಲ್ಲ. ಬ್ಯಾಂಕುಗಳ ಈ ನೀತಿಯನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡ ಬಳಕೆಗೆ ಬ್ಯಾಂಕುಗಳು ಮುಂದಾಗಬೇಕು, ಕನ್ನಡ ಬಲ್ಲವರನ್ನು ಉದ್ಯೋಗಕ್ಕೆ ತೆಗೆದುಕೊಳ್ಳಬೇಕು ಎಂದು ಬ್ಯಾಂಕುಗಳ ಕನ್ನಡ ವಿರೋಧಿ ನೀತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬ್ಯಾಂಕುಗಳ ಚಲನ್‌ಗಳು, ಪಾಸ್ ಬುಕ್‌ಗಳು, ಸಾಲ ಅರ್ಜಿಗಳು, ಖಾತೆ ತೆರೆಯುವ ಮಾಹಿತಿ ನಮೂನೆಗಳು, ಎಲ್ಲ ಬಗೆಯ ಠೇವಣಿ ಪ್ರಮಾಣಪತ್ರಗಳನ್ನು ತಯಾರುಮಾಡುವಾಗ ತ್ರಿಭಾಷಾ ಸೂತ್ರವನ್ನು ಪಾಲಿಸುತ್ತಿಲ್ಲ. ಹೀಗಾಗಿಯೇ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಸ್ಥಳೀಯ ಬ್ಯಾಂಕುಗಳು ನಾಗರಿಕರಿಗೆ ನೀಡಬೇಕಾದ ಸೌಲಭ್ಯಗಳು ಹಳ್ಳಿಗರನ್ನು ತಲುಪುತ್ತಿಲ್ಲ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

ಸಿದ್ಧರಾಮಯ್ಯನವರ ಹೇಳಿಕೆಯ ಕೊನೆಯ ಭಾಗವನ್ನು ಗಂಭೀರವಾಗಿ ಗಮನಿಸಿ. ಬ್ಯಾಂಕುಗಳು ಕನ್ನಡವನ್ನು ಬಳಸದೇ ಇರುವುದರಿಂದಲೇ ಸಾಲವೂ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳು ಗ್ರಾಮೀಣ ಜನತೆಯನ್ನು ತಲುಪುತ್ತಿಲ್ಲ. ಈ ಮಹತ್ವದ ಸತ್ಯ ಅಧಿಕಾರ ಸ್ಥಾನದಲ್ಲಿ ಕುಳಿತವರಿಗೆ ಕಡೆಗೂ ಅರ್ಥವಾಗುತ್ತಿರುವುದು ಸಮಾಧಾನದ ವಿಷಯ. ಆದರೆ ಬ್ಯಾಂಕರುಗಳನ್ನು ಯಾವುದೋ ಒಂದು ಸಮಾವೇಶದಲ್ಲಿ ತರಾಟೆ ತೆಗೆದುಕೊಂಡುಬಿಟ್ಟರೆ ಸಾಕೆ? ಅದಕ್ಕಿಂತ ಹೆಚ್ಚಿನ ಕ್ರಿಯಾತ್ಮಕ ನಡೆಗಳು ಸರ್ಕಾರದಿಂದ ಆಗಬಾರದೇ?

ಭಾಷೆ ಮತ್ತು ಬದುಕು ಒಂದಕ್ಕೊಂದು ಹೆಣೆದುಕೊಂಡೇ ಇರುತ್ತವೆ. ಒಂದರಿಂದ ಒಂದನ್ನು ಪ್ರತ್ಯೇಕಿಸಿ ನೋಡಲಾಗದು. ಭಾಷೆಯ ವಿಷಯ ಮಾತನಾಡಿದಾಗೆಲ್ಲ ‘ಅದು ಸಂವಹನದ ಒಂದು ಮಾಧ್ಯಮ ಅಷ್ಟೇ’ ಎಂದು ಮೂಗುಮುರಿಯುವರಿದ್ದಾರೆ. ನಮ್ಮ ಕೆಲವು ಬುದ್ಧಿಜೀವಿಗಳಿಗೆ ಭಾಷಾ ಹೋರಾಟದ ಮಹತ್ವವೂ ಅರ್ಥವಾಗುವುದಿಲ್ಲ, ಭಾಷಾ ಚಳವಳಿಗಳ ಬಗ್ಗೆ ಸಿನಿಕರಾಗಿ ಪ್ರತಿಕ್ರಿಯಿಸಿಬಿಡುತ್ತಾರೆ. ಭಾಷೆ ಮತ್ತು ಬದುಕು ನಡುವೆ ಇರುವ ಬಂಧವನ್ನು ಅವರೂ ಸಹ ಅರ್ಥ ಮಾಡಿಕೊಂಡಿಲ್ಲ.

ಬ್ಯಾಂಕುಗಳ ಚಲನ್‌ಗಳು, ಪಾಸ್ ಬುಕ್‌ಗಳು, ಚೆಕ್ ಪುಸ್ತಕಗಳು, ಅರ್ಜಿಗಳು ಎಲ್ಲವೂ ಇಂಗ್ಲಿಷ್ ಮತ್ತು ಹಿಂದಿಯಲ್ಲಿದ್ದರೆ ನಮ್ಮ ಗ್ರಾಮೀಣ ಭಾಗದ ಜನತೆ ಅಲ್ಲಿಗೆ ಹೋಗಿ ವ್ಯವಹರಿಸಲು ಸಾಧ್ಯವೇ? ತಮ್ಮ ಅನುಕೂಲಕ್ಕಾಗಿ ರಾಜ್ಯ, ಕೇಂದ್ರ ಸರ್ಕಾರಗಳು ಆರಂಭಿಸಿರುವ ಯೋಜನೆಗಳನ್ನು ಬಳಸಿಕೊಳ್ಳಲು ಸಾಧ್ಯವೇ? ಅರ್ಜಿ ನಮೂನೆಗಳಿಗೆ ಸಹಿ ಹಾಕುವಾಗ, ಅಲ್ಲಿ ಬರೆದಿರುವ ವಿಷಯವಾದರೂ ಏನು? ಬ್ಯಾಂಕುಗಳು ವಿಧಿಸುವ ಕಟ್ಟಳೆಗಳು ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ?

ಅಷ್ಟಕ್ಕೂ ನಮ್ಮ ಬ್ಯಾಂಕುಗಳಲ್ಲಿ ಎಲ್ಲ ವ್ಯವಹಾರಗಳನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಷ್ಟೇ ಯಾಕೆ ಮಾಡಲಾಗುತ್ತದೆ? ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ (ತಮಿಳುನಾಡು ಹೊರತುಪಡಿಸಿ) ತ್ರಿಭಾಷಾ ಸೂತ್ರವನ್ನು ಪಾಲಿಸಬೇಕು ಎಂದು ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಕಟ್ಟಪ್ಪಣೆ ಮಾಡಿದೆ. ಆದರೆ ಇದನ್ನು ಯಾಕೆ ಪಾಲಿಸಲಾಗುತ್ತಿಲ್ಲ?

ಎಟಿಎಂಗೆ ಹೋದಾಗ ನಿಮಗೆ ಅನುಭವವಾಗಿರಬಹುದು. ಅಲ್ಲಿ ಮಾನಿಟರ್ ಮೇಲೆ ಕನ್ನಡ ಮತ್ತು ಹಿಂದಿ ಭಾಷೆಯ ಮಾರ್ಗದರ್ಶನ ಮಾತ್ರ ಇರುತ್ತದೆ. ಕನ್ನಡದ ಆಯ್ಕೆಯೂ ಇರುವುದಿಲ್ಲ. ಕನ್ನಡ ಗ್ರಾಹಕರು ಮೇಲಿಂದ ಮೇಲೆ ಪ್ರತಿಭಟನೆ ನಡೆಸಿದ ಮೇಲೆ ಕೆಲವು ಬ್ಯಾಂಕುಗಳಲ್ಲಿ ಕನ್ನಡದ ಆಯ್ಕೆಯನ್ನು ಸೇರಿಸಲಾಗಿದೆ. ಇನ್ನುಳಿದ ಬ್ಯಾಂಕ್ ಎಟಿಎಂಗಳಲ್ಲಿ ಇನ್ನೂ ಇಂಗ್ಲಿಷ್ ಮತ್ತು ಹಿಂದಿ ಮಾತ್ರ ಉಳಿದುಕೊಂಡಿದೆ. ಇಂಥ ಎಟಿಎಂಗಳಲ್ಲಿ ಕೇವಲ ಕನ್ನಡವನ್ನು ಬಲ್ಲ ಗ್ರಾಹಕ ಹೋಗಿ ವ್ಯವಹರಿಸಲು ಸಾಧ್ಯವೇ?

ಬ್ಯಾಂಕಿಂಗ್ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ದೊಡ್ಡದು. ಕರ್ನಾಟಕ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಿಂಡಿಕೇಟ್ ಬ್ಯಾಂಕ್ ಹೀಗೆ ಹಲವಾರು ಬ್ಯಾಂಕುಗಳನ್ನು ದೇಶಕ್ಕೆ ನೀಡಿದ ಹೆಮ್ಮೆ ನಮ್ಮದು. ಈ ಪೈಕಿ ಬಹುತೇಕ ಬ್ಯಾಂಕುಗಳು ಹುಟ್ಟಿಕೊಂಡಿದ್ದು ಕರ್ನಾಟಕದ ಕರಾವಳಿಯಲ್ಲಿ. ಆದರೆ ದುರದೃಷ್ಟವೆಂದರೆ ನಮ್ಮ ನೆಲದಲ್ಲಿ ಹುಟ್ಟಿದ ಬ್ಯಾಂಕುಗಳಲ್ಲೇ ಈಗ ಕನ್ನಡವಿಲ್ಲದಂತಾಗಿದೆ. ಇದಕ್ಕೇನು ಮಾಡೋದು? ಈ ಬ್ಯಾಂಕುಗಳಲ್ಲೇ ಕನ್ನಡ ಒಂದಕ್ಷರವೂ ಬಾರದ ಉದ್ಯೋಗಿಗಳನ್ನು ಸೇರಿಸಿಕೊಳ್ಳಲಾಗುತ್ತಿದೆ. ಇಂಥವರ ಜತೆ ಒಂದೇ ಹಿಂದಿಯಲ್ಲಿ ಮಾತನಾಡಬೇಕು ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡಬೇಕು. ಎರಡೂ ಭಾಷೆ ಬಾರದ ಕನ್ನಡಿಗರೇನು ಮಾಡಬೇಕು?

ಕನ್ನಡವನ್ನೇ ಕರ್ನಾಟಕದಿಂದ ಓಡಿಸುವ ಈ ಹುನ್ನಾರವನ್ನೇ ನಾವು ಹಿಂದಿ ಹೇರಿಕೆಯೆಂದು ಕರೆಯುತ್ತೇವೆ.  ಸಂವಿಧಾನದ ಆರ್ಟಿಕಲ್ ೩೪೩ರಿಂದ ೩೫೧ರವರೆಗಿನ ನಿಯಮಗಳಲ್ಲಿ ಕೇಂದ್ರ ಸರ್ಕಾರ ತನ್ನ ಆಡಳಿತ ಭಾಷೆಯ ಕುರಿತು ವಿವರ ನೀಡಿದೆ. ಕೇಂದ್ರ ಸರ್ಕಾರದ ಆಡಳಿತ ಭಾಷೆಯನ್ನಾಗಿ ಇಂಗ್ಲಿಷ್ ಮತ್ತು ಹಿಂದಿಯನ್ನಾಗಿ ಭಾರತ ಸಂವಿಧಾನವೇ ಒಪ್ಪಿಕೊಂಡಿದೆ. ಅದರಲ್ಲೂ ಇಂಗ್ಲಿಷನ್ನೂ ಕಿತ್ತುಹಾಕಿ ಹಿಂದಿಯೊಂದನ್ನೇ ಆಡಳಿತ ಭಾಷೆ ಮಾಡುವ ಕುತಂತ್ರಗಳು ೧೯೬೫ರಲ್ಲಿ ವಿಫಲಗೊಂಡ ನಂತರ ಹಿಂದಿಯೇತರರ ಅನುಕೂಲಕ್ಕಾಗಿ ಇಂಗ್ಲಿಷ್ ಭಾಷೆಯೂ ಉಳಿದುಕೊಂಡಿದೆ. ಅದರ ನೇರ ಪರಿಣಾಮ ಹಿಂದಿಯೇತರ ಭಾಷೆಗಳನ್ನು ಆಡಳಿತ ಭಾಷೆಗಳನ್ನಾಗಿ ಹೊಂದಿರುವ ರಾಜ್ಯಗಳಿಗೆ ಆಗುತ್ತಿದೆ. ಹಿಂದಿಯೇತರ ರಾಜ್ಯಗಳಲ್ಲಿ ತ್ರಿಭಾಷಾ ಸೂತ್ರದಂತೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಜತೆ ಆಯಾ ಪ್ರಾದೇಶಿಕ ಭಾಷೆಗಳನ್ನು ಬಳಸಬೇಕಾಗುತ್ತದೆ. ಆದರೆ ಪ್ರಾದೇಶಿಕ ಭಾಷೆಗಳ ಬಗ್ಗೆ ಮೊದಲಿನಿಂದಲೂ ಕೇಂದ್ರ ಸರ್ಕಾರ ಹೊಂದಿರುವ ಅಸಡ್ಡೆಯಿಂದಾಗಿ ಅದರ ಅಧೀನದಲ್ಲಿರುವ ಬ್ಯಾಂಕು, ತೆರಿಗೆ ಇಲಾಖೆ, ಅಂಚೆ ಇಲಾಖೆ, ರೈಲ್ವೆ ಇಲಾಖೆ, ವಿಮೆ, ಪಿಂಚಣಿ, ಹೆದ್ದಾರಿ, ವಿಮಾನಸೇವೆ ಹೀಗೆ ಹತ್ತು ಹಲವು ವಲಯಗಳಲ್ಲಿ ಇವತ್ತು ಹಿಂದಿ ಮತ್ತು ಇಂಗ್ಲಿಷುಗಳೇ ರಾರಾಜಿಸುತ್ತಿವೆ.

ಇವತ್ತು ಕೇಂದ್ರ ಸರ್ಕಾರದ ಇಲಾಖೆಗಳ ಉದ್ಯೋಗಗಳೆಲ್ಲ ಯಾರ ಪಾಲಾಗುತ್ತಿದೆ? ಕೇಂದ್ರ ಸರ್ಕಾರದ ಉದ್ಯೋಗ ಬೇಕೆಂದರೆ ಹಿಂದಿ ಅಥವಾ ಇಂಗ್ಲಿಷ್ ಗೊತ್ತಿರಬೇಕು. ಈ ಭಾಷೆಗಳಲ್ಲಿ ವಿದ್ಯಾಭ್ಯಾಸ ಮಾಡಿರಬೇಕು. ಈ ಎರಡೂ ಭಾಷೆಗಳಿಂದ ದೂರವಿರುವ ಈ ದೇಶದ ನಾಗರಿಕರೇನು ಮಾಡಬೇಕು? ಈ ಕೆಟ್ಟ ನೀತಿಯಿಂದಲೇ ಬ್ಯಾಂಕುಗಳೂ ಸೇರಿದಂತೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಲಾಖೆಗಳು, ಸಂಸ್ಥೆಗಳು, ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ಕನ್ನಡಿಗರಿಗೆ ಕೆಲಸ ದೊರೆಯುತ್ತಿಲ್ಲ. ಇದೇ ರೀತಿ ಬೇರೆ ಬೇರೆ ರಾಜ್ಯಗಳ ಸ್ಥಳೀಯ ಭಾಷಿಕರಿಗೆ ಉದ್ಯೋಗ ಸಿಗುತ್ತಿಲ್ಲ. ನಮ್ಮೂರಿನ ಬ್ಯಾಂಕುಗಳಲ್ಲಿ ಯಾವುದೋ ರಾಜ್ಯದಿಂದ ಬಂದ ಹಿಂದೀವಾಲಾಗಳು ಹೇಗೆ ನುಸುಳಿಕೊಂಡರು ಎಂಬುದಕ್ಕೆ ಕಾರಣ ಹುಡುಕುತ್ತ ಹೋದರೆ ಅದು ಕೇಂದ್ರ ಸರ್ಕಾರದ ಪಕ್ಷಪಾತದ ಭಾಷಾನೀತಿಯತ್ತಲೇ ನಮ್ಮನ್ನು ಕರೆದುಕೊಂಡುಹೋಗುತ್ತದೆ.

ಮುಖ್ಯಮಂತ್ರಿಗಳೇನೋ ತ್ರಿಭಾಷಾ ಸೂತ್ರವನ್ನು ಕಡ್ಡಾಯವಾಗಿ ಪಾಲಿಸಿ ಎಂದು ಬ್ಯಾಂಕರುಗಳಿಗೆ ಹೇಳಿದರು. ಅಷ್ಟಕ್ಕೂ ತ್ರಿಭಾಷಾ ಸೂತ್ರದಲ್ಲಿರುವ ಹಿಂದಿ ನಮಗೇಕೆ ಬೇಕು? ಇಂಗ್ಲಿಷ್ ಮತ್ತು ಕನ್ನಡ ಇದ್ದರೆ ಸಾಲದೆ? ನಾನು ಈ ತ್ರಿಭಾಷಾ ಸೂತ್ರವನ್ನೇ ಒಪ್ಪುವುದಿಲ್ಲ. ತ್ರಿಭಾಷಾ ಸೂತ್ರದ ಬಗ್ಗೆ ರಾಷ್ಟ್ರಕವಿ ಕುವೆಂಪು ಅವರು ತಮ್ಮ ಕವನವೊಂದರಲ್ಲೇ ಕಟುವಾಗಿ ಟೀಕಿಸಿದ್ದರು.

ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ
ಬಾಲಕರ ರಕ್ಷಿಸೈ ಹೇ ತ್ರಿಣೇತ್ರ!
ಚೂರು ತಿಂಡಿಗೆ ಸಿಕ್ಕಿಸಿಹರೋ ಈ ಮೂರು ಗಾಳ
ನುಂಗದಿದ್ದರೆ ಹಸಿವೆ, ನುಂಗಿದರೆ ಪ್ರಾಣಶೂಲ!

ತ್ರಿಭಾಷಾ ಸೂತ್ರ ಹೊರನೋಟಕ್ಕೆ ಸೊಗಸಾಗಿ ಕಾಣಬಹುದು. ಆದರೆ ಅದರ ಆಂತರ್ಯದಲ್ಲಿ ಇತರ ಜನಭಾಷೆಗಳನ್ನು ತುಳಿಯುವ ಹುನ್ನಾರವಿದೆ ಎಂಬ ಕುವೆಂಪು ಅವರ ಮುಂಗಾಣ್ಕೆಯನ್ನು ನಾವು ಗಮನಿಸಿಬೇಕು.  ತ್ರಿಭಾಷಾ ಸೂತ್ರದ ಒಳಹುನ್ನಾರಗಳನ್ನು ಸ್ಪಷ್ಟವಾಗಿ ಬಲ್ಲವರಾಗಿದ್ದ ಕುವೆಂಪು ಅವರು ತಮ್ಮ ವಿಚಾರಕ್ರಾಂತಿಯಲ್ಲಿ ಹೀಗೆ ಹೇಳಿದ್ದರು. “ ರಾಜಕೀಯ ದುರಭಿಸಂಧಿಯಿಂದ ಪ್ರೇರಿತವಾದುದು ಈ ತ್ರಿಭಾಷಾ ಸೂತ್ರ. ಅದರ ಪ್ರಕಾರ, ಹಿಂದಿ ಇಂಗ್ಲಿಷುಗಳು ಬಲಾತ್ಕಾರ ಭಾಷೆಗಳಾಗುತ್ತವೆ. ಕನ್ನಡಕ್ಕೆ ಪೆಟ್ಟು ಬೀಳುತ್ತದೆ. ಇದು ಆ ಸೂತ್ರದಲ್ಲಿ ಕಾದಿರುವ ತೀವ್ರವಾದ ಅಪಾಯ. ಎಲ್ಲರೂ ಇಂಗ್ಲಿಷ್ ಮತ್ತು ಹಿಂದಿ ಕಲಿಯಬೇಕೆನ್ನುವುದೂ ದಬ್ಬಾಳಿಕೆಯ ಸೂಚಕವಲ್ಲದೆ ಮತ್ತೇನು? ಪ್ರಜಾಪ್ರಭುತ್ವದಲ್ಲಿ ಬಲಾತ್ಕಾರಕ್ಕೆ ಸ್ಥಾನವಿರಕೂಡದು. ಎಲ್ಲರಿಗೂ ಎಲ್ಲ ಭಾಷೆಯೂ ಏತಕ್ಕೆ ಬೇಕು? ಪ್ರತಿಯೊಬ್ಬರೂ ತಮಗೆ ಅಗತ್ಯವಿರುವ ಭಾಷೆಯನ್ನು ಕಲಿಯಬಹುದು. ಅಲ್ಲದೆ ತ್ರಿಭಾಷಾ ಸೂತ್ರವೇ ಏಕೆ? ಭರತಖಂಡಕ್ಕೀಗ ಬೇಕಾಗಿರುವುದು ಬಹುಭಾಷಾ ಸೂತ್ರ. ನಮ್ಮ ಜನ ಕಲಿಯಬೇಕಾದುದು ಇಂಗ್ಲಿಷನ್ನು ಮಾತ್ರವಲ್ಲ, ವೈಜ್ಞಾನಿಕ ಆವಶ್ಯಕತೆಗಳಿಗಾಗಿ ರಷ್ಯನ್, ಜರ್ಮನ್ ಮುಂತಾದ ಭಾಷೆಗಳನ್ನು ಕೂಡ ಕಲಿಯಬೇಕು.”

ತ್ರಿಭಾಷಾ ಸೂತ್ರದ ಪಿತೂರಿಯನ್ನು ಚೆನ್ನಾಗಿಯೇ ಗ್ರಹಿಸಿದ್ದ ತಮಿಳಿಗರು ಅದನ್ನು ತಮ್ಮ ನಾಡಿನೊಳಗೆ ಬಿಟ್ಟುಕೊಳ್ಳಲಿಲ್ಲ. ತಮಿಳುನಾಡಿನ ಜನರು ಮತ್ತು ಅಲ್ಲಿಯ ಸರ್ಕಾರ. ತಮಿಳಿಗರ ನಿರಂತರ ಹೋರಾಟ, ಬಲಿದಾನದಿಂದಾಗಿಯೇ ೧೯೭೬ರಲ್ಲಿ ಕೇಂದ್ರ ಸರ್ಕಾರ ಆಡಳಿತ ಭಾಷೆ ಕಾಯ್ದೆಗೆ ತಿದ್ದುಪಡಿ ತಂದು ತಮಿಳುನಾಡನ್ನು ಆ ಕಾಯ್ದೆಯಿಂದ ಹೊರಗೆ ಇಟ್ಟಿತು. ಅದರರ್ಥವೇನು? ಹಿಂದಿಯೇತರ ರಾಜ್ಯಗಳ ಜನರಿಗೆ ದೇಶದ ಆಡಳಿತ ಭಾಷೆ ಕಾಯ್ದೆಯಿಂದ ಸಮಸ್ಯೆಯಾಗುತ್ತಿದೆ ಎಂದಲ್ಲವೇ? ತಮಿಳುನಾಡಿಗೆ ಯಾವ ಮಾನದಂಡವನ್ನು ಇಟ್ಟುಕೊಂಡು ಈ ವಿಶೇಷ ಅವಕಾಶವನ್ನು ಒದಗಿಸಲಾಯಿತೋ ಅದೇ ಮಾನದಂಡ ಕರ್ನಾಟಕ, ಕೇರಳ, ಆಂಧ್ರ, ಒಡಿಸ್ಸಾ, ಅಸ್ಸಾಂ, ಮಣಿಪುರ, ಮಹಾರಾಷ್ಟ್ರದಂಥ ರಾಜ್ಯಗಳಿಗೂ ಅನ್ವಯಿಸುವುದಿಲ್ಲವೇ? ಇವತ್ತು ಕರ್ನಾಟಕಕ್ಕೆ ಆಗಬೇಕಾಗಿರುವುದೂ ಅದೇ. ಹೇಗೆ ೧೯೭೬ರ ಸಂವಿಧಾನ ತಿದ್ದುಪಡಿಯಲ್ಲಿ ಆಡಳಿತ ಭಾಷೆ ಕಾಯ್ದೆಯಿಂದ ತಮಿಳುನಾಡನ್ನು ಹೊರಗೆ ಇಡಲಾಯಿತೋ ಹಾಗೆಯೇ ಕರ್ನಾಟಕವನ್ನೂ ಹೊರಗೆ ಇಡಬೇಕಿದೆ. ತನ್ಮೂಲಕ ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರದ ಬದಲು ದ್ವಿಭಾಷಾ ಸೂತ್ರ ಜಾರಿಗೆ ಬರಬೇಕಾಗಿದೆ. ಆದರೆ ದ್ವಿಭಾಷಾ ಸೂತ್ರ ಜಾರಿಗೆ ಬರುವುದಿರಲಿ, ತ್ರಿಭಾಷಾ ಸೂತ್ರವನ್ನೂ ಪಾಲಿಸದೆ, ಕನ್ನಡವೂ ಸೇರಿದಂತೆ ಸ್ಥಳೀಯ ಭಾಷೆಗಳನ್ನು ಕೊಲ್ಲುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ.

ಇವತ್ತು ಕೇವಲ ಬ್ಯಾಂಕು, ರೈಲ್ವೆಯಂಥ ಕೇಂದ್ರ ಸರ್ಕಾರದ ಉದ್ಯಮಗಳು, ಇಲಾಖೆಗಳು ಮಾತ್ರವಲ್ಲ ಖಾಸಗಿ ಬಂಡವಾಳಶಾಹಿಗಳು ತಮ್ಮ ಮಾಲ್‌ಗಳು, ಔಟ್‌ಲೆಟ್‌ಗಳಲ್ಲೂ ಹಿಂದಿಭಾಷೆಯನ್ನು ತುರುಕುತ್ತಿದ್ದಾರೆ. ತೊಗರಿಬೇಳೆ, ಉದ್ದಿನಬೇಳೆ ಎಂಬ ಹೆಸರುಗಳು ಹೋಗಿ ಈಗ ತೋರ್ ದಾಲ್, ಮೂಂಗ್ ದಾಲ್‌ಗಳು ಬಂದಿವೆ. ಹಿಟ್ಟು ಹೋಗಿ ಆಟ್ಟಾ ಆಗಿದೆ. ಇಂಥ ಸಂದರ್ಭದಲ್ಲಿ ಇಡೀ ಸೆಪ್ಟೆಂಬರ್ ತಿಂಗಳಲ್ಲಿ ಹಿಂದಿ ಮಾಸ, ಹಿಂದಿ ಪಾಕ್ಷಿಕ, ಹಿಂದಿ ದಿವಸ ಇತ್ಯಾದಿ ಬಣ್ಣಬಣ್ಣದ ಹೆಸರುಗಳನ್ನು ಇಟ್ಟುಕೊಂಡು ಕೇಂದ್ರ ಸರ್ಕಾರ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಎಲ್ಲ ಇಲಾಖೆಗಳನ್ನೂ, ಬ್ಯಾಂಕುಗಳನ್ನೂ, ತನ್ನ ಸುಪರ್ದಿಯಲ್ಲಿರುವ ಸಂಸ್ಥೆ, ಉದ್ದಿಮೆಗಳನ್ನು ಹಿಂದೀಕರಣಗೊಳಿಸುತ್ತಿದೆ.

ಇದೇ ಪರಿಸ್ಥಿತಿ ಮುಂದುವರೆದರೆ ಜನರ ಸಿಟ್ಟು ರಟ್ಟೆಗೆ ಬಂದು, ಇದೇ ಬ್ಯಾಂಕು ವಗೈರೆಗಳಿಗೆ ಜನರೇ ನುಗ್ಗುವಂಥ ದಿನಗಳು ಹತ್ತಿರವಾಗುತ್ತವೆ. ಸೋವಿಯತ್ ಯೂನಿಯನ್ ಒಡೆದು ಚೂರಾಗಿದ್ದು ಹೇಗೆ ಎಂಬುದು ನಮ್ಮನ್ನು ಆಳುವವರಿಗೆ ಗೊತ್ತಿಲ್ಲವೇ? ಅಂಥ ದುರ್ದಿನಗಳು ಭಾರತ ಒಕ್ಕೂಟಕ್ಕೂ ಬರಬೇಕೆ?

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ