Wednesday, 28 October 2015

ರಾಜ್ಯೋತ್ಸವಕ್ಕೆ ಮುನ್ನ ಮುಖ್ಯಮಂತ್ರಿಗಳಿಗೊಂದು ಬಹಿರಂಗ ಅಹವಾಲು


ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರಿಗೆ,
ಆದರ ಪೂರ್ವಕ ನಮಸ್ಕಾರಗಳು ಹಾಗು ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಮತ್ತೆ ರಾಜ್ಯೋತ್ಸವ ಬಂದಿದೆ. ಕನ್ನಡಿಗರ ಸಮಸ್ಯೆಗಳು ಮಿತಿ ಮೀರಿ ಬೆಳೆಯುತ್ತಲೇ ಇದೆ. ಅದಕ್ಕಾಗಿ ನನ್ನ ಬಹಿರಂಗ ಅಹವಾಲುಗಳನ್ನು ನಿಮ್ಮ ಮುಂದಿರಿಸುತ್ತಿದ್ದೇನೆ.

ಈ ಬಾರಿಯೂ ರಾಜ್ಯೋತ್ಸವದ ಸಂಭ್ರಮ ಕಾಣಿಸುತ್ತಿಲ್ಲ. ರೈತರು ಸಾಲುಸಾಲಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವ ಆತಂಕಕಾರಿ ವಿದ್ಯಮಾನಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಅತ್ತ ಮಹದಾಯಿಯನ್ನು ಮಲಪ್ರಭೆಗೆ ಸೇರಿಸುವ ಮೂಲಕ ಐದಾರು ಜಿಲ್ಲೆಗಳಿಗೆ ನೀರಾವರಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಿ ಎಂದು ಉತ್ತರ ಕರ್ನಾಟಕ ಭಾಗದ ರೈತರು ಚಳವಳಿಗೆ ತೊಡಗಿ ನೂರು ದಿನಗಳು ಕಳೆದುಹೋಗಿವೆ. ಇನ್ನೊಂದೆಡೆ ರಾಯಚೂರಿಗೆ ಐಐಟಿ ಸಿಗಲಿಲ್ಲವೆಂಬ ಕಾರಣಕ್ಕೆ ಆ ಭಾಗದ ಜನರು ಮುನಿಸಿಕೊಂಡಿದ್ದಾರೆ. ರಾಜ್ಯೋತ್ಸವದ ದಿನವನ್ನು ಕರಾಳ ದಿನವನ್ನಾಗಿ ಆಚರಿಸುತ್ತೇವೆ ಎಂದು ಈ ಭಾಗಗಳ ಜನರು ನೊಂದು ನುಡಿಯುತ್ತಿದ್ದಾರೆ. ಎತ್ತಿನಹೊಳೆ ಯೋಜನೆ ಜಾರಿಯಾಗಬೇಕು ಎಂದು ಬಾಯಾರಿ ಬಳಲಿರುವ ಬಯಲುಸೀಮೆಯ ಜನರು ಬೇಡಿಕೊಳ್ಳುತ್ತಿದ್ದರೆ, ಈ ಯೋಜನೆಯಿಂದ ನಮ್ಮ ಬದುಕು ಮೂರಾಬಟ್ಟೆಯಾಗುತ್ತದೆ, ಹೀಗಾಗಿ ಯೋಜನೆ ಜಾರಿಗೆ ಅವಕಾಶ ನೀಡೆವು ಎಂದು ಕರಾವಳಿಯ ಜನರು ಸಿಟ್ಟಿಗೆದ್ದಿದ್ದಾರೆ. ರಾಜ್ಯದ ಎಲ್ಲೆಡೆ ತೀವ್ರ ಬರಗಾಲವಿದೆ, ಹೀಗಾಗಿ ಕುಡಿಯುವ ನೀರು, ವಿದ್ಯುತ್ ಇಲ್ಲದೆ ಜನರು ನರಳುವಂತಾಗಿದೆ. ದಿನೋಪಯೋಗಿ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ, ಬಡಜನರ ಬದುಕು ದುಸ್ತರವಾಗುತ್ತಲೇ ಹೋಗುತ್ತಿದೆ.

ಇದೆಲ್ಲ ಸಮಸ್ಯೆಗಳ ನಡುವೆ ದೇಶದ ಯಾವ ಒಕ್ಕೂಟ ರಾಜ್ಯವೂ ಅನುಭವಿಸದ ಸಮಸ್ಯೆಗಳನ್ನು ನಮ್ಮ ರಾಜ್ಯ ಎದುರಿಸಬೇಕಾಗಿದೆ. ಎಲ್ಲ ರಾಜ್ಯಗಳೂ ಸಮಾನ ಅವಕಾಶ, ಹಕ್ಕು, ಗೌರವಗಳನ್ನು ಪಡೆಯಬೇಕಾದ ಈ ಭಾರತ ಒಕ್ಕೂಟದಲ್ಲಿ ಕರ್ನಾಟಕ ಪದೇಪದೇ ಕಡೆಗಣಿಸಲ್ಪಟ್ಟಿದೆ ಮತ್ತು ವಂಚನೆಗೆ ಈಡಾಗುತ್ತ ಬರುತ್ತಿದೆ. ದೇಶಭಕ್ತಿಯ ಹೆಸರಿನಲ್ಲಿ ನಾಡಪ್ರೇಮ ಮುಕ್ಕಾಗುತ್ತಿದೆ. ಕನ್ನಡಿಗರ ಸ್ವಾಯತ್ತತೆ ಮಣ್ಣುಪಾಲಾಗಿದೆ. ‘ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಿರಬೇಕು’ ಎಂಬ ನಮ್ಮ ಆಶಯಕ್ಕೆ ಪದೇಪದೇ ಧಕ್ಕೆ ಬಂದೊದಗುತ್ತಿದೆ. ಕರ್ನಾಟಕ ವಲಸಿಗರ ಸ್ವರ್ಗವಾಗಿ ಕನ್ನಡಿಗರ ಅಸ್ಮಿತೆಯನ್ನೇ ನಿರಾಕರಿಸಲಾಗುತ್ತಿದೆ.

ನೀವು ಕನ್ನಡ ಕಾವಲು ಸಮಿತಿಯ (ಈಗಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷರಾಗಿದ್ದವರು. ನಿಮ್ಮ ರಾಜಕೀಯ ಜೀವನದ ಮೊದಲ ಹಂತದಲ್ಲೇ ಈ ಹುದ್ದೆಯನ್ನೇರಿ ಕೆಲಸ ಮಾಡಿದವರು. ಹೀಗಾಗಿ ಕನ್ನಡಿಗರ ಸಮಸ್ಯೆಗಳೇನು? ಅವುಗಳಿಗೆ ಕಂಡುಕೊಳ್ಳಬಹುದಾದ ಪರಿಹಾರಗಳೇನು ಎಂಬುದು ನಿಮಗೆ ಚೆನ್ನಾಗಿಯೇ ಗೊತ್ತಿದೆ. ಆದರೆ ನೀವು ಮುಖ್ಯಮಂತ್ರಿಯಾಗಿರುವ ಈ ಹೊತ್ತಿನಲ್ಲೂ ಕನ್ನಡಿಗರ ಸಮಸ್ಯೆಗಳು ಬೆಳೆಯುತ್ತಲೇ ಇವೆ. ಇದು ನನ್ನಂಥವರಿಗೆ ಅತ್ಯಂತ ನಿರಾಶೆಯನ್ನು ತರುತ್ತಿದೆ.
ರಾಜ್ಯೋತ್ಸವದ ಈ ಸಂದರ್ಭದಲ್ಲಿ ನಾವು ಮೊಟ್ಟ ಮೊದಲು ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ ಭಾರತ ಒಕ್ಕೂಟದಲ್ಲಿ ನಮಗೆ ಗೌರವಯುತ ಸ್ಥಾನಮಾನ, ಪಾಲು, ಅಧಿಕಾರ, ಸೌಲಭ್ಯಗಳು ದೊರೆತಿದೆಯೇ ಎಂಬುದು. ಇದಕ್ಕೆ ‘ಇಲ್ಲ’ ಎಂಬ ನಿರಾಶೆಯ ಉತ್ತರವೇ ನಮ್ಮ ಮುಂದೆ ನಿಂತು ನಮ್ಮನ್ನು ಹಂಗಿಸುತ್ತಿದೆ. ದೇಶದ ಅಭಿವೃದ್ಧಿಗೆ ನಮ್ಮ ರಾಜ್ಯವೇನೋ ಸಿಂಹಪಾಲು ನೀಡುತ್ತಿದೆ. ಆದರೆ ಕರ್ನಾಟಕವನ್ನು ಮಾತ್ರ ಈ ಒಕ್ಕೂಟ ವ್ಯವಸ್ಥೆ ಮಲತಾಯಿ ಧೋರಣೆಯಿಂದಲೇ ನೋಡಿಕೊಂಡು ಬಂದಿದೆ. ಕೋರ್ಟುಗಳು ನಮಗೆ ಅನ್ಯಾಯವೆಸಗಿವೆ. ಎಲ್ಲ ರಾಜ್ಯಗಳನ್ನು ಒಂದು ತಾಯಿಯ ಮಕ್ಕಳಂತೆ ನೋಡಬೇಕಾದ ಕೇಂದ್ರ ಸರ್ಕಾರಗಳು (ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸಹ) ಕರ್ನಾಟಕವನ್ನು ಕಡೆಗಣಿಸುತ್ತಲೇ ಬಂದಿವೆ.

ಒಕ್ಕೂಟದ ಎಲ್ಲ ರಾಜ್ಯಗಳು ತಮ್ಮ ತಮ್ಮ ಭಾಷೆ, ಸಂಸ್ಕೃತಿ ರಕ್ಷಣೆಯನ್ನು, ಅದರ ಪೋಷಣೆಯನ್ನು ಮಾಡಿಕೊಂಡು ಬರುವ ಅಧಿಕಾರ ಹೊಂದಿರುತ್ತವೆ ಎಂದು ಸಂವಿಧಾನವೇ ಹೇಳುತ್ತದೆ. ಆದರೆ ನ್ಯಾಯಾಲಯಗಳ ಹಸ್ತಕ್ಷೇಪದಿಂದ ಸರ್ಕಾರಗಳ ತೀರ್ಮಾನಗಳು ಕಸದ ಬುಟ್ಟಿಗೆ ಸೇರುತ್ತಿವೆ. ಮಾತೃಭಾಷಾ ಶಿಕ್ಷಣ ನೀತಿಗೆ ಸುಪ್ರೀಂ ಕೋರ್ಟ್ ಈಗಾಗಲೇ ಚರಮಗೀತೆ ಹಾಡಿದೆ. ಅದರ ವಿರುದ್ಧ ಸಂವಿಧಾನ ತಿದ್ದುಪಡಿಯನ್ನು ತಂದು ಎಲ್ಲ ಭಾಷಿಕ ಸಮುದಾಯಗಳನ್ನು, ಜನನುಡಿಗಳನ್ನು ರಕ್ಷಿಸಬೇಕು ಎಂಬ ನಮ್ಮ ಕೋರಿಕೆ ಈಡೇರಲೇ ಇಲ್ಲ. ಇದಕ್ಕಾಗಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಮಾತನಾಡಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಕಾರ್ಯ ಮಾಡಿ ಎಂದು ನಾವು ನಿಮ್ಮನ್ನು ಕೇಳಿಕೊಂಡೆವು. ಆದರೆ ನಿಮ್ಮ ಕಡೆಯಿಂದ ಆ ಪ್ರಯತ್ನ ನಡೆಯುತ್ತಿಲ್ಲ. ಶಿಕ್ಷಣ ಮಾಧ್ಯಮ ಕನ್ನಡವಾಗಿ ಉಳಿಯದೇ ಹೋದರೆ ವರ್ಷಗಳು ಕಳೆದಂತೆ ಕನ್ನಡವೂ ನಾಶವಾಗುತ್ತದೆ. ಭಾರತ ಒಂದು ದೇಶವಾಗಿದೆ ಎಂಬ ಒಂದೇ ಕಾರಣಕ್ಕೆ ನಾವು ನಮ್ಮ ಭಾಷೆಯನ್ನು ಕಳೆದುಕೊಳ್ಳಬೇಕೇ? ಭಾರತ ಒಂದು ದೇಶವಾಗುವುದಕ್ಕೂ ಮುನ್ನ ಇದು ಹಲವು ರಾಜ್ಯಗಳ ಒಕ್ಕೂಟ ಎಂಬುದನ್ನು ಮರೆಯಲು ಸಾಧ್ಯವೇ? ಇಂಥ ವಿಷಯಗಳ ಕುರಿತು ಪ್ರತಿರೋಧ ತೋರಬೇಕಿದ್ದ, ದೇಶದ ಎಲ್ಲ ಭಾಷಿಕ ಸಮುದಾಯಗಳನ್ನು ಒಗ್ಗೂಡಿಸಿ ಸಂವಿಧಾನ ತಿದ್ದುಪಡಿಗಾಗಿ ಆಗ್ರಹಿಸಬೇಕಿದ್ದ ನಿಮ್ಮ ಮೌನ ನಿಜಕ್ಕೂ ಅಚ್ಚರಿಯೆನಿಸುತ್ತಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ಯಾವ ರಾಜ್ಯದ ಜನರು ಇನ್ಯಾವುದೇ ರಾಜ್ಯಕ್ಕೆ ಹೋಗಿ ನೆಲೆಸಬಹುದು, ಎಲ್ಲಿ ಬೇಕಾದರೂ ತಮ್ಮ ಬದುಕನ್ನು ರೂಪಿಸಿಕೊಳ್ಳಬಹುದು. ಈ ನೀತಿಯ ಪರಿಣಾಮ ಏನಾಗಿದೆ ನೋಡಿ. ಪ್ರತಿನಿತ್ಯ ಸಾವಿರಾರು ಮಂದಿ ಹೊರರಾಜ್ಯಗಳಿಂದ ವಲಸಿಗರು ಬಂದು ಬೆಂಗಳೂರು, ಮೈಸೂರು ಮತ್ತಿತರ ನಗರಗಳಲ್ಲಿ ನೆಲೆ ನಿಲ್ಲುತ್ತಿದ್ದಾರೆ. ಹೀಗೇ ಮುಂದುವರೆದರೆ ಕನ್ನಡಿಗರೇ ಅಲ್ಪಸಂಖ್ಯಾತರಾಗಿ ಬಾಳುವ ದುರ್ಗತಿ ಬಂದೊದಗಿದರೂ ಆಶ್ಚರ್ಯವಿಲ್ಲ. ವಿಶೇಷವಾಗಿ ಉತ್ತರ ಭಾರತದಿಂದ ಆಗುತ್ತಿರುವ ವಲಸೆ ಎಷ್ಟು ಪ್ರಮಾಣದಲ್ಲಿದೆಯೆಂದರೆ ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಹಿಂದೀವಾಲಾಗಳದ್ದೇ ಅಬ್ಬರವಾಗಿಹೋಗಿದೆ. ವಲಸಿಗರು ಕನ್ನಡ ಕಲಿತು, ಇಲ್ಲಿನ ಜನರೊಂದಿಗೆ ಬೆರೆಯುವ ಬದಲು, ತಮ್ಮ ಭಾಷೆಯನ್ನೇ ಅದರಲ್ಲೂ ವಿಶೇಷವಾಗಿ ಹಿಂದಿಯನ್ನು ಕಲಿಯುವಂತೆ ಕನ್ನಡಿಗರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಇದಕ್ಕಿಂತ ಗಂಭೀರ ಸಮಸ್ಯೆ ಏನೆಂದರೆ ಕನ್ನಡಿಗರ ಆಸ್ತಿ ಈಗ ಕೈ ತಪ್ಪಿ ಹೋಗುತ್ತಿದೆ. ಎಲ್ಲೆಡೆ ಪರಭಾಷಿಗರದೇ ಆರ್ಭಟ. ಪರಭಾಷಿಗರು ನಿಧಾನವಾಗಿ ಕರ್ನಾಟಕದ ರಾಜಕಾರಣದ ಮೇಲೂ ಹಿಡಿತ ಸಾಧಿಸುತ್ತಿದ್ದಾರೆ. ನಮ್ಮ ರಾಜಕಾರಣಿಗಳೂ, ರಾಜಕೀಯ ಪಕ್ಷಗಳೂ ಸಹ ಮತಬ್ಯಾಂಕ್ ರಾಜಕಾರಣಕ್ಕಾಗಿ ಭಾಷಾ ಅಲ್ಪಸಂಖ್ಯಾತರ ಬೆನ್ನುಬಿದ್ದಿದ್ದಾರೆ. ಇದರ ಪರಿಣಾಮ ನೇರವಾಗಿ ಕನ್ನಡಿಗರ ಮೇಲೆ, ಕನ್ನಡ ಸಂಸ್ಕೃತಿಯ ಮೇಲೆ ಆಗುತ್ತಿದೆ. ಹೀಗಿರುವಾಗ ಈ ಅನಿಯಂತ್ರಿತ ವಲಸೆಯನ್ನು ನೀವಾದರೂ ತಡೆಯಬಹುದು ಎಂಬ ನಮ್ಮ ನಂಬುಗೆಯೂ ಹುಸಿಯಾಗಿದೆ. ವಲಸೆಯನ್ನು ತಡೆಯಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ನೀವು ಸಬೂಬು ಹೇಳಬಹುದು. ಆದರೆ ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ದಕ್ಕಬೇಕು ಎಂಬ ಸಂಕಲ್ಪವೊಂದನ್ನು ನೀವು ತೊಟ್ಟರೆ ಸಾಕು, ವಲಸೆ ಒಂದು ಹಂತದಲ್ಲಿ ನಿಯಂತ್ರಣಕ್ಕೆ ಬರುತ್ತದೆ. ಇದಕ್ಕಾಗಿ ಬೇರೇನೂ ಮಾಡಬೇಕಿಲ್ಲ. ಡಾ.ಸರೋಜಿನಿ ಮಹಿಷಿ ವರದಿಯನ್ನು ಈಗಿನ ಕಾಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿ ಜಾರಿಗೊಳಿಸಿದರೆ ಸಾಕು, ಆದರೆ ನಿಮ್ಮ ಸರ್ಕಾರಕ್ಕೆ ಆ ಇಚ್ಛಾಶಕ್ತಿ ಇದ್ದ ಹಾಗೆ ಕಾಣುತ್ತಿಲ್ಲ.

ನಿಮ್ಮ ಹಿಂದೆ ಇದ್ದ ಬಿಜೆಪಿ ಸರ್ಕಾರವೂ ಬಂಡವಾಳಶಾಹಿಗಳನ್ನು ಆಕರ್ಷಿಸುವ ಸಲುವಾಗಿ ಗ್ಲೋಬಲ್ ಇನ್ವೆಸ್ಟರ್‍ಸ್ ಮೀಟ್‌ನಂಥ ಬೃಹತ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ಈಗ ನೀವೂ ಸಹ ಇದನ್ನೇ ಮುಂದುವರೆಸುತ್ತಿದ್ದೀರಿ. ಬಂಡವಾಳಶಾಹಿಗಳಿಂದಲೇ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂಬ ಭ್ರಮೆಯನ್ನು ಈಗಾಗಲೇ ಬಿತ್ತಲಾಗಿದೆ. ಹೀಗಾಗಿ ನೀವು ಬಂಡವಾಳಶಾಹಿಗಳನ್ನು ಆಕರ್ಷಿಸಲು ರಿಯಾಯಿತಿ ದರದಲ್ಲಿ ಜಮೀನು, ರಿಯಾಯಿತಿ ದರದಲ್ಲಿ ವಿದ್ಯುತ್-ನೀರು, ತೆರಿಗೆ ಮನ್ನಾ, ತೆರಿಗೆ ರಜೆ ಅಥವಾ ತೆರಿಗೆ ರಿಯಾಯಿತಿ ಇತ್ಯಾದಿ ಸವಲತ್ತುಗಳನ್ನು ನೀಡುತ್ತೀರಿ. ಹೀಗೆಲ್ಲ ಸವಲತ್ತು ನೀಡುವಾಗ, ಅವರ ಸಂಸ್ಥೆಗಳಲ್ಲಿ ಶೇ. ೯೦ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೇ ಮೀಸಲಿಡಬೇಕು ಎಂಬ ಷರತ್ತನ್ನು ವಿಧಿಸಲು ಏನು ಸಮಸ್ಯೆ? ಈ ಬಂಡವಾಳಶಾಹಿಗಳಿಗಾಗಿ ರಾಜ್ಯದ ರೈತರು ತಮ್ಮ ಅಮೂಲ್ಯ ಜಮೀನನ್ನು ಬಿಟ್ಟುಕೊಟ್ಟಿದ್ದಾರೆ ಎಂಬುದನ್ನು ಮರೆಯಲು ಸಾಧ್ಯವೇ? ಈ ಸಂಸ್ಥೆಗಳು ಕನ್ನಡಿಗರಿಗಾಗಿ ಏನು ಮಾಡಿವೆ ಎಂಬುದರ ಅಂಕಿಅಂಶವನ್ನೇನಾದರೂ ಗಮನಿಸಿದ್ದೀರಾ?

ಖಾಸಗಿ ಸಂಸ್ಥೆಗಳ ವಿಷಯ ಹಾಗಿರಲಿ, ರೈಲ್ವೆ, ಬ್ಯಾಂಕಿಂಗ್, ವಿಮಾ ಕ್ಷೇತ್ರದಲ್ಲೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಗಳು ನಿಮ್ಮ ಗಮನಕ್ಕೆ ಬಂದಿಲ್ಲವೇ? ಇದರ ವಿರುದ್ಧ ಒಂದು ಸರ್ಕಾರವಾಗಿ ನಿಮ್ಮ ನಿಲುವೇನು? ಇತರೆ ರಾಜ್ಯಗಳು ತಮ್ಮ ತಮ್ಮ ಭಾಷಿಕ ಸಮುದಾಯಗಳಿಗೆ ಶೇ. ೮೦ರಿಂದ ೯೦ರಷ್ಟು ಉದ್ಯೋಗ ಮೀಸಲಾತಿಯನ್ನು ನೀಡುವ ಕಾನೂನುಗಳನ್ನು ಮಾಡಿಕೊಂಡಿವೆ. ಒರಿಸ್ಸಾ, ಮಹಾರಾಷ್ಟ್ರ ರಾಜ್ಯಗಳಿಗೆ ಸಾಧ್ಯವಾಗಿದ್ದು ಕರ್ನಾಟಕಕ್ಕೆ ಯಾಕೆ ಸಾಧ್ಯವಾಗುವುದಿಲ್ಲ. ಆ ರಾಜ್ಯಗಳಿಗೊಂದು ಸಂವಿಧಾನ, ನಮ್ಮ ರಾಜ್ಯಕ್ಕೊಂದು ಸಂವಿಧಾನ ಜಾರಿಯಲ್ಲಿದೆಯೇ?

ಮುಖ್ಯಮಂತ್ರಿಗಳೇ, ಸಮಸ್ಯೆ ನೂರೆಂಟು ಇವೆ. ನಾವು ಕನ್ನಡ ಚಳವಳಿಗಾರರು ಪದೇ ಪದೇ ಚಳವಳಿಯ ಮೂಲಕ ಇದನ್ನೆಲ್ಲ ನಿಮ್ಮ ಮುಂದಿಡುತ್ತಲೇ ಬಂದಿದ್ದೇವೆ. ಅದಕ್ಕಾಗಿ ನೀವು ನಮಗೆ ಕೊಡುವ ಉಡುಗೊರೆ ಪೊಲೀಸ್ ಕೇಸುಗಳು, ಜೈಲುವಾಸ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ತಮ್ಮ ಪಕ್ಷದ, ತಮ್ಮ ಪಕ್ಷದ ಪರವಾದ ಸಂಘಟನೆಗಳ ಮೇಲಿದ್ದ ಕ್ರಿಮಿನಲ್ ಕೇಸುಗಳನ್ನು ಹಿಂದಕ್ಕೆ ಪಡೆದರು. ನೀವು ಅಧಿಕಾರಕ್ಕೆ ಬಂದಮೇಲೆ ನಿಮಗೆ ಬೇಕಾದವರ ಕೇಸುಗಳನ್ನು ಹಿಂದಕ್ಕೆ ಪಡೆದಿರಿ. ಆದರೆ ನಾಡು-ನುಡಿಗಾಗಿ ಚಳವಳಿ ನಡೆಸಿದ ನಮ್ಮಗಳ ಮೇಲಿರುವ ಸಾವಿರಾರು ಕೇಸುಗಳು ಹಾಗೆಯೇ ಇವೆ. ನಾವು ಕೋರ್ಟು, ಜೈಲು ಅಲೆದುಕೊಂಡು ನಮ್ಮ ಹೋರಾಟ ಮುಂದುವರೆಸಿದ್ದೇವೆ.

ಸಮಸ್ಯೆಗಳು ನೂರೆಂಟು ಇವೆ. ಕೆಲವು ನಿಮ್ಮ ವ್ಯಾಪ್ತಿಯನ್ನು ಮೀರಿದ ಸಮಸ್ಯೆಗಳಿರಬಹುದು ನಿಜ. ಆದರೆ ರಾಜ್ಯದ ಮುಖ್ಯಮಂತ್ರಿಯಾದವರಿಗೆ ಈ ನಾಡನ್ನು ಕಾಪಾಡುವ ಹೊಣೆಯೇ ಮೊದಲಿನದ್ದು. ನಾಡನ್ನು ಕಾಪಾಡುವುದೆಂದರೆ ಈ ನಾಡಿನ ಜನರನ್ನು, ಅವರಾಡುವ ನುಡಿಯನ್ನು, ಅವರ ಸಂಸ್ಕೃತಿಯನ್ನು ಕಾಪಾಡುವುದು ಎಂದರ್ಥ. ಬರಿಯ ಘೋಷಣೆಗಳಿಂದ, ಭಾಷಾಭಿಮಾನದ ಮಾತುಗಳಿಂದ ಈ ನಾಡನ್ನು ರಕ್ಷಿಸಲಾಗದು. ಅದು ನಿಮಗೂ ಚೆನ್ನಾಗಿ ಗೊತ್ತಿದೆ. ಬೇಕಿರುವುದು ರಾಜಕೀಯ ಇಚ್ಛಾಶಕ್ತಿ ಮತ್ತು ಒಟ್ಟು ನಾಡನ್ನು ಕಾಪಾಡುವ ಕ್ರಿಯಾಶಕ್ತಿ. ನಿಮ್ಮ ಉಳಿದ ಅಧಿರಾವಧಿಯಲ್ಲಾದರೂ ಅದನ್ನು ಪ್ರದರ್ಶಿಸಬೇಕು ಎಂಬುದು ನನ್ನ ಆಗ್ರಹ.

ಅನ್ನಭಾಗ್ಯದಂಥ ಯೋಜನೆಗಳು ಜನರ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರಗಳು ಮಾತ್ರ. ನಮ್ಮ ರೈತರು, ಕೂಲಿ ಕಾರ್ಮಿಕರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕಿದೆ. ಕನ್ನಡದ ಮಕ್ಕಳಿಗೆ ಅತ್ಯಗತ್ಯವಾದ ಶಿಕ್ಷಣ ಮತ್ತು ಉದ್ಯೋಗವನ್ನು ದೊರಕಿಸಿಕೊಡುವ ಕಾರ್ಯ ಆಗಬೇಕಿದೆ. ರಾಜ್ಯದಲ್ಲಿ ಕುಂಟುತ್ತ ಸಾಗಿರುವ ಎಲ್ಲ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿದರೆ ನಾಡು ಸುಭಿಕ್ಷವಾಗದೇ ಇದ್ದೀತೆ? ಸರ್ಕಾರದ ಎಲ್ಲ ಯೋಜನೆಗಳು ಕಟ್ಟಕಡೆಯ ಮನುಷ್ಯನವರೆಗೆ ತಲುಪುವಂಥ ಪಾರದರ್ಶಕ, ಭ್ರಷ್ಟಾಚಾರ ರಹಿತ ವ್ಯವಸ್ಥೆ ಜಾರಿಗೆ ಬರಬೇಕಿದೆ. ಆಗ ಮಾತ್ರ ಬಡಜನರ ಪರವಾದ ಮುಖ್ಯಮಂತ್ರಿ ಎಂದು ನೀವು ಗಳಿಸಲು ಬಯಸುತ್ತಿರುವ ಕೀರ್ತಿಯೂ ಲಭಿಸುತ್ತದೆ.

ಮಾನ್ಯ ಮುಖ್ಯಮಂತ್ರಿಗಳೇ, ಈಗಲೂ ಕಾಲ ಮಿಂಚಿಲ್ಲ. ರಾಜ್ಯೋತ್ಸವದ ಈ ಸಂದರ್ಭದಲ್ಲಿ ನೀವು ಮತ್ತು ನಿಮ್ಮ ಸರ್ಕಾರ ಹೊಸನಾಡೊಂದನ್ನು ಕಟ್ಟುವ ಸಂಕಲ್ಪವನ್ನು ತೊಡಬೇಕಿದೆ. ಕನ್ನಡಿಗರ ಕನಸುಗಳನ್ನು ಸಾಕಾರಗೊಳಿಸುವ ದೊಡ್ಡ ಹೊಣೆ ನಿಮ್ಮ ಮುಂದಿದೆ. ಅದನ್ನು ಇನ್ನಾದರೂ ಮಾಡಬಹುದೆಂಬ ನಿರೀಕ್ಷೆ ನನ್ನದು.

ಗೌರವಾದರಗಳೊಂದಿಗೆ
ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

No comments:

Post a Comment