Friday, 23 October 2015

ರಾಜಸ್ಥಾನದ ‘ಶಿಲ್ಪಗ್ರಾಮ’ ಕರ್ನಾಟಕದಲ್ಲೂ ಆಗಬೇಕಿದೆ...


ಕಳೆದ ಮೂರು ನಾಲ್ಕು ದಿನಗಳಿಂದ ರಾಜಸ್ಥಾನ ಪ್ರವಾಸದಲ್ಲಿದ್ದೇನೆ. ಇದೊಂದು ಅಪೂರ್ವ ಅನುಭವ. ರಜಪೂತ ಸಂಸ್ಕೃತಿಯ ನೆಲೆವೀಡಾದ ರಾಜಸ್ಥಾನ ನಿಜವಾದ ಅರ್ಥದಲ್ಲಿ ರಾಜರುಗಳ ಸ್ಥಾನ. ಕಣ್ಣೆವೆ ಚಾಚಿದಷ್ಟು ಉದ್ದದ ಮರಳುಗಾಡನ್ನು ಒಡಲಲ್ಲಿ ಹೊಂದಿರುವ ಈ ನಾಡು, ದೇಶದ ಬಹುಸಂಸ್ಕೃತಿಯ ಅಸ್ಮಿತೆಗೆ ಬಹುದೊಡ್ಡ ಸಾಕ್ಷಿ. ಇತಿಹಾಸದ ಕಥೆಗಳನ್ನು ಹೇಳುವ ಕೋಟೆ ಕೊತ್ತಲಗಳು, ಅಪೂರ್ವ ಶಿಲ್ಪ ಸೌಂದರ್ಯದ ದೇಗುಲಗಳು ಕಣ್ಮನ ಸೆಳೆಯುವುದಲ್ಲದೆ, ನೋಡುಗರನ್ನು ಬೆರಗಾಗಿಸುತ್ತವೆ. ಎರಡನೇ ಸಾವಾಯಿ ಜೈಸಿಂಗ್ ನಿರ್ಮಿಸಿದ ಜೈಪುರ, ಈಗ ಪಿಂಕ್ ಸಿಟಿ ಎಂದೇ ಹೆಸರುವಾಸಿ. ಇಲ್ಲಿನ ಅಂಬರ್ ಕೋಟೆ, ನಹಾರಗಢ ಕೋಟೆ, ಹವಾ ಮಹಲ್, ಶೀಶ ಮಹಲ್, ಗಣೇಶ್ ಪೋಲ್ ಮತ್ತು ಜಲ ಮಹಲ್ ಇತ್ಯಾದಿ ಪ್ರವಾಸಿ ತಾಣಗಳಿಗೆ ವಿಶ್ವದ ನಾನಾ ಭಾಗದಿಂದ ಜನರು ಬಂದು ಹೋಗುತ್ತಾರೆ. ಹೀಗಾಗಿಯೇ ಜೈಪುರವನ್ನು ಭಾರತದ ಪ್ಯಾರಿಸ್ ಎಂದೂ ಕರೆಯುತ್ತಾರೆ. ಇದೆಲ್ಲಕ್ಕಿಂತ ನನ್ನನ್ನು ಇನ್ನಿಲ್ಲದಂತೆ ಸೆಳೆದದ್ದು ಇಲ್ಲಿನ ಜಾನಪದ ಕಲೆ-ಸಂಸ್ಕೃತಿಗಳ ವೈಭವ ಹಾಗು ಇದೆಲ್ಲದರ ಅಪೂರ್ವ ಸಂಗಮವಾಗಿರುವ ಅಪ್ಪಟ ದೇಸೀ ಶಿಲ್ಪಗ್ರಾಮ.

ಈ ಶಿಲ್ಪಗ್ರಾಮವನ್ನು ನೋಡಿದ ಮೇಲೆ ನಿಜಕ್ಕೂ ಇಂಥದ್ದೊಂದು ಜಾನಪದ ಕೇಂದ್ರ ಕರ್ನಾಟಕದಲ್ಲೂ ಇರಬೇಕಿತ್ತು, ಇರಲೇಬೇಕು, ಮುಂದೆಯಾದರೂ ಆಗಲೇಬೇಕು ಅನಿಸುತ್ತಿದೆ. ಅಷ್ಟಕ್ಕೂ ಈ ಶಿಲ್ಪಗ್ರಾಮದಲ್ಲಿ ಏನೇನಿದೆ ಎಂದು ಬರಿಯ ಮಾತುಗಳಲ್ಲಿ ಹೇಳಲಾಗುವುದಿಲ್ಲ. ಇಡೀ ರಾಜಸ್ಥಾನದ ಜೀವಾತ್ಮವೇ ಇಲ್ಲಿದೆಯೇನೋ ಎಂದನ್ನಿಸುತ್ತದೆ. ಈ ಮರಳುಗಾಡಿನ ನಾಡಿನ ಬದುಕಿನ ವೈವಿಧ್ಯ, ಕಲಾವಂತಿಕೆ, ಜಾನಪದ ಹಿರಿಮೆಗಳೆಲ್ಲವನ್ನೂ ಒಂದೆಡೆ ಕಲೆಹಾಕಿ, ಒಂದು ರೂಪಕದಂತೆ ನಮ್ಮ ಕಣ್ಣಮುಂದೆ ಬಿಡಿಸಿಡುವ ಅಪೂರ್ವ ಕೇಂದ್ರವಿದು.

ಸುಮಾರು ಎಪ್ಪತ್ತು ಎಕರೆ ಜಾಗದಲ್ಲಿ ನಿರ್ಮಾಣಗೊಂಡಿರುವ ಈ ಶಿಲ್ಪಗ್ರಾಮ, ರಾಜಸ್ಥಾನದ ಜಾನಪದ ವೈಭವ, ಗುಡಿ ಕೈಗಾರಿಕೆಗಳು, ಅಲ್ಲಿನ ವಿಶಿಷ್ಟ ಶೈಲಿಯ ಮನೆಗಳು, ರಾಜಸ್ಥಾನದ ಎಲ್ಲ ಬಗೆಯ ಸಂಪ್ರದಾಯಗಳು, ಅಲ್ಲಿನ ಚರಿತ್ರೆ, ಸಂಸ್ಕೃತಿ, ಕಲಾಪ್ರಕಾರಗಳು ಎಲ್ಲವೂ ಮೇಳೈಸಿದ ಅದ್ಭುತ ಕೇಂದ್ರ. ಕೇವಲ ರಾಜಸ್ಥಾನ ಮಾತ್ರವಲ್ಲ, ಪಶ್ಚಿಮ ಭಾರತದ ಐದು ರಾಜ್ಯಗಳ ಸಂಸ್ಕೃತಿಗಳನ್ನು ಬಿಂಬಿಸುವ ವರ್ಣರಂಜಿತ ದೃಶ್ಯವೈಭವ ಇಲ್ಲಿ ನೋಡಲು ಸಿಗುತ್ತದೆ. ಹತ್ತು ಹಲವು ಬಗೆಯ ನೃತ್ಯಗಾರರೊಂದಿಗೆ ಕುಣಿಯುತ್ತಲೇ ನೀವು ಆ ಎಲ್ಲ ಕಲಾಪ್ರಕಾರವನ್ನು ಸವಿಯಬಹುದು. ನೀವು ಎಂದೆಂದೂ ನೋಡದ ಸಂಗೀತ ವಾದ್ಯಗಳನ್ನು ಬಳಸಿ ಅಲ್ಲಿ ಹಾಡಲಾಗುತ್ತದೆ, ಹಾಡಿ ನಿಮ್ಮ ಹೃದಯವನ್ನು ಕುಣಿಸಲಾಗುತ್ತದೆ. ಒಂದರ್ಥದಲ್ಲಿ ಇಡೀ ರಾಜಸ್ಥಾನದ ಜನಪದ ಬದುಕನ್ನು ಇಲ್ಲಿ ಪುನರ್ ನಿರ್ಮಿಸಲಾಗಿದೆ. ಅಪ್ಪಟ ರಾಜಸ್ಥಾನಿ ಜಾನಪದ ಹಾಡುಗಳಿಂದ ಹಿಡಿದು ಸೂಫಿ ಸಂಗೀತದವರೆಗೆ ಎಲ್ಲ ರೀತಿಯ ಸಂಗೀತ ಪ್ರಕಾರಗಳನ್ನೂ ಇಲ್ಲಿ ಕೇಳಬಹುದು.

ಗೊಂಬೆಯಾಡಿಸುವವರಿಂದ ಹಿಡಿದು, ಒಂಟೆ ಮಾವುತರು, ಬಿಲ್ಲುಗಾರರು, ಮೀನುಗಾರರು, ಅಲೆಮಾರಿ ಸಮುದಾಯದವರು, ಗಿರಿಜನರು ಎಲ್ಲರನ್ನೂ ನೀವು ಇಲ್ಲಿ ಕಾಣಲು ಸಾಧ್ಯ. ಈ ಎಲ್ಲರೂ ತಮ್ಮ ತಮ್ಮ ಸಂಸ್ಕೃತಿಗಳನ್ನು, ಕಲಾನೈಪುಣ್ಯವನ್ನು ಪ್ರದರ್ಶಿಸುತ್ತ ನೋಡುಗರ ಮನ ಗೆಲ್ಲುತ್ತಾರೆ. ರಾಜಸ್ಥಾನ, ಗುಜರಾಥ್ ರಾಜ್ಯಗಳ ಕುಶಲಕರ್ಮಿ ಸಮುದಾಯಗಳ ಜನರು ಬಳಸುವ ವಿಶಿಷ್ಠ ಬಗೆಯ ಮನೆಗಳನ್ನು ಇಲ್ಲಿ ಪುನರ್ ನಿರ್ಮಿಸಲಾಗಿದೆ. ನೇಕಾರರು, ಗಿರಿಜನರು, ಮುಸ್ಲಿಮರು, ಕುಂಬಾರರು, ಹರಿಜನರು, ರೇಬಾರಿಗಳು ಹೀಗೆ ಕುಲಕಸುಬುಗಳನ್ನು ನೆಚ್ಚಿಕೊಂಡ ಹಲವು ಸಮುದಾಯಗಳ ಬದುಕಿನ ಶೈಲಿಯನ್ನು ಇಲ್ಲಿ ನೋಡಬಹುದು. ಒಟ್ಟಾರೆ ಗ್ರಾಮೀಣ ಭಾಗದ ಜನರ ಒಟ್ಟು ಬದುಕು ಇಲ್ಲಿ ನಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ.

ಶಿಲ್ಪಗ್ರಾಮ ಎಲ್ಲ ರೀತಿಯಲ್ಲೂ ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರ. ರಾಜಸ್ಥಾನ ಮತ್ತು ಪಶ್ಚಿಮ ಭಾರತದ ಬಗೆಬಗೆಯ ಖಾದ್ಯಗಳು ಸಹ ಇಲ್ಲಿ ಲಭ್ಯ. ಜ್ಞಾನ, ಮನರಂಜನೆಯಿಂದ ಹಿಡಿದು ಆಹಾರದವರೆಗೆ ಎಲ್ಲವೂ ಇಲ್ಲಿ ಸಂಗಮವಾಗಿದೆ. ಎಲ್ಲ ಬಗೆಯ ಗ್ರಾಮೀಣ ತಿಂಡಿ ತಿನಿಸುಗಳನ್ನು ಅಲ್ಲೇ ತಯಾರಿಸಿ ನೀಡಲಾಗುವುದರಿಂದ ಅದರ ಸ್ವಾದ ಇನ್ನೂ ಹೆಚ್ಚು.

ರಾಜಸ್ಥಾನ ಸರ್ಕಾರ ಇದೆಲ್ಲವನ್ನೂ ಪ್ರದರ್ಶನಕ್ಕೆ ಮಾತ್ರ ಇಟ್ಟಿದ್ದರೆ ಅದರ ಮಹತ್ವ ಅಷ್ಟೇನು ಇರುತ್ತಿರಲಿಲ್ಲವೇನೋ. ಪ್ರತಿ ಎರಡುವಾರಗಳಿಗೆ ಗ್ರಾಮೀಣ ಪರಿಸರದ ಕುಶಲಕರ್ಮಿ ತಂಡವೊಂದನ್ನು ಆಹ್ವಾನಿಸಿ, ಅವರಿಗೆ ಈ ಶಿಲ್ಪಗ್ರಾಮದಲ್ಲೇ ಇದ್ದು, ಅಲ್ಲೇ ವಸ್ತುಗಳನ್ನು ತಯಾರಿಸಿ, ಅಲ್ಲೇ ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ. ಮಾತ್ರವಲ್ಲ, ಅವರು ತಮ್ಮ ಸಂಸ್ಕೃತಿಯ ಹಾಡು, ನೃತ್ಯ ಇತ್ಯಾದಿ ಕಲಾಪ್ರಕಾರಗಳ ಪ್ರದರ್ಶನ ಮಾಡಲೂ ಅವಕಾಶ ನೀಡಿದೆ. ಜಾಗತೀಕರಣದ ಕಾಲಘಟ್ಟದಲ್ಲಿ ಯಾವುದೋ ಹಳ್ಳಿಯಿಂದ ಬಂದ ಈ ಜನರು ನಮ್ಮ ಕಣ್ಣೆದುರು ಮಾಯಾಸೋಜಿಗದಂತೆ ನಮ್ಮೆದುರು ತಮ್ಮ ಕೈಚಳಕವನ್ನು ಪ್ರದರ್ಶಿಸುತ್ತ, ಗ್ರಾಮೀಣ ಅಭಿವ್ಯಕ್ತಿಯನ್ನು ಹರವಿಡುತ್ತಿದ್ದರೆ ರೋಮಾಂಚನವಾಗದೇ ಇದ್ದೀತೆ?

ಇದೆಲ್ಲವನ್ನೂ ನೋಡಿದ ನಂತರ ನನಗನ್ನಿಸಿದ್ದು, ಇಂಥದ್ದೊಂದು ಶಿಲ್ಪಗ್ರಾಮ, ಜಾನಪದ ಕೇಂದ್ರ ನಮ್ಮ ನಾಡಿನಲ್ಲೂ ಇರಬೇಕಿತ್ತು ಎಂದು. ಹಾಗೆ ನೋಡಿದರೆ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ, ಜಾನಪದ ಸಂಶೋಧಕ ಎಚ್.ಎಲ್.ನಾಗೇಗೌಡರ ಕಲ್ಪನೆಯ ಕೂಸಾಗಿ ಅರಳಿದ ಜಾನಪದ ಲೋಕ, ರಾಮನಗರ ಸಮೀಪ ನೋಡುಗರನ್ನು ಸೆಳೆಯುತ್ತಿದೆ. ಸುಮಾರು ಹದಿನೈದು ಎಕರೆ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಜಾನಪದ ಲೋಕವೂ ಸಹ ಇಂಥದ್ದೇ ಉದ್ದೇಶವನ್ನು ಒಳಗೊಂಡ ಜಾನಪದ ಕೇಂದ್ರ. ಕರ್ನಾಟಕ ಜಾನಪದ ಪರಿಷತ್ತಿನ ಅಡಿಯಲ್ಲಿ ನಾಡೋಜ ಎಚ್.ಎಲ್.ನಾಗೇಗೌಡರು ರೂಪಿಸಿದ ಜಾನಪದ ಲೋಕ ಜನಪದ ಸಾಹಿತ್ಯ ಸಂಪಾದನೆ, ಪ್ರಕಟಣೆ, ಧ್ವನಿ ಸುರುಳಿ ಸಿದ್ಧತೆ, ಪತ್ರಿಕೆ ಪ್ರಕಟಣೆ, ಜಾನಪದ ಕೋಶ ತಯಾರಿಕೆ, ಗೀತಗಾಯನ ವಾದ್ಯ, ಕಲಾ ಪ್ರದರ್ಶನ ಕಲಿಕೆ, ಬೋಧನೆ, ವಿಚಾರ ಸಂಕಿರಣ, ಕಮ್ಮಟ, ಜಾನಪದ ತರಬೇತಿ, ಕ್ಷೇತ್ರ ಕಾರ್ಯ ಹೀಗೆ ಹತ್ತು ಹಲವಾರು ಕಾರ್ಯಗಳನ್ನು ಮಾಡುತ್ತ ಬಂದಿದೆ.

ಆದರೆ ಇದಕ್ಕೂ ಮೀರಿದ ವಿಶಾಲ ವ್ಯಾಪ್ತಿಯ, ರಾಜಸ್ಥಾನದ ಶಿಲ್ಪಗ್ರಾಮದ ಮಾದರಿಯ ಒಂದು ಪುಟ್ಟ ಕರ್ನಾಟಕವನ್ನು ನಾವು ನಿರ್ಮಿಸಬಾರದೇಕೆ? ನಮ್ಮ ಸಾಂಸ್ಕೃತಿಕ ವೈಭವ, ಜಾನಪದ ಸಿರಿ, ಕರಕುಶಲ ಕೈಗಾರಿಕೆಗಳಿಗೇನು ಕೊರತೆಯೇ? ನಮ್ಮ ನಾಡಿನ ಒಂದೊಂದು ಭಾಗ ಒಂದೊಂದು ಬಗೆಯ ಕಲೆಗಾರಿಕೆಗೆ ಪ್ರಸಿದ್ಧಿ. ಎಲ್ಲವನ್ನು ಪ್ರತಿನಿಧಿಸುವ ಒಂದು ಜಾನಪದ ಜಗತ್ತನ್ನೇ ನಿರ್ಮಿಸಿದರೆ ಅದೊಂದು ಅಪೂರ್ವ ಕೇಂದ್ರವಾಗಬಹುದು. ಅಷ್ಟು ಮಾತ್ರವಲ್ಲ, ನಶಿಸಿ ಹೋಗುತ್ತಿರುವ ಕಲಾಪ್ರಕಾರಗಳನ್ನು ಪುರಸ್ಕರಿಸಿ ಅವುಗಳನ್ನು ಮುಖ್ಯವಾಹಿನಿಗೆ ತಂದಂತೆಯೂ ಆಗುತ್ತದೆ. ಗುಡಿಕೈಗಾರಿಕೆಗಳೇ ನಾಶವಾಗುತ್ತಿರುವ ಇಂದಿನ ಆಧುನಿಕ ಬದುಕಿನ ನಡುವೆ, ಗುಡಿ ಕೈಗಾರಿಕೆಗಳಿಗೆ ಹೊಸ ತಾರಾ ಮೌಲ್ಯವನ್ನು ಕೊಟ್ಟು, ಅವುಗಳನ್ನು ತಯಾರಿಸುವ ಜನರ ಅಪಾರ ಜ್ಞಾನವನ್ನು ಗೌರವಿಸಿದಂತಾಗುತ್ತದೆ. ಆಧುನಿಕ ಕಾಲದಲ್ಲಿ ಜ್ಞಾನದ ಪರಿಭಾಷೆಯೇ ವಿಕೃತವಾಗಿದೆ. ಎಂಜಿನಿಯರಿಂಗ್, ಮೆಡಿಕಲ್ ಥರದ ಕೋರ್ಸುಗಳನ್ನು ಮಾಡಿದವರು ಮಾತ್ರ ಜ್ಞಾನವಂತರು ಎಂಬ ಭ್ರಮೆಯನ್ನು ಬಿತ್ತಲಾಗುತ್ತಿದೆ. ಇಂಥ ಕಾಲಘಟ್ಟದಲ್ಲಿ ಯಾವುದೋ ಹಳ್ಳಿಯ ಮೂಲೆಯಲ್ಲಿ ತನ್ನ ಕೈಗಳಿಂದಲೇ ಮೋಹಕ ಕುಸುರಿ ಕೆಲಸ ಮಾಡುವವನ ಜ್ಞಾನವನ್ನು ಪರಿಗಣಿಸಬೇಕಿದೆ, ಮುಖ್ಯವಾಹಿನಿಗೆ ತರಬೇಕಿದೆ, ಜಗತ್ತಿಗೆ ಪರಿಚಯಿಸಬೇಕಿದೆ.

ಕಲೆ, ಸಂಸ್ಕೃತಿ ನಶಿಸಿದರೆ, ನಾಡೂ ಅವಸಾನಗೊಂಡಂತೆಯೇ ಆಗುತ್ತದೆ. ಅಂಥದ್ದಕ್ಕೆ ನಾವು ಅವಕಾಶ ನೀಡಬಾರದು. ನಮ್ಮ ಬೇರುಗಳೆಲ್ಲ ಇರುವುದು ನಮ್ಮ ಹಳ್ಳಿಗಳಲ್ಲಿ ಮತ್ತು ಹಳ್ಳಿಯ ಬದುಕಿನಲ್ಲಿ. ಜಾಗತೀಕರಣದ ಸುಳಿಗಾಳಿಯಲ್ಲಿ ನಗರೀಕರಣ ಪ್ರಕ್ರಿಯೆ ಹೆಚ್ಚುತ್ತಿದ್ದಂತೆ ನಾವು ನಮ್ಮ ಬೇರುಗಳನ್ನು ಮರೆತಿದ್ದೇವೆ. ನಮ್ಮ ಬೇರುಗಳಿಗೆ ಹಿಂದಿರುಗಲು ಇದು ಸರಿಯಾದ ಸಮಯ. ಈ ಮೂಲಕವೇ ನಾವು ಮತ್ತೊಮ್ಮೆ ಗಾಂಧೀಜಿಯವರು ಕನಸಿದ್ದ ಗ್ರಾಮಭಾರತವನ್ನು ಪುನರ್ ರೂಪಿಸಬೇಕಿದೆ.
ನಮ್ಮಲ್ಲೂ ಎಲ್ಲವೂ ಇದೆ. ಇತರೆ ಎಲ್ಲ ರಾಜ್ಯಗಳಿಗಿಂತ ಹೆಚ್ಚು ಸಾಂಸ್ಕೃತಿಕ ಹಿರಿಮೆಗಳನ್ನು ಹೊಂದಿರುವ ನಾಡು ನಮ್ಮದು. ನಮ್ಮ ಜಾನಪದ ಸಂಸ್ಕೃತಿಗಂತೂ ಸಾಟಿಯೇ ಇಲ್ಲ. ನೂರೆಂಟು ಬಗೆಯ ಜಾನಪದ ಕಲಾಪ್ರಕಾರಗಳು ಇಲ್ಲಿವೆ. ಕರಕುಶಲತೆಯನ್ನೇ ಜೀವದ್ರವ್ಯವಾಗಿಸಿಕೊಂಡ ಅನೇಕಾನೇಕ ಸಮುದಾಯಗಳು ನಾಡಿನ ಮೂಲೆಮೂಲೆಗಳಲ್ಲಿ ಉಸಿರಾಡುತ್ತಿವೆ. ಈ ಎಲ್ಲವನ್ನೂ ಕನಿಷ್ಠ ನೂರು ಎಕರೆ ಜಾಗದ ಒಂದು ಕಲಾಕೇಂದ್ರದಲ್ಲಿ ತಂದು, ಇಡೀ ದೇಶ, ಜಗತ್ತು ಅತ್ತ ಕಡೆ ನೋಡುವಂತೆ ಮಾಡಬಹುದಲ್ಲವೇ?

ನಮ್ಮ ಸರ್ಕಾರಗಳು ಬಂಡವಾಳಶಾಹಿ ಕಾರ್ಪರೇಟ್ ಸಂಸ್ಥೆಗಳಿಗೆ ನೂರಾರು ಎಕರೆ ಜಮೀನು ಕೊಡುತ್ತದೆ. ಅವರಿಗೆ ತೆರಿಗೆ ರಜೆಯಿಂದ ಹಿಡಿದು, ರಿಯಾಯಿತಿ ದರದಲ್ಲಿ ನೀರು, ವಿದ್ಯುತ್ ಇತ್ಯಾದಿ ಎಲ್ಲ ಸೌಲಭ್ಯಗಳನ್ನು ನೀಡುತ್ತದೆ. ಮಲ್ಟಿನ್ಯಾಷನಲ್ ಕಂಪೆನಿಗಳಿಗಾಗಿಯೇ ಸ್ಮಾರ್ಟ್ ಸಿಟಿಗಳನ್ನು, ಐಟಿ ಪಾರ್ಕ್‌ಗಳು, ಎಸ್‌ಇಜಡ್‌ಗಳನ್ನು ನಿರ್ಮಿಸಿಕೊಡುವ ಸರ್ಕಾರ ನಮ್ಮ ಸಂಸ್ಕೃತಿಯ ಪುನರುತ್ಥಾನಕ್ಕೆ ಇಂಥದ್ದೊಂದು ಕೇಂದ್ರವನ್ನು ಮಾಡಲು ಮುಂದಾಗಬೇಕು ಮತ್ತು ಅದಕ್ಕೆ ಎಲ್ಲ ರೀತಿಯ ಸಹಕಾರಗಳನ್ನು ನೀಡಬೇಕು.

ಜಗತ್ತು ಬದಲಾಗುತ್ತಲೇ ಇದೆ. ಪಶ್ಚಿಮದ ಜಗತ್ತನ್ನೇ ನಮ್ಮ ಆದರ್ಶವೆಂದು ಭ್ರಮಿಸಿ ನಾವು ಅದರ ಹಿಂದೆ ಹೋದೆವು. ಈಗ ನಮ್ಮ ಬೇರುಗಳಿಗೆ ಹಿಂದಿರುಗುವ ಸಮಯ. ರಾಜಸ್ಥಾನದ ರಾಜಕಾರಣಿಗಳು ಅರ್ಥ ಮಾಡಿಕೊಂಡಿರುವ ಸತ್ಯವನ್ನು ನಮ್ಮ ರಾಜಕಾರಣಿಗಳೂ ಅರ್ಥ ಮಾಡಿಕೊಳ್ಳಬೇಕಿದೆ. ನಮ್ಮ ಕಲೆ, ಸಂಸ್ಕೃತಿ, ಕರಕುಶಲತೆಯನ್ನು ನಾವು ಗೌರವಿಸದ ಹೊರತು, ನಾವು ಇವುಗಳನ್ನು ಮೌಲ್ಯವನ್ನು ತಂದುಕೊಡದ ಹೊರತು ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲಾಗುವುದಿಲ್ಲ. ನಮ್ಮ ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ಪರಿಚಯಿಸುತ್ತಲೇ ನಾವು ನಮ್ಮ ಬೇರುಗಳನ್ನು ಬಲಪಡಿಸಿಕೊಳ್ಳಬೇಕಿದೆ. ಆ ಕೆಲಸ ಆದ್ಯತೆ ಮೇರೆಗೆ ನಡೆಯಲಿ ಎಂಬುದು ನನ್ನ ಆಶಯ.

ಕಡೆಯದಾಗಿ ಇನ್ನೊಂದು ಮಾತು, ರಾಜಸ್ಥಾನ ಪ್ರವಾಸದ ಸಂದರ್ಭದಲ್ಲಿ ಜೋಧಪುರಕ್ಕೆ ಹೋಗಿದ್ದಾಗ ಅಲ್ಲಿನ ಹಾಡುಗಾರರ ತಂಡವೊಂದು ಪರಿಚಯವಾಯಿತು. ಅವರಿಗೆ ನಾವು ಕರ್ನಾಟಕದವರು ಎಂದು ಗೊತ್ತಾಗುತ್ತಿದ್ದಂತೆ ನಿಮ್ಮ ನಾಡಿನ ಸಂಸ್ಕೃತಿ ನಮಗಿಷ್ಟ ಎಂದು ಹೇಳುತ್ತ ‘ಚೆಲ್ಲಿದರು ಮಲ್ಲಿಗೆಯಾ’ ಎಂಬ ಜಾನಪದ ಹಾಡನ್ನು ಹಾಡಿದರು. ನಮಗೆ ನಿಜಕ್ಕೂ ರೋಮಾಂಚನವಾಯಿತು. ದೂರದ ಜೋಧಪುರದ ಹಾಡುಗಾರರಿಗೆ ನಮ್ಮ ನಾಡಿನ ಮಾಯ್ಕಾರ ಮಾದೇವನೂ ಗೊತ್ತು, ಮಂಟೇಸ್ವಾಮಿಯೂ ಗೊತ್ತು, ಆದರೆ ನಮ್ಮ ಬೃಹತ್ ನಗರಗಳಲ್ಲಿ ಯಾವುದೋ ವಿದೇಶಿ ಹಾಡುಗಳ ಮಾಯೆಯಲ್ಲಿ ಸಿಲುಕಿ ಮೈಮರೆತಿರುವ ಜನರಿಗೆ ಇವರನ್ನೆಲ್ಲ ಪರಿಚಯಿಸಬೇಕಲ್ಲವೇ?

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

No comments:

Post a Comment