Tuesday, 24 November 2015

ಕನ್ನಡ ಕ್ರೈಸ್ತರ ಕಣ್ಣೀರ ಕಥೆ ಕೇಳುತ್ತಿಲ್ಲವೇ ಮುಖ್ಯಮಂತ್ರಿಗಳೇ?

ಕಳೆದ ೨೦ ತಿಂಗಳಿಂದ ಆ ಮೂರು ಧರ್ಮಗುರುಗಳು ಜೈಲಿನಲ್ಲಿದ್ದಾರೆ. ಅವರ ನೋವಿನ ಧ್ವನಿ ಯಾರಿಗೂ ಕೇಳುತ್ತಿಲ್ಲ. ಕೇವಲ ಕನ್ನಡಕ್ಕಾಗಿ ಧ್ವನಿ ಎತ್ತಿದ್ದಕ್ಕಾಗಿ ಧರ್ಮಗುರುಗಳನ್ನು ಕೊಲೆ ಕೇಸಿನಲ್ಲಿ ಸಿಕ್ಕಿ ಹಾಕಿಸಲಾಗುತ್ತದೆ, ಅವರಿಗೆ ಯಾವ ಕಾರಣಕ್ಕೂ ಜಾಮೀನು ಸಿಗದಂತೆ ನೋಡಿಕೊಳ್ಳಲಾಗುತ್ತದೆ. ಒಂದು ಕೊಲೆ ಕೇಸಿನಲ್ಲಿ ತಮಗೆ ಯಾರು ವಿರೋಧಿಗಳೋ ಅವರನ್ನೆಲ್ಲ ಜೈಲಿಗೆ ಕಳುಹಿಸಿದರೆ ಅಲ್ಲಿಗೆ ಯುದ್ಧ ಗೆದ್ದಂತಲ್ಲವೇ? ಅದಕ್ಕೆ ಇದೇ ಕೊಲೆ ಕೇಸಿನ ಚಾರ್ಜ್‌ಶೀಟ್ ಸಲ್ಲಿಸುವಾಗ ತಮ್ಮ ವಿರುದ್ಧ ಪ್ರತಿಭಟಿಸಿದ ಮುಖ್ಯ ಧರ್ಮಾಧಿಕಾರಿಗಳು, ಚಳವಳಿ ಮುಖಂಡರನ್ನೆಲ್ಲ ಪ್ರಕರಣದಲ್ಲಿ ಸಿಲುಕಿಸಲಾಗುತ್ತದೆ. ಅಧಿಕಾರವೊಂದು ಕೈಯಲ್ಲಿದ್ದರೆ ಒಂದೇ ಏಟಿಗೆ ಎಷ್ಟೊಂದು ಹಕ್ಕಿ ಹೊಡೆದು ಎಸೆಯಬಹುದಲ್ಲವೇ? ಇದೆಂಥ ನೀಚ ಕುತಂತ್ರ?

ಮಾರ್ಚ್ ೩೧, ೨೦೧೩. ಅದು ಈಸ್ಟರ್ ಹಬ್ಬದ ದಿನ. ಯಶವಂತಪುರದ ಮೈಸೂರು ಲ್ಯಾಂಪ್ಸ್ ಬಳಿ ಇರುವ ಸೆಮಿನರಿಯ ರೆಕ್ಟರ್ ಕೆ.ಜೆ.ಥಾಮಸ್ ಅವರ ಕೊಲೆ ನಡೆಯುತ್ತದೆ. ರೆ. ಕೆ.ಜೆ.ಥಾಮಸ್ ಮೂಲತಃ ಮಲೆಯಾಳಿ. ಆದರೂ ಕನ್ನಡ ದ್ವೇಷಿಯೇನಲ್ಲ. ಸೆಮಿನರಿಯಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಅವಕಾಶ ನೀಡಿದವರು. ಕನ್ನಡ ಕ್ರೈಸ್ತರಿಗೂ ಅವರಿಗೂ ಯಾವುದೇ ಜಗಳವಿರಲಿಲ್ಲ, ಮನಸ್ತಾಪವಿರಲಿಲ್ಲ. ಪೊಲೀಸರು ಈ ಕೊಲೆ ಕೇಸಿನ ತನಿಖೆ ಆರಂಭಿಸಿದರು. ಹನ್ನೊಂದು ತಿಂಗಳಾಗುತ್ತ ಬಂದರೂ ಆರೋಪಿಗಳ ಬಂಧನವಾಗಿರಲಿಲ್ಲ. ಆದರೆ ಪೊಲೀಸರು ತನಿಖೆಯ ಜಾಡನ್ನು ಸರಿಯಾಗಿ ಗ್ರಹಿಸಿದ್ದರು ಮತ್ತು ಇನ್ನೇನು ಅದನ್ನು ಬಗೆಹರಿಸುವ ಹಂತದಲ್ಲಿದ್ದರು.

ಆಗ ಕೊಂಕಣಿ ಕ್ರೈಸ್ತರ ಸಮಾವೇಶವೊಂದು ಬೆಂಗಳೂರಿನಲ್ಲಿ ನಡೆಯಿತು. ಮುಖ್ಯಮಂತ್ರಿಗಳು ಭಾಗವಹಿಸಿದ್ದ ಸಮಾವೇಶವದು. ಬಿಷಪ್ ಬರ್ನಾಡ್ ಮೊರಾಸ್ ಈ ಕೊಲೆ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದರು. ಹನ್ನೊಂದು ತಿಂಗಳಾದರೂ ಕೊಲೆ ಆರೋಪಿಗಳನ್ನು ಬಂಧಿಸಲಾಗಿಲ್ಲ, ಇನ್ನು ಎರಡು ತಿಂಗಳೊಳಗೆ ಆರೋಪಿಗಳನ್ನು ಬಂಧಿಸಬೇಕು ಎಂದು ಎಚ್ಚರಿಕೆ ನೀಡಿದರು.

ಅದಾದ ನಂತರ ನಾಟಕೀಯವಾದ ವಿದ್ಯಮಾನಗಳು ನಡೆಯುತ್ತವೆ. ಕೊಂಕಣಿ ಕ್ರಿಶ್ಚಿಯನ್ ಆಗಿರುವ ನಿವೃತ್ತ ಡಿಸಿಪಿ ವಿಕ್ಟರ್ ಡಿಸೋಜ ಅವರನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಿಸಿ ಕೊಲೆ ಪ್ರಕರಣದ ತನಿಖೆಯನ್ನು ಅವರಿಗೆ ವಹಿಸಲಾಗುತ್ತದೆ. ಡಿಸೋಜಾ ಅಧಿಕಾರ ಸ್ವೀಕಾರ ಮಾಡಿದ ಕೂಡಲೇ ಕನ್ನಡ ಕ್ರೈಸ್ತರ ಪರವಾಗಿ ಹೋರಾಟದಲ್ಲಿ ನಿರತರಾಗಿದ್ದ ಫಾ. ಪ್ಯಾಟ್ರಿಕ್, ಫಾ. ಪೀಟರ್ ಮತ್ತು ಫಾ. ಇಲಿಯಾಜ್ ಅವರುಗಳನ್ನು ಬಂಧಿಸಿ ಜೈಲಿಗೆ ತಳ್ಳುತ್ತಾರೆ.

ಮೂವರು ಧರ್ಮಗುರುಗಳು ಈಗ ಜೈಲಿನಲ್ಲಿದ್ದಾರೆ. ಕಳೆದ ಇಪ್ಪತ್ತು ತಿಂಗಳಿನಿಂದ ಅವರಿಗೆ ಜಾಮೀನು ಸಹ ಸಿಕ್ಕಿಲ್ಲ, ಅವರ ಜತೆಗೆ ಇನ್ನೂ ನಾಲ್ಕು ಮಂದಿಯನ್ನು ಇದೇ ಕೇಸಿನಲ್ಲಿ ಹೆಸರಿಸಲಾಗಿದೆ. ಫಾ. ಅಯ್ಯಂತಪ್ಪ, ಫಾ.ಥಾಮಸ್, ಫಾ. ಚೆಸರಾ, ಫಾ.ಅಂತೋಣಿ ಹಾಗು ಕನ್ನಡ ಕ್ರೈಸ್ತರ ಹೋರಾಟದ ದೊಡ್ಡ ಶಕ್ತಿಯಾಗಿರುವ ರಫಾಯಿಲ್ ರಾಜ್ ಅವರುಗಳನ್ನು ಜೈಲಿಗೆ ತಳ್ಳಲು ಇಡೀ ವ್ಯವಸ್ಥೆ ತುದಿಗಾಲಲ್ಲಿ ನಿಂತಿದೆ.

ರೆ. ಕೆ.ಜೆ.ಥಾಮಸ್ ಯಾಕೆ ಕೊಲೆಯಾದರು? ಈ ಕೊಲೆ ಯಾರಿಗೆ ಹೇಗೆಲ್ಲ ಬಳಕೆಯಾಯಿತು? ಪೊಲೀಸರು ಯಾಕೆ ಕನ್ನಡ ಕ್ರೈಸ್ತರ ಪರವಾದ ಹೋರಾಟದಲ್ಲಿ ಇರುವವರನ್ನೆಲ್ಲ ಜೈಲಿಗೆ ತಳ್ಳುತ್ತಿದ್ದಾರೆ? ವಿಕ್ಟರ್ ಡಿಸೋಜಾ ಎಂಬ ತನಿಖಾಧಿಕಾರಿಗಳೂ ಆರ್ಚ್ ಬಿಷಪ್ ಬರ್ನಾಡ್ ಮೊರಾಸ್ ಅವರಿಗೂ ಏನು ಸಂಬಂಧ?

ಇದೆಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಕನ್ನಡ ಕ್ರೈಸ್ತರ ನಲವತ್ತು ವರ್ಷಗಳ ಹೋರಾಟವನ್ನು ಒಮ್ಮೆ ಅವಲೋಕಿಸಬೇಕು. ವೈದಿಕ ಧರ್ಮದಲ್ಲಿ ಸಂಸ್ಕೃತ ಹೇಗೆ ಆರಾಧನೆಯ ಭಾಷೆಯಾಗಿದೆಯೋ ಹಾಗೆ ಕ್ರೈಸ್ತರಿಗೆ ಪೂಜಾವಿಧಿವಿಧಾನಗಳನ್ನು ನಡೆಸಲು ಬಳಸುವ ಭಾಷೆಯಾಗಿದ್ದು ಲ್ಯಾಟಿನ್. ಸಂಸ್ಕೃತ ಹೇಗೆ ಬಹುತೇಕ ಹಿಂದೂಗಳಿಗೆ ಅರ್ಥವಾಗುವುದಿಲ್ಲವೋ ಹಾಗೆ ಲ್ಯಾಟಿನ್ ಸಹ ಇಟಲಿ, ಅಮೆರಿಕ ದೇಶಗಳನ್ನು ಹೊರತುಪಡಿಸಿ ಜಗತ್ತಿನ ಇನ್ಯಾವ ಭಾಗದ ಕ್ರಿಶ್ಚಿಯನ್ನರಿಗೂ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ೧೯೬೨ರಲ್ಲಿ ರೋಮ್‌ನಲ್ಲಿ ಪೋಪ್ ಅವರ ನೇತೃತ್ವದಲ್ಲಿ ಸಭೆ ಸೇರಿದ ಸುಮಾರು ೨೦೦೦ ಧರ್ಮಾಧ್ಯಕ್ಷರು ಇನ್ನುಮುಂದೆ ಆಯಾ ಭಾಗದ ಸ್ಥಳೀಯ ಭಾಷೆಗಳಲ್ಲೇ ಪ್ರಾರ್ಥನೆ, ಪೂಜಾವಿಧಿವಿಧಾನ ಮತ್ತು ಚರ್ಚುಗಳ ಆಡಳಿತ ನಡೆಯತಕ್ಕದ್ದು ಎಂಬ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ.

ಇದಾದ ನಂತರ ನ್ಯಾಯಯುತವಾಗಿ ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರಿನ ಚರ್ಚುಗಳಲ್ಲಿ ಕನ್ನಡವೇ ಪೂಜೆಯ ಭಾಷೆಯಾಗಬೇಕಿತ್ತು. ಆದರೆ ಆಗ ಇಲ್ಲಿದ್ದ ಬಿಷಪ್ ರೋಮ್‌ಗೆ ಒಂದು ಪತ್ರ ಬರೆದು, ಬೆಂಗಳೂರು ತಮಿಳುನಾಡಿನ ಭಾಗವಾಗಿರುವುದರಿಂದ ಇಲ್ಲಿ ತಮಿಳು ಭಾಷೆಯಲ್ಲೇ ಪ್ರಾರ್ಥನೆ, ಆಡಳಿತ ನಡೆಯುತ್ತದೆ ಎಂದು ತಿಳಿಸಿದರು. ಇದು ಗೊತ್ತಾಗುತ್ತಿದ್ದಂತೆ ಕನ್ನಡ ಕ್ರೈಸ್ತ ಧರ್ಮಗುರುಗಳು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು. ರೋಮ್‌ಗೆ ತಾವೂ ಸಹ ಪತ್ರಗಳನ್ನು ಬರೆದು ಬಿಷಪ್ ಅವರು ಸುಳ್ಳು ಮಾಹಿತಿ ನೀಡುತ್ತಿದ್ದಾರೆ, ಬೆಂಗಳೂರು ಕರ್ನಾಟಕದ ರಾಜಧಾನಿ. ಇಲ್ಲಿ ಕನ್ನಡವೇ ಆಡಳಿತ ಭಾಷೆ, ಜನಭಾಷೆ. ಬೆಂಗಳೂರು ತಮಿಳುನಾಡಿನ ಭಾಗವಲ್ಲ. ಇಲ್ಲಿನ ಬಿಷಪ್ ಅವರಿಗೆ ಕನ್ನಡದಲೇ ಆಡಳಿತ ಮತ್ತು ಪೂಜಾವಿಧಿವಿಧಾನ ನಡೆಸಲು ಆದೇಶ ನೀಡಬೇಕು ಎಂದು ಕನ್ನಡ ಕ್ರೈಸ್ತ ಧರ್ಮಗುರುಗಳು ಮನವಿ ಮಾಡುತ್ತಾರೆ.
ಆದರೆ ತಮಿಳುನಾಡು, ಕೇರಳ, ಪಾಂಡಿಚೇರಿ ಮೂಲದ ಧರ್ಮಾಧಿಕಾರಿಗಳು ಕನ್ನಡವನ್ನು ಬಳಸುವುದಕ್ಕೆ ಅವಕಾಶ ನೀಡುವುದಿಲ್ಲ. ಈ ಸಂಬಂಧ ರೋಮ್‌ನಿಂದಲೇ ನೇಮಿಸಲ್ಪಟ್ಟ ಬಿಷಪ್‌ಗಳ ಒಂದು ಸಮಿತಿ ಬೆಂಗಳೂರಿಗೆ ಭೇಟಿ ನೀಡಿ, ಅಧ್ಯಯನ ನಡೆಸಿ ಬೆಂಗಳೂರಿನಲ್ಲಿ ಕನ್ನಡವನ್ನೇ ಬಳಸಬೇಕು ಎಂದು ವರದಿ ನೀಡುತ್ತದೆ. ಆದರೆ ಒಬ್ಬರಾದ ಮೇಲೆ ಒಬ್ಬರಂತೆ ಬಂದ ಐದು ಮಂದಿ ಬಿಷಪ್‌ಗಳೂ ಕನ್ನಡದ ಆಡಳಿತವನ್ನು ತರಲು ನಿರಾಕರಿಸಿ, ತಮ್ಮ ಅಧಿಕಾರವನ್ನು ತ್ಯಜಿಸಿ ಹೊರಡುತ್ತಾರೆ.

೧೯೭೭ರಲ್ಲಿ ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತ ಸಂಘ ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡುತ್ತದೆ. ಕನ್ನಡ ಕ್ರೈಸ್ತರೆಲ್ಲರೂ ಒಂದಾಗಿ ಹೋರಾಟ ಆರಂಭಿಸುತ್ತಾರೆ. ೧೯೯೫ರಲ್ಲಿ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಕನ್ನಡ ಕ್ರೈಸ್ತರು ಬೆಂಗಳೂರಿನಲ್ಲಿ ಬೃಹತ್ ರ್‍ಯಾಲಿ ನಡೆಸಿ ಕನ್ನಡದಲ್ಲಿ ಪ್ರಾರ್ಥನೆಗಾಗಿ ತಮ್ಮ ಹಕ್ಕೊತ್ತಾಯವನ್ನು ಮಂಡಿಸುತ್ತಾರೆ.  ಗೋಕಾಕ್ ಚಳವಳಿ ಸಂದರ್ಭದಲ್ಲಿ ನಡೆದ ಈ ಚಳವಳಿ ಒಂದು ರೀತಿಯಲ್ಲಿ ಗೋಕಾಕ್ ಚಳವಳಿಗೂ ದೊಡ್ಡ ಸ್ಫೂರ್ತಿಯನ್ನು ನೀಡಿತ್ತು.

ಇತ್ತೀಚಿಗೆ ಬಂದ ಬಿಷಪ್ ಬರ್ನಾಡ್ ಮೊರಾಸ್ ಕನ್ನಡ ಕ್ರೈಸ್ತರ ಅಹವಾಲುಗಳನ್ನು ಕೇಳಿ, ತಮ್ಮ ಅಧಿಕಾರವಾಧಿಯಲ್ಲಿ ಕನ್ನಡವನ್ನೇ ಬಳಸಲು ತೀರ್ಮಾನಿಸುವುದಾಗಿ ಹೇಳಿದ್ದಲ್ಲದೆ, ಕನ್ನಡ ಕ್ರೈಸ್ತರ ಸಹಕಾರವನ್ನೂ ಕೋರಿದ್ದರು. ಕನ್ನಡ ಕ್ರೈಸ್ತರು ಅದನ್ನು ನಂಬಿಕೊಂಡು ಬರ್ನಾಡ್ ಮೊರಾಸ್ ಅವರಿಗೆ ಬೆಂಬಲ ನೀಡುತ್ತಿದ್ದರು.

ಇನ್ನೇನು ಕನ್ನಡ ಕ್ರೈಸ್ತರ ಎಲ್ಲ ಬೇಡಿಕೆಗಳೂ ಈಡೇರುತ್ತವೆ, ಬೆಂಗಳೂರಿನ ಎಲ್ಲ ಚರ್ಚುಗಳಲ್ಲಿ ಇನ್ನು ಕನ್ನಡವೇ ಮೊಳಗುತ್ತದೆ ಎಂದು ಕನ್ನಡ ಕ್ರೈಸ್ತರು ಕನಸು ಕಟ್ಟುತ್ತಿದ್ದರು. ಅಷ್ಟರಲ್ಲಿ ರೆ. ಕೆ.ಜೆ.ಥಾಮಸ್ ಕೊಲೆಯಾಗಿ ಹೋಗುತ್ತಾರೆ. ಆ ಕೊಲೆ ಕೇಸಿನಲ್ಲಿ ಹುಡುಹುಡುಕಿ ಕನ್ನಡ ಕ್ರೈಸ್ತರ ಪರವಾದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಧರ್ಮಾಧಿಕಾರಿಗಳನ್ನೆಲ್ಲ ಫಿಕ್ಸ್ ಮಾಡಲಾಗುತ್ತದೆ. ಕನ್ನಡಕ್ಕಾಗಿ ಹೋರಾಡುತ್ತಿದ್ದ ಕನ್ನಡ ಕ್ರೈಸ್ತರು ಈಗ ನಮ್ಮ ನಿರಪರಾಧಿ ಧರ್ಮಗುರುಗಳನ್ನು ಬಿಡುಗಡೆ ಮಾಡಿ ಎಂದು ಕಣ್ಣೀರಿಡುತ್ತಿದ್ದಾರೆ. ಆದರೆ ಅವರ ಗೋಳು ಯಾರಿಗೂ ಕೇಳುತ್ತಿಲ್ಲ.

ಕಳೆದ ಹದಿನೆಂಟು ವರ್ಷಗಳಿಂದ ನಾನು ಈ ಕನ್ನಡ ಕ್ರೈಸ್ತರ ಹೋರಾಟದಲ್ಲಿ ಪಾಲ್ಗೊಂಡಿದ್ದೇವೆ. ಅವರ ದುಃಖ ದುಮ್ಮಾನಗಳು ನನಗೆ ಚೆನ್ನಾಗಿ ಗೊತ್ತು. ಅವರದು ಸಾತ್ವಿಕ ಮಾರ್ಗದ ಹೋರಾಟ. ಅವರು ಕೊಲೆಗಡುಕರಾಗಲು ಸಾಧ್ಯವೇ ಇಲ್ಲ. ಸಾವಿರಾರು ಕನ್ನಡ ಕ್ರೈಸ್ತರು ಇಂದು ದಿನನಿತ್ಯ ಕಣ್ಣೀರು ಹಾಕುವ ಘೋರ ದುರಂತವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಆದರೆ ‘ಒಲೆ ಹತ್ತಿ ಉರಿದರೆ ನಿಲಬಹುದು, ಧರೆ ಹತ್ತಿ ಉರಿದರೆ ನಿಲಬಹುದೆ?’ ಎಂಬ ಶರಣರ ಮಾತಿನಂತೆ ಕನ್ನಡ ಕ್ರೈಸ್ತರು ನಿಂತ ನೆಲವೇ ಕುಸಿದುಹೋಗುತ್ತಿದೆ.

ಇದೇ ಕನ್ನಡ ಕ್ರೈಸ್ತರ ಪರವಾಗಿ ನಿಂತ ಕಾರಣಕ್ಕೆ ಆರ್‌ಟಿಐ ಕಾರ್ಯಕರ್ತನೆಂದು ಹೇಳಿಕೊಳ್ಳುವ ಬ್ಲಾಕ್ ಮೇಲರ್ ಒಬ್ಬಾತನನ್ನು ನನ್ನ ಮೇಲೆ ಛೂ ಬಿಟ್ಟು ಮಾಧ್ಯಮಗಳಲ್ಲಿ ಹೇಳಿಕೆ ಕೊಡಿಸಲಾಯಿತು. ನನ್ನನ್ನು ಮಾತ್ರವಲ್ಲ ಕನ್ನಡ ಚಳವಳಿಗಾರರನ್ನೆಲ್ಲ ಗುರಿಯಾಗಿರಿಸಿಕೊಂಡು ಅವರ ತೇಜೋವಧೆ ಮಾಡುವ ಪ್ರಯತ್ನಗಳು ನಡೆದವು.
ಹಿಂದೆ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಮತ್ತು ಬಿಷಪ್ ಬರ್ನಾಡ್ ಮೊರಾಸ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲೂ ನಾನು ಕನ್ನಡ ಕ್ರೈಸ್ತರ ಮೇಲೆ ಆಗುತ್ತಿರುವ ಶೋಷಣೆ, ದಬ್ಬಾಳಿಕೆ ನಿಲ್ಲಬೇಕು ಎಂದು ಒತ್ತಾಯಿಸಿದ್ದೆ. ಈಗಿನ ಗೃಹ ಸಚಿವರಾದ ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಕನ್ನಡ ಕ್ರೈಸ್ತರಿಗೆ ನ್ಯಾಯ ಒದಗಿಸಲು ಮನವಿ ಮಾಡಿದ್ದೆ. ಆದರೆ ಇದು ಬೇಲಿಯೇ ಎದ್ದು ಹೊಲ ಮೇಯುವ ಕಾಲ. ನ್ಯಾಯ ಎಲ್ಲಿ ಸಿಕ್ಕೀತು?

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಶೋಷಿತ ವರ್ಗಗಳ ಕುರಿತು ಕಾಳಜಿಯುಳ್ಳವರು. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವವರು. ಅವರಿಗಾದರೂ ಕನ್ನಡ ಕ್ರೈಸ್ತರ ಗೋಳಿನ ಕಥೆ ಮನ ಕಲಕುವುದಿಲ್ಲವೇ? ಹಣಬಲ, ತೋಳ್ಬಲ, ಅಧಿಕಾರ ಬಲವಿದ್ದರೆ ಯಾರನ್ನು ಬೇಕಾದರೂ ತುಳಿದುಹಾಕಬಹುದು ಎಂದರೆ ಇದನ್ನು ನಾಗರಿಕ ಸಮಾಜ ಎಂದು ನಾವು ಯಾಕೆ ಕರೆಯಬೇಕು?

ರೆ. ಕೆ.ಜೆ.ಥಾಮಸ್ ಕೊಲೆ ಕೇಸನ್ನು ಸಿಬಿಐಗೆ ವಹಿಸಿ, ನ್ಯಾಯಯುತವಾದ ತನಿಖೆ ನಡೆಯಲಿ ಎಂದು ಕನ್ನಡ ಕ್ರೈಸ್ತರೇ ಕಳೆದ ಇಪ್ಪತ್ತು ತಿಂಗಳಿನಿಂದ ಆಗ್ರಹಿಸುತ್ತ ಬಂದಿದ್ದಾರೆ. ಆದರೆ ಓರ್ವ ಧರ್ಮಾಧಿಕಾರಿಯ ನೆಂಟನಾಗಿರುವ ನಿವೃತ್ತ ಅಧಿಕಾರಿ ಕೊಂಕಣಿ ಭಾಷಿಕ ವಿಕ್ಟರ್ ಡಿಸೋಜಾ ಅವರನ್ನೇ ತನಿಖಾಧಿಕಾರಿನ್ನಾಗಿ ನೇಮಿಸಿದ್ದು ಯಾಕೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಹನ್ನೊಂದು ತಿಂಗಳಲ್ಲಿ ಬಗೆಹರಿಯದ ಕೊಲೆ ಪ್ರಕರಣವನ್ನು ಅಧಿಕಾರ ವಹಿಸಿಕೊಂಡ ತಕ್ಷಣ ವಿಕ್ಟರ್ ಡಿಸೋಜಾ ಹೇಗೆ ಬಗೆಹರಿಸಿದರು? ಈ ಕೇಸಿನಲ್ಲಿ ಕನ್ನಡ ಕ್ರೈಸ್ತರ ಪರವಾಗಿ ಹೋರಾಡುತ್ತಿದ್ದವರನ್ನೆಲ್ಲ ಫಿಕ್ಸ್ ಮಾಡಲು ಏನು ಕಾರಣ? ಇದರಲ್ಲಿ ಯಾರ ಕೈವಾಡವಿದೆ?

ಪ್ರಶ್ನೆಗಳು ನೂರಾರು ಇವೆ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಒಂದನ್ನು ನೆನಪಿಟ್ಟುಕೊಳ್ಳಬೇಕು. ಯಾರು ಎಷ್ಟೇ ಪ್ರಭಾವಿಗಳಾಗಿರಲಿ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಕೂಡದು. ನೀವು ಯಾರ ಕೈಗೊಂಬೆಯೂ ಆಗಬಾರದು. ನೀವು ಇಡೀ ಕರ್ನಾಟಕದ ಪ್ರತಿಯೊಬ್ಬ ಪ್ರಜೆ ಮುಖ್ಯಮಂತ್ರಿ ಎಂಬುದನ್ನು ಮರೆಯಬೇಡಿ. ಈಗಲಾದರೂ ನಿಮ್ಮ ಆತ್ಮಸಾಕ್ಷಿ ಜಾಗೃತಿಗೊಳ್ಳಲಿ. ಲಕ್ಷಾಂತರ ಕನ್ನಡ ಕ್ರೈಸ್ತರು ದಿನವೂ ಕಣ್ಣೀರಿಡುತ್ತಿದ್ದಾರೆ. ಅವರ ಕಣ್ಣೀರು ನಿಮ್ಮ ಸರ್ಕಾರಕ್ಕೆ ಎಂದಿಗೂ ಶೋಭೆ ತರದು. ಈಗಲಾದರೂ ಎಚ್ಚರಗೊಳ್ಳಿರಿ.

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ.

ಕಾರ್ನಾಡರ ಅವಿವೇಕ ಮತ್ತು ನಮ್ಮ ಸಂಕಟಗಳು...


ಗಿರೀಶ್ ರಘುನಾಥ್ ಕಾರ್ನಾಡ್ ಮತ್ತೊಮ್ಮೆ ವಿವಾದದ ಕಿಡಿ ಹೊತ್ತಿಸಿದ್ದಾರೆ. ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನರ ಹೆಸರಿಡಬೇಕಿತ್ತು ಎಂದು ರಾಜ್ಯ ಸರ್ಕಾರ ಆಯೋಜಿಸಿದ್ದ ಟಿಪ್ಪು ಜಯಂತಿ ಆಚರಣೆಯಲ್ಲಿ ಹೇಳುವ ಮೂಲಕ ಅನಗತ್ಯವಾಗಿ ರಾಜ್ಯದಲ್ಲಿ ಕಲಹದ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ. ತನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಕಾರ್ನಾಡ್ ಹೇಳಿಕೆ ನೀಡಿದ್ದಾರೆ. ಆದರೆ ಪ್ರಾಜ್ಞರೆನಿಸಿಕೊಂಡವರು ಇಂಥ ಹೇಳಿಕೆಗಳನ್ನು ನೀಡುವ ಮುನ್ನ ಹತ್ತು ಬಾರಿ ಯೋಚಿಸಬೇಕಲ್ಲವೇ?

ಕಾರ್ನಾಡರು ಮಾತನಾಡಿದ್ದನ್ನು ನಾನು ಟಿವಿಯಲ್ಲಿ ನೋಡಿದೆ. ನಾಡಪ್ರಭು ಕೆಂಪೇಗೌಡರ ಕುರಿತು ಅವರಿಗೆ ಅದೇನೋ ಒಂದು ಬಗೆಯ ಅಸಹನೆ ಇದ್ದಂತೆ ಅನಿಸಿತು. ಕೆಂಪೇಗೌಡರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿಲ್ಲ. ಹೀಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಟಿಪ್ಪು ಸುಲ್ತಾನರ ಹೆಸರೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡಬೇಕಿತ್ತು ಎಂದರು ಅವರು. ಕಾರ್ನಾಡ್ ಬಹುಭಾಷಾ ಪಂಡಿತರು. ಹಲವಾರು ದೇಶಗಳನ್ನು ಸುತ್ತಿ ಬಂದವರು. ದೇಶದಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರುಗಳಲ್ಲೂ ವಿಮಾನ ನಿಲ್ದಾಣಗಳಿವೆ. ಅವರು ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಯಾವುದೇ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರರ ಹೆಸರೇ ಇಡಬೇಕು ಎಂಬ ಕಾನೂನೇನಾದರೂ ಇದೆಯೇ?

ಸಣ್ಣ ಮಕ್ಕಳಿಗೂ ಅರ್ಥವಾಗದ ವಿಷಯ ಕಾರ್ನಾಡರಿಗೇಕೆ ಅರ್ಥವಾಗಲಿಲ್ಲ. ಕೆಂಪೇಗೌಡರು ಬದುಕಿದ್ದ ಕಾಲಘಟ್ಟವಾದರೂ ಯಾವುದು? ೧೫೧೦ರಿಂದ ೧೫೬೯. ಈ ಸಮಯದಲ್ಲಿ ಯಾವ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿತ್ತು? ಇಷ್ಟು ಸಣ್ಣ ಸಾಮಾನ್ಯ ಜ್ಞಾನವೂ ಕಾರ್ನಾಡರಿಗೆ ಇಲ್ಲವಾಗಿ ಹೋಯಿತೆ? ಟಿಪ್ಪು ಸುಲ್ತಾನರು ಬದುಕಿದ್ದು ೧೭೫೦ರಿಂದ ೧೭೯೯ರವರೆಗೆ. ಇಬ್ಬರ ಕಾಲಘಟ್ಟವೂ ಬೇರೆ ಬೇರೆ. ಹೀಗಿರುವಾಗ ಇಬ್ಬರನ್ನೂ ಹೋಲಿಸಿ ಮಾತನಾಡುವ ಅಗತ್ಯವಾದರೂ ಏನಿತ್ತು?
ಅದರಲ್ಲೂ ಈ ವಿಷಯವನ್ನು ಗಿರೀಶ್ ಕಾರ್ನಾಡರು ಪ್ರಸ್ತಾಪಿಸಿದ ಸಮಯವಾದರೂ ಯಾವುದು? ಟಿಪ್ಪು ಸುಲ್ತಾನರ ಜಯಂತಿ ಆಚರಣೆ ವಿಷಯದಲ್ಲಿ ದೊಡ್ಡ ವಿವಾದವೇ ಎದ್ದು ಎಲ್ಲೆಡೆ ದ್ವೇಷದ ವಾತಾವರಣವೇ ಕಂಡು ಬಂದಿತ್ತು. ಟಿಪ್ಪು ಜಯಂತಿ ಸಂದರ್ಭದಲ್ಲೇ ಕೆಲ ಸಂಘಟನೆಗಳು ಬಂದ್, ಪ್ರತಿಭಟನೆ ಇತ್ಯಾದಿಗಳನ್ನು ಹಮ್ಮಿಕೊಂಡಿದ್ದರಿಂದ ಎಲ್ಲಿ ಯಾವ ಅನಾಹುತವಾಗುವುದೋ ಎಂಬ ಆತಂಕದ ಸನ್ನಿವೇಶ ನಿರ್ಮಾಣವಾಗಿತ್ತು. ಇದು ಕಾರ್ನಾಡ್ ಅಂತ ಹಿರಿಯರಿಗೆ ಗೊತ್ತಿರದ ವಿಷಯವೇನೂ ಅಲ್ಲ. ಇಷ್ಟೆಲ್ಲ ಗೊತ್ತಿದ್ದರೂ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಬೇಕಿತ್ತು ಎಂದು ಹೇಳುವ ಹುನ್ನಾರವಾದರೂ ಏನು? ಇದು ಎರಡು ಸಮುದಾಯಗಳನ್ನು ಪರಸ್ಪರ ಎತ್ತಿಕಟ್ಟುವ ಉದ್ದೇಶವೆಂದೇ ಭಾವಿಸಬೇಕಾಗುತ್ತದೆಯಲ್ಲವೇ?

ಇವತ್ತು ಇಡೀ ದೇಶದಲ್ಲಿ ಎಲ್ಲ ಮಹಾಪುರುಷರಿಗೂ ಜಾತಿಯ ಲೇಪನವನ್ನು ಅಂಟಿಸಲಾಗಿದೆ. ಒಂದೊಂದು ಸಮುದಾಯ ಒಬ್ಬೊಬ್ಬ ಮಹಾತ್ಮರನ್ನು ಗುತ್ತಿಗೆ ಹಿಡಿದುಕೊಂಡಿದೆ. ದಲಿತರಿಗೆ ಅಂಬೇಡ್ಕರ್, ಲಿಂಗಾಯಿತರಿಗೆ ಬಸವಣ್ಣ, ಒಕ್ಕಲಿಗರಿಗೆ ಕೆಂಪೇಗೌಡ, ಬ್ರಾಹ್ಮಣರಿಗೆ ಶಂಕರಾಚಾರ್ಯ, ಕುರುಬರಿಗೆ ಕನಕದಾಸ, ಬೇಡರಿಗೆ ವಾಲ್ಮೀಕಿ.. ಹೀಗೆ ಎಲ್ಲ ಮಹಾತ್ಮರನ್ನೂ ನಾವು ಜಾತಿಯಿಂದ ಕಟ್ಟಿಹಾಕಿದ್ದೇವೆ. ಇಂಥ ವಿಷಮ ಸನ್ನಿವೇಶದಲ್ಲಿ ಬದುಕುತ್ತಿರುವ ಸಂದರ್ಭದಲ್ಲಿ ಕಾರ್ನಾಡರಿಗೆ ತಮ್ಮ ಹೇಳಿಕೆ ಯಾವ ಸ್ವರೂಪ ಪಡೆಯುತ್ತದೆ ಎಂಬ ಅರಿವಿರಬೇಕಿತ್ತು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ಇಡಬೇಕು ಎಂಬ ಹೋರಾಟದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯೇ ಮುಂಚೂಣಿಯಲ್ಲಿ ಗುರುತಿಸಿಕೊಂಡಿತ್ತು. ಈ ಚಳವಳಿಯನ್ನು ಗುರಿ ತಲುಪುವವರೆಗೆ ಮುಂದುವರೆಸಿಕೊಂಡು ಹೋದ ಹೆಮ್ಮೆ ನಮ್ಮದು. ಇದೇ ರೀತಿ ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣಗಳಿಗೆ ಇತಿಹಾಸ ಪ್ರಸಿದ್ಧ ಕನ್ನಡದ ಹೆಮ್ಮೆಯ ದಿಗ್ಗಜರ ಹೆಸರಿಡಬೇಕು ಎಂಬ ಬೇಡಿಕೆಯನ್ನೂ ಕರ್ನಾಟಕ ರಕ್ಷಣಾ ವೇದಿಕೆ ಇಡುತ್ತಲೇ ಬಂದಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಸರಿಡುವ ವಿಷಯ ಬಂದಾಗ ಹಲವಾರು ಸಂಘಟನೆಗಳು ಹಲವಾರು ಹೆಸರುಗಳನ್ನು ಸೂಚಿಸಿದ್ದವು. ಡಾ. ಬಿ.ಆರ್. ಅಂಬೇಡ್ಕರ್, ಬಸವೇಶ್ವರ, ಸರ್.ಎಂ.ವಿಶ್ವೇಶ್ವರಯ್ಯ ಮತ್ತು ಟಿಪ್ಪು ಸುಲ್ತಾನರ ಹೆಸರುಗಳೂ ಕೇಳಿಬಂದಿದ್ದವು. ಈ ಕಾರಣಕ್ಕೆ ಬಸವಣ್ಣನವರನ್ನೂ ಅಂಬೇಡ್ಕರ್ ರವರನ್ನೂ ಕಾರ್ನಾಡರು ಹೋಲಿಸಿ ಮಾತನಾಡಲು ಸಾಧ್ಯವೇ? ಇಬ್ಬರಲ್ಲಿ ಯಾರು ಸೂಕ್ತ ಎಂದು ಅವರು ಸಾರ್ವಜನಿಕವಾಗಿ ಹೇಳಬಲ್ಲರೇ? ಹೇಳುವುದು ತರವೇ? ಒಬ್ಬೊಬ್ಬರು ಒಂದು ಕಾಲಘಟ್ಟದಲ್ಲಿ ಬದುಕಿರುತ್ತಾರೆ. ಒಂದೊಂದು ಬಗೆಯಲ್ಲಿ ಈ ಸಮಾಜವನ್ನು ಪೊರೆದಿರುತ್ತಾರೆ. ಒಮ್ಮೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ಇಟ್ಟ ನಂತರ ಆ ವಿಷಯದಲ್ಲಿ ಮಾತನಾಡಲು ಇನ್ನೇನಿದೆ? ಯಾಕಾಗಿ ಕಾರ್ನಾಡರು ತಮ್ಮ ಹಳಹಳಿಕೆಯನ್ನು ಪ್ರದರ್ಶಿಸಿದರು. ಟಿಪ್ಪು ಅಭಿಮಾನಿಗಳನೇಕರು ಚಪ್ಪಾಳೆ ಹೊಡೆಯುತ್ತಾರೆ ಎಂದೇ? ಹಾಗಿದ್ದರೆ ಕೆಂಪೇಗೌಡರ ಅಭಿಮಾನಿಗಳೇನು ಮಾಡಬೇಕು?

ನಾವು ಯಾರೂ ಟಿಪ್ಪು ಸುಲ್ತಾನರ ವಿರೋಧಿಗಳೇನಲ್ಲ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ಇಡಬೇಕು ಎಂದು ನಾವು ಚಳವಳಿ ನಡೆಸಿದ್ದಕ್ಕೆ ಒಂದು ಸ್ಪಷ್ಟ ಉದ್ದೇಶವಿತ್ತು. ಕೆಂಪೇಗೌಡರ ಇತಿಹಾಸ ಅರ್ಥ ಮಾಡಿಕೊಂಡವರಿಗೆ ನಮ್ಮ ಹೋರಾಟದ ಉದ್ದೇಶವೂ ಅರ್ಥವಾಗುತ್ತದೆ. ಈ ಹೋರಾಟದಲ್ಲಿ ಹಲವಾರು ಸಂಘಟನೆಗಳು ನಮ್ಮೊಂದಿಗೆ ಕೈ ಜೋಡಿಸಿದ್ದವು. ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆಯಂಥ ಮುಸ್ಲಿಂ ಸಂಘಟನೆಗಳೂ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿ ನಮ್ಮ ಜತೆ ಚಳವಳಿಯಲ್ಲಿ ಪಾಲ್ಗೊಂಡಿದ್ದವು. ಜಾತಿ, ಧರ್ಮವನ್ನು ಬದಿಗಿಟ್ಟು ಎಲ್ಲ ಸಮಾನಮನಸ್ಕರು ಈ ಚಳವಳಿಯಲ್ಲಿ ತೊಡಗಿಕೊಂಡಿದ್ದರು.

ಹಾಗೆ ನೋಡಿದರೇ ಕೆಂಪೇಗೌಡರದ್ದು ನಿಜವಾದ ಜಾತ್ಯತೀತ ವ್ಯಕ್ತಿತ್ವ.  ಆ ಕಾಲಘಟ್ಟದಲ್ಲಿ ಕುಲಕಸುಬುಗಳನ್ನು ನೆಚ್ಚಿಕೊಂಡಿದ್ದ ಎಲ್ಲ ಜಾತಿ, ಸಮುದಾಯದವರಿಗೆ ಒಂದೊಂದು ಪೇಟೆಗಳನ್ನು ಮಾಡಿದವರು ಕೆಂಪೇಗೌಡರು. ಒಟ್ಟು ಐವತ್ತಾಲ್ಕು ಪೇಟೆಗಳನ್ನು ಸೃಷ್ಟಿಸಿದ್ದ ಕೆಂಪೇಗೌಡರು ಎಲ್ಲ ಸಮುದಾಯದವರು ಗೌರವದಿಂದ ಸಹಬಾಳ್ವೆಯಿಂದ ಬದುಕುವ ವ್ಯವಸ್ಥೆ ಕಲ್ಪಿಸಿದ್ದರು.
ವಿಜಯನಗರ ಅರಸರ ಸಾಮಂತರಾಗಿದ್ದ ಕೆಂಪೇಗೌಡರು, ೧೫೩೭ರಲ್ಲಿ ಬೆಂಗಳೂರು ನಿರ್ಮಾಣ ಕಾರ್ಯವನ್ನು ಆರಂಭಿಸಿದರು.  ಮೂಲತಃ ಕೃಷಿಕ ಕುಟುಂಬದಿಂದ ಬಂದವರಾದ ಕೆಂಪೇಗೌಡರು ಹೊನ್ನಾರು ಕಟ್ಟುವ ಆಚರಣೆಯೊಂದಿಗೆ ರಾಜಧಾನಿಯ ನಿರ್ಮಾಣ ಕಾರ್ಯ ಆರಂಭಿಸಿದರು. ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪ್ರಮುಖ ಪ್ರವೇಶದ್ವಾರಗಳನ್ನು ನಿರ್ಮಿಸಲು ತೀರ್ಮಾನಿಸಿದರು. ಹೆಬ್ಬಾಗಿಲು ಈಗಿನ ವಿಕ್ಟೋರಿಯಾ ಆಸ್ಪತ್ರೆಯ ಬಳಿಯ ಕೋಟೆಯಲ್ಲಿತ್ತು. ರಾಜಧಾನಿಗೆ ನವದ್ವಾರಗಳಿರಬೇಕು, ಕೆರೆಗಳು ಸದಾ ಕಾಲ ನೀರಿನಿಂದ ತುಂಬಿರಬೇಕೆಂಬುದು ಗೌಡರ ಆಶಯವಾಗಿತ್ತು. ಹೀಗಾಗಿ ಪೂರ್ವದಲ್ಲಿ ಹಲಸೂರು ದ್ವಾರ, ಪಶ್ಚಿಮಕ್ಕೆ ಸೊಂಡೆಕೊಪ್ಪದ ದ್ವಾರ, ಉತ್ತರಕ್ಕೆ ಯಲಹಂಕದ ದ್ವಾರ, ದಕ್ಷಿಣಕ್ಕೆ ಆನೆಕಲ್ ದ್ವಾರಗಳನ್ನು ನಿರ್ಮಿಸಲಾಯಿತು. ವರ್ತೂರು, ಸರ್ಜಾಪುರ, ಕೆಂಗೇರಿ, ಯಶವಂತಪುರ, ಕಾನಕಾನಹಳ್ಳಿ (ಕನಕಪುರ)ಗಳಲ್ಲಿ ಕಿರು ದ್ವಾರಗಳನ್ನು ನಿರ್ಮಿಸಲಾಯಿತು. ಈಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವ ದೇವನಹಳ್ಳಿ ಭಾಗದಲ್ಲಿ ಕೆಂಪೇಗೌಡರು ಮದ್ದುಗುಂಡುಗಳ ದಾಸ್ತಾನು ಕೇಂದ್ರವನ್ನು ಇಟ್ಟುಕೊಂಡಿದ್ದರು. ಯಾವುದೇ ಒಬ್ಬ ಸಾಮಂತ ರಾಜ ಇಷ್ಟು ವಿಶಾಲವಾದ ನಗರವನ್ನು ಕಟ್ಟುವುದು ಆ ಕಾಲದಲ್ಲಿ ದುಸ್ಸಾಧ್ಯವಾಗಿದ್ದರೂ ಸಹ ಕೆಂಪೇಗೌಡರು ಈ ಕಾರ್ಯಕ್ಕೆ ಕೈ ಹಾಕಿದರು. ಇದಕ್ಕೆ ವಿಜಯನಗರದ ಅರಸರ ಬೆಂಬಲವೂ ಇತ್ತು ಮತ್ತು ಹಣಕಾಸಿನ ನೆರವೂ ಸಿಕ್ಕಿತ್ತು.

ತಮ್ಮ ಸರ್ವಸ್ವವನ್ನೂ ಪಣವಾಗಿಟ್ಟು ಕೆಂಪೇಗೌಡರು ಈ ನಗರವನ್ನು ಕಟ್ಟಿದರು. ಇವತ್ತು ಬೆಂಗಳೂರಿಗೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿರಬಹುದು. ಜ್ಞಾನನಗರಿ, ಸಿಲಿಕಾನ್ ಸಿಟಿ, ಉದ್ಯಾನ ನಗರ ಇತ್ಯಾದಿ ಹೆಸರುಗಳು ಸಿಕ್ಕಿರಬಹುದು. ಆದರೆ ಇದೆಲ್ಲದಕ್ಕೂ ಮೂಲ ಕಾರಣಪುರುಷ ನಾಡಪ್ರಭು ಕೆಂಪೇಗೌಡರು ಎಂಬುದನ್ನು ನಾವು ಮರೆಯುವಂತಿಲ್ಲ. ಈ ಹಿನ್ನೆಲೆಯಿಂದಲೇ ನಾವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನೇ ಇಡಬೇಕು ಎಂಬ ಚಳವಳಿಯನ್ನು ಹಮ್ಮಿಕೊಂಡಿದ್ದೆವು.

ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ಇಡುವ ವಿಷಯಕ್ಕೆ ಕಳೆದ ವಿಧಾನಸಭೆಯ ಎಲ್ಲ ಶಾಸಕರು ಬೆಂಬಲಿಸಿದರು. ಸಚಿವ ಸಂಪುಟ ಸಭೆಯಲ್ಲಿ ಒಮ್ಮತದ ಒಪ್ಪಿಗೆಯೂ ದೊರೆಯಿತು. ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೂ ಕಳುಹಿಸಲಾಯಿತು. ಕೇಂದ್ರ ಸಚಿವ ಸಂಪುಟವೂ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿತು. ಹೀಗಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ಇಡಲಾಯಿತು. ಹೀಗಿರುವಾಗ ಗಿರೀಶ್ ಕಾರ್ನಾಡರು ಸರ್ಕಾರಿ ಕಾರ್ಯಕ್ರಮದಲ್ಲೇ ಇಂಥ ಅವಿವೇಕದ ಹೇಳಿಕೆಯನ್ನೇಕೆ ನೀಡುತ್ತಾರೆ? ಕಾರ್ನಾಡರು ಹೀಗೆ ಮಾತನಾಡುವಾಗ ವೇದಿಕೆಯಲ್ಲೇ ಇದ್ದ ಮುಖ್ಯಮಂತ್ರಿಗಳಾಗಲೀ, ಮಂತ್ರಿಗಳಾಗಲೀ, ಸಾಹಿತಿಗಳಾಗಲಿ ಯಾಕೆ ವಿರೋಧ ಮಾಡಲಿಲ್ಲ? ಅದೆಲ್ಲ ಹೋಗಲಿ, ಈ ವೇದಿಕೆಯಲ್ಲಿ ಓರ್ವ ಕನ್ನಡ ಚಳವಳಿಗಾರರೂ ಹಾಜರಿದ್ದರು. ಅವರಾದರೂ ಸ್ಥಳದಲ್ಲೇ ಕಾರ್ನಾಡರ ಹೇಳಿಕೆಯನ್ನು ಖಂಡಿಸಿ ಯಾಕೆ ಮಾತನಾಡಲಿಲ್ಲ?

ಇವತ್ತು ಸಮಾಜದಲ್ಲಿ ಅಸಹಿಷ್ಣುತೆ, ಅಶಾಂತಿ ಹೆಚ್ಚುತ್ತಲೇ ಇದೆ. ಇದರ ಪರಿಣಾಮವನ್ನು ಸಾಮಾನ್ಯ ನಾಗರಿಕರು ಉಣ್ಣುವಂತಾಗಿದೆ. ಭಯೋತ್ಪಾದನೆ ಎಂದರೆ ಕೇವಲ ಬಂದೂಕು ಹಿಡಿದು, ಬಾಂಬು ಸಿಡಿಸಿದರೆ ಮಾತ್ರ ಎಂದು ಭಾವಿಸಬೇಕಿಲ್ಲ. ಸಮಾಜದ ಸ್ವಾಸ್ಥ್ಯ ಕದಡುವ ಹೇಳಿಕೆ ನೀಡುವುದೂ ಸಹ ಭಯೋತ್ಪಾದಕ ಚಟುವಟಿಕೆಯೇ ಆಗುತ್ತದೆ. ದಿನದ ಇಪ್ಪತ್ತ ನಾಲ್ಕುಗಂಟೆಗಳ ಮಾಧ್ಯಮ ಈಗ ಎಷ್ಟು ಬೆಳೆದಿದೆಯೆಂದರೆ ಸಮಾಜವನ್ನು ಅಲ್ಲೋಲ ಕಲ್ಲೋಲ ಮಾಡಲು ಒಂದು ಹನಿ ವಿಷದಂಥ ಹೇಳಿಕೆಗಳು ಸಾಕು ಎನ್ನುವಂತಾಗಿದೆ. ಮತಾಂಧ ಸಂಘಟನೆಗಳು ಈ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ಮಾಡುತ್ತ ಬಂದಿವೆ. ಇದೇ ರೀತಿಯ ಪ್ರಚೋದನೆಯನ್ನು ಗಿರೀಶ್ ಕಾರ್ನಾಡರಂಥ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳೂ ಮಾಡಿದರೆ ಈ ಸಮಾಜದ ಗತಿಯೇನು? ಇಂಥ ಪ್ರಚೋದನೆಗಳಿಂದ ನಾಡಿನಲ್ಲಿ ಅಶಾಂತಿ ಉಂಟಾದರೆ ಆಗುವ ಜೀವಹಾನಿಗೆ ಯಾರು ಹೊಣೆಯಾಗುತ್ತಾರೆ?

ಕಾರ್ನಾಡರಿಗೆ ನಿಜಕ್ಕೂ ತಮ್ಮ ತಪ್ಪಿನ ಅರಿವಾದಂತಿಲ್ಲ. ರಾಜ್ಯದ ಗೃಹ ಸಚಿವರು ಮಾತನಾಡಿದ ನಂತರ ಕ್ಷಮೆ ಯಾಚನೆಯ ಹೇಳಿಕೆಯನ್ನು ಅವರು ನೀಡಿದ್ದಾರೆ. ಸಮಾಜ ಇಂದು ಧರ್ಮ, ಜಾತಿಗಳ ಹೆಸರಲ್ಲಿ ಒಡೆದುಹೋಗಿದೆ. ಈ ವಾಸ್ತವವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆವೇಶದಲ್ಲಿ ಚಪ್ಪಾಳೆ ಗಿಟ್ಟಿಸಲು ಏನು ಬೇಕಾದರೂ ಮಾತನಾಡಬಹುದು ಎಂಬ ಕಾಲ ಇದಲ್ಲ. ಎಲ್ಲರಿಗೂ ಅದರಲ್ಲೂ ವಿಶೇಷವಾಗಿ ಸಾಹಿತಿಗಳಿಗೆ, ಬುದ್ಧಿಜೀವಿಗಳಿಗೆ ಹೆಚ್ಚಿನ ಜವಾಬ್ದಾರಿ ಇದೆ. ಅದನ್ನು ಕಾರ್ನಾಡರು ಇನ್ನಾದರೂ ಅರಿತುಕೊಳ್ಳುವಂತಾಗಲಿ.

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ



Monday, 9 November 2015

ರಾಜಭವನವನ್ನು ಗುಜರಾತ್ ಭವನ ಮಾಡುವಿರಾ ರಾಜ್ಯಪಾಲರೇ?

ಕನ್ನಡ ರಾಜ್ಯೋತ್ಸವದ ದಿನದಂದೇ ರಾಜ್ಯಪಾಲ ವಜುಭಾಯ್ ರೂಢಭಾಯ್ ವಾಲಾ ರಾಜಭವನದಲ್ಲಿ ಗುಜರಾತಿ ಉತ್ಸವ ನಡೆಸಿ, ಗುಜರಾತಿ ಸಮುದಾಯದ ಸಿರಿವಂತರಿಗೆ ಔತಣಕೂಟ ನಡೆಸಿದ್ದಾರೆ. ತನ್ನ ತಾಯ್ನೆಲವಾದ ಗುಜರಾತ್‌ನಿಂದ ವಲಸೆ ಬಂದಿರುವ ಸಮುದಾಯದ ಜನರನ್ನು ಕರೆದು ಔತಣ ನಡೆಸಲು ರಾಜ್ಯಪಾಲರು ಆಯ್ಕೆ ಮಾಡಿಕೊಂಡಿರುವ ದಿನವನ್ನು ಗಮನಿಸಿ. ರಾಜ್ಯಪಾಲರು ನವೆಂಬರ್ ಒಂದರಂದು ಕನ್ನಡ ನಾಡಿನ ಎಲ್ಲ ಕ್ಷೇತ್ರಗಳ ಗಣ್ಯರು, ಸಾಹಿತಿಗಳನ್ನು ಕರೆದು ಔತಣಕೂಟವನ್ನು ಏರ್ಪಡಿಸಿದ್ದರೆ ಅದಕ್ಕೆ ಒಂದು ಅರ್ಥವಿರುತ್ತಿತ್ತು. ಆದರೆ ಅದೇ ದಿನವೇ ಅವರು ಗುಜರಾತಿ ಉತ್ಸವ ನಡೆಸಿದರು. ತಾವು ನಿಂತ ನೆಲ, ಅದರ ಸಂಸ್ಕೃತಿ, ನುಡಿ, ಘನತೆ ಎಲ್ಲವನ್ನೂ ಮರೆತರು.

ರಾಜ್ಯಪಾಲರ ಹುದ್ದೆಗೆ ನಮ್ಮ ಸಂವಿಧಾನದಡಿಯಲ್ಲೇ ವಿಪರೀತ ಅನ್ನುವಷ್ಟು ಗೌರವ ನೀಡಲಾಗಿದೆ. ರಾಜ್ಯಪಾಲರನ್ನು ಕೇಂದ್ರ ಸರ್ಕಾರವೇ ರಾಷ್ಟ್ರಪತಿಗಳ ಮೂಲಕ ನೇಮಕ ಮಾಡುತ್ತದೆ. ತಾವು ರಾಜ್ಯಪಾಲರಾಗಿ ನೇಮಕಗೊಂಡ ರಾಜ್ಯದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗಗಳು ಸಂವಿಧಾನಬದ್ಧವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವ ಪ್ರಧಾನ ಹೊಣೆ ರಾಜ್ಯಪಾಲರದ್ದು. ಈ ರಾಜ್ಯಪಾಲರುಗಳು ಜನರಿಂದ ನೇರವಾಗಿ ಆಯ್ಕೆಯಾಗಿರುವುದಿಲ್ಲ. ಯಾವುದೇ ರಾಜ್ಯಕ್ಕೆ ರಾಜ್ಯಪಾಲರಾಗಿ ಹೋಗುವವರು ಆ ರಾಜ್ಯದ ಸಮಾಜ, ಸಂಸ್ಕೃತಿ, ನುಡಿಯನ್ನು ಅರಿತುಕೊಂಡು ಕಾರ್ಯನಿರ್ವಹಿಸುವಂತಾಗಬೇಕು. ಇದನ್ನೂ ಕೂಡ ಸಂವಿಧಾನದಲ್ಲೇ ಬರೆದಿರಬೇಕು ಎಂದೇನಿಲ್ಲ. ಅದು ಸಾಮಾನ್ಯ ಜ್ಞಾನ. ರೋಮ್ ನಲ್ಲಿದ್ದಾಗ ರೋಮನ್‌ನಂತೆ ಇರಬೇಕು ಎನ್ನುತ್ತದೆ ಆಧುನಿಕ ಗಾದೆ.

ಆದರೆ ದುರದೃಷ್ಟವಶಾತ್ ಕರ್ನಾಟಕಕ್ಕೆ ರಾಜ್ಯಪಾಲರಾಗಿ ಬಂದ ಹಲವರು ಕರ್ನಾಟಕದ ಅಸ್ಮಿತೆಯನ್ನು ಧಿಕ್ಕರಿಸಿ ನಮ್ಮ ಸ್ವಾಭಿಮಾನವನ್ನು ಕೆಣಕಿದರು. ಹಿಂದೆ ಇದ್ದ ಹಂಸರಾಜ್ ಭಾರದ್ವಾಜ್ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ನಾಡಗೀತೆಯನ್ನು ಹಾಡುತ್ತಿದ್ದಾಗ ಅದನ್ನು ಅರ್ಧಕ್ಕೆ ನಿಲ್ಲಿಸುವಂತೆ ಹೇಳಿ ರಾಷ್ಟ್ರಗೀತೆಯನ್ನು ಹಾಡುವಂತೆ ಹೇಳಿ ತಮ್ಮ ‘ರಾಷ್ಟ್ರಭಕ್ತಿ’ಯನ್ನು ಮೆರೆದಿದ್ದರು. ರಾಷ್ಟ್ರಭಕ್ತಿಯ ಹೆಸರಲ್ಲಿ ತಾನು ರಾಜ್ಯಪಾಲನಾಗಿರುವ ರಾಜ್ಯದ ಹಿರಿಮೆಯನ್ನು ಅಪಮಾನಿಸುತ್ತಿದ್ದೇನೆ ಎಂಬುದು ಅವರಿಗೆ ಗೊತ್ತಾಗಲೇ ಇಲ್ಲ. ಅದಾದ ನಂತರ ನ್ಯಾಯಮೂರ್ತಿಯೊಬ್ಬರು ಭಾರದ್ವಾಜ್ ಅವರಿಗೆ ಇಡೀ ನಾಡಗೀತೆಯ ಪಠ್ಯವನ್ನು ಅನುವಾದಿಸಿ ಅದರ ಮಹತ್ವವನ್ನು ತಿಳಿಹೇಳಿದ್ದರು. ನಾಡಗೀತೆಯ ಅರ್ಥವನ್ನು ತಿಳಿದುಕೊಂಡ ಭಾರದ್ವಾಜ್ ‘ಎಷ್ಟು ಅದ್ಭುತವಾದ ಸಾಲುಗಳು, ಇದನ್ನು ಬರೆದವರ ಮನೋಶ್ರೀಮಂತಿಕೆಗೆ ಬೆಲೆ ಕಟ್ಟಲಾಗದು’ ಎಂದು ಉದ್ಘರಿಸಿದ್ದರು. ನಾಡಗೀತೆ ಬರೆದ ಯುಗದ ಕವಿ ಕುವೆಂಪು ಅವರ ಕುರಿತು ಇಂಗ್ಲಿಷ್‌ನಲ್ಲಿ ಬರೆದಿರುವ ಪುಸ್ತಕಗಳನ್ನು ಓದಿ, ನನಗೆ ರವೀಂದ್ರನಾಥ ಠ್ಯಾಗೋರ್, ಕುವೆಂಪು ಬೇರೆಬೇರೆಯಾಗಿ ಕಾಣುವುದಿಲ್ಲ. ಇಬ್ಬರೂ ಅದ್ಭುತ ಕವಿಗಳು ಎಂದು ಹೇಳಿದ್ದರು.
೧೯೯೯ರಿಂದ ೨೦೦೨ರವರೆಗೆ ಕರ್ನಾಟಕದ ರಾಜ್ಯಪಾಲರಾಗಿದ್ದ ವಿ.ಎಸ್.ರಮಾದೇವಿ ಮೂಲತಃ ಆಂಧ್ರಪ್ರದೇಶದವರು. ಅವರು ಕರ್ನಾಟಕಕ್ಕೆ ರಾಜ್ಯಪಾಲರಾಗಿ ಬಂದಾಗ ಸಹಜವಾಗಿಯೇ ಕನ್ನಡ ನುಡಿ ಗೊತ್ತಿರಲಿಲ್ಲ. ಆದರೆ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದರು. ತಾನು ಕೆಲಸ ಮಾಡಬೇಕಿರುವ ರಾಜ್ಯದ ನಾಡು-ನುಡಿಗೆ ಸಲ್ಲಿಸಬೇಕಾದ ಗೌರವ ಏನೆಂಬುದು ಅವರಿಗೆ ಚೆನ್ನಾಗಿಯೇ ಗೊತ್ತಿತ್ತು. ಹೀಗೆ ಪ್ರಮಾಣವಚನ ಸ್ವೀಕಾರ ಮಾಡಿದ್ದು ತೋರಿಕೆಗಾಗಿ ಎಂದು ಯಾರಾದರೂ ಭಾವಿಸಿಬಿಡಬಹುದು. ಆದರೆ ರಮಾದೇವಿ ತಮ್ಮ ಕೆಲಸಕಾರ್ಯಗಳ ಮಧ್ಯೆ ಕನ್ನಡ ಕಲಿಯುವ ಕೆಲಸ ಆರಂಭಿಸಿದರು. ಅವರು ಎಷ್ಟು ಚೆನ್ನಾಗಿ ಕನ್ನಡ ಕಲಿತರೆಂದರೆ ಎಲ್ಲ ಕಡೆ ಕನ್ನಡದಲ್ಲೇ ಭಾಷಣ ಮಾಡಲು ತೊಡಗಿದರು.

ಈಗ ಮತ್ತೆ ವಜುಭಾಯ್ ವಾಲಾ ಅವರ ವಿಷಯಕ್ಕೆ ಬರುವುದಾದರೆ, ಅವರು ರಾಜ್ಯಪಾಲರಾಗಿ ಬಂದ ನಂತರ ತಾವು ಕಾರ್ಯನಿರ್ವಹಿಸುತ್ತಿರುವ ನಾಡು ಯಾವುದು ಎಂಬುದನ್ನೇ ಮರೆತಿದ್ದಾರೆ. ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಬೇಕಾಗಿ ಬಂದಾಗ ಅವರು ಆಯ್ಕೆ ಮಾಡಿಕೊಂಡಿದ್ದು ಹಿಂದಿ ನುಡಿಯನ್ನು. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯಪಾಲರೊಬ್ಬರ ಹಿಂದಿ ಭಾಷಣವನ್ನು ನಮ್ಮ ಜನಪ್ರತಿನಿಧಿಗಳು ಸೈರಿಸಿಕೊಂಡರು. ಯಾವುದೇ ರಾಜ್ಯದ ರಾಜ್ಯಪಾಲರು ಇಂಥ ಸಂದರ್ಭದಲ್ಲಿ ಆಯಾ ರಾಜ್ಯದ ನುಡಿಯನ್ನೇ ಆಯ್ಕೆ ಮಾಡಿಕೊಳ್ಳಬೇಕು. ಒಂದು ವೇಳೆ ಅವರಿಗೆ ಉಚ್ಛಾರಣೆಯ ಸಮಸ್ಯೆ ಇದ್ದರೆ, ಆಯಾ ರಾಜ್ಯದ ನುಡಿಯಲ್ಲಿ ಭಾಷಣ ಮಾಡುವುದು ಕಷ್ಟವಾದರೆ ಹೆಚ್ಚು ಜನರಿಗೆ ಅರ್ಥವಾಗುವ ಇಂಗ್ಲಿಷ್ ಭಾಷೆಯಲ್ಲಿ ಭಾಷಣ ಮಾಡಬಹುದು. ಇವೆರಡನ್ನೂ ಬಿಟ್ಟು ಹಿಂದಿ ನುಡಿಯಲ್ಲಿ ಭಾಷಣ ಮಾಡಿದ್ದರ ಉದ್ದೇಶವಾದರೂ ಏನು? ಎಸ್.ಎಂ.ಕೃಷ್ಣ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದರು. ಆಗ ಅವರು ಅಲ್ಲಿನ ವಿಧಾನಮಂಡಲ ಅಧಿವೇಶನವನ್ನು ಉದ್ದೇಶಿಸಿ ಕನ್ನಡದಲ್ಲಿ ಮಾತನಾಡಿದ್ದರೆ ಅಲ್ಲಿನವರು ಸಹಿಸಿಕೊಳ್ಳುತ್ತಿದ್ದರೇ? ಅಥವಾ ಮುಂದೆ ಕರ್ನಾಟಕದ ರಾಜಕಾರಣಿಯೊಬ್ಬರು ಗುಜರಾತ್‌ನ ರಾಜ್ಯಪಾಲರಾಗಿ, ಅವರು ಅಲ್ಲಿನ ವಿಧಾನಮಂಡಲ ಅಧಿವೇಶವನ್ನು ಉದ್ದೇಶಿಸಿ ಕನ್ನಡದಲ್ಲಿ ಮಾತನಾಡಿದರೆ ವಜುಬಾಯ್ ವಾಲಾ ಸಹಿಸಿಕೊಳ್ಳುವರೆ?

ಕರ್ನಾಟಕಕ್ಕೆ ಬರುವ ರಾಜ್ಯಪಾಲರು ಮೊದಲು ಮಾಡಬೇಕಾದ ಕೆಲಸವೇನೆಂದರೆ ಈ ನಾಡನ್ನು ಪ್ರೀತಿಸುವುದು. ಇಲ್ಲಿನ ನೆಲ, ಸಂಸ್ಕೃತಿ, ನುಡಿ, ಪರಂಪರೆ ಮತ್ತು ಜನರನ್ನು ಗೌರವಿಸುವುದು. ಇದನ್ನು ಮಾಡದೇ, ರಾಜಭವನವೆಂಬ ಕೋಟೆಯೊಳಗೆ ಕುಳಿತು ಎಲ್ಲ ಐಶಾರಾಮಿ ಸೌಲಭ್ಯಗಳನ್ನು ಪಡೆದು ತನ್ನದೇ ದರ್ಬಾರು ಸ್ಥಾಪಿಸಿದರೆ ಅದು ಸಂವಿಧಾನಕ್ಕೆ ಮಾಡುವ ಅಪಚಾರ. ಸಂವಿಧಾನದ ಪ್ರಕಾರವೇ ಭಾರತ ಒಕ್ಕೂಟವನ್ನು ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಿಸಲಾಗಿದೆ. ತನ್ನ ನುಡಿ, ಸಂಸ್ಕೃತಿಯನ್ನು ಬೆಳೆಸುವ, ಕಾಪಾಡಿಕೊಳ್ಳುವ ಹಕ್ಕನ್ನು ಎಲ್ಲ ರಾಜ್ಯಗಳಿಗೂ ಸಂವಿಧಾನವೇ ನೀಡಿದೆ. ಹೀಗಿರುವ ಸಂವಿಧಾನದ ಕಾವಲುಗಾರರಾಗಿ ಬರುವ ರಾಜ್ಯಪಾಲರು ಸಂವಿಧಾನದ ಮೂಲ ಆಶಯವನ್ನೇ ಧಿಕ್ಕರಿಸಿ ನಡೆದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.

ರಾಜ್ಯಪಾಲ ವಜುಭಾಯ್ ವಾಲಾ ರಾಜಭವನವನ್ನು ಕರ್ನಾಟಕದ ಜನತೆಗೆ ಮುಕ್ತವಾಗಿ ತೆರೆದಿಡಬೇಕು. ರಾಜಭವನವೆಂಬುದು ರಾಜ್ಯಪಾಲರಾಗಿ ಕಾರ್ಯನಿರ್ವಹಿಸುವವರ ಖಾಸಗಿ ಆಸ್ತಿಯಲ್ಲ. ಕೋಟ್ಯಂತರ ರುಪಾಯಿ ಕನ್ನಡಿಗರ ತೆರಿಗೆ ಹಣವನ್ನು ಖರ್ಚು ಮಾಡಿ ರಾಜಭವನವನ್ನು ನವೀಕರಣ ಮಾಡಿಕೊಂಡಿರುವ ವಾಲಾ ಅವರು ರಾಜಭವನವನ್ನು ಕನ್ನಡದ ಜನತೆಗೆ ತೆರೆದಿಡದಿದ್ದರೆ ಅದು ಯಾವ ಪುರುಷಾರ್ಥಕ್ಕೆ? ರಾಜ್ಯಪಾಲರು ಜನಸ್ನೇಹಿಯಾಗಿರಬೇಕು ಎಂದು ಭಾವಿಸಿದ್ದ ರಮಾದೇವಿಯವರು ಶ್ರೀಸಾಮಾನ್ಯರಿಗೂ ಮುಕ್ತವಾದ ಪ್ರವೇಶಾವಕಾಶ ಕಲ್ಪಿಸಿ, ಎಲ್ಲರ ಅಹವಾಲುಗಳನ್ನೂ ಕೇಳುತ್ತಿದ್ದರು. ಗಣರಾಜ್ಯೋತ್ಸವದಂದು ನಾಡಿನ ಹಿರಿಯ ಚೇತನಗಳನ್ನು ಕರೆದು ಗೌರವಿಸುತ್ತಿದ್ದರು. ಆದರೆ ವಜುಭಾಯ್ ವಾಲಾ ರಾಜಭವನವನ್ನು ಗುಜರಾತ್ ಭವನವನ್ನಾಗಿ ಮಾಡಿಕೊಂಡಿದ್ದಾರೆ. ತನ್ನ ಸಹಾಯಕರನ್ನಾಗಿ ಗುಜರಾತಿಗಳನ್ನೇ ನೇಮಕ ಮಾಡಿಕೊಂಡಿದ್ದಾರೆ. ಇವರ ಕಿವಿಗೆ ಕನ್ನಡ ನುಡಿಯೇ ಬೀಳದೇ ಹೋದರೆ ಕಲಿಯುವುದು ಎಲ್ಲಿಂದ? ಕನ್ನಡ ಕಲಿಯದೇ ಹೋದರೆ ಗೌರವಿಸುವುದು ಹೇಗೆ ಸಾಧ್ಯ? ಹೀಗಾಗಿ ಕನ್ನಡ ರಾಜ್ಯೋತ್ಸವದಂದೇ ಗುಜರಾತಿ ಉತ್ಸವ ನಡೆಸುವ ದುರಹಂಕಾರದ ಪ್ರದರ್ಶನವೂ ಆಗಿಹೋಗಿದೆ.

ವಜುಭಾಯ್  ವಾಲಾ ಅವರಿಗೆ ರಾಜ್ಯಪಾಲರಾಗಿ ಸಾವಿರ ಕೆಲಸಗಳಿರಬಹುದು. ಆದರೆ ಅದೆಲ್ಲಕ್ಕಿಂತ ಮುಖ್ಯವಾಗಿ ಅವರು ಈ ನಾಡು ನುಡಿಯ ಕುರಿತು ಒಂದಷ್ಟು ಕಲಿಯಬೇಕಿದೆ. ಅದಕ್ಕಾಗಿ ಒಂದಿಬ್ಬರು ಶಿಕ್ಷಕರನ್ನು ಅವರು ನೇಮಕ ಮಾಡಿಕೊಳ್ಳುವುದು ಒಳ್ಳೆಯದು. ಇದಕ್ಕಾಗಿ ಅವರು ನಮ್ಮ ತೆರಿಗೆ ಹಣವನ್ನೇ ಬಳಸಿಕೊಳ್ಳಲಿ, ನಮ್ಮ ತಕರಾರೇನೂ ಇರುವುದಿಲ್ಲ. ಗುಜರಾತಿ ಉತ್ಸವಕ್ಕೆ ಲಕ್ಷಾಂತರ ರುಪಾಯಿ ನಮ್ಮ ತೆರಿಗೆ ಹಣವೇ ಖರ್ಚಾಗುತ್ತಿರುವಾಗ ಕನ್ನಡ ಶಿಕ್ಷಕರಿಗೆ ನಮ್ಮ ತೆರಿಗೆ ಹಣದಲ್ಲೇ ಸಂಬಳ ಕೊಡಲಿ. ಮೊದಲು ಕನ್ನಡ ನಾಡು, ಅದರ ಇತಿಹಾಸ, ಪರಂಪರೆ, ಸಂಸ್ಕೃತಿ, ಸಾಹಿತ್ಯ ಎಲ್ಲದರ ಬಗ್ಗೆ ಅವರು ಕಲಿತುಕೊಳ್ಳಲಿ. ಪಂಪನಿಂದ ಹಿಡಿದು ಕುವೆಂಪುವರೆಗೆ ಕನ್ನಡದ ನುಡಿಪರಂಪರೆಯೂ ಅವರಿಗೆ ಗೊತ್ತಾಗಲಿ. ಇಲ್ಲಿನ ಶರಣರು, ದಾಸರು, ಸೂಫಿಗಳು, ಜನಪದರು ಎಲ್ಲರ ಕುರಿತು ಅವರು ಓದುವಂತಾಗಲಿ. ಇದೆಲ್ಲದಕ್ಕೆ ತುಂಬಾ ಸಮಯವೇನೂ ಬೇಕಾಗಿಲ್ಲ. ಆರು ತಿಂಗಳಲ್ಲಿ ಕನ್ನಡದಲ್ಲೇ ಮಾತನಾಡುವಷ್ಟು ಪ್ರೌಢಿಮೆಯನ್ನು ಅವರು ಪಡೆಯಬಹುದು.

ಕನ್ನಡ ಕಲಿತ ನಂತರ ವಜುಭಾಯ್ ವಾಲಾ ಅವರು ಕನ್ನಡಿಗರ ಜತೆ ಕನ್ನಡದಲ್ಲೇ ವ್ಯವಹರಿಸಲಿ, ರಾಜಭವನದಲ್ಲಿ ಕನ್ನಡವೇ ಮೊಳಗುವಂತೆ ನೋಡಿಕೊಳ್ಳಲಿ. ಸಂಸ್ಕೃತ, ಹಿಂದಿ ಭಾಷೆಗಳನ್ನು ಉತ್ತೇಜಿಸುವ ನೂರೆಂಟು ಕಾರ್ಯಕ್ರಮಗಳಿಗೆ ಹೋಗುವ ರಾಜ್ಯಪಾಲರು ಅದನ್ನು ಬಿಟ್ಟು ಕನ್ನಡದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿ. ಇತರೆ ಭಾಷೆಗಳನ್ನು ಉದ್ಧಾರ ಮಾಡಲು ಆ ಭಾಷೆಗಳಿಗೆ ಸಂಬಂಧಿಸಿದ ರಾಜ್ಯಗಳಿವೆ. ಆಯಾ ರಾಜ್ಯಗಳಲ್ಲಿ ಆ ಕೆಲಸ ನಡೆಯಲಿ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ನುಡಿ. ಕನ್ನಡದ ಹೊರತಾಗಿ ಇಲ್ಲಿ ಇನ್ಯಾವ ದೊಡ್ಡ ನುಡಿಯೂ ಇಲ್ಲ. ಇಲ್ಲಿ ವ್ಯವಹರಿಸುವ ಯಾರೇ ಆದರೂ ಕನ್ನಡವನ್ನೇ ಬಳಸಬೇಕು, ಕನ್ನಡಕ್ಕೇ ಗೌರವ ನೀಡಬೇಕು. ಸರ್ಕಾರಿ ಅಧಿಕಾರಿ, ನ್ಯಾಯಾಧೀಶ, ಉದ್ಯಮಿ, ಕಾರ್ಮಿಕರಿಂದ ಹಿಡಿದು ರಾಜ್ಯಪಾಲರವರೆಗೆ ಎಲ್ಲರಿಗೂ ಈ ಮಾತು ಅನ್ವಯವಾಗುತ್ತದೆ.

ನವೆಂಬರ್ ಒಂದರಂದು ರಾಜಭವನದಲ್ಲಿ ಗುಜರಾತಿ ಉತ್ಸವವನ್ನು ಏರ್ಪಡಿಸುವ ಮೂಲಕ ವಜುಭಾಯ್ ವಾಲಾ ಕೆಟ್ಟ ಪರಂಪರೆಯನ್ನು ಆರಂಭಿಸಿದ್ದಾರೆ. ಈ ಪ್ರಮಾದಕ್ಕಾಗಿ ಅವರು ಕನ್ನಡ ನಾಡಿನ ಜನತೆಯ ಕ್ಷಮೆ ಯಾಚಿಸಬೇಕು. ಇನ್ನೆಂದೂ ಇಂಥ ತಾಯಿದ್ರೋಹದ ಕೆಲಸವನ್ನು ಮಾಡುವುದಿಲ್ಲವೆಂದು ಅವರು ಪ್ರಮಾಣ ಮಾಡಬೇಕು. ತಾನು ಕೆಲಸ ಮಾಡುವ ನಾಡನ್ನು ಧಿಕ್ಕರಿಸುವುದೆಂದರೆ ಅದನ್ನು ತಾಯಿದ್ರೋಹವೆಂದೇ ಕರೆಯಬೇಕಾಗುತ್ತದೆ. ಮುಂದೆ ಎಂದೂ ಅವರಿಂದ ಇಂಥ ಪ್ರಮಾದಗಳು ನಡೆಯದೇ ಇರಲಿ.

ರಾಜಭವನವೆಂಬುದು ಸಂವಿಧಾನ ರಕ್ಷಣೆಯ ಕೇಂದ್ರವಾಗಬೇಕೇ ಹೊರತು, ಸಂವಿಧಾನವಿರೋಧಿಯಾಗಿ ಸ್ಥಳೀಯ ನುಡಿ ಸಂಸ್ಕೃತಿಯನ್ನು ಧಿಕ್ಕರಿಸುವ ಕೇಂದ್ರವಾಗಬಾರದು. ರಾಜಭವನವನ್ನು ಗುಜರಾತ್ ಭವನವನ್ನಾಗಿ ಮಾಡಲು ಕನ್ನಡಿಗರೆಂದಿಗೂ ಅವಕಾಶ ನೀಡಕೂಡದು. ಒಂದು ವೇಳೆ ಗುಜರಾತ್ ಸಂಸ್ಕೃತಿಯ ಕುರಿತು ವಾಲಾ ಅವರಿಗೆ ಅಷ್ಟೊಂದು ಮೋಹವಿದ್ದರೆ, ತಮ್ಮ ಸ್ವಂತ ಖರ್ಚಿನಲ್ಲಿ ಗುಜರಾತ್‌ನಲ್ಲೇ ಒಂದು ಭವನ ಕಟ್ಟಿಕೊಂಡು, ಅಲ್ಲಿ ಗುಜರಾತಿ ಉತ್ಸವಗಳನ್ನು ನಡೆಸಲಿ. ಕರ್ನಾಟಕದಲ್ಲಿರುವ ಗುಜರಾತಿಗಳ ಮೇಲೆ ಅಷ್ಟೊಂದು ಮಮಕಾರವಿದ್ದರೆ, ಗುಜರಾತ್‌ನಲ್ಲಿ ತಾವು ಕಟ್ಟುವ ಗುಜರಾತಿ ಭವನದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ದಿನನಿತ್ಯ ಉತ್ಸವಗಳನ್ನು ನಡೆಸಿ, ಅದಕ್ಕೆ ಕರ್ನಾಟಕದ ಗುಜರಾತಿಗಳನ್ನು ತಮ್ಮ ಖರ್ಚಿನಲ್ಲಿ ಕರೆಯಿಸಿಕೊಳ್ಳಲಿ. ಯಾರು ಬೇಡ ಎಂದವರು?

ಯಾವುದೇ ರಾಜ್ಯಪಾಲರಿಗೆ ಮೊದಲು ಇರಬೇಕಾದ ‘ಸಾಮಾನ್ಯ ಜ್ಞಾನ’ವೆಂದರೆ ಭಾರತ ಎಂಬುದೊಂದು ಒಕ್ಕೂಟ. ಭಾಷಾವಾರು ಪ್ರಾಂತ್ಯ ವಿಂಗಡಣೆಯಂತೆ ಇಲ್ಲಿ ರಾಜ್ಯಗಳಾಗಿವೆ. ಎಲ್ಲ ರಾಜ್ಯಗಳಿಗೂ ತನ್ನದೇ ಆದ ಇತಿಹಾಸ, ಪರಂಪರೆ, ಸಂಸ್ಕೃತಿ, ಅಸ್ಮಿತೆಗಳು ಇರುತ್ತವೆ. ಅವುಗಳನ್ನು ಕಾಪಾಡದೇ ಹೋದರೆ ಭಾರತ ಒಕ್ಕೂಟಕ್ಕೆ ಒಂದು ಅರ್ಥ ಉಳಿಯುವುದಿಲ್ಲ. ಅಷ್ಟೇ ಅಲ್ಲ, ಅದು ಹೆಚ್ಚು ಕಾಲ ಒಕ್ಕೂಟವಾಗಿ ಉಳಿಯುವುದೂ ಸಾಧ್ಯವಿಲ್ಲ. ಹೀಗಾಗಿ ಬೇರೆ ರಾಜ್ಯಗಳಿಂದ ಬಂದ ರಾಜ್ಯಪಾಲರು ಈ ಸಾಮಾನ್ಯ ಜ್ಞಾನವನ್ನು ಮೊದಲು ಕಲಿಯಬೇಕು. ಕಲಿಯಲು ಅವರಿಗೆ ಮನಸು ಇಲ್ಲದೇ ಹೋದಲ್ಲಿ ನಾವೇ ಅನಿವಾರ್ಯವಾಗಿ ಅದನ್ನು ಕಲಿಸಬೇಕಾಗುತ್ತದೆ. ಹಾಗೂ ಕಲಿಯದೇ ಹೋದರೆ ದಯವಿಟ್ಟು ನೀವು ಬಂದ ರಾಜ್ಯಕ್ಕೆ ಹಿಂದಕ್ಕೆ ಹೋಗಿ ಅಲ್ಲಿನ ಸಂಸ್ಕೃತಿಯ ರಾಯಭಾರಿಗಳಾಗಿ ನಿಮ್ಮ ಭವ್ಯಪರಂಪರೆಯನ್ನು ಮೆರೆಯಿರಿ ಎಂದು ಪ್ರೀತಿಯಿಂದ ಹೇಳಿ ಬೀಳ್ಕೊಡಬೇಕಾಗುತ್ತದೆ.

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ


Wednesday, 4 November 2015

ರಾಜ್ಯೋತ್ಸವ ನಮ್ಮ ಪಾಲಿಗೆ ಎಂದೆಂದಿಗೂ ನಿತ್ಯೋತ್ಸವ

ಬೆಂಗಳೂರಿನ ಪೊಲೀಸ್ ಕಮಿಷನರ್ ಎನ್.ಎಸ್.ಮೇಘರಿಕ್ ಇಲ್ಲದ ಸಮಸ್ಯೆಯೊಂದನ್ನು ಸೃಷ್ಟಿಸಿ, ನಂತರ ನಮ್ಮೆಲ್ಲರ ತೀವ್ರ ವಿರೋಧದ ನಂತರ ತಾವೇ ಬಗೆಹರಿಸಿದ್ದಾರೆ. ಯಾರು ಅಂಥ ಕೆಟ್ಟ ಸಲಹೆ ನೀಡಿದರೋ ಏನೋ, ಅವರು ಸುತ್ತೋಲೆಯೊಂದನ್ನು ಹೊರಡಿಸಿ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ ಒಂದರಿಂದ ಏಳರವರೆಗೆ ಮಾತ್ರ ಆಚರಿಸಬಹುದು, ಅದಾದ ನಂತರ ಆಚರಿಸಬೇಕೆಂದಿದ್ದರೆ ಯಾವುದಾದರೂ ಮೈದಾನಗಳಲ್ಲಿ ಮಾತ್ರ ಆಚರಿಸಬೇಕು, ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ಸಂಘಟಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂಬ ಆದೇಶವೊಂದನ್ನು ಹೊರಡಿಸಿದ್ದರು. ‘ಕೆಲವು ಸಾರ್ವಜನಿಕ ಸಂಘ ಸಂಸ್ಥೆ’ಗಳ ಮನವಿಯ ಮೇರೆಗೆ ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾಗಿ ಹೇಳಿಕೊಂಡಿದ್ದರು. ಪುಣ್ಯವಶಾತ್ ಮೇಘರಿಕ್ ಅವರಿಗೆ ತಮ್ಮಿಂದ ಆದ ಪ್ರಮಾದ ಗೊತ್ತಾಗಿ ರಾಜ್ಯೋತ್ಸವವನ್ನು ಸೀಮಿತಗೊಳಿಸುವ ಯಾವ ಉದ್ದೇಶವೂ ಪೊಲೀಸ್ ಇಲಾಖೆಗಿಲ್ಲ, ನಮ್ಮ ಸಹಕಾರವಿರುತ್ತದೆ. ರಾಜ್ಯೋತ್ಸವು ನಿತ್ಯೋತ್ಸವವಾಗಬೇಕು ಎಂಬುದಕ್ಕೆ ಇಲಾಖೆಯ ಸಂಪೂರ್ಣ ಬೆಂಬಲವಿರುತ್ತದೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಕನ್ನಡ ನಾಡು, ನುಡಿ, ಸಂಸ್ಕೃತಿಗಳ ಗಂಧಗಾಳಿಯಿಲ್ಲದಿದ್ದವರು ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆಗೆ ಏರಿದರೆ ಏನಾಗಬಹುದು ಎಂಬುದಕ್ಕೆ ಇದು ಉದಾಹರಣೆ ಅಷ್ಟೆ. ಮೇಘರಿಕ್ ಅವರು ರಾಜಸ್ತಾನದ ಐಪಿಎಸ್ ಕೇಡರ್. ಸಹಜವಾಗಿಯೇ ಅವರಿಗೆ ಕವಿರಾಜಮಾರ್ಗವೂ ಗೊತ್ತಿರಲು ಸಾಧ್ಯವಿಲ್ಲ, ಕುವೆಂಪು ಅವರೂ ಗೊತ್ತಿರಲು ಸಾಧ್ಯವಿಲ್ಲ. ಕರ್ನಾಟಕ ಏಕೀಕರಣಕ್ಕಾಗಿ ಜೀವತೆತ್ತ ರಂಜಾನ್ ಸಾಬ್ ಅಂಥವರ ಹೆಸರನ್ನು ಅವರೆಂದಿಗೂ ಕೇಳಿರರಲಾರರು. ಹೀಗಾಗಿ ರಾಜ್ಯೋತ್ಸವದ ಆಚರಣೆಯ ಹಿನ್ನೆಲೆಯೂ ಅವರಿಗೆ ಅರ್ಥವಾಗುವುದು ಕಷ್ಟ. ಮೇಘರಿಕ್ ಅವರು ಶುದ್ಧಹಸ್ತರು, ಪ್ರಾಮಾಣಿಕರು, ಹಿಂದೆ ಕೆಲಸ ಮಾಡಿದ ಕಡೆಯಲ್ಲೆಲ್ಲ ಘನತೆಯಿಂದ ಕಾರ್ಯನಿರ್ವಹಿಸಿದವರು ಎಂಬುದನ್ನು ಕೇಳಿದ್ದೇನೆ, ಆದರೆ ಇದಷ್ಟೇ ಒಬ್ಬ ಪೊಲೀಸ್ ಕಮಿಷನರ್‌ಗೆ ಇರಬೇಕಾದ ಅರ್ಹತೆಗಳಲ್ಲ. ತಾವು ಕೆಲಸ ಮಾಡುತ್ತಿರುವ ನಾಡಿನ ಇತಿಹಾಸ, ಸಂಸ್ಕೃತಿ, ಜನರ ನಾಡಿಮಿಡಿತಗಳೂ ಅವರಿಗೆ ಗೊತ್ತಿರಬೇಕು.

ಯಾವುದೇ ರಾಜ್ಯೋತ್ಸವ ಕಾರ್ಯಕ್ರಮಕ್ಕಾದರೂ ಪೊಲೀಸರು ಹಲವು ನಿಯಮಗಳನ್ನು ಹೇರುವ ಮೂಲಕವೇ ಅನುಮತಿ ನೀಡಿರುತ್ತಾರೆ. ರಾಜ್ಯೋತ್ಸವ ಎಂದಲ್ಲ, ಮೈಕ್ ಬಳಸಿ ರಸ್ತೆಯಲ್ಲಿ ನಡೆಸುವ ಯಾವುದೇ ಕಾರ್ಯಕ್ರಮವಾದರೂ ಪೊಲೀಸರ ನಿಯಮಾವಳಿಗಳಂತೆಯೇ ಆಚರಿಸಲಾಗುತ್ತದೆ. ರಾತ್ರಿ ೧೧ ಗಂಟೆಯ ನಂತರ ಮೈಕ್ ಬಳಸಬಾರದು ಎಂಬ ನಿಯಮವನ್ನೂ ಸೇರಿದಂತೆ ಹಲವು ಬಗೆಯ ನಿಯಮಗಳನ್ನು ಪಾಲಿಸಲಾಗುತ್ತದೆ. ಒಂದು ವೇಳೆ ಸಂಘಟಕರು ನಿಯಮಗಳನ್ನು ಮೀರಿದರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವ ಅಧಿಕಾರವೂ ಪೊಲೀಸರಿಗಿರುತ್ತದೆ. ಪೊಲೀಸ್ ಇಲಾಖೆಗೆ ಕೊನೆಗೂ ಇದು ಅರ್ಥವಾಗಿದೆ.

ರಾಜ್ಯೋತ್ಸವದ ಆಚರಣೆ ಕುರಿತಂತೆ ಪೊಲೀಸ್ ಕಮಿಷನರ್ ಹೊರಡಿಸಿದ ಸುತ್ತೋಲೆ ಈಗ ಅವರ ಸ್ಪಷ್ಟನೆಯೊಂದಿಗೆ ಅಧಿಕೃತವಾಗಿ ಹಿಂದಕ್ಕೆ ಪಡೆದಂತಾಗಿದ್ದರೂ ಸಹ ಈ ವಿವಾದ ಒಂದಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಂಥ ಸುತ್ತೋಲೆ ಹೊರಗೆ ಬರಲು ಕಾರಣ ಏನು ಎಂಬುದನ್ನು ಪರಿಶೀಲಿಸಲೇಬೇಕಾಗಿದೆ. ಈ ಕನ್ನಡ ವಿರೋಧಿ ಸುತ್ತೋಲೆಯ ಕುರಿತಂತೆ ವಿವರಣೆ ನೀಡಿದ್ದ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದೆಂದು ಕೆಲವು ಸಾರ್ವಜನಿಕ ಹಿತರಕ್ಷಣಾ ಸಂಘಟನೆಗಳು ಮನವಿ ಮಾಡಿವೆ. ಅದಕ್ಕಾಗಿಯೇ ಈ ಸುತ್ತೋಲೆಯನ್ನು ಹೊರಡಿಸಲಾಗಿದೆಯೆಂದೂ, ಈ ಸುತ್ತೋಲೆ ಜನಪರವಾಗಿಯೇ ಇದೆಯೆಂದು ಸ್ಪಷ್ಟನೆ ನೀಡಿದ್ದರು. ಈಗ ಪೊಲೀಸರು, ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡಬೇಡಿ ಎಂದು ಮನವಿ ಮಾಡಿರುವ ಆ ‘ಸಾರ್ವಜನಿಕ ಹಿತರಕ್ಷಣಾ ಸಂಘಟನೆ’ಗಳು ಯಾವುವು ಎಂಬುದನ್ನು ಮೊದಲು ಬಹಿರಂಗ ಮಾಡಬೇಕಿದೆ.


ಯಾಕೆಂದರೆ, ಈ ಸಂಘಟನೆಗಳು ಸಾರ್ವಜನಿಕ ಹಿತರಕ್ಷಣೆಗಾಗಿ ಇವೆಯೋ ಅಥವಾ ಬೇರೆ ಇನ್ಯಾವುದಾದರೂ ‘ಹಿಡನ್ ಅಜೆಂಡಾ’ಗಳನ್ನು ಇಟ್ಟುಕೊಂಡಿರುವ ಸಂಘಟನೆಗಳೋ ಎಂಬುದು ಸಾರ್ವಜನಿಕವಾಗಿ ಗೊತ್ತಾಗಬೇಕಿದೆ. ಬೆಂಗಳೂರು ಈಗ ವಲಸಿಗರ ಸ್ವರ್ಗ. ‘ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ’ ಎಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿದ ನಾಡದ್ರೋಹಿ ಸಂಘಟನೆಗಳು ಇಲ್ಲಿ ಸಾರ್ವಜನಿಕ ಹಿತರಕ್ಷಣೆಯ ಮಾರುವೇಷದಲ್ಲಿ ಇವೆ. ಬೆಂಗಳೂರು ಅಭಿವೃದ್ಧಿಗೆ ನಾವೂ ದುಡಿಯುತ್ತೇವೆ ಎಂಬ ಘೋಷಣೆ ಮಾಡುತ್ತ, ಕಾರ್ಪರೇಟ್ ಸಂಸ್ಥೆಗಳ ಮತ್ತು ಅವುಗಳ ಸಂಸ್ಕೃತಿ ರಕ್ಷಣೆಗಾಗಿಯೇ ಪಣ ತೊಟ್ಟ ಆ ಪ್ಯಾಕು ಈ ಪ್ಯಾಕು ಸಂಘಟನೆಗಳೂ ಇವೆ. ಕನ್ನಡಿಗರ ಆಚರಣೆಗಳಿಗೆ ಮೂಗು ಮುರಿದರೂ ರಾತ್ರಿ ನೈಟ್ ಲೈಫ್‌ಗೆ ಮಾತ್ರ ತೊಂದರೆಯಾಗಬಾರದು, ಇಡೀ ರಾತ್ರಿ ಪಬ್ಬು-ಬಾರು-ಡಿಸ್ಕೋಥೆಕ್‌ಗಳು ತೆರೆದಿರಬೇಕು ಎಂದು ವಾದಿಸುವ ಕಾರ್ಪರೇಟ್ ಸಂಸ್ಕೃತಿಯ ವಾರಸುದಾರರೂ ಇಲ್ಲಿದ್ದಾರೆ. ಹೀಗಾಗಿ ಬೆಂಗಳೂರನ್ನು ಕನ್ನಡಿಗರಿಂದ ಕಿತ್ತುಕೊಳ್ಳಲು ಯತ್ನಿಸುತ್ತಿರುವ ಈ ಮಾರುವೇಷದ ಸಂಘಟನೆಗಳಿಗೆ ಪೊಲೀಸರು ಮಾರುಹೋಗಿದ್ದರಾ ಎಂಬುದಾದರೂ ನಮಗೆ ಗೊತ್ತಾಗಬೇಕಿದೆ.

ಬೆಂಗಳೂರಿನಲ್ಲಿ ಕನ್ನಡದ ವಾತಾವರಣಕ್ಕೆ ಅನಿಯಂತ್ರಿತ ವಲಸೆಯಿಂದಾಗಿ ಧಕ್ಕೆಯಾಗುತ್ತಿದೆ. ವಲಸೆಯನ್ನು ಸಂವಿಧಾನಬದ್ಧವಾಗಿ ನಿಯಂತ್ರಿಸುವುದು ಕಷ್ಟ. ನಾವು ಭಾರತ ಒಕ್ಕೂಟದ ಭಾಗವಾಗಿದ್ದೇವೆ ಎಂಬ ಕಾರಣಕ್ಕೆ ಈ ವಲಸೆಯನ್ನೂ ಸಹಿಸಿಕೊಳ್ಳಬೇಕಾಗಿ ಬಂದಿದೆ. ಕಡೇ ಪಕ್ಷ ಹೊರರಾಜ್ಯಗಳಿಂದ ಬಂದವರು ಇಲ್ಲಿನ ಭಾಷೆಯನ್ನು ಕಲಿತು, ಇಲ್ಲಿನ ಸಂಸ್ಕೃತಿಯನ್ನು ಗೌರವಿಸಬೇಕು. ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ವಲಸೆ ಹೋದ ಕನ್ನಡಿಗರು ಅಲ್ಲಿನ ಭಾಷೆಗಳನ್ನು ಕಲಿತು, ಅಲ್ಲಿನ ಸಂಸ್ಕೃತಿಯನ್ನು ಒಪ್ಪಿಕೊಂಡು ಅಲ್ಲಿಯವರೇ ಆಗಿಹೋಗಿದ್ದಾರೆ. ಹೀಗಿರುವಾಗ ಕರ್ನಾಟಕಕ್ಕೆ ಬರುವ ವಲಸಿಗರೂ ಕೂಡ ಇಲ್ಲಿನ ನುಡಿ-ಸಂಸ್ಕೃತಿಯನ್ನು ಗೌರವಿಸಲೇಬೇಕಲ್ಲವೇ? ಹೀಗಿರುವಾಗ ನವೆಂಬರ್ ತಿಂಗಳಲ್ಲಿ ನಡೆಯುವ ರಾಜ್ಯೋತ್ಸವ ತಕ್ಕಮಟ್ಟಿಗೆ ಬೆಂಗಳೂರಿನಲ್ಲಿ ಕನ್ನಡದ ವಾತಾವರಣವನ್ನು ನಿರ್ಮಿಸುವ ಕೆಲಸ ಮಾಡುತ್ತದೆ. ನಮ್ಮ ಸಂಭ್ರಮದ ಜತೆಗೆ ಪರಭಾಷಿಗರಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವೂ ಆಗುತ್ತದೆ. ಕನ್ನಡಿಗರ ಸಂಭ್ರಮವನ್ನು ನೋಡಿ ಸಹಿಸಿಕೊಳ್ಳಲು ಆಗದ ವಲಸಿಗರ ಕುತಂತ್ರಗಳು ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಪೊಲೀಸ್ ಇಲಾಖೆಗೆ ದೂರು ಕೊಟ್ಟವರೂ ಇಂಥವರೇ ಇರಬೇಕು.

ಹಿಂದೆ ೨೦೦೯ರಲ್ಲಿ ತಲೆ ಕೆಟ್ಟ ಅಧಿಕಾರಿಗಳ ಮಾತು ಕೇಳಿಕೊಂಡು ಸರ್ಕಾರಿ ಕಚೇರಿಗಳ ಮೇಲೆ ಕನ್ನಡ ಬಾವುಟ ಹಾರಿಸುವಂತಿಲ್ಲ ಎಂಬ ಆದೇಶವೊಂದನ್ನು ರಾಜ್ಯ ಸರ್ಕಾರ ಹೊರಡಿಸಿತ್ತು.  ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಯಾವುದೇ ಬಾವುಟವನ್ನು ಹಾರಿಸಬಾರದು ಎಂಬುದು ಕೇಂದ್ರ ಸರ್ಕಾರದ ನಿಯಮ. ಹಾಗೆಂದು ಬೇರೆ ಧ್ವಜಗಳನ್ನು ಹಾರಿಸಲೇಬಾರದು ಎಂದರೆ ಹೇಗೆ? ಸರ್ಕಾರದ ಈ ಆದೇಶದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಇತರ ಕನ್ನಡ ಸಂಘಟನೆಗಳು ತೀವ್ರವಾಗಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಆ ಆದೇಶವನ್ನು ಹಿಂದಕ್ಕೆ ಪಡೆಯಿತು. ಇದಾದ ನಂತರ ೨೦೧೨ರಲ್ಲಿ ರಾಜ್ಯ ಉಚ್ಛ ನ್ಯಾಯಾಲಯವೂ ಕೂಡ ಕನ್ನಡ ಧ್ವಜಕ್ಕೆ ಅಧಿಕೃತ ಮಾನ್ಯತೆ ಇಲ್ಲದೇ ಇರುವುದರಿಂದ ಅದನ್ನು ಹಾರಿಸುವಂತಿಲ್ಲ ಎಂದು ಆದೇಶ ನೀಡಿತ್ತು.

ಇದೆಲ್ಲವೂ ಏನನ್ನು ಸೂಚಿಸುತ್ತದೆ? ಭಾರತ ಒಕ್ಕೂಟದಲ್ಲಿ ಕರ್ನಾಟಕವು ಒಂದು ರಾಜ್ಯವಾಗಿ ಸೇರಿಕೊಂಡಿದ್ದೇ ದೊಡ್ಡ ತಪ್ಪಾಗಿ ಹೋಯಿತೆ? ಸ್ವಾತಂತ್ರ್ಯಾನಂತರ ಕರ್ನಾಟಕವೇ ಪ್ರತ್ಯೇಕ ರಾಷ್ಟ್ರವಾಗಿ ಉಳಿದುಕೊಳ್ಳಬೇಕಿತ್ತೇ? ನಮ್ಮ ನಾಡಿಗೊಂದು ಬಾವುಟ, ಅದಕ್ಕೊಂದು ಆಚರಣೆ ಇಲ್ಲವೆಂದಮೇಲೆ ಆತ್ಮಗೌರವವನ್ನು ಕಳೆದುಕೊಂಡು ನಾವು ಈ ಒಕ್ಕೂಟದ ಭಾಗವಾಗಿ ಇರಬೇಕೆ?

ನಾವು ಭಾರತ ಒಕ್ಕೂಟದ ಒಂದು ಭಾಗವಾಗಿದ್ದೇವೆ ಎಂಬುದು ನಿಜ. ಹಾಗೆಂದ ಮಾತ್ರಕ್ಕೆ ನಮ್ಮ ನುಡಿ, ಸಂಸ್ಕೃತಿ, ಪರಂಪರೆ, ಆಚರಣೆ, ಅಸ್ಮಿತೆ ಎಲ್ಲವನ್ನೂ ಕಳೆದುಕೊಂಡು ಬದುಕಬೇಕೆ? ಈ ನಾಡಿನ ಒಬ್ಬ ಸಣ್ಣ ಮಗುವಿಗೂ ಕನ್ನಡ ಬಾವುಟದ ಪರಿಚಯವಿದೆ. ಹಾಗಿರುವಾಗ ಬಾವುಟಕ್ಕೆ ಮಾನ್ಯತೆ ಇಲ್ಲ, ಯಾರೂ ಹಾರಿಸುವಂತಿಲ್ಲ ಎಂದು ಎಸಿ ಕೊಠಡಿಗಳಲ್ಲಿ ಕುಳಿತುಕೊಂಡ ಯಾವುದೋ ರಾಜ್ಯದಿಂದ ಬಂದ ನ್ಯಾಯಾಧೀಶರುಗಳು ಅಪ್ಪಣೆ ಹೊರಡಿಸಿದರೆ ಅದನ್ನು ನಾವು ಪರಿಪಾಲಿಸಬೇಕೆ?

ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರ ರಾಜ್ಯಗಳ ಅಧಿಕಾರಿಗಳು, ಉದ್ಯಮಿಗಳು, ಎಲ್ಲ ಕ್ಷೇತ್ರದವರು ಮೊದಲು ಕನ್ನಡ ಕಲಿಯಬೇಕು, ಕನ್ನಡದಲ್ಲಿ ಸಂವಹನ ನಡೆಸಬೇಕು, ಕನ್ನಡದಲ್ಲೇ ಆಡಳಿತ ನಡೆಸಬೇಕು. ಮಾತ್ರವಲ್ಲ, ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಗೌರವಿಸುವುದನ್ನು ಕಲಿಯಬೇಕು. ಇತರೆ ರಾಜ್ಯಗಳಿಂದ ಬರುವವರು ಸಹನಾಶೀಲರಾಗಿರಬೇಕು, ಈ ದೇಶದ ಬಹುತ್ವ ಸಂಸ್ಕೃತಿಯ ಕುರಿತು ಗೌರವ ಹೊಂದಿರುವವರಾಗಿರಬೇಕು. ಇನ್ನೊಂದು ರಾಜ್ಯದಲ್ಲಿ ಕೆಲಸ ಮಾಡುವಾಗ ಆ ರಾಜ್ಯದ ನುಡಿ-ಸಂಸ್ಕೃತಿಯನ್ನು ಅರಿತು, ಅಲ್ಲಿನ ಜನರ ಜತೆ ಭಾವನಾತ್ಮಕವಾಗಿಯೂ ಬೆಸೆದುಕೊಳ್ಳಬೇಕು. ಬೆಂಗಳೂರು ಪೊಲೀಸ್ ಕಮಿಷನರ್ ಮೇಘರಿಕ್ ಅವರೇನೋ ಆಗಿರುವ ಪ್ರಮಾದವನ್ನು ತಿದ್ದಿಕೊಂಡರು. ಆದರೆ ಹಲವು ದಪ್ಪಚರ್ಮದ ಪರಭಾಷಿಕ ಅಧಿಕಾರಿಗಳು ಈಗಲೂ ಕನ್ನಡ ನುಡಿ-ಸಂಸ್ಕೃತಿಯನ್ನು ಧಿಕ್ಕರಿಸಿ ಆಡಳಿತ ನಡೆಸುತ್ತಿದ್ದಾರೆ. ಇಂಥವರು ಬೇಗ ತಮ್ಮ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ಹೊರರಾಜ್ಯಗಳ ಅಧಿಕಾರಿಗಳನ್ನು ಅವರವರ ರಾಜ್ಯಗಳಿಗೇ ವಾಪಾಸ್ ಕಳಿಸಿ ಎಂಬ ಜನಾಂದೋಲನವನ್ನು ಹಮ್ಮಿಕೊಳ್ಳಬೇಕಾಗುತ್ತದೆ.

-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ