ಗಿರೀಶ್ ರಘುನಾಥ್ ಕಾರ್ನಾಡ್ ಮತ್ತೊಮ್ಮೆ ವಿವಾದದ ಕಿಡಿ ಹೊತ್ತಿಸಿದ್ದಾರೆ. ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನರ ಹೆಸರಿಡಬೇಕಿತ್ತು ಎಂದು ರಾಜ್ಯ ಸರ್ಕಾರ ಆಯೋಜಿಸಿದ್ದ ಟಿಪ್ಪು ಜಯಂತಿ ಆಚರಣೆಯಲ್ಲಿ ಹೇಳುವ ಮೂಲಕ ಅನಗತ್ಯವಾಗಿ ರಾಜ್ಯದಲ್ಲಿ ಕಲಹದ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ. ತನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಕಾರ್ನಾಡ್ ಹೇಳಿಕೆ ನೀಡಿದ್ದಾರೆ. ಆದರೆ ಪ್ರಾಜ್ಞರೆನಿಸಿಕೊಂಡವರು ಇಂಥ ಹೇಳಿಕೆಗಳನ್ನು ನೀಡುವ ಮುನ್ನ ಹತ್ತು ಬಾರಿ ಯೋಚಿಸಬೇಕಲ್ಲವೇ?
ಕಾರ್ನಾಡರು ಮಾತನಾಡಿದ್ದನ್ನು ನಾನು ಟಿವಿಯಲ್ಲಿ ನೋಡಿದೆ. ನಾಡಪ್ರಭು ಕೆಂಪೇಗೌಡರ ಕುರಿತು ಅವರಿಗೆ ಅದೇನೋ ಒಂದು ಬಗೆಯ ಅಸಹನೆ ಇದ್ದಂತೆ ಅನಿಸಿತು. ಕೆಂಪೇಗೌಡರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿಲ್ಲ. ಹೀಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಟಿಪ್ಪು ಸುಲ್ತಾನರ ಹೆಸರೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡಬೇಕಿತ್ತು ಎಂದರು ಅವರು. ಕಾರ್ನಾಡ್ ಬಹುಭಾಷಾ ಪಂಡಿತರು. ಹಲವಾರು ದೇಶಗಳನ್ನು ಸುತ್ತಿ ಬಂದವರು. ದೇಶದಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರುಗಳಲ್ಲೂ ವಿಮಾನ ನಿಲ್ದಾಣಗಳಿವೆ. ಅವರು ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಯಾವುದೇ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರರ ಹೆಸರೇ ಇಡಬೇಕು ಎಂಬ ಕಾನೂನೇನಾದರೂ ಇದೆಯೇ?
ಸಣ್ಣ ಮಕ್ಕಳಿಗೂ ಅರ್ಥವಾಗದ ವಿಷಯ ಕಾರ್ನಾಡರಿಗೇಕೆ ಅರ್ಥವಾಗಲಿಲ್ಲ. ಕೆಂಪೇಗೌಡರು ಬದುಕಿದ್ದ ಕಾಲಘಟ್ಟವಾದರೂ ಯಾವುದು? ೧೫೧೦ರಿಂದ ೧೫೬೯. ಈ ಸಮಯದಲ್ಲಿ ಯಾವ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿತ್ತು? ಇಷ್ಟು ಸಣ್ಣ ಸಾಮಾನ್ಯ ಜ್ಞಾನವೂ ಕಾರ್ನಾಡರಿಗೆ ಇಲ್ಲವಾಗಿ ಹೋಯಿತೆ? ಟಿಪ್ಪು ಸುಲ್ತಾನರು ಬದುಕಿದ್ದು ೧೭೫೦ರಿಂದ ೧೭೯೯ರವರೆಗೆ. ಇಬ್ಬರ ಕಾಲಘಟ್ಟವೂ ಬೇರೆ ಬೇರೆ. ಹೀಗಿರುವಾಗ ಇಬ್ಬರನ್ನೂ ಹೋಲಿಸಿ ಮಾತನಾಡುವ ಅಗತ್ಯವಾದರೂ ಏನಿತ್ತು?
ಅದರಲ್ಲೂ ಈ ವಿಷಯವನ್ನು ಗಿರೀಶ್ ಕಾರ್ನಾಡರು ಪ್ರಸ್ತಾಪಿಸಿದ ಸಮಯವಾದರೂ ಯಾವುದು? ಟಿಪ್ಪು ಸುಲ್ತಾನರ ಜಯಂತಿ ಆಚರಣೆ ವಿಷಯದಲ್ಲಿ ದೊಡ್ಡ ವಿವಾದವೇ ಎದ್ದು ಎಲ್ಲೆಡೆ ದ್ವೇಷದ ವಾತಾವರಣವೇ ಕಂಡು ಬಂದಿತ್ತು. ಟಿಪ್ಪು ಜಯಂತಿ ಸಂದರ್ಭದಲ್ಲೇ ಕೆಲ ಸಂಘಟನೆಗಳು ಬಂದ್, ಪ್ರತಿಭಟನೆ ಇತ್ಯಾದಿಗಳನ್ನು ಹಮ್ಮಿಕೊಂಡಿದ್ದರಿಂದ ಎಲ್ಲಿ ಯಾವ ಅನಾಹುತವಾಗುವುದೋ ಎಂಬ ಆತಂಕದ ಸನ್ನಿವೇಶ ನಿರ್ಮಾಣವಾಗಿತ್ತು. ಇದು ಕಾರ್ನಾಡ್ ಅಂತ ಹಿರಿಯರಿಗೆ ಗೊತ್ತಿರದ ವಿಷಯವೇನೂ ಅಲ್ಲ. ಇಷ್ಟೆಲ್ಲ ಗೊತ್ತಿದ್ದರೂ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಬೇಕಿತ್ತು ಎಂದು ಹೇಳುವ ಹುನ್ನಾರವಾದರೂ ಏನು? ಇದು ಎರಡು ಸಮುದಾಯಗಳನ್ನು ಪರಸ್ಪರ ಎತ್ತಿಕಟ್ಟುವ ಉದ್ದೇಶವೆಂದೇ ಭಾವಿಸಬೇಕಾಗುತ್ತದೆಯಲ್ಲವೇ?
ಇವತ್ತು ಇಡೀ ದೇಶದಲ್ಲಿ ಎಲ್ಲ ಮಹಾಪುರುಷರಿಗೂ ಜಾತಿಯ ಲೇಪನವನ್ನು ಅಂಟಿಸಲಾಗಿದೆ. ಒಂದೊಂದು ಸಮುದಾಯ ಒಬ್ಬೊಬ್ಬ ಮಹಾತ್ಮರನ್ನು ಗುತ್ತಿಗೆ ಹಿಡಿದುಕೊಂಡಿದೆ. ದಲಿತರಿಗೆ ಅಂಬೇಡ್ಕರ್, ಲಿಂಗಾಯಿತರಿಗೆ ಬಸವಣ್ಣ, ಒಕ್ಕಲಿಗರಿಗೆ ಕೆಂಪೇಗೌಡ, ಬ್ರಾಹ್ಮಣರಿಗೆ ಶಂಕರಾಚಾರ್ಯ, ಕುರುಬರಿಗೆ ಕನಕದಾಸ, ಬೇಡರಿಗೆ ವಾಲ್ಮೀಕಿ.. ಹೀಗೆ ಎಲ್ಲ ಮಹಾತ್ಮರನ್ನೂ ನಾವು ಜಾತಿಯಿಂದ ಕಟ್ಟಿಹಾಕಿದ್ದೇವೆ. ಇಂಥ ವಿಷಮ ಸನ್ನಿವೇಶದಲ್ಲಿ ಬದುಕುತ್ತಿರುವ ಸಂದರ್ಭದಲ್ಲಿ ಕಾರ್ನಾಡರಿಗೆ ತಮ್ಮ ಹೇಳಿಕೆ ಯಾವ ಸ್ವರೂಪ ಪಡೆಯುತ್ತದೆ ಎಂಬ ಅರಿವಿರಬೇಕಿತ್ತು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ಇಡಬೇಕು ಎಂಬ ಹೋರಾಟದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯೇ ಮುಂಚೂಣಿಯಲ್ಲಿ ಗುರುತಿಸಿಕೊಂಡಿತ್ತು. ಈ ಚಳವಳಿಯನ್ನು ಗುರಿ ತಲುಪುವವರೆಗೆ ಮುಂದುವರೆಸಿಕೊಂಡು ಹೋದ ಹೆಮ್ಮೆ ನಮ್ಮದು. ಇದೇ ರೀತಿ ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣಗಳಿಗೆ ಇತಿಹಾಸ ಪ್ರಸಿದ್ಧ ಕನ್ನಡದ ಹೆಮ್ಮೆಯ ದಿಗ್ಗಜರ ಹೆಸರಿಡಬೇಕು ಎಂಬ ಬೇಡಿಕೆಯನ್ನೂ ಕರ್ನಾಟಕ ರಕ್ಷಣಾ ವೇದಿಕೆ ಇಡುತ್ತಲೇ ಬಂದಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಸರಿಡುವ ವಿಷಯ ಬಂದಾಗ ಹಲವಾರು ಸಂಘಟನೆಗಳು ಹಲವಾರು ಹೆಸರುಗಳನ್ನು ಸೂಚಿಸಿದ್ದವು. ಡಾ. ಬಿ.ಆರ್. ಅಂಬೇಡ್ಕರ್, ಬಸವೇಶ್ವರ, ಸರ್.ಎಂ.ವಿಶ್ವೇಶ್ವರಯ್ಯ ಮತ್ತು ಟಿಪ್ಪು ಸುಲ್ತಾನರ ಹೆಸರುಗಳೂ ಕೇಳಿಬಂದಿದ್ದವು. ಈ ಕಾರಣಕ್ಕೆ ಬಸವಣ್ಣನವರನ್ನೂ ಅಂಬೇಡ್ಕರ್ ರವರನ್ನೂ ಕಾರ್ನಾಡರು ಹೋಲಿಸಿ ಮಾತನಾಡಲು ಸಾಧ್ಯವೇ? ಇಬ್ಬರಲ್ಲಿ ಯಾರು ಸೂಕ್ತ ಎಂದು ಅವರು ಸಾರ್ವಜನಿಕವಾಗಿ ಹೇಳಬಲ್ಲರೇ? ಹೇಳುವುದು ತರವೇ? ಒಬ್ಬೊಬ್ಬರು ಒಂದು ಕಾಲಘಟ್ಟದಲ್ಲಿ ಬದುಕಿರುತ್ತಾರೆ. ಒಂದೊಂದು ಬಗೆಯಲ್ಲಿ ಈ ಸಮಾಜವನ್ನು ಪೊರೆದಿರುತ್ತಾರೆ. ಒಮ್ಮೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ಇಟ್ಟ ನಂತರ ಆ ವಿಷಯದಲ್ಲಿ ಮಾತನಾಡಲು ಇನ್ನೇನಿದೆ? ಯಾಕಾಗಿ ಕಾರ್ನಾಡರು ತಮ್ಮ ಹಳಹಳಿಕೆಯನ್ನು ಪ್ರದರ್ಶಿಸಿದರು. ಟಿಪ್ಪು ಅಭಿಮಾನಿಗಳನೇಕರು ಚಪ್ಪಾಳೆ ಹೊಡೆಯುತ್ತಾರೆ ಎಂದೇ? ಹಾಗಿದ್ದರೆ ಕೆಂಪೇಗೌಡರ ಅಭಿಮಾನಿಗಳೇನು ಮಾಡಬೇಕು?

ಹಾಗೆ ನೋಡಿದರೇ ಕೆಂಪೇಗೌಡರದ್ದು ನಿಜವಾದ ಜಾತ್ಯತೀತ ವ್ಯಕ್ತಿತ್ವ. ಆ ಕಾಲಘಟ್ಟದಲ್ಲಿ ಕುಲಕಸುಬುಗಳನ್ನು ನೆಚ್ಚಿಕೊಂಡಿದ್ದ ಎಲ್ಲ ಜಾತಿ, ಸಮುದಾಯದವರಿಗೆ ಒಂದೊಂದು ಪೇಟೆಗಳನ್ನು ಮಾಡಿದವರು ಕೆಂಪೇಗೌಡರು. ಒಟ್ಟು ಐವತ್ತಾಲ್ಕು ಪೇಟೆಗಳನ್ನು ಸೃಷ್ಟಿಸಿದ್ದ ಕೆಂಪೇಗೌಡರು ಎಲ್ಲ ಸಮುದಾಯದವರು ಗೌರವದಿಂದ ಸಹಬಾಳ್ವೆಯಿಂದ ಬದುಕುವ ವ್ಯವಸ್ಥೆ ಕಲ್ಪಿಸಿದ್ದರು.
ವಿಜಯನಗರ ಅರಸರ ಸಾಮಂತರಾಗಿದ್ದ ಕೆಂಪೇಗೌಡರು, ೧೫೩೭ರಲ್ಲಿ ಬೆಂಗಳೂರು ನಿರ್ಮಾಣ ಕಾರ್ಯವನ್ನು ಆರಂಭಿಸಿದರು. ಮೂಲತಃ ಕೃಷಿಕ ಕುಟುಂಬದಿಂದ ಬಂದವರಾದ ಕೆಂಪೇಗೌಡರು ಹೊನ್ನಾರು ಕಟ್ಟುವ ಆಚರಣೆಯೊಂದಿಗೆ ರಾಜಧಾನಿಯ ನಿರ್ಮಾಣ ಕಾರ್ಯ ಆರಂಭಿಸಿದರು. ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪ್ರಮುಖ ಪ್ರವೇಶದ್ವಾರಗಳನ್ನು ನಿರ್ಮಿಸಲು ತೀರ್ಮಾನಿಸಿದರು. ಹೆಬ್ಬಾಗಿಲು ಈಗಿನ ವಿಕ್ಟೋರಿಯಾ ಆಸ್ಪತ್ರೆಯ ಬಳಿಯ ಕೋಟೆಯಲ್ಲಿತ್ತು. ರಾಜಧಾನಿಗೆ ನವದ್ವಾರಗಳಿರಬೇಕು, ಕೆರೆಗಳು ಸದಾ ಕಾಲ ನೀರಿನಿಂದ ತುಂಬಿರಬೇಕೆಂಬುದು ಗೌಡರ ಆಶಯವಾಗಿತ್ತು. ಹೀಗಾಗಿ ಪೂರ್ವದಲ್ಲಿ ಹಲಸೂರು ದ್ವಾರ, ಪಶ್ಚಿಮಕ್ಕೆ ಸೊಂಡೆಕೊಪ್ಪದ ದ್ವಾರ, ಉತ್ತರಕ್ಕೆ ಯಲಹಂಕದ ದ್ವಾರ, ದಕ್ಷಿಣಕ್ಕೆ ಆನೆಕಲ್ ದ್ವಾರಗಳನ್ನು ನಿರ್ಮಿಸಲಾಯಿತು. ವರ್ತೂರು, ಸರ್ಜಾಪುರ, ಕೆಂಗೇರಿ, ಯಶವಂತಪುರ, ಕಾನಕಾನಹಳ್ಳಿ (ಕನಕಪುರ)ಗಳಲ್ಲಿ ಕಿರು ದ್ವಾರಗಳನ್ನು ನಿರ್ಮಿಸಲಾಯಿತು. ಈಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವ ದೇವನಹಳ್ಳಿ ಭಾಗದಲ್ಲಿ ಕೆಂಪೇಗೌಡರು ಮದ್ದುಗುಂಡುಗಳ ದಾಸ್ತಾನು ಕೇಂದ್ರವನ್ನು ಇಟ್ಟುಕೊಂಡಿದ್ದರು. ಯಾವುದೇ ಒಬ್ಬ ಸಾಮಂತ ರಾಜ ಇಷ್ಟು ವಿಶಾಲವಾದ ನಗರವನ್ನು ಕಟ್ಟುವುದು ಆ ಕಾಲದಲ್ಲಿ ದುಸ್ಸಾಧ್ಯವಾಗಿದ್ದರೂ ಸಹ ಕೆಂಪೇಗೌಡರು ಈ ಕಾರ್ಯಕ್ಕೆ ಕೈ ಹಾಕಿದರು. ಇದಕ್ಕೆ ವಿಜಯನಗರದ ಅರಸರ ಬೆಂಬಲವೂ ಇತ್ತು ಮತ್ತು ಹಣಕಾಸಿನ ನೆರವೂ ಸಿಕ್ಕಿತ್ತು.
ತಮ್ಮ ಸರ್ವಸ್ವವನ್ನೂ ಪಣವಾಗಿಟ್ಟು ಕೆಂಪೇಗೌಡರು ಈ ನಗರವನ್ನು ಕಟ್ಟಿದರು. ಇವತ್ತು ಬೆಂಗಳೂರಿಗೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿರಬಹುದು. ಜ್ಞಾನನಗರಿ, ಸಿಲಿಕಾನ್ ಸಿಟಿ, ಉದ್ಯಾನ ನಗರ ಇತ್ಯಾದಿ ಹೆಸರುಗಳು ಸಿಕ್ಕಿರಬಹುದು. ಆದರೆ ಇದೆಲ್ಲದಕ್ಕೂ ಮೂಲ ಕಾರಣಪುರುಷ ನಾಡಪ್ರಭು ಕೆಂಪೇಗೌಡರು ಎಂಬುದನ್ನು ನಾವು ಮರೆಯುವಂತಿಲ್ಲ. ಈ ಹಿನ್ನೆಲೆಯಿಂದಲೇ ನಾವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನೇ ಇಡಬೇಕು ಎಂಬ ಚಳವಳಿಯನ್ನು ಹಮ್ಮಿಕೊಂಡಿದ್ದೆವು.
ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ಇಡುವ ವಿಷಯಕ್ಕೆ ಕಳೆದ ವಿಧಾನಸಭೆಯ ಎಲ್ಲ ಶಾಸಕರು ಬೆಂಬಲಿಸಿದರು. ಸಚಿವ ಸಂಪುಟ ಸಭೆಯಲ್ಲಿ ಒಮ್ಮತದ ಒಪ್ಪಿಗೆಯೂ ದೊರೆಯಿತು. ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೂ ಕಳುಹಿಸಲಾಯಿತು. ಕೇಂದ್ರ ಸಚಿವ ಸಂಪುಟವೂ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿತು. ಹೀಗಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ಇಡಲಾಯಿತು. ಹೀಗಿರುವಾಗ ಗಿರೀಶ್ ಕಾರ್ನಾಡರು ಸರ್ಕಾರಿ ಕಾರ್ಯಕ್ರಮದಲ್ಲೇ ಇಂಥ ಅವಿವೇಕದ ಹೇಳಿಕೆಯನ್ನೇಕೆ ನೀಡುತ್ತಾರೆ? ಕಾರ್ನಾಡರು ಹೀಗೆ ಮಾತನಾಡುವಾಗ ವೇದಿಕೆಯಲ್ಲೇ ಇದ್ದ ಮುಖ್ಯಮಂತ್ರಿಗಳಾಗಲೀ, ಮಂತ್ರಿಗಳಾಗಲೀ, ಸಾಹಿತಿಗಳಾಗಲಿ ಯಾಕೆ ವಿರೋಧ ಮಾಡಲಿಲ್ಲ? ಅದೆಲ್ಲ ಹೋಗಲಿ, ಈ ವೇದಿಕೆಯಲ್ಲಿ ಓರ್ವ ಕನ್ನಡ ಚಳವಳಿಗಾರರೂ ಹಾಜರಿದ್ದರು. ಅವರಾದರೂ ಸ್ಥಳದಲ್ಲೇ ಕಾರ್ನಾಡರ ಹೇಳಿಕೆಯನ್ನು ಖಂಡಿಸಿ ಯಾಕೆ ಮಾತನಾಡಲಿಲ್ಲ?
ಇವತ್ತು ಸಮಾಜದಲ್ಲಿ ಅಸಹಿಷ್ಣುತೆ, ಅಶಾಂತಿ ಹೆಚ್ಚುತ್ತಲೇ ಇದೆ. ಇದರ ಪರಿಣಾಮವನ್ನು ಸಾಮಾನ್ಯ ನಾಗರಿಕರು ಉಣ್ಣುವಂತಾಗಿದೆ. ಭಯೋತ್ಪಾದನೆ ಎಂದರೆ ಕೇವಲ ಬಂದೂಕು ಹಿಡಿದು, ಬಾಂಬು ಸಿಡಿಸಿದರೆ ಮಾತ್ರ ಎಂದು ಭಾವಿಸಬೇಕಿಲ್ಲ. ಸಮಾಜದ ಸ್ವಾಸ್ಥ್ಯ ಕದಡುವ ಹೇಳಿಕೆ ನೀಡುವುದೂ ಸಹ ಭಯೋತ್ಪಾದಕ ಚಟುವಟಿಕೆಯೇ ಆಗುತ್ತದೆ. ದಿನದ ಇಪ್ಪತ್ತ ನಾಲ್ಕುಗಂಟೆಗಳ ಮಾಧ್ಯಮ ಈಗ ಎಷ್ಟು ಬೆಳೆದಿದೆಯೆಂದರೆ ಸಮಾಜವನ್ನು ಅಲ್ಲೋಲ ಕಲ್ಲೋಲ ಮಾಡಲು ಒಂದು ಹನಿ ವಿಷದಂಥ ಹೇಳಿಕೆಗಳು ಸಾಕು ಎನ್ನುವಂತಾಗಿದೆ. ಮತಾಂಧ ಸಂಘಟನೆಗಳು ಈ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ಮಾಡುತ್ತ ಬಂದಿವೆ. ಇದೇ ರೀತಿಯ ಪ್ರಚೋದನೆಯನ್ನು ಗಿರೀಶ್ ಕಾರ್ನಾಡರಂಥ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳೂ ಮಾಡಿದರೆ ಈ ಸಮಾಜದ ಗತಿಯೇನು? ಇಂಥ ಪ್ರಚೋದನೆಗಳಿಂದ ನಾಡಿನಲ್ಲಿ ಅಶಾಂತಿ ಉಂಟಾದರೆ ಆಗುವ ಜೀವಹಾನಿಗೆ ಯಾರು ಹೊಣೆಯಾಗುತ್ತಾರೆ?
ಕಾರ್ನಾಡರಿಗೆ ನಿಜಕ್ಕೂ ತಮ್ಮ ತಪ್ಪಿನ ಅರಿವಾದಂತಿಲ್ಲ. ರಾಜ್ಯದ ಗೃಹ ಸಚಿವರು ಮಾತನಾಡಿದ ನಂತರ ಕ್ಷಮೆ ಯಾಚನೆಯ ಹೇಳಿಕೆಯನ್ನು ಅವರು ನೀಡಿದ್ದಾರೆ. ಸಮಾಜ ಇಂದು ಧರ್ಮ, ಜಾತಿಗಳ ಹೆಸರಲ್ಲಿ ಒಡೆದುಹೋಗಿದೆ. ಈ ವಾಸ್ತವವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆವೇಶದಲ್ಲಿ ಚಪ್ಪಾಳೆ ಗಿಟ್ಟಿಸಲು ಏನು ಬೇಕಾದರೂ ಮಾತನಾಡಬಹುದು ಎಂಬ ಕಾಲ ಇದಲ್ಲ. ಎಲ್ಲರಿಗೂ ಅದರಲ್ಲೂ ವಿಶೇಷವಾಗಿ ಸಾಹಿತಿಗಳಿಗೆ, ಬುದ್ಧಿಜೀವಿಗಳಿಗೆ ಹೆಚ್ಚಿನ ಜವಾಬ್ದಾರಿ ಇದೆ. ಅದನ್ನು ಕಾರ್ನಾಡರು ಇನ್ನಾದರೂ ಅರಿತುಕೊಳ್ಳುವಂತಾಗಲಿ.
-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
No comments:
Post a Comment