ಕನ್ನಡ ರಾಜ್ಯೋತ್ಸವದ ದಿನದಂದೇ ರಾಜ್ಯಪಾಲ ವಜುಭಾಯ್ ರೂಢಭಾಯ್ ವಾಲಾ ರಾಜಭವನದಲ್ಲಿ ಗುಜರಾತಿ ಉತ್ಸವ ನಡೆಸಿ, ಗುಜರಾತಿ ಸಮುದಾಯದ ಸಿರಿವಂತರಿಗೆ ಔತಣಕೂಟ ನಡೆಸಿದ್ದಾರೆ. ತನ್ನ ತಾಯ್ನೆಲವಾದ ಗುಜರಾತ್‌ನಿಂದ ವಲಸೆ ಬಂದಿರುವ ಸಮುದಾಯದ ಜನರನ್ನು ಕರೆದು ಔತಣ ನಡೆಸಲು ರಾಜ್ಯಪಾಲರು ಆಯ್ಕೆ ಮಾಡಿಕೊಂಡಿರುವ ದಿನವನ್ನು ಗಮನಿಸಿ. ರಾಜ್ಯಪಾಲರು ನವೆಂಬರ್ ಒಂದರಂದು ಕನ್ನಡ ನಾಡಿನ ಎಲ್ಲ ಕ್ಷೇತ್ರಗಳ ಗಣ್ಯರು, ಸಾಹಿತಿಗಳನ್ನು ಕರೆದು ಔತಣಕೂಟವನ್ನು ಏರ್ಪಡಿಸಿದ್ದರೆ ಅದಕ್ಕೆ ಒಂದು ಅರ್ಥವಿರುತ್ತಿತ್ತು. ಆದರೆ ಅದೇ ದಿನವೇ ಅವರು ಗುಜರಾತಿ ಉತ್ಸವ ನಡೆಸಿದರು. ತಾವು ನಿಂತ ನೆಲ, ಅದರ ಸಂಸ್ಕೃತಿ, ನುಡಿ, ಘನತೆ ಎಲ್ಲವನ್ನೂ ಮರೆತರು.
ರಾಜ್ಯಪಾಲರ ಹುದ್ದೆಗೆ ನಮ್ಮ ಸಂವಿಧಾನದಡಿಯಲ್ಲೇ ವಿಪರೀತ ಅನ್ನುವಷ್ಟು ಗೌರವ ನೀಡಲಾಗಿದೆ. ರಾಜ್ಯಪಾಲರನ್ನು ಕೇಂದ್ರ ಸರ್ಕಾರವೇ ರಾಷ್ಟ್ರಪತಿಗಳ ಮೂಲಕ ನೇಮಕ ಮಾಡುತ್ತದೆ. ತಾವು ರಾಜ್ಯಪಾಲರಾಗಿ ನೇಮಕಗೊಂಡ ರಾಜ್ಯದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗಗಳು ಸಂವಿಧಾನಬದ್ಧವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವ ಪ್ರಧಾನ ಹೊಣೆ ರಾಜ್ಯಪಾಲರದ್ದು. ಈ ರಾಜ್ಯಪಾಲರುಗಳು ಜನರಿಂದ ನೇರವಾಗಿ ಆಯ್ಕೆಯಾಗಿರುವುದಿಲ್ಲ. ಯಾವುದೇ ರಾಜ್ಯಕ್ಕೆ ರಾಜ್ಯಪಾಲರಾಗಿ ಹೋಗುವವರು ಆ ರಾಜ್ಯದ ಸಮಾಜ, ಸಂಸ್ಕೃತಿ, ನುಡಿಯನ್ನು ಅರಿತುಕೊಂಡು ಕಾರ್ಯನಿರ್ವಹಿಸುವಂತಾಗಬೇಕು. ಇದನ್ನೂ ಕೂಡ ಸಂವಿಧಾನದಲ್ಲೇ ಬರೆದಿರಬೇಕು ಎಂದೇನಿಲ್ಲ. ಅದು ಸಾಮಾನ್ಯ ಜ್ಞಾನ. ರೋಮ್ ನಲ್ಲಿದ್ದಾಗ ರೋಮನ್‌ನಂತೆ ಇರಬೇಕು ಎನ್ನುತ್ತದೆ ಆಧುನಿಕ ಗಾದೆ.
ಆದರೆ ದುರದೃಷ್ಟವಶಾತ್ ಕರ್ನಾಟಕಕ್ಕೆ ರಾಜ್ಯಪಾಲರಾಗಿ ಬಂದ ಹಲವರು ಕರ್ನಾಟಕದ ಅಸ್ಮಿತೆಯನ್ನು ಧಿಕ್ಕರಿಸಿ ನಮ್ಮ ಸ್ವಾಭಿಮಾನವನ್ನು ಕೆಣಕಿದರು. ಹಿಂದೆ ಇದ್ದ ಹಂಸರಾಜ್ ಭಾರದ್ವಾಜ್ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ನಾಡಗೀತೆಯನ್ನು ಹಾಡುತ್ತಿದ್ದಾಗ ಅದನ್ನು ಅರ್ಧಕ್ಕೆ ನಿಲ್ಲಿಸುವಂತೆ ಹೇಳಿ ರಾಷ್ಟ್ರಗೀತೆಯನ್ನು ಹಾಡುವಂತೆ ಹೇಳಿ ತಮ್ಮ ‘ರಾಷ್ಟ್ರಭಕ್ತಿ’ಯನ್ನು ಮೆರೆದಿದ್ದರು. ರಾಷ್ಟ್ರಭಕ್ತಿಯ ಹೆಸರಲ್ಲಿ ತಾನು ರಾಜ್ಯಪಾಲನಾಗಿರುವ ರಾಜ್ಯದ ಹಿರಿಮೆಯನ್ನು ಅಪಮಾನಿಸುತ್ತಿದ್ದೇನೆ ಎಂಬುದು ಅವರಿಗೆ ಗೊತ್ತಾಗಲೇ ಇಲ್ಲ. ಅದಾದ ನಂತರ ನ್ಯಾಯಮೂರ್ತಿಯೊಬ್ಬರು ಭಾರದ್ವಾಜ್ ಅವರಿಗೆ ಇಡೀ ನಾಡಗೀತೆಯ ಪಠ್ಯವನ್ನು ಅನುವಾದಿಸಿ ಅದರ ಮಹತ್ವವನ್ನು ತಿಳಿಹೇಳಿದ್ದರು. ನಾಡಗೀತೆಯ ಅರ್ಥವನ್ನು ತಿಳಿದುಕೊಂಡ ಭಾರದ್ವಾಜ್ ‘ಎಷ್ಟು ಅದ್ಭುತವಾದ ಸಾಲುಗಳು, ಇದನ್ನು ಬರೆದವರ ಮನೋಶ್ರೀಮಂತಿಕೆಗೆ ಬೆಲೆ ಕಟ್ಟಲಾಗದು’ ಎಂದು ಉದ್ಘರಿಸಿದ್ದರು. ನಾಡಗೀತೆ ಬರೆದ ಯುಗದ ಕವಿ ಕುವೆಂಪು ಅವರ ಕುರಿತು ಇಂಗ್ಲಿಷ್‌ನಲ್ಲಿ ಬರೆದಿರುವ ಪುಸ್ತಕಗಳನ್ನು ಓದಿ, ನನಗೆ ರವೀಂದ್ರನಾಥ ಠ್ಯಾಗೋರ್, ಕುವೆಂಪು ಬೇರೆಬೇರೆಯಾಗಿ ಕಾಣುವುದಿಲ್ಲ. ಇಬ್ಬರೂ ಅದ್ಭುತ ಕವಿಗಳು ಎಂದು ಹೇಳಿದ್ದರು.
೧೯೯೯ರಿಂದ ೨೦೦೨ರವರೆಗೆ ಕರ್ನಾಟಕದ ರಾಜ್ಯಪಾಲರಾಗಿದ್ದ ವಿ.ಎಸ್.ರಮಾದೇವಿ ಮೂಲತಃ ಆಂಧ್ರಪ್ರದೇಶದವರು. ಅವರು ಕರ್ನಾಟಕಕ್ಕೆ ರಾಜ್ಯಪಾಲರಾಗಿ ಬಂದಾಗ ಸಹಜವಾಗಿಯೇ ಕನ್ನಡ ನುಡಿ ಗೊತ್ತಿರಲಿಲ್ಲ. ಆದರೆ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದರು. ತಾನು ಕೆಲಸ ಮಾಡಬೇಕಿರುವ ರಾಜ್ಯದ ನಾಡು-ನುಡಿಗೆ ಸಲ್ಲಿಸಬೇಕಾದ ಗೌರವ ಏನೆಂಬುದು ಅವರಿಗೆ ಚೆನ್ನಾಗಿಯೇ ಗೊತ್ತಿತ್ತು. ಹೀಗೆ ಪ್ರಮಾಣವಚನ ಸ್ವೀಕಾರ ಮಾಡಿದ್ದು ತೋರಿಕೆಗಾಗಿ ಎಂದು ಯಾರಾದರೂ ಭಾವಿಸಿಬಿಡಬಹುದು. ಆದರೆ ರಮಾದೇವಿ ತಮ್ಮ ಕೆಲಸಕಾರ್ಯಗಳ ಮಧ್ಯೆ ಕನ್ನಡ ಕಲಿಯುವ ಕೆಲಸ ಆರಂಭಿಸಿದರು. ಅವರು ಎಷ್ಟು ಚೆನ್ನಾಗಿ ಕನ್ನಡ ಕಲಿತರೆಂದರೆ ಎಲ್ಲ ಕಡೆ ಕನ್ನಡದಲ್ಲೇ ಭಾಷಣ ಮಾಡಲು ತೊಡಗಿದರು.
ಈಗ ಮತ್ತೆ ವಜುಭಾಯ್ ವಾಲಾ ಅವರ ವಿಷಯಕ್ಕೆ ಬರುವುದಾದರೆ, ಅವರು ರಾಜ್ಯಪಾಲರಾಗಿ ಬಂದ ನಂತರ ತಾವು ಕಾರ್ಯನಿರ್ವಹಿಸುತ್ತಿರುವ ನಾಡು ಯಾವುದು ಎಂಬುದನ್ನೇ ಮರೆತಿದ್ದಾರೆ. ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಬೇಕಾಗಿ ಬಂದಾಗ ಅವರು ಆಯ್ಕೆ ಮಾಡಿಕೊಂಡಿದ್ದು ಹಿಂದಿ ನುಡಿಯನ್ನು. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯಪಾಲರೊಬ್ಬರ ಹಿಂದಿ ಭಾಷಣವನ್ನು ನಮ್ಮ ಜನಪ್ರತಿನಿಧಿಗಳು ಸೈರಿಸಿಕೊಂಡರು. ಯಾವುದೇ ರಾಜ್ಯದ ರಾಜ್ಯಪಾಲರು ಇಂಥ ಸಂದರ್ಭದಲ್ಲಿ ಆಯಾ ರಾಜ್ಯದ ನುಡಿಯನ್ನೇ ಆಯ್ಕೆ ಮಾಡಿಕೊಳ್ಳಬೇಕು. ಒಂದು ವೇಳೆ ಅವರಿಗೆ ಉಚ್ಛಾರಣೆಯ ಸಮಸ್ಯೆ ಇದ್ದರೆ, ಆಯಾ ರಾಜ್ಯದ ನುಡಿಯಲ್ಲಿ ಭಾಷಣ ಮಾಡುವುದು ಕಷ್ಟವಾದರೆ ಹೆಚ್ಚು ಜನರಿಗೆ ಅರ್ಥವಾಗುವ ಇಂಗ್ಲಿಷ್ ಭಾಷೆಯಲ್ಲಿ ಭಾಷಣ ಮಾಡಬಹುದು. ಇವೆರಡನ್ನೂ ಬಿಟ್ಟು ಹಿಂದಿ ನುಡಿಯಲ್ಲಿ ಭಾಷಣ ಮಾಡಿದ್ದರ ಉದ್ದೇಶವಾದರೂ ಏನು? ಎಸ್.ಎಂ.ಕೃಷ್ಣ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದರು. ಆಗ ಅವರು ಅಲ್ಲಿನ ವಿಧಾನಮಂಡಲ ಅಧಿವೇಶನವನ್ನು ಉದ್ದೇಶಿಸಿ ಕನ್ನಡದಲ್ಲಿ ಮಾತನಾಡಿದ್ದರೆ ಅಲ್ಲಿನವರು ಸಹಿಸಿಕೊಳ್ಳುತ್ತಿದ್ದರೇ? ಅಥವಾ ಮುಂದೆ ಕರ್ನಾಟಕದ ರಾಜಕಾರಣಿಯೊಬ್ಬರು ಗುಜರಾತ್‌ನ ರಾಜ್ಯಪಾಲರಾಗಿ, ಅವರು ಅಲ್ಲಿನ ವಿಧಾನಮಂಡಲ ಅಧಿವೇಶವನ್ನು ಉದ್ದೇಶಿಸಿ ಕನ್ನಡದಲ್ಲಿ ಮಾತನಾಡಿದರೆ ವಜುಬಾಯ್ ವಾಲಾ ಸಹಿಸಿಕೊಳ್ಳುವರೆ?
ಕರ್ನಾಟಕಕ್ಕೆ ಬರುವ ರಾಜ್ಯಪಾಲರು ಮೊದಲು ಮಾಡಬೇಕಾದ ಕೆಲಸವೇನೆಂದರೆ ಈ ನಾಡನ್ನು ಪ್ರೀತಿಸುವುದು. ಇಲ್ಲಿನ ನೆಲ, ಸಂಸ್ಕೃತಿ, ನುಡಿ, ಪರಂಪರೆ ಮತ್ತು ಜನರನ್ನು ಗೌರವಿಸುವುದು. ಇದನ್ನು ಮಾಡದೇ, ರಾಜಭವನವೆಂಬ ಕೋಟೆಯೊಳಗೆ ಕುಳಿತು ಎಲ್ಲ ಐಶಾರಾಮಿ ಸೌಲಭ್ಯಗಳನ್ನು ಪಡೆದು ತನ್ನದೇ ದರ್ಬಾರು ಸ್ಥಾಪಿಸಿದರೆ ಅದು ಸಂವಿಧಾನಕ್ಕೆ ಮಾಡುವ ಅಪಚಾರ. ಸಂವಿಧಾನದ ಪ್ರಕಾರವೇ ಭಾರತ ಒಕ್ಕೂಟವನ್ನು ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಿಸಲಾಗಿದೆ. ತನ್ನ ನುಡಿ, ಸಂಸ್ಕೃತಿಯನ್ನು ಬೆಳೆಸುವ, ಕಾಪಾಡಿಕೊಳ್ಳುವ ಹಕ್ಕನ್ನು ಎಲ್ಲ ರಾಜ್ಯಗಳಿಗೂ ಸಂವಿಧಾನವೇ ನೀಡಿದೆ. ಹೀಗಿರುವ ಸಂವಿಧಾನದ ಕಾವಲುಗಾರರಾಗಿ ಬರುವ ರಾಜ್ಯಪಾಲರು ಸಂವಿಧಾನದ ಮೂಲ ಆಶಯವನ್ನೇ ಧಿಕ್ಕರಿಸಿ ನಡೆದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.
ರಾಜ್ಯಪಾಲ ವಜುಭಾಯ್ ವಾಲಾ ರಾಜಭವನವನ್ನು ಕರ್ನಾಟಕದ ಜನತೆಗೆ ಮುಕ್ತವಾಗಿ ತೆರೆದಿಡಬೇಕು. ರಾಜಭವನವೆಂಬುದು ರಾಜ್ಯಪಾಲರಾಗಿ ಕಾರ್ಯನಿರ್ವಹಿಸುವವರ ಖಾಸಗಿ ಆಸ್ತಿಯಲ್ಲ. ಕೋಟ್ಯಂತರ ರುಪಾಯಿ ಕನ್ನಡಿಗರ ತೆರಿಗೆ ಹಣವನ್ನು ಖರ್ಚು ಮಾಡಿ ರಾಜಭವನವನ್ನು ನವೀಕರಣ ಮಾಡಿಕೊಂಡಿರುವ ವಾಲಾ ಅವರು ರಾಜಭವನವನ್ನು ಕನ್ನಡದ ಜನತೆಗೆ ತೆರೆದಿಡದಿದ್ದರೆ ಅದು ಯಾವ ಪುರುಷಾರ್ಥಕ್ಕೆ? ರಾಜ್ಯಪಾಲರು ಜನಸ್ನೇಹಿಯಾಗಿರಬೇಕು ಎಂದು ಭಾವಿಸಿದ್ದ ರಮಾದೇವಿಯವರು ಶ್ರೀಸಾಮಾನ್ಯರಿಗೂ ಮುಕ್ತವಾದ ಪ್ರವೇಶಾವಕಾಶ ಕಲ್ಪಿಸಿ, ಎಲ್ಲರ ಅಹವಾಲುಗಳನ್ನೂ ಕೇಳುತ್ತಿದ್ದರು. ಗಣರಾಜ್ಯೋತ್ಸವದಂದು ನಾಡಿನ ಹಿರಿಯ ಚೇತನಗಳನ್ನು ಕರೆದು ಗೌರವಿಸುತ್ತಿದ್ದರು. ಆದರೆ ವಜುಭಾಯ್ ವಾಲಾ ರಾಜಭವನವನ್ನು ಗುಜರಾತ್ ಭವನವನ್ನಾಗಿ ಮಾಡಿಕೊಂಡಿದ್ದಾರೆ. ತನ್ನ ಸಹಾಯಕರನ್ನಾಗಿ ಗುಜರಾತಿಗಳನ್ನೇ ನೇಮಕ ಮಾಡಿಕೊಂಡಿದ್ದಾರೆ. ಇವರ ಕಿವಿಗೆ ಕನ್ನಡ ನುಡಿಯೇ ಬೀಳದೇ ಹೋದರೆ ಕಲಿಯುವುದು ಎಲ್ಲಿಂದ? ಕನ್ನಡ ಕಲಿಯದೇ ಹೋದರೆ ಗೌರವಿಸುವುದು ಹೇಗೆ ಸಾಧ್ಯ? ಹೀಗಾಗಿ ಕನ್ನಡ ರಾಜ್ಯೋತ್ಸವದಂದೇ ಗುಜರಾತಿ ಉತ್ಸವ ನಡೆಸುವ ದುರಹಂಕಾರದ ಪ್ರದರ್ಶನವೂ ಆಗಿಹೋಗಿದೆ.
ವಜುಭಾಯ್ ವಾಲಾ ಅವರಿಗೆ ರಾಜ್ಯಪಾಲರಾಗಿ ಸಾವಿರ ಕೆಲಸಗಳಿರಬಹುದು. ಆದರೆ ಅದೆಲ್ಲಕ್ಕಿಂತ ಮುಖ್ಯವಾಗಿ ಅವರು ಈ ನಾಡು ನುಡಿಯ ಕುರಿತು ಒಂದಷ್ಟು ಕಲಿಯಬೇಕಿದೆ. ಅದಕ್ಕಾಗಿ ಒಂದಿಬ್ಬರು ಶಿಕ್ಷಕರನ್ನು ಅವರು ನೇಮಕ ಮಾಡಿಕೊಳ್ಳುವುದು ಒಳ್ಳೆಯದು. ಇದಕ್ಕಾಗಿ ಅವರು ನಮ್ಮ ತೆರಿಗೆ ಹಣವನ್ನೇ ಬಳಸಿಕೊಳ್ಳಲಿ, ನಮ್ಮ ತಕರಾರೇನೂ ಇರುವುದಿಲ್ಲ. ಗುಜರಾತಿ ಉತ್ಸವಕ್ಕೆ ಲಕ್ಷಾಂತರ ರುಪಾಯಿ ನಮ್ಮ ತೆರಿಗೆ ಹಣವೇ ಖರ್ಚಾಗುತ್ತಿರುವಾಗ ಕನ್ನಡ ಶಿಕ್ಷಕರಿಗೆ ನಮ್ಮ ತೆರಿಗೆ ಹಣದಲ್ಲೇ ಸಂಬಳ ಕೊಡಲಿ. ಮೊದಲು ಕನ್ನಡ ನಾಡು, ಅದರ ಇತಿಹಾಸ, ಪರಂಪರೆ, ಸಂಸ್ಕೃತಿ, ಸಾಹಿತ್ಯ ಎಲ್ಲದರ ಬಗ್ಗೆ ಅವರು ಕಲಿತುಕೊಳ್ಳಲಿ. ಪಂಪನಿಂದ ಹಿಡಿದು ಕುವೆಂಪುವರೆಗೆ ಕನ್ನಡದ ನುಡಿಪರಂಪರೆಯೂ ಅವರಿಗೆ ಗೊತ್ತಾಗಲಿ. ಇಲ್ಲಿನ ಶರಣರು, ದಾಸರು, ಸೂಫಿಗಳು, ಜನಪದರು ಎಲ್ಲರ ಕುರಿತು ಅವರು ಓದುವಂತಾಗಲಿ. ಇದೆಲ್ಲದಕ್ಕೆ ತುಂಬಾ ಸಮಯವೇನೂ ಬೇಕಾಗಿಲ್ಲ. ಆರು ತಿಂಗಳಲ್ಲಿ ಕನ್ನಡದಲ್ಲೇ ಮಾತನಾಡುವಷ್ಟು ಪ್ರೌಢಿಮೆಯನ್ನು ಅವರು ಪಡೆಯಬಹುದು.
ಕನ್ನಡ ಕಲಿತ ನಂತರ ವಜುಭಾಯ್ ವಾಲಾ ಅವರು ಕನ್ನಡಿಗರ ಜತೆ ಕನ್ನಡದಲ್ಲೇ ವ್ಯವಹರಿಸಲಿ, ರಾಜಭವನದಲ್ಲಿ ಕನ್ನಡವೇ ಮೊಳಗುವಂತೆ ನೋಡಿಕೊಳ್ಳಲಿ. ಸಂಸ್ಕೃತ, ಹಿಂದಿ ಭಾಷೆಗಳನ್ನು ಉತ್ತೇಜಿಸುವ ನೂರೆಂಟು ಕಾರ್ಯಕ್ರಮಗಳಿಗೆ ಹೋಗುವ ರಾಜ್ಯಪಾಲರು ಅದನ್ನು ಬಿಟ್ಟು ಕನ್ನಡದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿ. ಇತರೆ ಭಾಷೆಗಳನ್ನು ಉದ್ಧಾರ ಮಾಡಲು ಆ ಭಾಷೆಗಳಿಗೆ ಸಂಬಂಧಿಸಿದ ರಾಜ್ಯಗಳಿವೆ. ಆಯಾ ರಾಜ್ಯಗಳಲ್ಲಿ ಆ ಕೆಲಸ ನಡೆಯಲಿ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ನುಡಿ. ಕನ್ನಡದ ಹೊರತಾಗಿ ಇಲ್ಲಿ ಇನ್ಯಾವ ದೊಡ್ಡ ನುಡಿಯೂ ಇಲ್ಲ. ಇಲ್ಲಿ ವ್ಯವಹರಿಸುವ ಯಾರೇ ಆದರೂ ಕನ್ನಡವನ್ನೇ ಬಳಸಬೇಕು, ಕನ್ನಡಕ್ಕೇ ಗೌರವ ನೀಡಬೇಕು. ಸರ್ಕಾರಿ ಅಧಿಕಾರಿ, ನ್ಯಾಯಾಧೀಶ, ಉದ್ಯಮಿ, ಕಾರ್ಮಿಕರಿಂದ ಹಿಡಿದು ರಾಜ್ಯಪಾಲರವರೆಗೆ ಎಲ್ಲರಿಗೂ ಈ ಮಾತು ಅನ್ವಯವಾಗುತ್ತದೆ.
ನವೆಂಬರ್ ಒಂದರಂದು ರಾಜಭವನದಲ್ಲಿ ಗುಜರಾತಿ ಉತ್ಸವವನ್ನು ಏರ್ಪಡಿಸುವ ಮೂಲಕ ವಜುಭಾಯ್ ವಾಲಾ ಕೆಟ್ಟ ಪರಂಪರೆಯನ್ನು ಆರಂಭಿಸಿದ್ದಾರೆ. ಈ ಪ್ರಮಾದಕ್ಕಾಗಿ ಅವರು ಕನ್ನಡ ನಾಡಿನ ಜನತೆಯ ಕ್ಷಮೆ ಯಾಚಿಸಬೇಕು. ಇನ್ನೆಂದೂ ಇಂಥ ತಾಯಿದ್ರೋಹದ ಕೆಲಸವನ್ನು ಮಾಡುವುದಿಲ್ಲವೆಂದು ಅವರು ಪ್ರಮಾಣ ಮಾಡಬೇಕು. ತಾನು ಕೆಲಸ ಮಾಡುವ ನಾಡನ್ನು ಧಿಕ್ಕರಿಸುವುದೆಂದರೆ ಅದನ್ನು ತಾಯಿದ್ರೋಹವೆಂದೇ ಕರೆಯಬೇಕಾಗುತ್ತದೆ. ಮುಂದೆ ಎಂದೂ ಅವರಿಂದ ಇಂಥ ಪ್ರಮಾದಗಳು ನಡೆಯದೇ ಇರಲಿ.
ರಾಜಭವನವೆಂಬುದು ಸಂವಿಧಾನ ರಕ್ಷಣೆಯ ಕೇಂದ್ರವಾಗಬೇಕೇ ಹೊರತು, ಸಂವಿಧಾನವಿರೋಧಿಯಾಗಿ ಸ್ಥಳೀಯ ನುಡಿ ಸಂಸ್ಕೃತಿಯನ್ನು ಧಿಕ್ಕರಿಸುವ ಕೇಂದ್ರವಾಗಬಾರದು. ರಾಜಭವನವನ್ನು ಗುಜರಾತ್ ಭವನವನ್ನಾಗಿ ಮಾಡಲು ಕನ್ನಡಿಗರೆಂದಿಗೂ ಅವಕಾಶ ನೀಡಕೂಡದು. ಒಂದು ವೇಳೆ ಗುಜರಾತ್ ಸಂಸ್ಕೃತಿಯ ಕುರಿತು ವಾಲಾ ಅವರಿಗೆ ಅಷ್ಟೊಂದು ಮೋಹವಿದ್ದರೆ, ತಮ್ಮ ಸ್ವಂತ ಖರ್ಚಿನಲ್ಲಿ ಗುಜರಾತ್‌ನಲ್ಲೇ ಒಂದು ಭವನ ಕಟ್ಟಿಕೊಂಡು, ಅಲ್ಲಿ ಗುಜರಾತಿ ಉತ್ಸವಗಳನ್ನು ನಡೆಸಲಿ. ಕರ್ನಾಟಕದಲ್ಲಿರುವ ಗುಜರಾತಿಗಳ ಮೇಲೆ ಅಷ್ಟೊಂದು ಮಮಕಾರವಿದ್ದರೆ, ಗುಜರಾತ್‌ನಲ್ಲಿ ತಾವು ಕಟ್ಟುವ ಗುಜರಾತಿ ಭವನದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ದಿನನಿತ್ಯ ಉತ್ಸವಗಳನ್ನು ನಡೆಸಿ, ಅದಕ್ಕೆ ಕರ್ನಾಟಕದ ಗುಜರಾತಿಗಳನ್ನು ತಮ್ಮ ಖರ್ಚಿನಲ್ಲಿ ಕರೆಯಿಸಿಕೊಳ್ಳಲಿ. ಯಾರು ಬೇಡ ಎಂದವರು?
ಯಾವುದೇ ರಾಜ್ಯಪಾಲರಿಗೆ ಮೊದಲು ಇರಬೇಕಾದ ‘ಸಾಮಾನ್ಯ ಜ್ಞಾನ’ವೆಂದರೆ ಭಾರತ ಎಂಬುದೊಂದು ಒಕ್ಕೂಟ. ಭಾಷಾವಾರು ಪ್ರಾಂತ್ಯ ವಿಂಗಡಣೆಯಂತೆ ಇಲ್ಲಿ ರಾಜ್ಯಗಳಾಗಿವೆ. ಎಲ್ಲ ರಾಜ್ಯಗಳಿಗೂ ತನ್ನದೇ ಆದ ಇತಿಹಾಸ, ಪರಂಪರೆ, ಸಂಸ್ಕೃತಿ, ಅಸ್ಮಿತೆಗಳು ಇರುತ್ತವೆ. ಅವುಗಳನ್ನು ಕಾಪಾಡದೇ ಹೋದರೆ ಭಾರತ ಒಕ್ಕೂಟಕ್ಕೆ ಒಂದು ಅರ್ಥ ಉಳಿಯುವುದಿಲ್ಲ. ಅಷ್ಟೇ ಅಲ್ಲ, ಅದು ಹೆಚ್ಚು ಕಾಲ ಒಕ್ಕೂಟವಾಗಿ ಉಳಿಯುವುದೂ ಸಾಧ್ಯವಿಲ್ಲ. ಹೀಗಾಗಿ ಬೇರೆ ರಾಜ್ಯಗಳಿಂದ ಬಂದ ರಾಜ್ಯಪಾಲರು ಈ ಸಾಮಾನ್ಯ ಜ್ಞಾನವನ್ನು ಮೊದಲು ಕಲಿಯಬೇಕು. ಕಲಿಯಲು ಅವರಿಗೆ ಮನಸು ಇಲ್ಲದೇ ಹೋದಲ್ಲಿ ನಾವೇ ಅನಿವಾರ್ಯವಾಗಿ ಅದನ್ನು ಕಲಿಸಬೇಕಾಗುತ್ತದೆ. ಹಾಗೂ ಕಲಿಯದೇ ಹೋದರೆ ದಯವಿಟ್ಟು ನೀವು ಬಂದ ರಾಜ್ಯಕ್ಕೆ ಹಿಂದಕ್ಕೆ ಹೋಗಿ ಅಲ್ಲಿನ ಸಂಸ್ಕೃತಿಯ ರಾಯಭಾರಿಗಳಾಗಿ ನಿಮ್ಮ ಭವ್ಯಪರಂಪರೆಯನ್ನು ಮೆರೆಯಿರಿ ಎಂದು ಪ್ರೀತಿಯಿಂದ ಹೇಳಿ ಬೀಳ್ಕೊಡಬೇಕಾಗುತ್ತದೆ.
-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ
ರಾಜ್ಯಪಾಲರ ಹುದ್ದೆಗೆ ನಮ್ಮ ಸಂವಿಧಾನದಡಿಯಲ್ಲೇ ವಿಪರೀತ ಅನ್ನುವಷ್ಟು ಗೌರವ ನೀಡಲಾಗಿದೆ. ರಾಜ್ಯಪಾಲರನ್ನು ಕೇಂದ್ರ ಸರ್ಕಾರವೇ ರಾಷ್ಟ್ರಪತಿಗಳ ಮೂಲಕ ನೇಮಕ ಮಾಡುತ್ತದೆ. ತಾವು ರಾಜ್ಯಪಾಲರಾಗಿ ನೇಮಕಗೊಂಡ ರಾಜ್ಯದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗಗಳು ಸಂವಿಧಾನಬದ್ಧವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವ ಪ್ರಧಾನ ಹೊಣೆ ರಾಜ್ಯಪಾಲರದ್ದು. ಈ ರಾಜ್ಯಪಾಲರುಗಳು ಜನರಿಂದ ನೇರವಾಗಿ ಆಯ್ಕೆಯಾಗಿರುವುದಿಲ್ಲ. ಯಾವುದೇ ರಾಜ್ಯಕ್ಕೆ ರಾಜ್ಯಪಾಲರಾಗಿ ಹೋಗುವವರು ಆ ರಾಜ್ಯದ ಸಮಾಜ, ಸಂಸ್ಕೃತಿ, ನುಡಿಯನ್ನು ಅರಿತುಕೊಂಡು ಕಾರ್ಯನಿರ್ವಹಿಸುವಂತಾಗಬೇಕು. ಇದನ್ನೂ ಕೂಡ ಸಂವಿಧಾನದಲ್ಲೇ ಬರೆದಿರಬೇಕು ಎಂದೇನಿಲ್ಲ. ಅದು ಸಾಮಾನ್ಯ ಜ್ಞಾನ. ರೋಮ್ ನಲ್ಲಿದ್ದಾಗ ರೋಮನ್‌ನಂತೆ ಇರಬೇಕು ಎನ್ನುತ್ತದೆ ಆಧುನಿಕ ಗಾದೆ.
ಆದರೆ ದುರದೃಷ್ಟವಶಾತ್ ಕರ್ನಾಟಕಕ್ಕೆ ರಾಜ್ಯಪಾಲರಾಗಿ ಬಂದ ಹಲವರು ಕರ್ನಾಟಕದ ಅಸ್ಮಿತೆಯನ್ನು ಧಿಕ್ಕರಿಸಿ ನಮ್ಮ ಸ್ವಾಭಿಮಾನವನ್ನು ಕೆಣಕಿದರು. ಹಿಂದೆ ಇದ್ದ ಹಂಸರಾಜ್ ಭಾರದ್ವಾಜ್ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ನಾಡಗೀತೆಯನ್ನು ಹಾಡುತ್ತಿದ್ದಾಗ ಅದನ್ನು ಅರ್ಧಕ್ಕೆ ನಿಲ್ಲಿಸುವಂತೆ ಹೇಳಿ ರಾಷ್ಟ್ರಗೀತೆಯನ್ನು ಹಾಡುವಂತೆ ಹೇಳಿ ತಮ್ಮ ‘ರಾಷ್ಟ್ರಭಕ್ತಿ’ಯನ್ನು ಮೆರೆದಿದ್ದರು. ರಾಷ್ಟ್ರಭಕ್ತಿಯ ಹೆಸರಲ್ಲಿ ತಾನು ರಾಜ್ಯಪಾಲನಾಗಿರುವ ರಾಜ್ಯದ ಹಿರಿಮೆಯನ್ನು ಅಪಮಾನಿಸುತ್ತಿದ್ದೇನೆ ಎಂಬುದು ಅವರಿಗೆ ಗೊತ್ತಾಗಲೇ ಇಲ್ಲ. ಅದಾದ ನಂತರ ನ್ಯಾಯಮೂರ್ತಿಯೊಬ್ಬರು ಭಾರದ್ವಾಜ್ ಅವರಿಗೆ ಇಡೀ ನಾಡಗೀತೆಯ ಪಠ್ಯವನ್ನು ಅನುವಾದಿಸಿ ಅದರ ಮಹತ್ವವನ್ನು ತಿಳಿಹೇಳಿದ್ದರು. ನಾಡಗೀತೆಯ ಅರ್ಥವನ್ನು ತಿಳಿದುಕೊಂಡ ಭಾರದ್ವಾಜ್ ‘ಎಷ್ಟು ಅದ್ಭುತವಾದ ಸಾಲುಗಳು, ಇದನ್ನು ಬರೆದವರ ಮನೋಶ್ರೀಮಂತಿಕೆಗೆ ಬೆಲೆ ಕಟ್ಟಲಾಗದು’ ಎಂದು ಉದ್ಘರಿಸಿದ್ದರು. ನಾಡಗೀತೆ ಬರೆದ ಯುಗದ ಕವಿ ಕುವೆಂಪು ಅವರ ಕುರಿತು ಇಂಗ್ಲಿಷ್‌ನಲ್ಲಿ ಬರೆದಿರುವ ಪುಸ್ತಕಗಳನ್ನು ಓದಿ, ನನಗೆ ರವೀಂದ್ರನಾಥ ಠ್ಯಾಗೋರ್, ಕುವೆಂಪು ಬೇರೆಬೇರೆಯಾಗಿ ಕಾಣುವುದಿಲ್ಲ. ಇಬ್ಬರೂ ಅದ್ಭುತ ಕವಿಗಳು ಎಂದು ಹೇಳಿದ್ದರು.
೧೯೯೯ರಿಂದ ೨೦೦೨ರವರೆಗೆ ಕರ್ನಾಟಕದ ರಾಜ್ಯಪಾಲರಾಗಿದ್ದ ವಿ.ಎಸ್.ರಮಾದೇವಿ ಮೂಲತಃ ಆಂಧ್ರಪ್ರದೇಶದವರು. ಅವರು ಕರ್ನಾಟಕಕ್ಕೆ ರಾಜ್ಯಪಾಲರಾಗಿ ಬಂದಾಗ ಸಹಜವಾಗಿಯೇ ಕನ್ನಡ ನುಡಿ ಗೊತ್ತಿರಲಿಲ್ಲ. ಆದರೆ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದರು. ತಾನು ಕೆಲಸ ಮಾಡಬೇಕಿರುವ ರಾಜ್ಯದ ನಾಡು-ನುಡಿಗೆ ಸಲ್ಲಿಸಬೇಕಾದ ಗೌರವ ಏನೆಂಬುದು ಅವರಿಗೆ ಚೆನ್ನಾಗಿಯೇ ಗೊತ್ತಿತ್ತು. ಹೀಗೆ ಪ್ರಮಾಣವಚನ ಸ್ವೀಕಾರ ಮಾಡಿದ್ದು ತೋರಿಕೆಗಾಗಿ ಎಂದು ಯಾರಾದರೂ ಭಾವಿಸಿಬಿಡಬಹುದು. ಆದರೆ ರಮಾದೇವಿ ತಮ್ಮ ಕೆಲಸಕಾರ್ಯಗಳ ಮಧ್ಯೆ ಕನ್ನಡ ಕಲಿಯುವ ಕೆಲಸ ಆರಂಭಿಸಿದರು. ಅವರು ಎಷ್ಟು ಚೆನ್ನಾಗಿ ಕನ್ನಡ ಕಲಿತರೆಂದರೆ ಎಲ್ಲ ಕಡೆ ಕನ್ನಡದಲ್ಲೇ ಭಾಷಣ ಮಾಡಲು ತೊಡಗಿದರು.

ಕರ್ನಾಟಕಕ್ಕೆ ಬರುವ ರಾಜ್ಯಪಾಲರು ಮೊದಲು ಮಾಡಬೇಕಾದ ಕೆಲಸವೇನೆಂದರೆ ಈ ನಾಡನ್ನು ಪ್ರೀತಿಸುವುದು. ಇಲ್ಲಿನ ನೆಲ, ಸಂಸ್ಕೃತಿ, ನುಡಿ, ಪರಂಪರೆ ಮತ್ತು ಜನರನ್ನು ಗೌರವಿಸುವುದು. ಇದನ್ನು ಮಾಡದೇ, ರಾಜಭವನವೆಂಬ ಕೋಟೆಯೊಳಗೆ ಕುಳಿತು ಎಲ್ಲ ಐಶಾರಾಮಿ ಸೌಲಭ್ಯಗಳನ್ನು ಪಡೆದು ತನ್ನದೇ ದರ್ಬಾರು ಸ್ಥಾಪಿಸಿದರೆ ಅದು ಸಂವಿಧಾನಕ್ಕೆ ಮಾಡುವ ಅಪಚಾರ. ಸಂವಿಧಾನದ ಪ್ರಕಾರವೇ ಭಾರತ ಒಕ್ಕೂಟವನ್ನು ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಿಸಲಾಗಿದೆ. ತನ್ನ ನುಡಿ, ಸಂಸ್ಕೃತಿಯನ್ನು ಬೆಳೆಸುವ, ಕಾಪಾಡಿಕೊಳ್ಳುವ ಹಕ್ಕನ್ನು ಎಲ್ಲ ರಾಜ್ಯಗಳಿಗೂ ಸಂವಿಧಾನವೇ ನೀಡಿದೆ. ಹೀಗಿರುವ ಸಂವಿಧಾನದ ಕಾವಲುಗಾರರಾಗಿ ಬರುವ ರಾಜ್ಯಪಾಲರು ಸಂವಿಧಾನದ ಮೂಲ ಆಶಯವನ್ನೇ ಧಿಕ್ಕರಿಸಿ ನಡೆದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.
ರಾಜ್ಯಪಾಲ ವಜುಭಾಯ್ ವಾಲಾ ರಾಜಭವನವನ್ನು ಕರ್ನಾಟಕದ ಜನತೆಗೆ ಮುಕ್ತವಾಗಿ ತೆರೆದಿಡಬೇಕು. ರಾಜಭವನವೆಂಬುದು ರಾಜ್ಯಪಾಲರಾಗಿ ಕಾರ್ಯನಿರ್ವಹಿಸುವವರ ಖಾಸಗಿ ಆಸ್ತಿಯಲ್ಲ. ಕೋಟ್ಯಂತರ ರುಪಾಯಿ ಕನ್ನಡಿಗರ ತೆರಿಗೆ ಹಣವನ್ನು ಖರ್ಚು ಮಾಡಿ ರಾಜಭವನವನ್ನು ನವೀಕರಣ ಮಾಡಿಕೊಂಡಿರುವ ವಾಲಾ ಅವರು ರಾಜಭವನವನ್ನು ಕನ್ನಡದ ಜನತೆಗೆ ತೆರೆದಿಡದಿದ್ದರೆ ಅದು ಯಾವ ಪುರುಷಾರ್ಥಕ್ಕೆ? ರಾಜ್ಯಪಾಲರು ಜನಸ್ನೇಹಿಯಾಗಿರಬೇಕು ಎಂದು ಭಾವಿಸಿದ್ದ ರಮಾದೇವಿಯವರು ಶ್ರೀಸಾಮಾನ್ಯರಿಗೂ ಮುಕ್ತವಾದ ಪ್ರವೇಶಾವಕಾಶ ಕಲ್ಪಿಸಿ, ಎಲ್ಲರ ಅಹವಾಲುಗಳನ್ನೂ ಕೇಳುತ್ತಿದ್ದರು. ಗಣರಾಜ್ಯೋತ್ಸವದಂದು ನಾಡಿನ ಹಿರಿಯ ಚೇತನಗಳನ್ನು ಕರೆದು ಗೌರವಿಸುತ್ತಿದ್ದರು. ಆದರೆ ವಜುಭಾಯ್ ವಾಲಾ ರಾಜಭವನವನ್ನು ಗುಜರಾತ್ ಭವನವನ್ನಾಗಿ ಮಾಡಿಕೊಂಡಿದ್ದಾರೆ. ತನ್ನ ಸಹಾಯಕರನ್ನಾಗಿ ಗುಜರಾತಿಗಳನ್ನೇ ನೇಮಕ ಮಾಡಿಕೊಂಡಿದ್ದಾರೆ. ಇವರ ಕಿವಿಗೆ ಕನ್ನಡ ನುಡಿಯೇ ಬೀಳದೇ ಹೋದರೆ ಕಲಿಯುವುದು ಎಲ್ಲಿಂದ? ಕನ್ನಡ ಕಲಿಯದೇ ಹೋದರೆ ಗೌರವಿಸುವುದು ಹೇಗೆ ಸಾಧ್ಯ? ಹೀಗಾಗಿ ಕನ್ನಡ ರಾಜ್ಯೋತ್ಸವದಂದೇ ಗುಜರಾತಿ ಉತ್ಸವ ನಡೆಸುವ ದುರಹಂಕಾರದ ಪ್ರದರ್ಶನವೂ ಆಗಿಹೋಗಿದೆ.
ವಜುಭಾಯ್ ವಾಲಾ ಅವರಿಗೆ ರಾಜ್ಯಪಾಲರಾಗಿ ಸಾವಿರ ಕೆಲಸಗಳಿರಬಹುದು. ಆದರೆ ಅದೆಲ್ಲಕ್ಕಿಂತ ಮುಖ್ಯವಾಗಿ ಅವರು ಈ ನಾಡು ನುಡಿಯ ಕುರಿತು ಒಂದಷ್ಟು ಕಲಿಯಬೇಕಿದೆ. ಅದಕ್ಕಾಗಿ ಒಂದಿಬ್ಬರು ಶಿಕ್ಷಕರನ್ನು ಅವರು ನೇಮಕ ಮಾಡಿಕೊಳ್ಳುವುದು ಒಳ್ಳೆಯದು. ಇದಕ್ಕಾಗಿ ಅವರು ನಮ್ಮ ತೆರಿಗೆ ಹಣವನ್ನೇ ಬಳಸಿಕೊಳ್ಳಲಿ, ನಮ್ಮ ತಕರಾರೇನೂ ಇರುವುದಿಲ್ಲ. ಗುಜರಾತಿ ಉತ್ಸವಕ್ಕೆ ಲಕ್ಷಾಂತರ ರುಪಾಯಿ ನಮ್ಮ ತೆರಿಗೆ ಹಣವೇ ಖರ್ಚಾಗುತ್ತಿರುವಾಗ ಕನ್ನಡ ಶಿಕ್ಷಕರಿಗೆ ನಮ್ಮ ತೆರಿಗೆ ಹಣದಲ್ಲೇ ಸಂಬಳ ಕೊಡಲಿ. ಮೊದಲು ಕನ್ನಡ ನಾಡು, ಅದರ ಇತಿಹಾಸ, ಪರಂಪರೆ, ಸಂಸ್ಕೃತಿ, ಸಾಹಿತ್ಯ ಎಲ್ಲದರ ಬಗ್ಗೆ ಅವರು ಕಲಿತುಕೊಳ್ಳಲಿ. ಪಂಪನಿಂದ ಹಿಡಿದು ಕುವೆಂಪುವರೆಗೆ ಕನ್ನಡದ ನುಡಿಪರಂಪರೆಯೂ ಅವರಿಗೆ ಗೊತ್ತಾಗಲಿ. ಇಲ್ಲಿನ ಶರಣರು, ದಾಸರು, ಸೂಫಿಗಳು, ಜನಪದರು ಎಲ್ಲರ ಕುರಿತು ಅವರು ಓದುವಂತಾಗಲಿ. ಇದೆಲ್ಲದಕ್ಕೆ ತುಂಬಾ ಸಮಯವೇನೂ ಬೇಕಾಗಿಲ್ಲ. ಆರು ತಿಂಗಳಲ್ಲಿ ಕನ್ನಡದಲ್ಲೇ ಮಾತನಾಡುವಷ್ಟು ಪ್ರೌಢಿಮೆಯನ್ನು ಅವರು ಪಡೆಯಬಹುದು.
ಕನ್ನಡ ಕಲಿತ ನಂತರ ವಜುಭಾಯ್ ವಾಲಾ ಅವರು ಕನ್ನಡಿಗರ ಜತೆ ಕನ್ನಡದಲ್ಲೇ ವ್ಯವಹರಿಸಲಿ, ರಾಜಭವನದಲ್ಲಿ ಕನ್ನಡವೇ ಮೊಳಗುವಂತೆ ನೋಡಿಕೊಳ್ಳಲಿ. ಸಂಸ್ಕೃತ, ಹಿಂದಿ ಭಾಷೆಗಳನ್ನು ಉತ್ತೇಜಿಸುವ ನೂರೆಂಟು ಕಾರ್ಯಕ್ರಮಗಳಿಗೆ ಹೋಗುವ ರಾಜ್ಯಪಾಲರು ಅದನ್ನು ಬಿಟ್ಟು ಕನ್ನಡದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿ. ಇತರೆ ಭಾಷೆಗಳನ್ನು ಉದ್ಧಾರ ಮಾಡಲು ಆ ಭಾಷೆಗಳಿಗೆ ಸಂಬಂಧಿಸಿದ ರಾಜ್ಯಗಳಿವೆ. ಆಯಾ ರಾಜ್ಯಗಳಲ್ಲಿ ಆ ಕೆಲಸ ನಡೆಯಲಿ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ನುಡಿ. ಕನ್ನಡದ ಹೊರತಾಗಿ ಇಲ್ಲಿ ಇನ್ಯಾವ ದೊಡ್ಡ ನುಡಿಯೂ ಇಲ್ಲ. ಇಲ್ಲಿ ವ್ಯವಹರಿಸುವ ಯಾರೇ ಆದರೂ ಕನ್ನಡವನ್ನೇ ಬಳಸಬೇಕು, ಕನ್ನಡಕ್ಕೇ ಗೌರವ ನೀಡಬೇಕು. ಸರ್ಕಾರಿ ಅಧಿಕಾರಿ, ನ್ಯಾಯಾಧೀಶ, ಉದ್ಯಮಿ, ಕಾರ್ಮಿಕರಿಂದ ಹಿಡಿದು ರಾಜ್ಯಪಾಲರವರೆಗೆ ಎಲ್ಲರಿಗೂ ಈ ಮಾತು ಅನ್ವಯವಾಗುತ್ತದೆ.
ನವೆಂಬರ್ ಒಂದರಂದು ರಾಜಭವನದಲ್ಲಿ ಗುಜರಾತಿ ಉತ್ಸವವನ್ನು ಏರ್ಪಡಿಸುವ ಮೂಲಕ ವಜುಭಾಯ್ ವಾಲಾ ಕೆಟ್ಟ ಪರಂಪರೆಯನ್ನು ಆರಂಭಿಸಿದ್ದಾರೆ. ಈ ಪ್ರಮಾದಕ್ಕಾಗಿ ಅವರು ಕನ್ನಡ ನಾಡಿನ ಜನತೆಯ ಕ್ಷಮೆ ಯಾಚಿಸಬೇಕು. ಇನ್ನೆಂದೂ ಇಂಥ ತಾಯಿದ್ರೋಹದ ಕೆಲಸವನ್ನು ಮಾಡುವುದಿಲ್ಲವೆಂದು ಅವರು ಪ್ರಮಾಣ ಮಾಡಬೇಕು. ತಾನು ಕೆಲಸ ಮಾಡುವ ನಾಡನ್ನು ಧಿಕ್ಕರಿಸುವುದೆಂದರೆ ಅದನ್ನು ತಾಯಿದ್ರೋಹವೆಂದೇ ಕರೆಯಬೇಕಾಗುತ್ತದೆ. ಮುಂದೆ ಎಂದೂ ಅವರಿಂದ ಇಂಥ ಪ್ರಮಾದಗಳು ನಡೆಯದೇ ಇರಲಿ.
ರಾಜಭವನವೆಂಬುದು ಸಂವಿಧಾನ ರಕ್ಷಣೆಯ ಕೇಂದ್ರವಾಗಬೇಕೇ ಹೊರತು, ಸಂವಿಧಾನವಿರೋಧಿಯಾಗಿ ಸ್ಥಳೀಯ ನುಡಿ ಸಂಸ್ಕೃತಿಯನ್ನು ಧಿಕ್ಕರಿಸುವ ಕೇಂದ್ರವಾಗಬಾರದು. ರಾಜಭವನವನ್ನು ಗುಜರಾತ್ ಭವನವನ್ನಾಗಿ ಮಾಡಲು ಕನ್ನಡಿಗರೆಂದಿಗೂ ಅವಕಾಶ ನೀಡಕೂಡದು. ಒಂದು ವೇಳೆ ಗುಜರಾತ್ ಸಂಸ್ಕೃತಿಯ ಕುರಿತು ವಾಲಾ ಅವರಿಗೆ ಅಷ್ಟೊಂದು ಮೋಹವಿದ್ದರೆ, ತಮ್ಮ ಸ್ವಂತ ಖರ್ಚಿನಲ್ಲಿ ಗುಜರಾತ್‌ನಲ್ಲೇ ಒಂದು ಭವನ ಕಟ್ಟಿಕೊಂಡು, ಅಲ್ಲಿ ಗುಜರಾತಿ ಉತ್ಸವಗಳನ್ನು ನಡೆಸಲಿ. ಕರ್ನಾಟಕದಲ್ಲಿರುವ ಗುಜರಾತಿಗಳ ಮೇಲೆ ಅಷ್ಟೊಂದು ಮಮಕಾರವಿದ್ದರೆ, ಗುಜರಾತ್‌ನಲ್ಲಿ ತಾವು ಕಟ್ಟುವ ಗುಜರಾತಿ ಭವನದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ದಿನನಿತ್ಯ ಉತ್ಸವಗಳನ್ನು ನಡೆಸಿ, ಅದಕ್ಕೆ ಕರ್ನಾಟಕದ ಗುಜರಾತಿಗಳನ್ನು ತಮ್ಮ ಖರ್ಚಿನಲ್ಲಿ ಕರೆಯಿಸಿಕೊಳ್ಳಲಿ. ಯಾರು ಬೇಡ ಎಂದವರು?
ಯಾವುದೇ ರಾಜ್ಯಪಾಲರಿಗೆ ಮೊದಲು ಇರಬೇಕಾದ ‘ಸಾಮಾನ್ಯ ಜ್ಞಾನ’ವೆಂದರೆ ಭಾರತ ಎಂಬುದೊಂದು ಒಕ್ಕೂಟ. ಭಾಷಾವಾರು ಪ್ರಾಂತ್ಯ ವಿಂಗಡಣೆಯಂತೆ ಇಲ್ಲಿ ರಾಜ್ಯಗಳಾಗಿವೆ. ಎಲ್ಲ ರಾಜ್ಯಗಳಿಗೂ ತನ್ನದೇ ಆದ ಇತಿಹಾಸ, ಪರಂಪರೆ, ಸಂಸ್ಕೃತಿ, ಅಸ್ಮಿತೆಗಳು ಇರುತ್ತವೆ. ಅವುಗಳನ್ನು ಕಾಪಾಡದೇ ಹೋದರೆ ಭಾರತ ಒಕ್ಕೂಟಕ್ಕೆ ಒಂದು ಅರ್ಥ ಉಳಿಯುವುದಿಲ್ಲ. ಅಷ್ಟೇ ಅಲ್ಲ, ಅದು ಹೆಚ್ಚು ಕಾಲ ಒಕ್ಕೂಟವಾಗಿ ಉಳಿಯುವುದೂ ಸಾಧ್ಯವಿಲ್ಲ. ಹೀಗಾಗಿ ಬೇರೆ ರಾಜ್ಯಗಳಿಂದ ಬಂದ ರಾಜ್ಯಪಾಲರು ಈ ಸಾಮಾನ್ಯ ಜ್ಞಾನವನ್ನು ಮೊದಲು ಕಲಿಯಬೇಕು. ಕಲಿಯಲು ಅವರಿಗೆ ಮನಸು ಇಲ್ಲದೇ ಹೋದಲ್ಲಿ ನಾವೇ ಅನಿವಾರ್ಯವಾಗಿ ಅದನ್ನು ಕಲಿಸಬೇಕಾಗುತ್ತದೆ. ಹಾಗೂ ಕಲಿಯದೇ ಹೋದರೆ ದಯವಿಟ್ಟು ನೀವು ಬಂದ ರಾಜ್ಯಕ್ಕೆ ಹಿಂದಕ್ಕೆ ಹೋಗಿ ಅಲ್ಲಿನ ಸಂಸ್ಕೃತಿಯ ರಾಯಭಾರಿಗಳಾಗಿ ನಿಮ್ಮ ಭವ್ಯಪರಂಪರೆಯನ್ನು ಮೆರೆಯಿರಿ ಎಂದು ಪ್ರೀತಿಯಿಂದ ಹೇಳಿ ಬೀಳ್ಕೊಡಬೇಕಾಗುತ್ತದೆ.
-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ
No comments:
Post a Comment